ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರು ಪಾನ್ ಮಸಾಲಾ ಬ್ರ್ಯಾಂಡ್‌ನ ಪರೋಕ್ಷ ಪ್ರಚಾರದ (ಸರೋಗೇಟ್ ಜಾಹೀರಾತು) ಆರೋಪದ ಮೇಲೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರದ ಎಫ್‌ಡಿಎ ಮುಖ್ಯಸ್ಥ ತುಕಾರಾಮ್ ಮುಂಢೆ ಅವರು ಈ ನಟರಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಿದ್ದು, 15 ದಿನಗಳಲ್ಲಿ ಉತ್ತರಿಸಲು ಗಡುವು ನೀಡಿದ್ದಾರೆ.

ಬಾಲಿವುಡ್‌ನ ಸ್ಟಾರ್‌ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತದ ಮುಖ್ಯಸ್ಥ ತುಕಾರಾಮ್ ಮುಂಢೆ ಅವರು ಈ ಮೂವರು ನಟರಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಒಂಬತ್ತು ಪುಟಗಳ ಈ ನೋಟಿಸ್‌ನಲ್ಲಿ 15 ದಿನಗಳೊಳಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಸೂಚಿಸಲಾಗಿದೆ. ಇದೇ ವೇಳೆ, ವಿವಾದಿತ ಜಾಹೀರಾತಿಗೆ ಸಂಬಂಧಿಸಿದ ವಿಷಯಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ತೆಗೆದುಹಾಕುವಂತೆ ಕೂಡ ಸೂಚನೆ ನೀಡಲಾಗಿದೆ.

ಕಾರಣವೇನು?

ಅಷ್ಟಕ್ಕೂ ಈ ಮೂವರು ಸ್ಟಾರ್‌ಗಳ ವಿರುದ್ಧ ಕ್ರಮಕ್ಕೆ ಕಾರಣವೇನು? ಅವರು ಕಾಣಿಸಿಕೊಂಡಿರುವ ಏಲಕ್ಕಿ ಜಾಹೀರಾತಿನ ಬಗ್ಗೆ ಮಹಾರಾಷ್ಟ್ರ FDA ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಕೇವಲ ಏಲಕ್ಕಿಯ ಜಾಹೀರಾತಲ್ಲ, ಬದಲಾಗಿ ಪಾನ್ ಮಸಾಲಾ ಬ್ರ್ಯಾಂಡ್‌ನ ಪರೋಕ್ಷ ಪ್ರಚಾರವಾಗಿದೆ ಎಂಬುದು FDAಯ ಪ್ರಮುಖ ಆರೋಪವಾಗಿದೆ. ಇದನ್ನೇ ಸರೋಗೇಟ್ ಜಾಹೀರಾತು ಎಂದು ಕರೆಯಲಾಗುತ್ತದೆ. ನೇರವಾಗಿ ಜಾಹೀರಾತು ಮಾಡಲು ಕಾನೂನಿನ ನಿರ್ಬಂಧವಿರುವ ಉತ್ಪನ್ನವನ್ನು ಮತ್ತೊಂದು ಕಾನೂನುಬದ್ಧ ಉತ್ಪನ್ನದ ಹೆಸರಿನಲ್ಲಿ ಪ್ರಚಾರ ಮಾಡುವುದೇ ಸರೋಗೇಟ್ ಜಾಹೀರಾತು. ಉದಾಹರಣೆಗೆ ಪಾನ್ ಮಸಾಲಾ, ಗುಟ್ಕಾ ಅಥವಾ ತಂಬಾಕು ಉತ್ಪನ್ನಗಳ ನೇರ ಪ್ರಚಾರಕ್ಕೆ ನಿರ್ಬಂಧವಿದ್ದರೆ, ಅದೇ ಬ್ರ್ಯಾಂಡ್ ಹೆಸರಿನಲ್ಲಿ ಏಲಕ್ಕಿ, ಮೌತ್ ಫ್ರೆಶ್ನರ್, ಸೋಡಾ ಅಥವಾ ಇತರ ಉತ್ಪನ್ನಗಳನ್ನು ಪ್ರಚಾರ ಮಾಡಲಾಗುತ್ತದೆ.

