ಜನಪ್ರಿಯ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಕಳೆದ ನಾಲ್ಕು ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಟಿಆರ್‌ಪಿ ಕುಸಿತ ಕಂಡಿದೆ. ಧಾರಾವಾಹಿಯ ಅಂತ್ಯದ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ.
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಅಂತ್ಯ ಆಗಲಿದೆ. ಹೌದು, ಹೀಗೊಂದು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಸೀರಿಯಲ್ ಪ್ರಸಾರ ಆಗುತ್ತಿತ್ತು. ಈಗ ಅಂತ್ಯ ಆಗಲಿದೆಯಂತೆ.
ಟಾಪ್ ಧಾರಾವಾಹಿಗಳಲ್ಲೊಂದು!
ಹೌದು, 2021ರಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಪ್ರಸಾರ ಆರಂಭಿಸಿದೆ. ಆರೂರು ಜಗದೀಶ್ ಅವರು ಈ ಧಾರಾವಾಹಿಗೆ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಆರಂಭದ ಎರಡು ವರ್ಷಗಳ ಕಾಲ ಟಿಆರ್‌ಪಿಯಲ್ಲಿ ಈ ಸೀರಿಯಲ್ ಟಾಪ್ 12 ಸ್ಥಾನದಲ್ಲಿತ್ತು. ಆ ನಂತರ ಈ ಧಾರಾವಾಹಿಯ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರು ಸೀರಿಯಲ್‌ನಿಂದ ಹೊರಗಡೆ ಬಂದಿದ್ದರು. ಹೀಗಾಗಿ ಈ ಪಾತ್ರವನ್ನು ಅಂತ್ಯ ಮಾಡಿ, ಕಥೆ ಕೂಡ ಬದಲಾಯಿಸಲಾಗಿತ್ತು.
ಸ್ನೇಹಾ ಪಾತ್ರ ಅಂತ್ಯ ಆಗ್ತಿದ್ದಂತೆ ಟಿಆರ್‌ಪಿಯಲ್ಲಿ ಕುಸಿತ ಕಂಡಿತ್ತು. ಅಂದಹಾಗೆ ಈ ಧಾರಾವಾಹಿಯ ಟೈಮಿಂಗ್ ಕೂಡ ಬದಲಾವಣೆ ಮಾಡಲಾಗಿದೆ. ಹೀಗಾಗಿ ಇನ್ನೊಂದಿಷ್ಟು ಟಿಆರ್‌ಪಿ ಕಡಿಮೆ ಆಗಿತ್ತು.
ಅಂತ್ಯ ಮಾಡಲು ಕಾರಣ ಏನು?
ಅತಿ ಶೀಘ್ರದಲ್ಲಿ ಈ ಧಾರಾವಾಹಿಯ ಅಂತಿಮ ಸಂಚಿಕೆಗಳು ಪ್ರಸಾರ ಆಗಲಿದೆ ಎನ್ನಲಾಗುತ್ತಿದೆ. ಈ ಧಾರಾವಾಹಿ ಯಾಕೆ ಅಂತ್ಯ ಆಗಲಿದೆ ಎಂಬ ಬಗ್ಗೆ ವಾಹಿನಿಯಾಗಲೀ, ಧಾರಾವಾಹಿ ತಂಡದವರು ಉತ್ತರ ಕೊಟ್ಟಿಲ್ಲ. ದೊಡ್ಡ ಮಟ್ಟದಲ್ಲಿ ವೀಕ್ಷಕರನ್ನು ಸಂಪಾದಿಸಿದ್ದ ಈ ಧಾರಾವಾಹಿ ಮುಕ್ತಾಯವಾದರೆ ಅನೇಕರಿಗೆ ಬೇಸರ ಆಗೋದಂತೂ ಪಕ್ಕಾ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಥೆ ಏನು?
