ಡಾನ್ಸ್‌ ಕರ್ನಾಟಕ ಡಾನ್ಸ್‌ ವೇದಿಕೆಯಲ್ಲಿ ಗದಗಿನ 7 ವರ್ಷದ ಪ್ರೀತಮ್, ಕವಿರತ್ನ ಕಾಳಿದಾಸನ ಪಾತ್ರದಲ್ಲಿ ಮಿಂಚಿದ್ದಾನೆ. ಡಾ.ರಾಜ್‌ಕುಮಾರ್‌ ಅವರ ಪಡಿಯಚ್ಚಿನಂತಿದ್ದ ಈ ಬಾಲಕನ ಅಭಿನಯಕ್ಕೆ ನಟ ಶಿವರಾಜ್‌ಕುಮಾರ್‌ ಭಾವುಕರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಫೆ.24): ಎಷ್ಟು ಜನ ನೋಡಿದ್ದಾರೋ ಗೊತ್ತಿಲ್ಲ. ಆದರೆ, ಕಳೆದ ವಾರಾಂತ್ಯದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ಡಾನ್ಸ್‌ ಕರ್ನಾಟಕ ಡಾನ್ಸ್‌-2025 ಎಪಿಸೋಡ್‌ನಲ್ಲಿ ಗದಗ ಜಿಲ್ಲೆಯ 7 ವರ್ಷದ ಪುಟ್ಟ ಹುಡುಗ ಪ್ರೀತಮ್‌ ಮಾಡಿದ್ದ ಕವಿರತ್ನ ಕಾಳಿದಾಸನ ಪಾತ್ರ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್‌ ಅವರ ಪಾತ್ರದ ಪಡಿಯಚ್ಚಿನಂತೆ ಮಾಡಿದ ಪುಟ್ಟ ಹುಡುಗನ ನಟನೆಗೆ ಇಡೀ ಕರ್ನಾಟಕ ಮೂಕವಿಸ್ಮಿತವಾಗಿದೆ. ಇಷ್ಟು ಚಿಕ್ಕ ವಯಸ್ಸಲ್ಲಿ ಡಾ.ರಾಜ್‌ಕುಮಾರ್‌ ಅವರ ಸಿನಿಮಾ ಜೀವನದಲ್ಲಿ ಬಹಳ ಅಪರೂಪ ಎನಿಸುವಂಥ ಕವಿರತ್ನ ಕಾಳಿದಾಸನ ಪಾತ್ರವನ್ನು ಲೀಲಾಜಾಲಾವಾಗಿ ಪ್ರೀತಮ್‌ ಮಾಡಿದ್ದಕ್ಕೆ ನೆಟ್ಟಿಗರು ಮನಸಾರೆ ಮೆಚ್ಚಿದ್ದಾರೆ.

Add Asianetnews Kannada as a Preferred SourcegooglePreferred

ಕವಿರತ್ನ ಕಾಳಿದಾಸ ಸಿನಿಮಾದಲ್ಲಿನ ಡಾ.ರಾಜ್‌ಕುಮಾರ್‌ ಅವರ 'ಎಲ್ಲೆಲ್ಲೋ ನಾನೆ..ಎಲ್ಲೆಲ್ಲೋ ನಾನೆ..', 'ಬೆಳ್ಳಿ ಮೂಡಿತೂ, ಕೋಳಿ ಕೂಗಿತೋ...' ಹಾಡಿಗೆ ಪ್ರೀತಮ್‌ ಮಾಡಿರುವ ನಟನೆ, ಡಾನ್ಸ್‌ ಸೆಟ್‌ನಲ್ಲಿದ್ದವರಿಗೆ ಮಾತ್ರವಲ್ಲ, ಜನರಿಗೆ ಭಾರೀ ನಗು ಉಕ್ಕಿಸಿದೆ.

ಅಪ್ಪಾಜಿ ಎಷ್ಟು ದೊಡ್ಡ ನಟ ಅಂದ್ರೆ, ಅದಕ್ಕೆ ಇದೇ ಉದಾಹರಣೆ. ಕಂದ ನೀನು ನನ್ನ ಹೃದಯ ಮುಟ್ಟಿದ್ದೀಯ. ನಿನ್ನನ್ನು ನೋಡಿದರೆ, ಕಾಳಿದಾಸನನ್ನೇ ನೋಡಿದ ಹಾಗಾಯ್ತು. ನನ್ನ ಕಣ್ಣಲ್ಲಿ ನೀರಿ ಬಂದುಬಿಡ್ತು. ಹೋದ ಜನ್ಮದಲ್ಲಿ ನೀನು ನನ್ನ ತಂದೆ ಆಗಿದ್ದೀಯಾ ಅಂತಾ ಕಾಣುತ್ತೆ. ಇಲ್ಲ ನಾನು ಅವನಿಗೆ ಅಣ್ಣನಾಗಿದ್ನೋ, ತಮ್ಮನಾಗಿದ್ನೋ ಅಂತಾ ಗೊತ್ತಿಲ್ಲ. ಈ ಜನ್ಮದಲ್ಲಿ ಅದೆಲ್ಲಾ ಸಂಬಂಧಗಳು ಹಾಗೆ ಹುಟ್ಟಿಕೊಳ್ತಾ ಬರ್ತಿದೆ' ಎಂದು ಶಿವಣ್ಣ ಹೇಳಿದ್ದಾರೆ. ಇನ್ನು ಶಿವರಾಜ್‌ಕುಮಾರ್‌ ಎಚ್ಟು ಭಾವುಕರಾಗಿದ್ದರೆಂದರೆ, ಅಪ್ಪಾಜಿಯನ್ನು ಈತನಲ್ಲಿ ಕಂಡೆ ಎಂದಿದ್ದು ಮಾತ್ರವಲ್ಲದೆ, ಆತನ ಕಾಲನ್ನು ಮುಟ್ಟಿ ಮುತ್ತು ನೀಡಿ ಸಂಭ್ರಮಿಸಿದರು.

