ಜಿಲ್ಲಾಧಿಕಾರಿ ಸ್ನೇಹಾಳ ಸಾವಿನಿಂದ ಕಂಗೆಟ್ಟುಹೋಗಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಅನ್ನು ಮತ್ತೆ ಚಿಗುರಿಸಲು ಸ್ನೇಹಾ ವಾಪಸ್ ಬಂದಿದ್ದಾಳೆ! ಏನಿದು ರೋಚಕ ಟ್ವಿಸ್ಟ್?
ಪುಟ್ಟಕ್ಕನ ಮಕ್ಕಳು ಸೀರಿಯಲ್ಗೆ ತಿರುವು ಕೊಟ್ಟು ಮತ್ತಷ್ಟು ಜೀವ ತುಂಬಲು ನಿರ್ದೇಶಕರು ಹರಸಾಹಸ ಪಡುತ್ತಿದ್ದಾರೆ. 12ನೇ ಡಿಸೆಂಬರ್ 2021ರಿಂದ ಶುರುವಾಗಿದ್ದ ಸೀರಿಯಲ್ ಮೂರೂವರೆ ವರ್ಷ ಪೂರೈಸಿದೆ. ಸದಾ ಟಿಆರ್ಪಿಯಲ್ಲಿ ನಂಬರ್ 1 ಸ್ಥಾನವನ್ನು ವರ್ಷಗಟ್ಟಲೆ ಕಾದುಕೊಂಡಿದ್ದ ಸೀರಿಯಲ್, ಬರಬರುತ್ತಾ ಉಳಿದ ಬಹುತೇಕ ಸೀರಿಯಲ್ಗಳಂತೆ ತನ್ನತನವನ್ನು ಕಳೆದುಕೊಂಡು ಸಾಗುತ್ತಿದೆ ಎನ್ನುವುದು ಇದರ ವೀಕ್ಷಕರ ಅಭಿಮತ. ಪುಟ್ಟಕ್ಕನ ಗಟ್ಟಿಗಿತ್ತಿತನ, ಸ್ನೇಹಾಳ ಸ್ವಾಭಿಮಾನವೇ ಇಲ್ಲಿ ಹೈಲೈಟ್ ಆಗಿತ್ತು. ಆದರೆ ಈಗ್ಯಾಕೋ ಬಹುತೇಕ ವೀಕ್ಷಕರನ್ನು ಈ ಸೀರಿಯಲ್ ಕಳೆದುಕೊಂಡು ಬಿಟ್ಟಿದೆ. ಈ ಸೀರಿಯಲ್ಗೆ ಬಹುದೊಡ್ಡ ಹಿನ್ನಡೆಯಾಗಿದ್ದು ನಾಯಕಿ ಸ್ನೇಹಾಳ ಸಾವು! ಆಕೆಯ ಸಾವಿನ ಬೆನ್ನಲ್ಲೇ ಕಥೆ ಏನೇನೋ ತಿರುವು ಪಡೆದುಕೊಂಡು ಎಲ್ಲೆಲ್ಲಿಯೋ ಹೋಗುತ್ತಾ ಹಳಿ ತಪ್ಪುತ್ತಿದೆ ಎಂದು ವೀಕ್ಷಕರು ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಸೀರಿಯಲ್ ಅನ್ನು ಮತ್ತೆ ಹಳಿಗೆ ತರಬೇಕು ಎನ್ನುವ ಪ್ರಯತ್ನ ನಡೆಯುತ್ತಲೇ ಇದೆ.
ಹೀಗೆ ಆಗಬೇಕು ಎಂದರೆ ಸ್ನೇಹಾ ಮತ್ತೆ ಬರಬೇಕು. ಆದರೆ ಆಕೆ ಸತ್ತಾಗಿದೆ. ಸತ್ತರೆ ಏನಂತೆ? ಈಗ ಸೀರಿಯಲ್‌ಗಳಲ್ಲಿ ಆತ್ಮಗಳದ್ದೇ ಟ್ರೆಂಡು. ಆತ್ಮ ಬಂದರಷ್ಟೇ ಟಿಆರ್‌ಪಿ ಏರುವುದು ಎನ್ನುವುದು ಎಲ್ಲಾ ನಿರ್ದೇಶಕರು ಅರಿತುಕೊಂಡಂತೆ ಇದೆ. ಇದಕ್ಕೆ ಕಾರಣ ಏನೆಂದರೆ, ಸೀರಿಯಲ್ ಆತ್ಮಗಳು, ಒಳ್ಳೆಯದಾಗಿರುತ್ತವೆ, ಒಳ್ಳೆಯ ಉದ್ದೇಶಕ್ಕೆ ಬರುವ ಆತ್ಮಗಳು ಇವು. ಆದ್ದರಿಂದಲೇ ವೀಕ್ಷಕರಿಗೆ ಅಚ್ಚುಮೆಚ್ಚು. ಈ ಆತ್ಮಗಳ ಬಗ್ಗೆ ಟ್ರೋಲ್ ಮಾಡದೇ ಖುಷಿಯಿಂದ ಆತ್ಮಗಳಿಗೂ ವೀಕ್ಷಕರೇ ಡೈರೆಕ್ಷನ್ ಕೂಡ ಮಾಡುವುದು ಇದೆ. ಅದೇ ರೀತಿ ಇದೀಗ ಸತ್ತುಹೋಗಿರುವ ಸ್ನೇಹಾಳನ್ನು ನಿರ್ದೇಶಕರು ವಾಪಸ್ ತಂದಿದ್ದಾರೆ. ಆದರೆ ಅದು ಆತ್ಮದ ರೂಪದಲ್ಲಿ!
