ಮಾನಸಿಕ ಆರೋಗ್ಯ ಕೆಡಿಸೋ ಕೆಟ್ಟ ವರ್ತನೆಗಳಿವು!
ನೀವು ಗಮನಿಸಿರಬಹುದು, ಇಡೀ ದಿನ ಫೋನ್ ಬಳಸುವುದು, ಸೋಷ್ಯಲ್ ಮೀಡಿಯಾದಲ್ಲಿ ಸಮಯ ಕಳೆಯುವುದು, ಅತಿಯಾಗಿ ಪರ್ಫೆಕ್ಟ್ ಆಗಿರಲು ಬಯಸುವುದು, ಅತಿಯಾದ ಸ್ವಚ್ಛತೆ ಗೀಳು, ಅನಾರೋಗ್ಯಕರ ಸಂಬಂಧ, ನಮ್ಮ ಬಗ್ಗೆ ನಾವು ಅತಿಯಾದ ನಿರೀಕ್ಷೆ ಹೊಂದುವುದು ಇವೆಲ್ಲವೂ ನಮ್ಮನ್ನು ದಿನಾಂತ್ಯದಲ್ಲಿ ಹತಾಶೆಗೆ ದೂಡುತ್ತವೆ. ಇಂಥವು ಇನ್ನೂ ಹಲವು ನಮ್ಮದೇ ವರ್ತನೆಗಳಿಂದಾಗಿ ನಾವು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತೇವೆ. ಅಂಥವು ಯಾವುವು ಎಂಬುದರತ್ತ ಗಮನ ಹರಿಸಿದರೆ ಅವುಗಳಿಂದ ದೂರವುಳಿಯುವುದು ಹೇಗೆಂದು ಯೋಚಿಸಬಹುದು.
ನಿಮಗೆ ಖಿನ್ನತೆ, ಆಂತಕ, ಬೈಪೋಲಾರ್ ಡಿಸಾರ್ಡರ್ ಮುಂತಾದ ಮಾನಸಿಕ ಕಾಯಿಲೆಗಳಿಲ್ಲದಿರಬಹುದು. ಆದರೂ, ಮಾನಸಿಕವಾಗಿ ನೀವು ಸದೃಢರಾಗಿಲ್ಲವೆನಿಸುತ್ತಿದ್ದರೆ, ಮಾನಸಿಕ ಆರೋಗ್ಯಕ್ಕೆ ಪೆಟ್ಟು ನೀಡುವ, ನೋವುಂಟು ಮಾಡುವ ಕೆಲ ವರ್ತನೆಗಳನ್ನು ಬದಲಿಸಿಕೊಳ್ಳುವುದು ಅಗತ್ಯ.
ಸದಾ ಮನಸ್ಸಿಗೆ ಒತ್ತಡ, ನೋವು, ಚಿಂತೆ, ದುಃಖ ನೀಡುವುದು ಸರಿಯಲ್ಲ. ಇದರ ಬದಲಿಗೆ ಮನಸ್ಸನ್ನು ಶಾಂತವಾಗಿ, ಖುಷಿಯಾಗಿ ಇಟ್ಟುಕೊಳ್ಳುವುದು ಕಲಿಯಬೇಕು. ನೀವು ನಿಮ್ಮ ಮಾನಸಿಕ ಆರೋಗ್ಯಕ್ಕೆ ಎಲ್ಲೆಲ್ಲಿ ಹಾನಿ ತಂದುಕೊಳ್ಳುತ್ತಿದ್ದೀರಿ ತಿಳ್ಕೊಳ್ಳುವುದರಿಂದ ಅದನ್ನು ಬದಲಿಸಿಕೊಳ್ಳುವತ್ತ ಹೆಜ್ಜೆ ಹಾಕಬಹುದು.
ಉಗುರು ಕತ್ತರಿಸುತ್ತಿದ್ದ ಒಡತಿ, ನಾಯಿಯ ಒಂದೇ ಆ್ಯಕ್ಷನ್‌ಗೆ ವಿಡಿಯೋ ವೈರಲ್!
1. ಅತಿ ಬ್ಯುಸಿಯಾಗಿರುವುದು
ನಾವೆಷ್ಟು ಬ್ಯುಸಿ ಇರುತ್ತೇವೆ ಎಂಬುದರ ಆಧಾರದ ಮೇಲೆ ನಮ್ಮ ಬೆಲೆ ಅಳೆವ ಜಗತ್ತಿನಲ್ಲಿ ನಾವಿದ್ದೇವೆ. ಆದರೆ, ನಾವು ಅಗಿಯಲಾಗದ್ದಕ್ಕಿಂತ ಹೆಚ್ಚಾಗಿ ಬಾಯಿಗೆ ತುರುಕಿಕೊಂಡರೆ ಅದರಿಂದ ಅನುಭವಿಸುವವರು ನಾವೇ. ಹೀಗೆ ಅಗತ್ಯಕ್ಕಿಂತ ಹೆಚ್ಚಾಗಿ ಬ್ಯುಸಿಯಾಗಿ ಬದುಕಿದರೆ ಬಹುಬೇಗ ಸುಸ್ತು, ಆತಂಕ, ಖಿನ್ನತೆಗಳೆಲ್ಲವೂ ಆವರಿಸುತ್ತವೆ. ಆಗ ಯಾವುದನ್ನೂ ಎಂಜಾಯ್ ಮಾಡಲು ಸಾಧ್ಯವಿಲ್ಲ.