ಎಫ್‌ಡಿಎ ಹೇಳೋದೇನು?

FDA ಪ್ರಕಾರ, ಇಂತಹ ಜಾಹೀರಾತುಗಳಲ್ಲಿ ಬಳಸುವ ಬ್ರ್ಯಾಂಡ್ ಹೆಸರು, ಲೋಗೋ, ಬಣ್ಣ, ಟ್ಯಾಗ್‌ಲೈನ್ ಮತ್ತು ಪ್ರಸ್ತುತಿಯ ಮೂಲಕ ಗ್ರಾಹಕರ ಮನಸ್ಸಿನಲ್ಲಿ ನಿಷೇಧಿತ ಉತ್ಪನ್ನದ ಬ್ರ್ಯಾಂಡ್ ಇಮೇಜ್‌ ಅನ್ನು ಉಳಿಸಿಕೊಳ್ಳಲಾಗುತ್ತದೆ. ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಕಾಣಿಸಿಕೊಂಡಿರುವ ಜಾಹೀರಾತಿನಲ್ಲೂ ಇದೇ ರೀತಿಯ ಅಂಶಗಳಿವೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಗಂಭೀರವಾದ ನಿಲುವು ತೆಳೆದ ಮುಂಢೆ!

ತುಕಾರಾಮ್ ಮುಂಢೆ ನೇತೃತ್ವದ ಮಹಾರಾಷ್ಟ್ರ ಎಫ್‌ಡಿಎ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಪಾನ್ ಮಸಾಲಾ ಮತ್ತು ತಂಬಾಕು ಸಂಬಂಧಿತ ಉತ್ಪನ್ನಗಳ ಜಾಹೀರಾತು ಹಾಗೂ ಮಾರಾಟದ ಮೇಲೆ ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ನಿಯಮಗಳಿವೆ. ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಪರೋಕ್ಷ ಪ್ರಚಾರ ನಡೆಯಬಾರದು ಎಂಬ ನಿಲುವನ್ನು ಎಫ್‌ಡಿಎ ಹೊಂದಿದೆ.

ನೋಟಿಸ್‌ನಲ್ಲಿ ಇದ್ದದ್ದೇನು?

ನೋಟಿಸ್‌ನಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006ರ ಸೆಕ್ಷನ್ 24 ಅನ್ನು ಉಲ್ಲೇಖಿಸಲಾಗಿದೆ. ಆಹಾರ ಉತ್ಪನ್ನಗಳ ಪ್ರಚಾರದಲ್ಲಿ ಸುಳ್ಳು ಅಥವಾ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುವುದನ್ನು ಈ ಕಾನೂನು ನಿರ್ಬಂಧಿಸುತ್ತದೆ. ಇದರ ಜೊತೆಗೆ Food Safety and Standards (Advertising and Claims) Regulations, 2018 ನಿಯಮಗಳನ್ನೂ ಉಲ್ಲೇಖಿಸಲಾಗಿದೆ. ಜಾಹೀರಾತುಗಳಲ್ಲಿನ ಹೇಳಿಕೆಗಳು ಸ್ಪಷ್ಟ, ನಿಖರ ಮತ್ತು ಗ್ರಾಹಕರನ್ನು ದಾರಿತಪ್ಪಿಸದಂತಿರಬೇಕು ಎಂಬುದು ಈ ನಿಯಮಗಳ ಉದ್ದೇಶ.

15 ದಿಗನಗಳ ಖಡಕ್‌ ಗಡುವು!

