ಪುಟ್ಟ ತಂಗಿಗೆ ಮೊದಲ ಪೀರಿಯೆಡ್ಸ್, ಹಬ್ಬದಂತೆ ಸೆಲೆಬ್ರೇಟ್ ಮಾಡ್ತಿರೋ ಅಣ್ಣಯ್ಯ ಇದೀಗ ಹೆಣ್ಮಕ್ಕಳ ಫೇವರಿಟ್
ಜೀ ಕನ್ನಡದ ಅಣ್ಣಯ್ಯ ಸೀರಿಯಲ್‌ನಲ್ಲಿ ಪುಟ್ಟ ತಂಗಿ ರಮ್ಯಾ ದೊಡ್ಡೋಳಾಗಿದ್ದಾಳೆ. ಇದನ್ನು ಅಣ್ಣ ಹಬ್ಬದಂತೆ ಸಂಭ್ರಮಿಸುತ್ತಿದ್ದಾನೆ. ಇದು ಪುಟ್ಟ ತಂಗಿಗೆ ಅಣ್ಣ ಮೇಲಿನ ಪ್ರೀತಿ ಹೆಚ್ಚಾಗೋ ಹಾಗೆ ಮಾಡಿದೆ.
ಜೀ ಕನ್ನಡದ ಜನಪ್ರಿಯ ಸೀರಿಯಲ್ 'ಅಣ್ಣಯ್ಯ'. ಇದರಲ್ಲಿ ನಾಲ್ಕು ಜನ ತಂಗಿಯರಿರುವ ಅಣ್ಣನ ಬದುಕಿನ ಕಥೆ ಇದೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ.ಇದೀಗ ಈ ಸೀರಿಯಲ್‌ನಲ್ಲಿ ಮನೆಯ ಕಿರಿ ತಂಗಿಗೆ ಮೊದಲ ಬಾರಿ ಪೀರಿಯೆಡ್ಸ್ ಆಗಿದೆ. ಅದಾಗಿರೋದು ಹೀಗೆ. ಮನೆಯ ಎಲ್ಲರೂ ಊರ ಜಾತ್ರೆಯಲ್ಲಿ ಪಾಲ್ಗೊಳ್ಳುವ ಸಂಭ್ರಮದಲ್ಲಿರುತ್ತಾರೆ. ನವಮಿ ಹಬ್ಬಕ್ಕೆಂದು ಮನೆ ಮಂದಿ ಎಲ್ಲ ಹೊರಟಿರುತ್ತಾರೆ. ಆದರೆ ಶಿವಣ್ಣನ ಚಿಕ್ಕ ತಂಗಿಗೆ ಪರೀಕ್ಷೆ ಇರುತ್ತದೆ. ಆ ಕಾರಣಕ್ಕಾಗಿ ಅವಳು ಮನೆಯಲ್ಲೇ ಇರುತ್ತಾಳೆ. ಅವಳ ಜೊತೆ ಅಣ್ಣಯ್ಯನೂ ಇರುತ್ತಾನೆ. ಅಕ್ಕಂದಿರೆಲ್ಲ ಹೋದ ನಂತರ ಅವಳಿಗೆ ಹೊಟ್ಟೆ ನೋವು ಆರಂಭವಾಗುತ್ತದೆ.
'ಅಣ್ಣ ತುಂಬಾ ಹೊಟ್ಟೆ ನೊಯ್ತಾ ಇದೆ' ಎಂದು ಹೇಳುತ್ತಾಳೆ. ಆಗ ಇವನು ನಂಬೋದಿಲ್ಲ. ಪರೀಕ್ಷೆ ಇದೆ ಓದಬೇಕು ಎಂದು ನಾಟಕ ಮಾಡ್ತಾ ಇದ್ದಾಳೆ ಎಂದು ಅಂದುಕೊಳ್ಳುತ್ತಾನೆ. ಆದರೆ ನಿಜವಾಗಲೂ ಅದ ಹಾಗಾಗಿರೋದಿಲ್ಲ. ನಂತರ ಅವಳು 'ಇಲ್ಲ ಅಣ್ಣ ರಕ್ತ ಬರ್ತಾ ಇದೆ' ಎಂದು ಹೇಳುತ್ತಾಳೆ. ಆಗ ಇವನಿಗೆ ಗಾಬರಿ ಆಗುತ್ತದೆ. ಏನು ಮಾಡಬೇಕು ಎಂದೇ ತಿಳಿಯುವುದಿಲ್ಲ.
