ಅಮೃತಧಾರೆ: ಫಸ್ಟ್ ಡೇ ಫಸ್ಟ್ ಶೋ ಸೂಪರ್ ಹಿಟ್ ! ಅಪೇಕ್ಷ ಅಡುಗೆಗೆ ಡುಮ್ಮ ಸರ್ ಹಿಂಗಂದುಬಿಡೋದ..
ತನ್ನ ಗಂಡ ಪಾರ್ಥನನ್ನು ಮೆಚ್ಚಿಸಲು ಅಪೇಕ್ಷ ಅಡುಗೆ ಮಾಡಿ ಕಳಿಸಿದ್ದಾಳೆ. ಆ ಅಡುಗೆ ತಿಂದು ಡುಮ್ಮ ಸಾರ್ ರಿಯಾಕ್ಷನ್ ನೋಡಿ ನಗು ಬರದಿದ್ರೆ ಹೇಳಿ.
ಜೀ ಕನ್ನಡದ ಅಮೃತಧಾರೆ ಸೀರಿಯಲ್ ಸಖತ್ ಇಂಟರೆಸ್ಟಿಂಗ್ ಆಗಿ ಮುಂದುವರೀತಿದೆ. ಸದ್ಯ ಅಪೇಕ್ಷಾ ತನ್ನ ಗಂಡನನ್ನು ಮೆಚ್ಚಿಸಲು ಅಡುಗೆ ಪ್ರಯೋಗಕ್ಕೆ ಮುಂದಾಗಿದ್ದಾಳೆ. ಪಾರ್ಥನಿಗೆ ಇಷ್ಟದ ಅಡುಗೆ ಮಾಡಿಕೊಟ್ಟು ಆತನ ಮನಸ್ಸು ಸೆಳೆಯುವ ತಂತ್ರ ಮಾಡಲು ಯೋಜಿಸಿದ್ದಾಳೆ. ಇದು ಭೂಮಿಕಾ ಮಾಡಿದ ಐಡಿಯಾ. ಇವರಿಬ್ಬರ ನಡುವೆ ಮತ್ತೆ ಪ್ರೀತಿ ಉಂಟಾಗಲು ಭೂಮಿಕಾ ಮತ್ತು ಗೌತಮ್ ಬಹಿರಂಗವಾಗಿ ಒಲವಧಾರೆಯ ನಾಟಕವಾಡಿದ್ದಾರೆ. ಇದು ಅಪೇಕ್ಷಾ ಕಣ್ಣಿಗೆ ಬಿದ್ದು, ಆಕೆಗೂ ಇದೇ ರೀತಿ ಪಾರ್ಥನ ಪ್ರೀತಿ ಸಂಪಾದಿಸಬೇಕೆಂಬ ಮನಸ್ಸಾಗಿದೆ. ಕಿಚನ್‌ಗೆ ಬಂದು ಅಡುಗೆಯವರಲ್ಲಿ ಪಾರ್ಥನಿಗೆ ಏನು ಇಷ್ಟ ಎಂದು ಕೇಳುತ್ತಾಳೆ. ಅದಕ್ಕೆ ಅಲ್ಲೇ ಇದ್ದ ಭೂಮಿಕಾ 'ಪಾರ್ಥನಿಗೆ ಏನು ಇಷ್ಟವೋ ಅದು ನಿನಗೆ ಗೊತ್ತಿರಬಹುದು. ಲವ್ ಮಾಡುವ ಸಂದರ್ಭದಲ್ಲಿ ತಿಳಿದುಕೊಂಡಿಲ್ವ' ಎಂದು ಕೇಳುತ್ತಾಳೆ. 'ನಾನು ಏನು ಮಾಡಿಕೊಟ್ಟರೂ ತಿನ್ನುತ್ತಾರೆ' ಎಂದು ಅವಳು ಅಹಂನಿಂದ ಉತ್ತರ ಹೇಳುತ್ತಾಳೆ. ಅಡುಗೆ ಮಾಡಲು ಮುಂದಾಗುತ್ತಾಳೆ. ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತದೆ. 'ನಿನಗೆ ಇದೆಲ್ಲ ರೂಢಿ ಇಲ್ಲ ಅಲ್ವ. ನಾನು ಹೆಲ್ಪ್ ಮಾಡ್ತೀನಿ'' ಅಂತ ಭೂಮಿಕಾ ಬಂದರೆ ಇಲ್ಲೂ ಕೊಬ್ಬು ಹೊಡೀತಾಳೆ ಅಪೇಕ್ಷಾ.
