ನಟ ವಿಜಯ್ ರಾಘವೇಂದ್ರ ಅವರ ಪುತ್ರ ಶೌರ್ಯ, ಇತ್ತೀಚೆಗೆ ನಿಧನರಾದ ಅಜ್ಜಿ ಜಯಮ್ಮ ಹಾಗೂ ಹಿಂದೆ ನಿಧನರಾದ ತಾಯಿ ಸ್ಪಂದನಾ ಅವರನ್ನು ನೆನೆದು ಇನ್ಸ್‌ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. 'ನನ್ನ ಹೃದಯದಿಂದ ಎಂದೂ ಹೋಗೋದಿಲ್ಲ' ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರು (ಜೂ.23): ಮೂರೇ ವರ್ಷಗಳ ಅಂತರದಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ವಿಜಯ್‌ ರಾಘವೇಂದ್ರ ತಮ್ಮ ಪತ್ನಿ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಇದೇ ಜೂನ್‌ 16 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಿರ್ಮಾಪಕ ಚಿನ್ನೇಗೌಡ ಅವರ ಪತ್ನಿ ಹಾಗೂ ನಟರಾದ ವಿಜಯ್‌ ರಾಘವೇಂದ್ರ ಹಾಗೂ ಶ್ರೀ ಮುರಳಿ ಅವರ ತಾಯಿ ಜಯಮ್ಮ ಚಿನ್ನೇಗೌಡ ನಿಧನರಾಗಿದ್ದರು. ಕಳೆದ ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾವಿನ ಬಳಿಕ ವಿಜಯ್‌ ರಾಘವೇಂದ್ರ ಹಾಗೂ ಶ್ರೀಮುರಳಿ ಮುಂದೆ ನಿಂತು ತಾಯಿಯ ಅಂತ್ಯಸಂಸ್ಕಾರ ಕಾರ್ಯಕ್ರಮ ನೆರವೇರಿಸಿದ್ದರು. ಆದರೆ, ಇನ್ಸ್‌ಟಾಗ್ರಾಮ್‌ನಲ್ಲಿ ಅಜ್ಜಿಯ ಫೋಟೋಗಳನ್ನು ಹಾಕಿಕೊಂಡು ವಿಜಯ್‌ ರಾಘವೇಂದ್ರ ಪುತ್ರ ಶೌರ್ಯ ಭಾವುಕ ಪೋಸ್ಟ್‌ ಮಾಡಿದ್ದಾರೆ. ಆರು ದಿನಗಳ ಹಿಂದೆ ಅಜ್ಜಿಯ ಅಪರೂಪದ ಫೋಟೋಗಳನ್ನು ಹಂಚಿಕೊಂಡು 'ಲವ್‌ ಯು ಅಮ್ಮಾ' ಎಂದು ಬರೆದುಕೊಂಡಿದ್ದರು. ಇದಕ್ಕೆ ಕಾಮೆಂಟ್‌ ಮಾಡಿದ್ದ ವಿಜಯ್‌ ರಾಘವೇಂದ್ರ,'ನನ್ನ ಪ್ರೀತಿಯ ಮಗನೇ, ಅವರಿಬ್ಬರು ನಿನ್ನನ್ನು ಮೇಲಿಂದ ಹೆಚ್ಚಾಗಿ ನೋಡ್ತಾ ಇರ್ತಾರೆ' ಎಂದು ಭಾವುಕರಾಗಿದ್ದರು. ಅದೇ ದಿನ ತಂದೆ-ತಾಯಿಯೊಂದಿಗೆ ಅಜ್ಜ-ಅಜ್ಜಿ ಇರುವ ಫೋಟೋವನ್ನು ಅವರು ಹಂಚಿಕೊಂಡಿದ್ದರು.

