ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸತ್ತೋರಿಗೋ ಡಿಸಿ ಸ್ನೇಹಾಳ ಆತ್ಮ ಬಂದಿದೆ ಎಂದು ಜನ ಅಂದುಕೊಂಡಿದ್ರೆ, ಮತ್ತೊಂದು ಆತ್ಮ ಜನರಿಗೆ ಕಾಟ ಕೊಡ್ತಿದೆ. ಏನಿದು ಎರಡೆರಡು ಆತ್ಮ? 

ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಈಗ ಏನಿದ್ರೂ ಸತ್ತೋಗಿರೋ ಡಿಸಿ ಮೇಡಮ್ಮು ಸ್ನೇಹಾಳದ್ದೇ ಆಟ. ಇದೀಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಸರಿಪಡಿಸಲು ಸ್ನೇಹಾ ಆತ್ಮದ ರೂಪದಲ್ಲಿ ಅಲ್ಲಿಯ ಸಿಬ್ಬಂದಿಗೆ ಕಾಣಿಸಿಕೊಂಡಿದ್ದಳು. ಜನರಿಗೆ ಅನ್ಯಾಯ ಮಾಡುತ್ತಿರುವ ಸಿಬ್ಬಂದಿಗೆ ಕಾಣಿಸಿಕೊಂಡಿರುವ ಸ್ನೇಹಾ, ನಾನು ಸತ್ತುಹೋಗಿರುವ ಡಿಸಿ ಸ್ನೇಹಾ. ಜನರಿಗೆ ಅನ್ಯಾಯ ಮಾಡಿದರೆ ಸುಮ್ಮನೇ ಬಿಡುವುದಿಲ್ಲ ಎಂದಿದ್ದಳು. ಜನರ ಎಲ್ಲಾ ಫೈಲ್‌ಗಳನ್ನು ಓಪನ್‌ ಮಾಡಿ ಎಲ್ಲಾ ಕೇಸುಗಳನ್ನು ಮುಗಿಸಿ, ಅವರಿಗೆ ನ್ಯಾಯ ಕೊಡಿಸಲಿದ್ದರೆ ನಿನ್ನನ್ನು ಮುಗಿಸುತ್ತೇನೆ ಎಂದು ಧಮ್ಕಿ ಹಾಕಿದ್ದಳು. ಇದರಿಂದ ಆ ಸಿಬ್ಬಂದಿ ಥರಥರ ನಡುಗಿದ್ದ. ಆತ ಇದನ್ನು ಪೊಲೀಸರಿಗೆ ಹಾಗೂ ಸ್ನೇಹಾ ಮನೆಯವರಿಗೂ ಹೇಳಿದ್ದ. ಆದರೆ, ಯಾರೂ ಆತನನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಅಷ್ಟಕ್ಕೂ ನಿಜಕ್ಕೂ ಸತ್ತುಹೋಗಿರುವ ಸ್ನೇಹಾಳ ಆತ್ಮವೇ ಬಂದಿದ್ಯಾ, ಅಥವಾ ಇದ್ಯಾರ ಆಟವೋ ಎಂದು ವೀಕ್ಷಕರು ಸತ್ಯ ತಿಳಿಯುವ ತವಕದಲ್ಲಿದ್ದರು.

ಅದೇ ಇನ್ನೊಂದೆಡೆ, ಸ್ನೇಹಾಳ ಆತ್ಮದ ಕಾಟಕ್ಕೆ ಹೆದರಿ ಪೊಲೀಸ್ ತಾಂಡವ್​ ಕೂಡ ಊರು ಬಿಟ್ಟು ಹೋಗಾಗಿದೆ. ಆತ್ಮದ ರೂಪದಲ್ಲಿ ಬಂದ ಡಿಸಿ ಮೇಡಮ್ಮು ಎಲ್ಲರಿಗೂ ಒಳ್ಳೆಯದ್ದನ್ನು ಮಾಡುತ್ತಿದ್ದಾಳೆ ಎಂದುಕೊಂಡು ಊರವರೂ ಖುಷಿಪಟ್ಟಿದ್ದಾರೆ. ಆದರೆ ಅದ್ಯಾರ ಆತ್ಮವೋ, ಏನೋ ಗೊತ್ತಿಲ್ಲ. ಆದರೆ ಈಗ ಇದೇ ಸ್ನೇಹಾಳದ್ದು ಮತ್ತೊಂದು ಆತ್ಮ ಕಾಣಿಸಿಕೊಂಡಿದೆ. ಇತ್ತ ಕಾಳಿಗೂ ಆ ಆತ್ಮ ಕಾಣಿಸಿಕೊಂಡಿದ್ದರೆ, ಅತ್ತ ಖುದ್ದು ಸ್ನೇಹಾಳ ಅಪ್ಪನಿಗೂ ಕಾಣಿಸಿಕೊಂಡಿದೆ. ಆದರೆ ಸ್ನೇಹಾಳ ಆತ್ಮ ಒಳ್ಳೆಯದು ಇರುವಾಗ ಹೀಗೆ ಇವರಿಗೆಲ್ಲಾ ಯಾಕೆ ತೊಂದರೆ ಕೊಡ್ತಾ ಇದೆ ಎನ್ನೋದೇ ಗೊತ್ತಾಗಿರಲಿಲ್ಲ ವೀಕ್ಷಕರಿಗೆ.