ಪುಟ್ಟಕ್ಕಳಿಗೆ ಮೂವರು ಹೆಣ್ಣು ಮಕ್ಕಳು. ಗಂಡು ಮಗು ಆಗಿಲ್ಲ ಎಂಬ ಕಾರಣಕ್ಕೆ ಇವಳ ಗಂಡ ಗೋಪಾಲಯ್ಯ ಇನ್ನೊಂದು ಮದುವೆ ಆಗಿದ್ದನು. ರಾಜೇಶ್ವರಿ ಎನ್ನೋ ದುಷ್ಟೆ ಜೊತೆ ಗೋಪಾಲಯ್ಯ ಮದುವೆ ನಡೆದು, ಅವರಿಗೆ ಓರ್ವ ಮಗ ಜನಿಸಿದ್ದಾನೆ. ಇನ್ನೊಂದು ಕಡೆ ಮೆಸ್ ನಡೆಸಿ, ಏಕಾಂಗಿಯಾಗಿ ಮೂವರು ಹೆಣ್ಣು ಮಕ್ಕಳನ್ನು ಬೆಳೆಸಿದ್ದಳು.
ಮೊದಲ ಮಗಳು ಸಹನಾ, ಮುರಳಿ ಎನ್ನುವ ಹುಡುಗನನ್ನು ಪ್ರೀತಿಸಿ ಮದುವೆಯಾದಳು. ಆದರೆ ಇವರಿಬ್ಬರ ಡಿವೋರ್ಸ್ ಆಯ್ತು. ಇನ್ನು ಎರಡನೇ ಮಗಳು ಸ್ನೇಹಾ ಕಂಠಿಯನ್ನು ಪ್ರೀತಿಸಿದಳು. ಬಡ್ಡಿ ವ್ಯವಹಾರ ಮಾಡುತ್ತಿದ್ದ ಬಂಗಾರಮ್ಮಳನ್ನು ಕಂಡ್ರೆ ಸ್ನೇಹಾಗೆ ಆಗುತ್ತಿರಲಿಲ್ಲ. ತಾನು ಬಂಗಾರಮ್ಮನ ಮಗ ಎನ್ನೋದು ಮುಚ್ಚಿಟ್ಟು ಕಂಠಿ, ಸ್ನೇಹಾಳನ್ನು ಪ್ರೀತಿಸಿದ. ಆಮೇಲೆ ಸ್ನೇಹಾಗೆ ಇಷ್ಟವಿಲ್ಲದೆ ಕಂಠಿ ತಾಳಿ ಕಟ್ಟಿದ್ದನು. ತದನಂತರದಲ್ಲಿ ಸ್ನೇಹಾಗೆ ಬಂಗಾರಮ್ಮನ ಮೇಲೆ ಅಭಿಮಾನ ಬಂದಿತು, ಬಂಗಾರಮ್ಮ ಕೂಡ ಸ್ನೇಹಾಳನ್ನು ಇಷ್ಟಪಟ್ಟಳು. ಎಲ್ಲ ಸರಿ ಇರುವಾಗ ಸಿಂಗಾರಮ್ಮ ಎನ್ನುವ ದುಷ್ಟೆಯಿಂದ ಸ್ನೇಹಾ ಸತ್ತು ಹೋದಳು. ಇನ್ನೊಂದು ಕಡೆ ಸ್ನೇಹಾ ಹೃದಯವನ್ನು ಗಂಗಾಧರ್ ಮಗಳು ಸ್ನೇಹಾಳಿಗೆ ಕಸಿ ಮಾಡಲಾಗಿತ್ತು. ಹೀಗಾಗಿ ಗಂಗಾಧರ್ ಮಗಳು ಸ್ನೇಹಾಳನ್ನು ಕಂಠಿಯು ಮದುವೆಯಾದನು. ರಾಜೇಶ್ವರಿಗೆ ಈ ಕುಟುಂಬ ಹೇಗೆ ಬುದ್ಧಿ ಕಲಿಸುತ್ತದೆ ಎಂದು ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಸ್ನೇಹಾ- ಸಂಜನಾ ಬುರ್ಲಿ
ಹೊಸ ಸ್ನೇಹಾ- ವಿದ್ಯಾವರಾಜ್
ಬಂಗಾರಮ್ಮ-ಮಂಜುಭಾಷಿಣಿ
ಪುಟ್ಟಕ್ಕ-ಉಮಾಶ್ರೀ
ಕಂಠಿ-ಧನುಷ್
ಗೋಪಾಲಯ್ಯ-ರಮೇಶ್ ಪಂಡಿತ್
