ರೈಲ್ವೆ ಹಳಿಯ ಮೇಲೆ ಆಕಸ್ಮಿಕವಾಗಿ ಬಿದ್ದ ಮಗುವನ್ನು, ವೇಗವಾಗಿ ಬರುತ್ತಿದ್ದ ರೈಲಿನಿಂದ ರಕ್ಷಿಸಲು ತಂದೆಯೊಬ್ಬರು ಪ್ರಾಣ ಪಣಕ್ಕಿಟ್ಟಿದ್ದಾರೆ. ಅರೆಕ್ಷಣವೂ ಯೋಚಿಸದೆ ಹಳಿಗೆ ಜಿಗಿದು ಮಗುವನ್ನು ಅಪ್ಪಿಕೊಂಡು ಮಲಗಿದ್ದರಿಂದ, ಇಬ್ಬರೂ ಪವಾಡಸದೃಶವಾಗಿ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಅದೃಷ್ಟವೊಂದು ಚೆನ್ನಾಗಿದ್ದರೆ, ಆಯಸ್ಸು ಗಟ್ಟಿಯಾಗಿದ್ದರೆ ಯಮನೇ ಬಂದು ಎದುರಿಗೆ ನಿಂತರೂ ಅವನಿಂದಲೂ ಏನೂ ಮಾಡಲು ಆಗುವುದಿಲ್ಲ, ಆದರೆ ಆಯಸ್ಸು ಇಂತಿಷ್ಟೇ ಎಂದು ನಿಗದಿಯಾಗಿದ್ದರೆ, ನಗುನಗುತ್ತಾ ಇದ್ದವರೇ ಅದೇ ಕ್ಷಣ ಅಲ್ಲಿಯೇ ಇಹಲೋಕ ತ್ಯಜಿಸುತ್ತಾರೆ. ಇದು ವಾಸ್ತವ. ಅಂಥ ಎಷ್ಟೋ ಘಟನೆಗಳು ನಿಜ ಜೀವನದಲ್ಲಿ ನಡೆಯುತ್ತಲೇ ಇರುತ್ತವೆ. ವೈಯಕ್ತಿಕವಾಗಿಯೂ ಹಲವು ಬಾರಿ ಇಂಥ ವಾಸ್ತವಗಳ ಅರಿವು ಆಗಿರುತ್ತದೆ. ಸ್ವಲ್ಪದರಲ್ಲಿಯೇ ಬಚಾವಾದೆ ಎನ್ನುವ ಮಾತು ನಮ್ಮಷ್ಟಕ್ಕೆ ನಾವು ಅದೆಷ್ಟೋ ಬಾರಿ ಅಂದುಕೊಂಡಿರುತ್ತೇವೆ.
ರೈಲಿನ ಅಪಘಾತ
ಅದೇ ರೀತಿ ಅದೃಷ್ಟ ಒಂದು ಸರಿಯಿದ್ದರೆ, ಮೃತ್ಯುವನ್ನೂ ಜಯಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ವೈರಲ್ ಆಗಿದೆ ಈ ಒಂದು ವಿಡಿಯೋ. ಅಷ್ಟಕ್ಕೂ ರೈಲ್ವೆಗಳಿಂದ ಆಗುವ ಅಪಘಾತಗಳು ಲೆಕ್ಕವಿಲ್ಲ. ಅವಕ್ಕೆಲ್ಲವೂ ಕಾರಣ, ಖುದ್ದು ಜನರೇ. ಅತ್ತ ರೈಲು ಬರುತ್ತಿರುವುದು ತಿಳಿದರೂ ಲಗುಬಗೆಯಿಂದ ಕ್ರಾಸ್ ಮಾಡಲು ಹೋಗುವುದು, ವಾಹನವನ್ನು ಫಾಸ್ಟ್ ಆಗಿ ಅತ್ತ ಕಡೆ ತಿರುಗಿಸುವುದು, ಚಲಿಸುತ್ತಿರುವ ರೈಲನ್ನು ಹತ್ತಲು ಹೋಗುವುದು... ಇಂಥ ಅದೆಷ್ಟೋ ಘಟನೆಗಳು ದಿನನಿತ್ಯವೂ ನಡೆಯುತ್ತಲೇ ಇರುತ್ತದೆ.