ಮೂರು ದಿನಗಳ ಹಿಂದೆ ಅಜ್ಜಿಯ ಅಪರೂಪದ ಫೋಟೋಗಳನ್ನು ಹಂಚಿಕೊಂಡು ಶೌರ್ಯ ನೆನಪಿಸಿಕೊಂಡಿದ್ದರು. ಎರಡು ದಿನಗಳ ಹಿಂದೆ ತಾಯಿ ಹಾಗೂ ಅಜ್ಜಿ ಜೊತೆಯಲ್ಲಿರುವ ಫೋಟೋ ಹಂಚಿಕೊಂಡಿದ್ದ ಶೌರ್ಯ, 'ಇವರ ಕಣ್ಣುಗಳಲ್ಲಿ ಸಂತೋಷ ತುಂಬಿತ್ತು' ಎಂದು ಬರೆದುಕೊಂಡಿದ್ದರು.

ಇಂದು ತಾಯಿ ಹಾಗೂ ಅಜ್ಜಿಯ ಫೋಟೋಗಳನ್ನು ಹಂಚಿಕೊಂಡಿರುವ ಶೌರ್ಯ, ನನ್ನ ತಾಯಿ ಹಾಗೂ ಅಜ್ಜಿ ನನ್ನ ಕಣ್ಣ ಎದುರು ಇಲ್ಲದೇ ಇರಬಹುದು. ಆದರೆ, ನನ್ನ ಹೃದಯದಿಂದ ಎಂದೂ ಹೋಗೋದಿಲ್ಲ ಎಂದು ಬರೆದುಕೊಂಡಿದ್ದಾರೆ.

ಶೌರ್ಯ ಅವರ ಪೋಸ್ಟ್‌ಗೆ ಹಲವರು ಕಾಮೆಂಟ್‌ ಮಾಡಿದ್ದು, ಧೈರ್ಯದಿಂದ ಇರುವಂತೆ ಹೇಳಿದ್ದಾರೆ. ನಿನ್ನನ್ನು ಅವರು ಎಂದೂ ನೋಡುತ್ತಿರುತ್ತಾರೆ. ಅವರ ಹಾರೈಕೆಯಲ್ಲಿ ನೀನು ಯಾವಾಗಲೂ ಇರುತ್ತೀಯ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಮತ್ತಷ್ಟು ಭಾವುಕ ಪೋಸ್ಟ್‌ ಮಾಡಿದ್ದು, 'ಅತ್ತೆ ಸೊಸೆ ಇಬ್ಬರಿಗೂ ಮುತ್ತೈದೆ ಸಾವೂ ಕೊಟ್ಟ ಭಗವಂತ ನೀವೇ ಪುಣ್ಯವಂತರು' ಎಂದು ಬರೆದಿದ್ದಾರೆ.

ಮೂರು ವರ್ಷದ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ ಶೌರ್ಯ

ವಿಜಯ್‌ ರಾಘವೇಂದ್ರ ಹಾಗೂ ಸ್ಪಂದನಾ ವಿಜಯ್‌ ಅವರ ಏಕೈಕ ಪುತ್ರನಾಗಿರುವ ಶೌರ್ಯ ಮೂರು ವರ್ಷದ ಹಿಂದೆ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. 2008ರಲ್ಲಿ ಜನಿಸಿದ್ದ ಶೌರ್ಯ ಅವರ ತಾಯಿ ಸ್ಪಂದನಾ, 2023ರ ಅಗಸ್ಟ್‌ನಲ್ಲಿ ಬ್ಯಾಂಕಾಕ್‌ ಪ್ರವಾಸಕ್ಕೆ ಹೋಗಿದ್ದಾಗ ಹೃದಯಾಘಾತದಿಂದಾಗಿ ಸಾವು ಕಂಡಿದ್ದರು. ಮನೆಗೆ ಎದುರಾದ ಈ ಆಘಾತದ ನಂತರ ವಿಜಯ್‌ ರಾಘವೇಂದ್ರ ಅವರು ತಾಯಿಯ ಪಾತ್ರವನ್ನೂ ವಹಿಸಿಕೊಂಡು ಮಗನಿಗೆ ಆಸರೆಯಾಗಿ ನಿಂತಿದ್ದರು.