2. ನೋ ಹೇಳಬೇಕೆನಿಸಿದಲ್ಲಿ ಎಸ್ ಹೇಳುವುದು
ನಮ್ಮ ಸಂಸ್ಕೃತಿಯಲ್ಲಿ ನಮ್ಮ ಉತ್ಪಾದಕತೆಯನ್ನು ವಿಜೃಂಭಿಸಲಾಗುತ್ತದೆ. ಆದ್ದರಿಂದ ನಮಗೆ ನೀಡಿದ ಎಲ್ಲ ಟಾಸ್ಕ್‌ಗಳನ್ನೂ ಒಪ್ಪಿಕೊಂಡು ನಿಭಾಯಿಸಲು ಮನಸ್ಸು ಹಾತೊರೆಯುತ್ತದೆ. ಕೆಲವೊಮ್ಮೆ ಯಾವುದಕ್ಕಾದರೂ ಇಲ್ಲವೆಂದರೆ ಸಾಕು, ಅಷ್ಟಕ್ಕೇ ಅವಕಾಶ ಕಳೆದುಕೊಂಡೆನೇನೋ ಎಂದು ಪಶ್ಚಾತ್ತಾಪ ಕಾಡಲಾರಂಭಿಸುತ್ತದೆ. ಆದರೆ, ನೋ ಹೇಳಬೇಕೆನಿಸಿದಲ್ಲಿ ಯಾವ ಹಿಂಜರಿಕೆಯಿಲ್ಲದೆ, ಆ ಬಗ್ಗೆ ಪಶ್ಚಾತ್ತಾಪವಿಲ್ಲದೆ ನೋ ಹೇಳಿ. ಹತ್ತನ್ನು ತಲೆ ಮೇಲೆ ಹೊತ್ತುಕೊಂಡು ಆಕಾಶವೇ ಬಿದ್ದಂತೆ ಒದ್ದಾಡುವುದಕ್ಕಿಂತ ಒಪ್ಪಿಕೊಂಡ ಒಂದನ್ನು ಗುಣಮಟ್ಟದಲ್ಲಿ ಮುಗಿಸುವುದು ಹೆಚ್ಚು ಒಳ್ಳೆಯದು. ಮೊದಲು ನಿಮ್ಮ ಮಾನಸಿಕ ನೆಮ್ಮದಿ, ಶಾಂತಿ ಸ್ಥಿರವಾಗಿರುವುದು ಮುಖ್ಯ. ಹಾಗಾಗಿ, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಯ ತೆಗೆದುಕೊಂಡು ಎಸ್ ಅಥವಾ ನೋ ಹೇಳಬೇಕೆ ಎಂದು ನಿರ್ಧರಿಸಿ.
ಅಪ್ಪನಿಗಾಗಿ ಲಿವರ್ ಜದಾನ ಮಾಡಿದ ರಾಖಿ!
3. ಭೂತಕಾಲದಲ್ಲೇ ಸಂಚಾರ
ಗತಕಾಲದಲ್ಲೇ ಬದುಕುವುದು, ಹಳೆಯ ತಪ್ಪಿಗಾಗಿ ಕೊರಗುತ್ತಾ ಕೂರುವುದು ನಮ್ಮ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳಲು ನಾವು ಮಾಡುವ ಬಹು ದೊಡ್ಡ ತಪ್ಪು. ಇದು ಗೊತ್ತಿದ್ದರೂ ನಮ್ಮಲ್ಲಿ ಬಹುತೇಕರು, ಅಯ್ಯೋ ನಾನು ಆಗ ಹೀಗೆ ಮಾಡಬೇಕಿತ್ತು ಎಂದು ಪದೇ ಪದೆ ಯೋಚಿಸುತ್ತಲೇ ಇರುತ್ತೇವೆ. ಹಳೆಯ ತಪ್ಪಿಗಾಗಿ ನಾವು ನಮ್ಮನ್ನು ದೂರಿಕೊಳ್ಳುವ ಬದಲು, ಆ ಸಮಯದಲ್ಲಿ ನಾನೇನಾಗಿದ್ದೆನೋ, ಆಗ ನನಗೆ ತೋಚಿದಂತೆ ಮಾಡಿದ್ದೇನೆ. ಮುಂದಿನ ಬಾರಿ ಅವಕಾಶ ಸಿಕ್ಕರೆ ಹೀಗೆ ಮಾಡುತ್ತೇನೆ ಎಂದು ಯೋಚಿಸಿ ಅಷ್ಟೇ.