ಆದರೆ ಇಲ್ಲಿ ಆದದ್ದೇ ಬೇರೆ. ಇಲ್ಲಿ ಸ್ನೇಹಾಳ ಮುಖವಾಡ ಹೊತ್ತು ಬಂದಿರೋಳು ರಾಜಿ! ಸ್ನೇಹಾಳ ಆತ್ಮ ಕಾಣಿಸಿಕೊಳ್ಳುತ್ತಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಅದರ ಪ್ರಯೋಜನ ಪಡೆದುಕೊಂಡು ತಾನು ಆತ್ಮದ ರೂಪದಲ್ಲಿ ಎಲ್ಲರನ್ನು ಹೆದರಿಸುತ್ತಿದ್ದಾಳೆ ರಾಜಿ. ಆದರೆ ಇದೇ ರಾಜಿ, ಊರಿನವರಿಗೆ ಒಳ್ಳೆಯದನ್ನು ಮಾಡಲಂತೂ ಸಾಧ್ಯವಿಲ್ಲ. ಅದೇ ಇನ್ನೊಂದೆಡೆ ಸ್ನೇಹಾಳ ರೂಪದಲ್ಲಿ ಕಾಣಿಸಿಕೊಂಡವಳು ಜೀವಂತ ಇರುವ ಸ್ನೇಹಾ ಎಂದು ಇದಾಗಲೇ ಬಂಗಾರಮ್ಮನ ಎದುರು ಸತ್ಯ ಹೇಳಿದ್ದಾಳೆ.

ಇನ್ನು, ಪುಟ್ಟಕ್ಕನ ಮಕ್ಕಳು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಈ ಸೀರಿಯಲ್​ಗೆ ತಿರುವು ಕೊಟ್ಟು ಮತ್ತಷ್ಟು ಜೀವ ತುಂಬಲು ನಿರ್ದೇಶಕರು ಹರಸಾಹಸ ಪಡುತ್ತಿದ್ದಾರೆ. 12ನೇ ಡಿಸೆಂಬರ್​ 2021ರಿಂದ ಶುರುವಾಗಿದ್ದ ಸೀರಿಯಲ್​ ಮೂರೂವರೆ ವರ್ಷ ಪೂರೈಸಿದೆ. ಸದಾ ಟಿಆರ್​ಪಿಯಲ್ಲಿ ನಂಬರ್​ 1 ಸ್ಥಾನವನ್ನು ವರ್ಷಗಟ್ಟಲೆ ಕಾದುಕೊಂಡಿದ್ದ ಸೀರಿಯಲ್​, ಬರಬರುತ್ತಾ ಉಳಿದ ಬಹುತೇಕ ಸೀರಿಯಲ್​ಗಳಂತೆ ತನ್ನತನವನ್ನು ಕಳೆದುಕೊಂಡು ಸಾಗುತ್ತಿದೆ ಎನ್ನುವುದು ಇದರ ವೀಕ್ಷಕರ ಅಭಿಮತ. ಪುಟ್ಟಕ್ಕನ ಗಟ್ಟಿಗಿತ್ತಿತನ, ಸ್ನೇಹಾಳ ಸ್ವಾಭಿಮಾನವೇ ಇಲ್ಲಿ ಹೈಲೈಟ್​ ಆಗಿತ್ತು. ಆದರೆ ಈಗ್ಯಾಕೋ ಬಹುತೇಕ ವೀಕ್ಷಕರನ್ನು ಈ ಸೀರಿಯಲ್​ ಕಳೆದುಕೊಂಡು ಬಿಟ್ಟಿದೆ. ಈ ಸೀರಿಯಲ್​ಗೆ ಬಹುದೊಡ್ಡ ಹಿನ್ನಡೆಯಾಗಿದ್ದು ನಾಯಕಿ ಸ್ನೇಹಾಳ ಸಾವು! ಆಕೆಯ ಸಾವಿನ ಬೆನ್ನಲ್ಲೇ ಕಥೆ ಏನೇನೋ ತಿರುವು ಪಡೆದುಕೊಂಡು ಎಲ್ಲೆಲ್ಲಿಯೋ ಹೋಗುತ್ತಾ ಹಳಿ ತಪ್ಪುತ್ತಿದೆ ಎಂದು ವೀಕ್ಷಕರು ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಸೀರಿಯಲ್‌ ಅನ್ನು ಮತ್ತೆ ಹಳಿಗೆ ತರಬೇಕು ಎನ್ನುವ ಪ್ರಯತ್ನ ನಡೆಯುತ್ತಲೇ ಇದೆ.

View post on Instagram