ಕಾವೇರಿ ಕನ್ನಡ ಮೀಡಿಯಂನಲ್ಲಿ ಕನ್ನಡಿಗಾಗಿ ಗಂಡ ಹೆಂಡ್ತಿ ನಡುವೆ ಕಿತ್ತಾಟ, ನಿಮ್ಮನೇಲೂ ಹಿಂಗೇನಾ?
ಈ ಗಾಬರಿಯಲ್ಲೇ ತನ್ನ ಅಂಗಡಿಯಲ್ಲಿರುವವರಿಗೆ ಕಾಲ್ ಮಾಡಿದ್ರೆ ರಿಸೀವ್ ಮಾಡಲ್ಲ. ಬೇರೆ ದಾರಿ ಇಲ್ಲದೇ ತಾನೇ ಅಂಗಡಿಗೆ ಬಂದು ಫೋನ್ ರಿಸೀವ್ ಮಾಡದ ಅವರಿಗೆ ಬೈದು ಪ್ಯಾಡ್ ತಗೊಂಡು ಹೋಗ್ತಾನೆ. ಒಂದು ಕಡೆ ತನ್ನ ತಂಗಿ ದೊಡ್ಡೋಳಾಗಿದ್ದಾಳೆ ಎಂಬ ಖುಷಿ, ಇನ್ನೊಂದು ಕಡೆ ಮನೆಯಲ್ಲಿ ಹೆಣ್ಣುಮಕ್ಕಳು ಯಾರೂ ಇಲ್ಲದಾಗಲೇ ದೊಡ್ಡವಳಾಗಿದ್ದಾಳಲ್ಲಾ, ಅವರೆಲ್ಲ ಬರೋವಷ್ಟರಲ್ಲಿ ತಾನವಳನ್ನು ನೋಡಿಕೊಳ್ಳಬಲ್ಲೆನಾ ಎಂಬ ಆತಂಕ, ಪುಟ್ಟ ತಂಗಿ ನೋವು ಹೊಟ್ಟೆ ನೋವು ಅಂತ ಒದ್ದಾಡುವಾಗ ಏನು ಮಾಡಲೂ ತೋಚದ ಸ್ಥಿತಿ. ಹೇಗೋ ತನ್ನ ಕೈಲಾದಂತೆ ಪರಿಸ್ಥಿತಿಯನ್ನು ಅಣ್ಣಯ್ಯ ನಿಭಾಯಿಸುತ್ತಾನೆ.
ಇದಾದ ಮೇಲೆ ತನ್ನ ಪುಟ್ಟ ತಂಗಿಗೆ ಆರತಿ ಮಾಡಬೇಕು ಅಂತ ಹೊರಡ್ತಾನೆ. ಆದರೆ ಈ ರಮ್ಯ ಅನಾಥ ಮಗು. ಅವಳಿಗೆ ತಂದೆ, ತಾಯಿ ಎಲ್ಲರೂ ಬಿಟ್ಟು ಹೋಗಿದ್ದಾರೆ. ಆ ಮಗುವನ್ನು ತನ್ನ ಒಡಹುಟ್ಟಿದವಳ ಪ್ರೀತಿಯಿಂದ ಶಿವಣ್ಣ ನೋಡಿಕೊಳ್ತಿದ್ದಾನೆ. ಆದರೆ ಈಕೆ ಇವನ ಒಡಹುಟ್ಟಿದ ತಂಗಿ ಅಲ್ಲ ಅಂತ ಗೊತ್ತಿರುವ ಕಾರಣ ಇವಳಿಗೆ ಆರತಿ ಮಾಡಲು ಯಾರೂ ಬರಲಿಕ್ಕಿಲ್ಲ ಅನ್ನೋದು ಪಕ್ಕದ ಮನೆಯ ಹೆಂಗಸಿನ ಅಭಿಪ್ರಾಯ. ಆದರೆ ಶಿವಣ್ಣನ ಒಳ್ಳೆ ಮನಸ್ಸಿಗೆ ಮಾರುಹೋಗಿ ಆಕೆ ಸತ್ಯವನ್ನು ತನ್ನ ಹೊಟ್ಟೆಯೊಳಗೆ ಬಚ್ಚಿಟ್ಟು ಪುಟ್ಟ ಗೌರಿಯಂಥಾ ರಮ್ಯಾಳ ಆರತಿಗೆ ಹೆಂಗಸರನ್ನು ಮುಂದಾಗ್ತಾಳೆ.