4. ಬಜೆಟ್ ಬಗ್ಗೆ ಅವಿವೇಕಿತನ
ದುಡಿಮೆಗಿಂತ ಹೆಚ್ಚು ಖರ್ಚು ಮಾಡುವುದು, ಸೇವಿಂಗ್ಸ್ ಬಗ್ಗೆ ಯೋಚನೆಯಿಲ್ಲದೆ ಬದುಕುವುದು ಇಂದಿಗೆ ಚೆನ್ನಾಗೆನಿಸಬಹುದು. ಆದರೆ, ಇದು ಹೆಚ್ಚು ಕಾಲ ನಡೆಯುವುದಿಲ್ಲ. ಮುಂದೆ ಈ ತಪ್ಪಿಗಾಗಿ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬೇಕಾಗುತ್ತದೆ. ಹಣದ ವಿಷಯದಲ್ಲಿ ಎಡವಟ್ಟು ಮಾಡಿಕೊಂಡರೆ ಮಾನಸಿಕವಾಗಿ ಶಾಂತಿಯಿಂದಿರುವುದು ಸಾಧ್ಯವೇ ಇಲ್ಲ. ಮನೆಯ ಎಲೆಕ್ಟ್ರಿಕ್ ಬಿಲ್ಲನ್ನೇ ಕಟ್ಟದೆ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್ ಬಯಸುವುದು ಬಿಡಿ. ಇರುವ ದುಡ್ಡಿನಲ್ಲೇ 5 ವರ್ಷ ಹಳೆಯ ಗಾಡಿ ಕೊಂಡರೂ ನಡೆಯುತ್ತದೆ. ಸಾಲ ಮಾಡಿಯಾದರೂ 2019ರ ಮಾಡೆಲ್ಲೇ ಬೇಕೆಂಬ ಹಟ ಬೇಡ. ಮಾನಸಿಕ ಆರೋಗ್ಯ ಸದೃಢವಾಗಿರಬೇಕೆಂದರೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.
ಅವಳೇಕೆ ಎಲ್ಲವನ್ನೂ ಮರೆತಂತೆ ನಟಿಸುತ್ತಿದ್ದಾಳೆ?
5. ಒಂಟಿಯಾಗಿ ಹೆಚ್ಚು ಸಮಯ ಕಳೆಯೋದು
ಆಗಾಗ ಅಪರೂಪಕ್ಕೆ ಒಂಟಿಯಾಗಿ ಸಮಯ ಕಳೆಯೋದನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಪ್ರತಿದಿನ ಹೊಸ ಜನರೊಂದಿಗೆ ಒಡನಾಟವಿದ್ದರೆ ಮಾತ್ರ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಲು ಸಾಧ್ಯ. ನೀವೆಷ್ಟೇ ಅಂತರ್ಮುಖಿಯಾಗಿರಿ, ಇತರರೊಂದಿಗೆ ಮಾತುಕತೆಯಿಲ್ಲದೆ ಇದ್ದರೆ ಮನಸ್ಸು ಹತಾಶ ಸ್ಥಿತಿ ತಲುಪುತ್ತದೆ. ಇಡೀ ದಿನ ಮನೆಯೊಳಗೆ ಕುಳಿತಿದ್ದರೆ ಖಿನ್ನತೆ, ಏಕಾಂಗಿತನ ಕಾಡುತ್ತದೆ. ಹೀಗಾಗಿ, ಪ್ರತಿದಿನ ಗೆಳೆಯರು, ಕುಟುಂಬ ಸದಸ್ಯರೊಂದಿಗೆ ಕನಿಷ್ಠ ವಾಕ್ ಹೋಗುವುದು ಅಭ್ಯಾಸ ಮಾಡಿಕೊಳ್ಳಿ.
6. ವ್ಯಾಯಾಮದಿಂದ ದೂರವಿರುವುದು
ಬೇಜಾರಾದಾಗ ನನಗೆ ವ್ಯಾಯಾಮ ಮಾಡಬೇಕೆನಿಸುತ್ತಿಲ್ಲ ಎಂದುಕೊಳ್ಳುತ್ತೀರಿ. ಆದರೆ, ಅಂಥ ಸಮಯದಲ್ಲೇ ದೇಹಕ್ಕೆ ವ್ಯಾಯಾಮ ಬೇಕಾಗಿರುವುದು. ದೇಹ ಚಲಿಸಲೇ ಮನಸಿಲ್ಲದಾಗ ಮನಸ್ಸು ದುಃಖಿತವಾಗುತ್ತದೆ. ಆದರೆ, ಅಂಥ ಸಂದರ್ಭದಲ್ಲಿ ಹಟ ಹೊತ್ತು ವ್ಯಾಯಾಮ ಮಾಡಿದರೆ ಸೆರಟೋನಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ.