ತಂದೆಗಾಗಿ ಅಂಗದಾನ ಮಾಡಿದ ಹೆಣ್ಮಗಳು| ಸೌಂದರ್ಯ ಕಳೆಗುಂದುತ್ತೆ ಎಂದು ಎಚ್ಚರಿಸಿದ ವೈದ್ಯರು, ಪರ್ವಾಗಿಲ್ಲ ನನಗೆ ಅಪ್ಪನೇ ಮುಖ್ಯ ಎಂದ ಮಗಳು| ಅಪ್ಪನ ಸಾಮ್ರಾಜ್ಯದ 'ರಾಜಕುಮಾರಿ'ಯರು ಈಗ ಸೋಶಿಯಲ್ ಮೀಡಿಯಾ ಸ್ಟಾರ್ಸ್
ಕೋಲ್ಕತ್ತಾ[ಅ,17]: ಜನ್ಮ ಕೊಟ್ಟ ಅಪ್ಪ, ಅಮ್ಮ ಕಷ್ಟದಲ್ಲಿದ್ದಾರೆಂದರೆ ಹೆಣ್ಮಕ್ಕಳು ಬಹಳ ಬೇಗ ಸ್ಪಂದಿಸುತ್ತಾರೆ. ತನ್ನ ಅಪ್ಪ ಅಮ್ಮನಿಗಾಗಿ ಆಕೆಯ ಪ್ರೀತಿ ಶಾಶ್ವತ. ಸಾಮಾನ್ಯವಾಗಿ ಹೆತ್ತವರನ್ನು ಗಂಡು ಮಕ್ಕಳಿಗಿಂತ, ಹೆಣ್ಮಕ್ಕಳೇ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇದಕ್ಕೆ ತಕ್ಕ ಉದಾಹರಣೆ ಎಂಬಂತಿದೆ ಕೋಲ್ಕತ್ತಾದ ಕ್ಕ-ತಂಗಿಯರ ಈ ಕಹಾನಿ. ತನ್ನ ತಂದೆಗಾಗಿ ಅಂಗದಾನ ಮಾಡಲು ಕೊಂಚವೂ ಯೋಚಿಸದ ಇವರ ಪ್ರೀತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಖಿ ದತ್ ಮತ್ತು ರೂಬಿ ದತ್‌ರವರ ಅಪ್ಪ ಸುದೀಪ್ ದತ್ ಕೆಲ ತಿಂಗಳಿನಿಂದ ಹೆಪಟೈಟಿಸ್ ಬಿ ಕಾಯಿಲೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾದ ದಿನದಿಂದ ಸುಮಾರು 20 ದಿನಗಳವರೆಗೆ ಈ ಇಬ್ಬರು ಹೆಣ್ಮಕ್ಕಳೇ ಅಪ್ಪನ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದರು. ಹೀಗಿದ್ದರೂ ಸುದೀಪ್ ದತ್ ಆರೋಗ್ಯದಲ್ಲಿ ಚೇತರಿಕೆಯಾಗಿರಲಿಲ್ಲ. ಹೀಗಾಗಿ ಇವರು ತಮ್ಮ ಅಪ್ಪನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಗೆ ಕರೆ ತಂದಿದ್ದರು.
ಹೈದರಾಬಾದ್ ನಲ್ಲಿ ಸುದೀಪ್ ದತ್ ಪರಿಶೀಲಿಸಿದ ವೈದ್ಯರು, ಲಿವರ್ ಮರುಜೋಡಣೆ ಮಾಡದಿದ್ದರೆ ಪ್ರಾಣಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ಈ ವೇಳೆ ಒಂದು ಕ್ಷಣವೂ ಯೋಚಿಸದ ಹಿರಿಯ ಮಗಳು ರೂಬಿ ದತ್ ತಾನೇ ಲಿವರ್ ದನ ಮಾಡಲು ಮುಂದಾಗಿದ್ದಾಳೆ. ಆದರೆ ಪರೀಕ್ಷಿಸಿದ ವೈದ್ಯರು ರೂಬಿ ಲಿವರ್ ಹೊಂದಾಣಿಕೆಯಾಗುತ್ತಿಲ್ಲ ಎಂದು ಕೈಚೆಲ್ಲಿದ್ದಾರೆ. ಈ ವೇಳೆ ಮುಂದೆ ಬಂದಿದ್ದು, ಕಿರಿಯ ಮಗಳು ರಾಖಿ ದತ್.
ರಾಖಿ ದತ್ ಮೆಡಿಕಲ್ ಟೆಸ್ಟ್ ನಡೆಸಿದ ವೈದ್ಯರು ವೈದ್ಯರು ಶೇ. 65ರಷ್ಟು ಲಿವರ್ ಭಾಗವನ್ನು ದಾನ ಮಾಡಬಹುದು. ಹೀಗೆ ಮಾಡುವ ಸಂದರ್ಭದಲ್ಲಿ ನಡೆಯುವ ಶಸ್ತ್ರಚಿಕಿತ್ಸೆಯಿಂದ ಚರ್ಮ ಸುಕ್ಕಾದಂತೆ ಕಾಣುತ್ತದೆ. ಸೌಂದರ್ಯ ಕಳೆಗುಂದುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಸೌಂದರ್ಯಕ್ಕೆ ಒತ್ತು ಕೊಡದ ಅಪ್ಪನ ಮುದ್ದಿನ ರಾಜಕುಮಾರಿ ಒಂದು ಕ್ಷಣವೂ ಯೋಚಿಸದೆ ಅಂಗದಾನ ಮಾಡಿದ್ದಾಳೆ. ಈ ಮೂಲಕ ತನ್ನ ಜೀವನದ 'ಹೀರೋ' ಅಪ್ಪನನ್ನು ಉಳಿಸಿಕೊಂಡಿದ್ದಾಳೆ.
ಇನ್ನು 25 ವರ್ಷದ ರೂಬಿ ಮೀಡಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, 19 ವರ್ಷದ ರಾಖಿ ಸಿನಿಮಾಟೊಗ್ರಾಫರ್ ಆಗುವ ಕನಸು ಹೊತ್ತುಕೊಂಡಿದ್ದಾಳೆ. ಸದ್ಯ ಈ ಇಬ್ಬರು 'ರಾಜಕುಮಾರಿ'ಯರ ಪ್ರೀತಿ, ತ್ಯಾಗವನ್ನು ಉದ್ಯಮಿ ಹರ್ಷ್ ಗೋಯೆಂಕಾ ಟ್ವೀಟ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