ತನ್ನ ತಂಗಿಯ ಚೊಚ್ಚಲ ಅಡುಗೆ ಪ್ರಯತ್ನ ಕಂಡು ಭೂಮಿಕಾಗೆ ನಗಬೇಕೋ ಅಳಬೇಕೋ ಗೊತ್ತಾಗಲ್ಲ. ಕೊನೆಗೂ ಭೂಮಿಕಾ ಮತ್ತು ಅಪೇಕ್ಷಾರ ಪ್ರತ್ಯೇಕ ಟಿಫಿನ್ ಬಾಕ್ಸ್ ರೆಡಿಯಾಗುತ್ತದೆ. ಆಫೀಸ್ ಬಾಯ್ ಕೈಯಲ್ಲಿ ಕೊಟ್ಟು ಗೌತಮ್ ಮತ್ತು ಪಾರ್ಥನಿಗೆ ತಲುಪಿಸಲು ಹೇಳುತ್ತಾರೆ. ದೊಡ್ಡೆಜಮಾನ್ರಿಗೊಂದು, ಚಿಕ್ಕೆಜಮಾನ್ರಿಗೊಂದು ಟಿಫನ್ ಕ್ಯಾರಿಯರ್ ಬಂದಾಗ ಚಿಕ್ಕೆಜಮಾನ ಪಾರ್ಥನಿಗಂತೂ ದೊಡ್ಡ ಶಾಕ್.
ಪುಟ್ಟ ತಂಗಿಗೆ ಮೊದಲ ಪೀರಿಯೆಡ್ಸ್, ಹಬ್ಬದಂತೆ ಸೆಲೆಬ್ರೇಟ್ ಮಾಡ್ತಿರೋ ಅಣ್ಣಯ್ಯ ಇದೀಗ ಹೆಣ್ಮಕ್ಕಳ ಫೇವರಿಟ್
ತನ್ನ ಹೆಂಡತಿ ಅಡುಗೆ ಮಾಡಿ ಕಳಿಸಬಹುದು ಅನ್ನೋದನ್ನು ಪಾಪದ ಪಾರ್ಥ ಕನಸಲ್ಲೂ ಊಹಿಸಿರಲಾರ. ಆದರೆ ಇದನ್ನು ಪಾರ್ಥ ಬಾಯಿಗಿಟ್ಟರೆ ಭೂಮಿಕಾ ಗೌತಮ್ ಪ್ಲಾನ್ ಢಮಾರ್ ಆಗೋದು ಪಕ್ಕಾ. ಯಾಕೆಂದರೆ ಅಪ್ಪಿ ಮಾಡಿರೋ ಅಡುಗೆ ಹೇಗಿರುತ್ತೆ ಅಂತ ಹೊಟ್ಟೆಬಾಕ, ಸ್ಮಾರ್ಟ್ ಬ್ಯುಸಿನೆಸ್‌ಮೆನ್ ಗೌತಮ್ ಊಹಿಸಬಲ್ಲ. ಹೀಗಾಗಿ ಪಾರ್ಥನಿಗೆ ಭೂಮಿಕಾ ಮಾಡಿರುವ ಅಡುಗೆ ಕೊಟ್ಟು ಅಪೇಕ್ಷಾ ಅಡುಗೆಯನ್ನು ತಾನಿಟ್ಟುಕೊಳ್ತಾರೆ ಗೌತಮ್.