ಇನ್ನು ಆಂಕರ್‌ ಅನುಶ್ರೀ ಅವರು ಇದೇ ಸಮಯದಲ್ಲಿ ಶಿವರಾಜ್‌ಕುಮಾರ್‌ ಎದುರಲ್ಲಿ ಒಂದು ಬೇಡಿಕೆ ಇಟ್ಟಿದ್ದಾರೆ. ಹಾಗೇನಾದರೂ ಸಮಯ ಸಿಕ್ಕಲ್ಲಿ ಒಮ್ಮೆಯಾದರೂ ಪ್ರೀತಮ್‌ನನ್ನೂ ರಾಜ್‌ಕುಮಾರ್‌ ಅವರ ಹುಟ್ಟೂರು ಗಾಜನೂರಿಗೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಅದಕ್ಕೆ ಶಿವರಾಜ್‌ ಕುಮಾರ್‌ ಖಂಡಿತಾ ಕರೆದುಕೊಂಡು ಹೋಗ್ತಿನಿ ಎಂದಿದ್ದಾರೆ. ಇನ್ನು ಗೀತಾ ಅವರಿಗೂ ಕೂಡ ಪ್ರೀತಮ್‌ನ ಪರ್ಫಾಮೆನ್ಸ್‌ಇಷ್ಟ. ಅದಕ್ಕಾಗಿ ನಾನೇ ಜೀ ಕನ್ನಡದವರಿಗೆ ಇವನ ಪರ್ಫಾಮೆನ್ಸ್‌ಅನ್ನ ಸಾಧ್ಯವಾದಷ್ಟು ಸಂಜೆಗೆ ಇರಿಸಿಕೊಳ್ಳಿ ಎಂದಿದ್ದೆ. ಇಂದು ಅವರು ಕೂಡ ಇವನ ನಟನೆ ನೋಡಿದ್ದಾರೆ ಎಂದು ಶಿವರಾಜ್‌ಕುಮಾರ್‌ ಮೆಚ್ಚಿದ್ದಾರೆ.

ಹುಡುಗನ ನಟನೆ ಮೆಚ್ಚಿದ ನೆಟ್ಟಿಗರು

ಇನ್ನು ಸೋಶಿಯಲ್‌ ಮೀಡಿಯಾ ಕೂಡ ಪ್ರೀತಮ್‌ನ ನಟನೆಯನ್ನು ಮೆಚ್ಚಿದೆ. 'ಎಂತಾ ಅದ್ಭುತವಾದ ನಟನೆ ಪುಟ್ಟ ನಿನ್ನ ವಯಸ್ಸಿಗೆ ಮೀರಿದ ನಟನೆ ಮುಂದೆ ಒಳ್ಳೆ ಪ್ಯೂಚರ್ ಇದೆ ಗಾಡ್ ಬ್ಲೆಸ್ ಯು..' ಎಂದು ಒಬ್ಬರು ಬರೆದಿದ್ದರೆ, 'ಮೆಚ್ಚಿದೆ ಕಣಯ್ಯ ನಿನ್ನ ಈ ಟ್ಯಾಲೆಂಟ್ ನ ನಿನ್ನ ಈ ಬೆಳೆವಣಿಗೆ ಇದೆ ತರ ಮುಂದೆ ಸಾಗಲಿ..' ಎಂದು ಮತ್ತೊಬ್ಬ ಯೂಸರ್‌ ಕಾಮೆಂಟ್‌ ಮಾಡಿದ್ದಾರೆ.

'ಕುರುಬರು ಪಿಳ್ಳೆ ಪ್ರೀತಮ್. ಸೂಪರ್ ಕಂದ ನಿನ್ನ ಈ ಅಭಿನಯವನ್ನು ನೋಡಿ ಕಣ್ಣಲ್ಲಿ ನೀರು ಬಂತು', 'ಅದ್ಬುತ ರಾಜ್ ಕುಮಾರ್ sir ಅವ್ರನ್ನ ಮತ್ತೆ ನೋಡಿದ ಹಾಗೆ ಆಯಿತು ಸೂಪರ್‌ ಪ್ರೀತಮ್‌..' ಎಂದು ಇನ್ನೂ ಕೆಲವರು ಬರೆದಿದ್ದಾರೆ. 'ಕವಿರತ್ನ ಕಾಳಿದಾಸ ಸಿನಿಮಾ ಮತ್ತೆ ತೆರೆ ಮೇಲೆ ನೋಡಿದಾಗೆ ಆಯಿತು ಅದ್ಭುತ ಪ್ರತಿಭೆ.', 'ದಯವಿಟ್ಟು ಅವನಿಗೆ ದೃಷ್ಟಿ ತೆಗೆಯಿರಿ' ಎಂದು ಯೂಸರ್‌ಗಳು ಪ್ರತಿಕ್ರಿಯೆ ನೀಡಿದ್ದಾರೆ.