ಅಷ್ಟಕ್ಕೂ ಡಿಸಿಯಾಗುವ ಕನಸು ಹೊಂದಿದ್ದ ಸ್ನೇಹಾ, ಅದನ್ನು ಸಾಧಿಸಿ ತೋರಿಸಿದ್ದಳು. ಜನರ ಕಲ್ಯಾಣಕ್ಕಾಗಿ, ಜನರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಹೊಡೆದು ಹಾಕಲು, ನ್ಯಾಯಕ್ಕಾಗಿ ಹೋರಾಡಲು, ಬಡ ಜನರಿಗೆ ಅವರ ಹಕ್ಕುಗಳನ್ನು ನೀಡುವ ಉದ್ದೇಶಕ್ಕಾಗಿ ಸ್ನೇಹಾ ಡಿಸಿಯಾಗಿದ್ದಳು. ಆದರೆ ಡಿಸಿಯಾದ ಬಳಿಕ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರು, ಶಿಕ್ಷಣದ ಕಾರಣ ನೀಡಿ ಸೀರಿಯಲ್ ತೊರೆದರು. ಆ ಜಾಗಕ್ಕೆ ಬೇರೆಯವರನ್ನು ಕರೆತರಲು ಒಪ್ಪದ ನಿರ್ದೇಶಕು ಸ್ನೇಹಾ ಪಾತ್ರವನ್ನೇ ಸಾಯಿಸಿಬಿಟ್ಟರು. ಅಲ್ಲಿಂದಲೇ ಸೀರಿಯಲ್ ಕೂಡ ಹಳ್ಳ ಹಿಡಿಯಿತು.
ಇದೀಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಸರಿಪಡಿಸಲು ಸ್ನೇಹಾ ಆತ್ಮದ ರೂಪದಲ್ಲಿ ಅಲ್ಲಿಯ ಸಿಬ್ಬಂದಿಗೆ ಕಾಣಿಸಿಕೊಂಡಿದ್ದಾಳೆ. ಜನರಿಗೆ ಅನ್ಯಾಯ ಮಾಡುತ್ತಿರುವ ಸಿಬ್ಬಂದಿಗೆ ಕಾಣಿಸಿಕೊಂಡಿರುವ ಸ್ನೇಹಾ, ನಾನು ಸತ್ತುಹೋಗಿರುವ ಡಿಸಿ ಸ್ನೇಹಾ. ಜನರಿಗೆ ಅನ್ಯಾಯ ಮಾಡಿದರೆ ಸುಮ್ಮನೇ ಬಿಡುವುದಿಲ್ಲ ಎಂದಿದ್ದಾಳೆ. ಜನರ ಎಲ್ಲಾ ಫೈಲ್‌ಗಳನ್ನು ಓಪನ್ ಮಾಡಿ ಎಲ್ಲಾ ಕೇಸುಗಳನ್ನು ಮುಗಿಸಿ, ಅವರಿಗೆ ನ್ಯಾಯ ಕೊಡಿಸಲಿದ್ದರೆ ನಿನ್ನನ್ನು ಮುಗಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾಳೆ. ಇದರಿಂದ ಆ ಸಿಬ್ಬಂದಿ ಥರಥರ ನಡುಗಿದ್ದಾನೆ. ಆತ ಇದನ್ನು ಪೊಲೀಸರಿಗೆ ಹಾಗೂ ಸ್ನೇಹಾ ಮನೆಯವರಿಗೂ ಹೇಳಿದ್ದಾನೆ. ಆದರೆ, ಯಾರೂ ಆತನನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಅಷ್ಟಕ್ಕೂ ನಿಜಕ್ಕೂ ಸತ್ತುಹೋಗಿರುವ ಸ್ನೇಹಾಳ ಆತ್ಮವೇ ಬಂದಿದ್ಯಾ, ಅಥವಾ ಈಗ ಜೀವಂತ ಇರೋ ಇನ್ನೋರ್ವ ಸ್ನೇಹಾ ಆ ರೂಪದಲ್ಲಿ ಬಂದಿದ್ದಾಳೋ ಗೊತ್ತಾಗಬೇಕಿದೆ. ಹಳೆಯ ಸ್ನೇಹಾ ಬಂದರೂ ಆಕೆ ನಟಿ ಸಂಜನಾ ಆಗಿರಲು ಸಾಧ್ಯವಿಲ್ಲ, ಆಕೆಯ ಮುಖ ತೋರಿಸದೇ ಸತ್ತುಹೋಗಿರುವ ಸ್ನೇಹಾ ಎಂದೂ ಹೇಳಿದರೂ ಅಚ್ಚರಿಯಿಲ್ಲ.