ಒಂದು ತುತ್ತು ಬಾಯಿಗಿಟ್ಟದ್ದೇ ಈ ತ್ಯಾಗಮೂರ್ತಿ ಡುಮ್ಮ ಸಾರ್‌ಗೆ ದೊಡ್ಡ ಶಾಕ್. ಬಹುಶಃ ಅಷ್ಟು ಕೆಟ್ಟ ಅಡುಗೆಯನ್ನು ಅವರು ಎಂದೂ ತಿಂದಿರಲಿಕ್ಕಿಲ್ಲ. ಆದರೆ ಪಾರ್ಥನ ಮುಂದೆ ಬಾಯಿ ಬಿಡೋ ಹಾಗೂ ಇಲ್ಲ. ಪಾರ್ಥ, 'ಅಣ್ಣ ಹೇಗಿದೆ ಅಡುಗೆ?' ಅಂತ ಕೇಳಿದ್ರೆ, ಡುಮ್ಮ ಸಾರ್, 'ಫಸ್ಟ್ ಡೇ ಫಸ್ಟ್ ಶೋ ಸೂಪರ್ ಹಿಟ್' ಅಂದುಬಿಡ್ತಾರೆ. ಅಪ್ಪಿ ತಪ್ಪಿ ಪಾರ್ಥ ಏನಾದ್ರೂ ಗೌತಮ್ ಈ ಡೈಲಾಗ್ ಹೊಡೆಯುವಾಗ ಗೌತಮ್‌ನ ನೋಡಿದ್ರೆ ರಿಯಲ್ ಮ್ಯಾಟರ್ ಏನು ಅಂತ ಅರ್ಥ ಆಗೋದು. 'ಏನಪ್ಪ ಇದು ಉಪ್ಪು, ಹುಳಿ, ಖಾರ ಏನೂ ಇಲ್ಲ. ಇದನ್ನ ಹೇಗಪ್ಪಾ ತಿನ್ನೋದು' ಅಂತ ಮನಸ್ಸಲ್ಲಿ ಅಂದುಕೊಳ್ಳುತ್ತಾರೆ.
ಗಂಡನ ಮನಸು ಗೆಲ್ಲೋದಕ್ಕೆ ಅಡುಗೆಗಿಂತ ಬೆಸ್ಟ್ ದಾರಿ ಇನ್ನೊಂದಿಲ್ಲ ಅಂತಿದ್ದಾಳೆ ಭೂಮಿಕಾ, ನೀವಿದನ್ನ ಒಪ್ತೀರ?
ಪಾರ್ಥನಿಗೆ ಬಂದ ಅಡುಗೆಯನ್ನೆಲ್ಲ ಕಷ್ಟಪಟ್ಟು ತಾನೇ ತಿನ್ನುತ್ತಾರೆ. ಭೂಮಿಕಾ ಮಾಡಿರುವ ರುಚಿಕರವಾದ ಅಡುಗೆಯನ್ನು ಪಾರ್ಥ ತಿನ್ನುತ್ತಾನೆ. ಇದಾದ ಬಳಿಕ ಗೌತಮ್ ಭೂಮಿಕಾಳಿಗೆ ಕಾಲ್ ಮಾಡಿ "ಏನ್ರಿ ಅದು ಊಟ. ಊಟ ಅಲ್ಲ ಅದು ಅಮೃತ ಇದ್ದ ಹಾಗೆ ಇತ್ತು. ನನಗಂತೂ ವರ್ಣಿಸಲು ಪದಗಳೇ ಸಿಗ್ತಾ ಇಲ್ಲ" ಎಂದೆಲ್ಲ ಹೊಗಳಿದ್ದನ್ನು ಕೇಳಿ ಪಾರ್ಥನಿಗೆ ಅಚ್ಚರಿಯಾಗುತ್ತದೆ. 'ನಾನು ಹೊಗಳಿದಂತೆ ಅಪೇಕ್ಷಾಳಿಗೆ ನೀನೂ ಹೇಳು' ಎಂದು ಪಾರ್ಥನಿಗೆ ಗೌತಮ್ ಹೇಳುತ್ತಾನೆ. ಇದೇ ರೀತಿ ಫೋನ್ ಮಾಡಿ ಅಪೇಕ್ಷಾಳಿಗೆ ಹೇಳುತ್ತಾನೆ. ಅವಳಿಗೂ ಖುಷಿಯಾಗುತ್ತದೆ. ಅಲ್ಲಿಗೆ ಭೂಮಿಕಾ ಡುಮ್ಮ ಸರ್ ಫಸ್ಟ್ ಅಟೆಂಪ್ಟ್ ಕಷ್ಟದಲ್ಲಿ ಪಾಸ್ ಆಗಿದೆ.