ಈಗ ಶಾರುಖ್, ಅಜಯ್ ಮತ್ತು ಟೈಗರ್ ಮುಂದಿನ 15 ದಿನಗಳಲ್ಲಿ ತಮ್ಮ ಪ್ರತಿಕ್ರಿಯೆ ನೀಡಬೇಕಿದೆ. ಜಾಹೀರಾತಿನಲ್ಲಿ ಭಾಗವಹಿಸಿದ್ದಕ್ಕೆ ಕಾರಣವೇನು, ಸರೋಗೇಟ್ ಜಾಹೀರಾತಿನ ಆರೋಪದ ಬಗ್ಗೆ ಅವರ ನಿಲುವೇನು ಎಂಬುದನ್ನು ಅವರು ಅಥವಾ ಅವರ ಕಾನೂನು ತಂಡ ವಿವರಿಸಬೇಕಾಗುತ್ತದೆ. ಜೊತೆಗೆ ವಿವಾದಿತ ಜಾಹೀರಾತಿನ ವಿಷಯವನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಸೂಚಿಸಲಾಗಿದೆ.

ದಂಡ ಸೇರಿ ವಿವಿಧ ಕ್ರಮ ಎದುರಾಗುವ ಸಾಧ್ಯತೆ!

ವಿಷಯ ಇಲ್ಲಿಗೇ ಮುಗಿಯುವುದಿಲ್ಲ. FDA ಅವರ ಉತ್ತರದಿಂದ ತೃಪ್ತಿಯಾಗದಿದ್ದರೆ ಅಥವಾ ಪ್ರಕರಣ ಮತ್ತಷ್ಟು ಮುಂದುವರಿದರೆ, ಸಂಬಂಧಿತ ಕಾನೂನುಗಳ ಅಡಿಯಲ್ಲಿ ದಂಡ ಸೇರಿದಂತೆ ವಿವಿಧ ಕ್ರಮಗಳು ಎದುರಾಗಬಹುದು. ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಸೆಲೆಬ್ರಿಟಿ ಎಂಡೋರ್ಸರ್‌ಗಳ ಮೇಲೂ ನಿರ್ಬಂಧ ಹೇರಲು ಅವಕಾಶವಿದೆ. ಈ ಪ್ರಕರಣವನ್ನು ತುಕಾರಾಮ್ ಮುಂಢೆ ಅವರು ರಾಷ್ಟ್ರೀಯ ಮಟ್ಟದ ಸಂಸ್ಥೆಗಳ ಗಮನಕ್ಕೂ ತಂದಿದ್ದಾರೆ. ಪ್ರಕರಣದ ಪ್ರತಿಯನ್ನು FSSAI ಮತ್ತು CCPAಗೆ ಕಳುಹಿಸಲಾಗಿದ್ದು, ಅಗತ್ಯವಿದ್ದರೆ ರಾಷ್ಟ್ರಮಟ್ಟದಲ್ಲೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಅಕ್ಷಯ್!

ಇದೇ ರೀತಿಯ ವಿವಾದದಲ್ಲಿ ಈ ಹಿಂದೆ ಅಕ್ಷಯ್ ಕುಮಾರ್ ಕೂಡ ಸಿಲುಕಿದ್ದರು. ಬಳಿಕ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿ, ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ತಮ್ಮ ಎಂಡೋರ್ಸ್‌ಮೆಂಟ್ ಶುಲ್ಕವನ್ನು ಸಾಮಾಜಿಕ ಉದ್ದೇಶಕ್ಕೆ ನೀಡುವುದಾಗಿ ತಿಳಿಸಿದ್ದರು. ತುಕಾರಾಮ್ ಮುಂಢೆ ಅವರ ಕಠಿಣ ಕ್ರಮದ ಬೆನ್ನಲ್ಲೇ ಬಾಲಿವುಡ್‌ನ ಈ ಮೂವರು ಸ್ಟಾರ್‌ಗಳ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ. **ಒಂದು ಜಾಹೀರಾತು ಈಗ ಶಾರುಖ್‌, ಅಜಯ್‌ ಮತ್ತು ಟೈಗರ್‌ಗೆ ಎಷ್ಟು ದೊಡ್ಡ ಕಾನೂನು ಸಂಕಷ್ಟ ತಂದೊಡ್ಡಲಿದೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.