ಹಬ್ಬದ ರೀತಿ ಅಣ್ಣಯ್ಯ ತನ್ನ ಪುಟ್ಟ ತಂಗಿ ದೊಡ್ಡೋಳಾದದ್ದನ್ನು ಸೆಲೆಬ್ರೇಟ್ ಮಾಡ್ತಾನೆ. ಇದನ್ನು ನೋಡಿ ತಂಗಿಗೆ ಕಣ್ಣೀರು ಬರುತ್ತದೆ. ಹೆತ್ತ ತಂದೆ ತಾಯಿಯರೇ ತನ್ನನ್ನು ಬಿಟ್ಟುಹೋದಾಗ ಅವರಿಗಿಂತ ಅಕ್ಕರೆ ತೋರಿಸಿದ್ದು ಅಣ್ಣಯ್ಯ. ಅವನು ಅವಳ ಪಾಲಿಗೆ ಅಮ್ಮ, ಅಪ್ಪನೂ ಹೌದು. ಆ ಅಣ್ಣ ಎಲ್ಲರನ್ನೂ ಕರೆಸಿ ತನಗೆ ಆರತಿ ಮಾಡ್ತಿರೋರು ಕಂಡು ಮನಸ್ಸು ತುಂಬಿ ಬರುತ್ತೆ. 'ಒಂದು ವೇಳೆ ಅಪ್ಪ, ಅಮ್ಮ ಇದ್ರೂ ಈ ಟೈಮಲ್ಲಿ ಟೆನ್ಶನ್ ಮಾಡ್ಕೊಳ್ತಿದ್ರು. ಆದರೆ ನೀನು ಹಬ್ಬದ ಥರ ಸಂಭ್ರಮಿಸ್ತಿದ್ದೀಯಾ' ಅಂತ ಹೇಳ್ತಾಳೆ ರಮ್ಯಾ.
ಗಂಡನ ಮನಸು ಗೆಲ್ಲೋದಕ್ಕೆ ಅಡುಗೆಗಿಂತ ಬೆಸ್ಟ್ ದಾರಿ ಇನ್ನೊಂದಿಲ್ಲ ಅಂತಿದ್ದಾಳೆ ಭೂಮಿಕಾ, ನೀವಿದನ್ನ ಒಪ್ತೀರ?
ಪೀರಿಯೆಡ್ಸ್ ಬಗ್ಗೆ ಆತಂಕ ಬೇಡ, ಪೀರಿಯೆಡ್ಸ್ ಅನ್ನು ಸಂಭ್ರಮಿಸಿ ಅನ್ನೋ ಸಂದೇಶವನ್ನೂ ಈ ಸೀರಿಯಲ್ ನೀಡೋದ್ರಲ್ಲಿ ಯಶಸ್ವಿಯಾಗಿದೆ.
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು. ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ. ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶ್ರೀನಾಥ್ ಮತ್ತು ರಾಘವಿ ತಂಗಿಯರಾಗಿ ಅಭಿನಯಸಿದ್ದಾರೆ.