ಚಾಲಕನ ಸೋಗಿನಲ್ಲಿ ಬಂದು 18 ಸಾವಿರ ಲೀಟರ್ ಬಿಯರ್ ಎಗರಿಸಿದ ಖದೀಮ; ಮದ್ಯದ ಕಂಪನಿಗೆ 58 ಲಕ್ಷ ರೂ. ನಷ್ಟ! ಸ್ಯಾನ್ ಡಿಯಾಗೋಗೆ ಹೋಗಬೇಕಿದ್ದ 18,000 ಲೀಟರ್ ಬಿಯರ್ ಲಾರಿ ಮಾಯ. ಈ ಕುರಿತ ಸ್ಟೋರಿ ಇಲ್ಲಿದೆ.
ಅಮೆರಿಕದಲ್ಲಿ ಮದ್ಯ ಪ್ರಿಯರನ್ನಷ್ಟೇ ಅಲ್ಲದೆ ಸ್ವತಃ ಪೊಲೀಸರನ್ನೂ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಸ್ಯಾನ್ ಡಿಯಾಗೋಗೆ ತಲುಪಬೇಕಿದ್ದ ಸುಮಾರು 18,000 ಲೀಟರ್ (18 ಟನ್) ಬಿಯರ್ ಹೊತ್ತಿದ್ದ ಲಾರಿಯನ್ನು ಕಿಲಾಡಿ ಕಳ್ಳನೊಬ್ಬ ಚಾಲಕನ ಸೋಗಿನಲ್ಲಿ ಬಂದು ಎಗರಿಸಿದ್ದಾನೆ. ಈಗ ತನ್ನ ಬಿಯರ್ ಸಂಗ್ರಹವನ್ನು ಮರಳಿ ಪಡೆಯಲು ಕಂಪನಿಯು ಭಾರಿ ಮೊತ್ತದ ಬಹುಮಾನ ಘೋಷಿಸಿದೆ.
ಏನಿದು ಘಟನೆ?
'ಪಾಬ್ಸ್ಟ್ ಬ್ಲೂ ರಿಬ್ಬನ್' (PBR) ಬ್ರ್ಯಾಂಡ್‌ನ ಬಿಯರ್ ಹೊತ್ತಿದ್ದ ಟ್ರಕ್ ಅನ್ನು ಆಗಸ್ಟ್ 16 ರಂದು ಡಿಸ್ಟ್ರಿಬ್ಯೂಷನ್ ಸೆಂಟರ್‌ನಿಂದ ಸ್ಯಾನ್ ಡಿಯಾಗೋಗೆ ಕಳುಹಿಸಲಾಗಿತ್ತು. ಈ ಟ್ರಕ್ ತಲುಪಬೇಕಿದ್ದ ಸ್ಥಳವನ್ನು ತಲುಪಲಿಲ್ಲ. ಕಂಪನಿಯ ದಾಖಲೆಗಳ ಪ್ರಕಾರ..ಅಧಿಕೃತ ಚಾಲಕ ಬರುವ ಮೊದಲೇ ಅವನ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಬಿಯರ್ ತುಂಬಿದ್ದ ಟ್ರಕ್ ಅನ್ನು ಚಲಾಯಿಸಿಕೊಂಡು ಹೋಗಿದ್ದಾನೆ.
ಲಾರಿಯಲ್ಲಿದ್ದ ಮದ್ಯದ ಪ್ರಮಾಣ ಎಷ್ಟು?
ನಾಪತ್ತೆಯಾದ ಟ್ರಕ್‌ನಲ್ಲಿ ಸುಮಾರು 18,000 ಲೀಟರ್‌ಗೂ ಹೆಚ್ಚು ಬಿಯರ್ ಇತ್ತು. ಇದರಲ್ಲಿ 1,406 ಪೆಟ್ಟಿ 'ಪಾಬ್ಸ್ಟ್ ಬ್ಲೂ ರಿಬ್ಬನ್' ಬಿಯರ್ ಮತ್ತು 196 ಪೆಟ್ಟಿ 'ಓಲ್ಡ್ ಮಿಲ್ವಾಕಿ' ನಾನ್-ಆಲ್ಕೊಹಾಲಿಕ್ ಬಿಯರ್ ಸೇರಿತ್ತು. ಆಗಸ್ಟ್ 17 ರಂದು ಬೆಳಿಗ್ಗೆ ಡೆಲಿವರಿ ಆಗಬೇಕಿದ್ದ ಈ ಲಾರಿ ಕಾಣೆಯಾಗಿರುವುದನ್ನು ತಿಳಿದ ಕಂಪನಿಯ ಮ್ಯಾನೇಜರ್ ಮರುದಿನ ಪೊಲೀಸರಿಗೆ ದೂರು ನೀಡಿದ್ದಾರೆ.
ಬಿಯರ್ ಕಂಪನಿಯು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಟ್ರಕ್‌ನ ಫೋಟೋ ಹಾಕಿ, ಕಳ್ಳತನದ ಮಾಹಿತಿಯನ್ನು ಹಂಚಿಕೊಂಡಿದೆ. ಯಾರಾದರೂ ಬಿಯರ್ ಲಾರಿಯನ್ನು ಸುರಕ್ಷಿತವಾಗಿ ಮರಳಿ ತಂದರೆ, ಬಿಯರ್‌ನ ಒಟ್ಟು ಮೌಲ್ಯದ ಅರ್ಧದಷ್ಟು ಹಣವನ್ನು ನಗದು ಬಹುಮಾನವಾಗಿ ನೀಡಲಾಗುವುದು ಎಂದು ಘೋಷಿಸಿದೆ. ಕಂಪನಿಯ ಪ್ರಕಾರ ಈ ನಷ್ಟದ ಮೌಲ್ಯ ಸುಮಾರು 58 ಲಕ್ಷ ರೂಪಾಯಿಗಳಿಗೂ ಅಧಿಕವಾಗಿದೆ. ನೀವು ಇದನ್ನು ಪತ್ತೆ ಹಚ್ಚಿಕೊಟ್ಟರೆ ಸುಮಾರು 25 ರಿಂದ 29 ಲಕ್ಷ ರೂಪಾಯಿ ನಿಮ್ಮ ಜೇಬಿಗೆ ಬರಲಿದೆ!
ಈ ಪ್ರಕರಣದ ಸುತ್ತಮುತ್ತ ಮತ್ತೊಂದು ಮದ್ಯದ ಕಂಪನಿಯ ಉತ್ಪನ್ನಗಳೂ ಕಳ್ಳತನವಾಗಿದ್ದು, ಪೊಲೀಸರು ಇದರ ಹಿಂದೆ ದೊಡ್ಡ ಗ್ಯಾಂಗ್ ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿಯ ಪತ್ತೆಗಾಗಿ ಸ್ಯಾನ್ ಡಿಯಾಗೋ ಸುತ್ತಮುತ್ತ ತೀವ್ರ ಶೋಧ ನಡೆಸುತ್ತಿದ್ದಾರೆ.