ವೈರಲ್ ವಿಡಿಯೋ
ಅಂಥದ್ದೇ ಒಂದು ವಿಡಿಯೋ ಇದಾಗಿದೆ. ಇದರಲ್ಲಿ ಚಿಕ್ಕ ಮಗುವೊಂದು ಆಕಸ್ಮಿಕವಾಗಿ ರೈಲಿನ ಹಳಿಗಳ ಮೇಲೆ ಬಿದ್ದುಬಿಟ್ಟಿದೆ. ಅತ್ತ ಕಡೆಯಿಂದ ರೈಲು ಬರುತ್ತಿದೆ. ಇಂಥ ಸಂದರ್ಭದಲ್ಲಿ ಒಂದೇ ಕ್ಷಣದ ನಿರ್ಧಾರ ಇಡೀ ಜೀವನವನ್ನೇ ಅವಲಂಬಿಸಿರುತ್ತದೆ. ಅಲ್ಲಿ ಎರಡನೆಯ ಸೆಕೆಂಡ್ ಯೋಚನೆ ಮಾಡುವಷ್ಟು ಟೈಮೇ ಇರುವುದಿಲ್ಲ. ಇಂಥ ಸನ್ನಿವೇಶದಲ್ಲಿ ಆ ಮಗುವಿನ ಅಪ್ಪ ಅರೆಕ್ಷಣವೂ ಯೋಚಿಸದೇ ಮಗುವನ್ನು ಬಚಾವ್ ಮಾಡಲು ಹಳಿಯ ಮೇಲೆ ಜಿಗಿದಿದ್ದಾನೆ. ಊಹಿಸಿ ಅತ್ತ ಕಡೆಯಿಂದ ವೇಗದಲ್ಲಿ ರೈಲು ಬರುತ್ತಿದೆ. ಹಳಿಯ ಮೇಲೆ ಮಗ ಬಿದ್ದಿದ್ದಾನೆ. ಆತನನ್ನು ಎತ್ತಲು ಹೋದರೆ ಇಬ್ಬರ ಜೀವಕ್ಕೂ ಅಪಾಯ.
ಕ್ಲೈಮ್ಯಾಕ್ಸ್ ಏನಾಯ್ತು?
ಆದರೆ, ಆ ತಂದೆ, ಮಗನನ್ನು ಹೇಗೋ ಬಿಗಿದಪ್ಪಿಕೊಂಡು ಹಳಿಯ ಸೈಡ್ನಲ್ಲಿ ಮಲಗಿದ್ದಾನೆ. ಮಗನಿಗೆ ಏಟು ಆಗದಂತೆ, ರೈಲಿನ ಯಾವುದೇ ಭಾಗಗಳು ಆತನಿಗೆ ತಗುಲದಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ರೈಲು ಸಂಪೂರ್ಣವಾಗಿ ಹೋಗುವವರೆಗೂ ಮೇಲೆ ಇದ್ದವರಿಗೆ ಅಲ್ಲಿ ಏನಾಗಿದೆ ಎಂದು ತಿಳಿಯಲು ಆಗುವುದೇ ಇಲ್ಲ. ಹಾಗೆ ಯಾರೇ ಈ ದೃಶ್ಯವನ್ನು ನೋಡುತ್ತಿದ್ದರೂ, ಅಪ್ಪ-ಮಗ ಇಬ್ಬರೂ ಬದುಕಿಲ್ಲ ಎಂದೇ ಅಂದುಕೊಳ್ಳಬೇಕು. ಆದರೆ, ಮೊದಲೇ ಹೇಳಿದ ಹಾಗೆ ಯಮನೇ ಬಂದು ನಿಂತರೂ ಮೃತ್ಯು ಬರುವುದಿಲ್ಲ ಎನ್ನುವಂತೆ, ರೈಲು ಹೋದಮೇಲೆ ಅಪ್ಪ ಮಗನನ್ನು ಅಪ್ಪಿಕೊಂಡು ಎದ್ದಿದ್ದಾನೆ. ಅಮ್ಮ ಮಗುವನ್ನು ಬಿಗಿದಪ್ಪಿ ಕಣ್ಣೀರು ಹಾಕಿದ್ದಾಳೆ. ಒಟ್ಟಿನಲ್ಲಿ ಇದರ ಕ್ಲೈಮ್ಯಾಕ್ಸ್ ಮಾತ್ರ ಸಿನಿಮಾಕ್ಕಿಂತಲೂ ಮಿಗಿಲಾದಂತಿದೆ. ಇಲ್ಲಿದೆ ನೋಡಿ ವಿಡಿಯೋ


