ಖ್ಯಾತ ನಿರೂಪಕಿ ಅನುಶ್ರೀ ರೋಶನ್ ಶೆಟ್ಟಿ ಅವರನ್ನು ವಿವಾಹವಾಗಿದ್ದು, ಮದುವೆ ಬಳಿಕ ಕಾರ್ಯಕ್ರಮವೊಂದರಲ್ಲಿ ತಮ್ಮ ಗಂಡನ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಸರಳವಾಗಿ ಮದುವೆಯಾದ ಅನುಶ್ರೀ, ನಿರೂಪಣಾ ವೃತ್ತಿಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕದ ಖ್ಯಾತ ನಿರೂಪಕಿ ಅನುಶ್ರೀ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ರೋಶನ್ ಜೊತೆ ಸಪ್ತಪದಿ ತುಳಿದಿದ್ದಾರೆ. ನವಜೋಡಿ ಅನುಶ್ರೀ-ರೋಶನ್ ಶೆಟ್ಟಿಗೆ ಕರುನಾಡಿನ ಜನರು ಶುಭ ಹಾರೈಸುತ್ತಿದ್ದಾರೆ. ಮದುವೆ ಬಳಿಕ ಯಾವುದೇ ಲಾಂಗ್ ಬ್ರೇಕ್ ತೆಗೆದುಕೊಳ್ಳದ ಅನುಶ್ರೀ ಕೆಲಸಕ್ಕೆ ಹಿಂದಿರುಗಿದ್ದಾರೆ. ಹಿಂದೂ ಧಾರ್ಮಿಕ ಸೇವಾ ಟ್ರಸ್ಟ್ ಆಯೋಜನೆಯ ಗಣೇಶೋತ್ಸವದಲ್ಲಿ ಪತಿ ರೋಶನ್ ಜೊತೆ ಅನುಶ್ರೀ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಹಿಂದೂ ಸಂಪ್ರದಾಯದಂತೆ ಅನುಶ್ರೀ ಅವರಿಗೆ ಬಾಗಿನ ನೀಡಲಾಯ್ತು. ನಂತರ ನಿರೂಪಣಾ ನಕ್ಷತ್ರ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯ್ತು.

ನನ್ನ ಗಂಡ ಏನು ಅನ್ಕೊಳ್ಳಲ್ಲ ಎಂದ ನಿರೂಪಕಿ ಅನುಶ್ರೀ

ಕಾರ್ಯಕ್ರಮದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಅನುಶ್ರೀ ಮಾತನಾಡುತ್ತಿದ್ದರು. ಈ ವೇಳೆ ವೇದಿಕೆ ಮೇಲಿದ್ದ ವ್ಯಕ್ತಿಯೊಬ್ಬರು ಅನುಶ್ರೀ ಸಮೀಪಕ್ಕೆ ಬಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅಲ್ಲಿ ನಮ್ಮ ಯಜಮಾನರು ಕಾಯ್ತಿದ್ದಾರೆ. ನೀವು ಇಷ್ಟು ಹತ್ರಕ್ಕೆ ಬಂದು ಫೋಟೋ ತೆಗೆದುಕೊಂಡರೆ ನನ್ನ ಗಂಡ ಏನು ಅನ್ಕೊಳ್ಳಲ್ಲ ಎಂದು ಅನುಶ್ರೀ ನಗೆ ಚಟಾಕಿ ಹಾರಿಸಿದರು. ಅನುಶ್ರೀ ಮಾತುಗಳನ್ನು ಕೇಳಿ ನೆರೆದಿದ್ದ ಜನಸಮೂಹ ನಗೆಗಡಿಲಿನಲ್ಲಿ ತೇಲಾಡಿತು.

ಬಾಗಿನ ಮತ್ತು ಪ್ರಶಸ್ತಿ ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಅನುಶ್ರೀ, ಮದುವೆಯನ್ನು ಸರಳ ಮತ್ತು ಆಪ್ತರ ಸಮ್ಮುಖದಲ್ಲಿ ಮಾಡಿಕೊಳ್ಳೋದು ನನ್ನ ಆಸೆಯಾಗಿತ್ತು. ಮದುವೆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿ ಕರುನಾಡಿನ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ನಮ್ಮನ್ನು ಹರಿಸಿದ ಪ್ರತಿಯೊಬ್ಬ ಕನ್ನಡಿಗರಿಗೂ ಈ ವೇದಿಕೆ ಮೂಲಕ ಧನ್ಯವಾದ ತಿಳಿಸುತ್ತೇನೆ ಎಂದರು.

ಕನ್ನಡಿಗರಲ್ಲಿ ಮಾತಿನ ಮಲ್ಲಿಯ ವಿಶೇಷ ಮನವಿ

ಇಲ್ಲಿಯವರೆಗೂ ನನ್ನನ್ನು ನಿಮ್ಮ ಮನೆ ಮಗಳನ್ನಾಗಿ ಕಾಪಾಡಿಕೊಂಡು ಬಂದಿದ್ದೀರಿ. ಈ ನಿಮ್ಮ ಮನೆ ಮಗಳು ಇನ್ನೊಬ್ಬರ ಕೈ ಹಿಡಿದಿದ್ದಾಳೆ. ಈಗ ಆ ಮನೆಯನ್ನು ಬೆಳಗುವ ಜವಾಬ್ದಾರಿ ನನ್ನ ಮೇಲಿದೆ. ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಬೇಕು ಎಂದು ಆಶಿಸುತ್ತೇನೆ. ಮದುವೆಯಾಗಿದೆ ಅಂತ ನಾನು ಮಾಡುತ್ತಿರುವ ಕೆಲಸವನ್ನು ಮರೆಯಲ್ಲ. ನನ್ನ ನಿರೂಪಣಾ ವೃತ್ತಿ ಹೀಗೆಯೇ ಮುಂದುವರಿಯುತ್ತದೆ. ಇನ್ನೊಂದಿಷ್ಟು ವರ್ಷ ಈ ಧ್ವನಿ, ಈ ಎನರ್ಜಿಯನ್ನು ನೀವು ಸಹಿಸಿಕೊಳ್ಳಲೇಬೇಕು ಎಂದು ಕನ್ನಡಿಗರಲ್ಲಿ ಅನುಶ್ರೀ ಮನವಿ ಮಾಡಿಕೊಂಡರು.

ಆಪ್ತರ ಸಮ್ಮುಖದಲ್ಲಿ ಅನುಶ್ರೀ-ರೋಷನ್ ಕಲ್ಯಾಣ

ಆಗಸ್ಟ್ 28ರಂದು ಬೆಳಗ್ಗೆ 10.56ಕ್ಕೆ ನಡೆಯುವ ಮುಹೂರ್ತದಲ್ಲಿ ಉದ್ಯಮಿ ರೋಶನ್ ಶೆಟ್ಟಿ ಜೊತೆ ಅನುಶ್ರೀ ಮದುವೆ ಖಾಸಗಿಯಾಗಿ ನಡೆಯಿತು. ಬೆಂಗಳೂರು ಹೊರವಲಯದ ರೆಸಾರ್ಟಿನಲ್ಲಿ ಮದುವೆ ನಡೆದಿದ್ದು, ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ರೋಷನ್‌ ಕೊಡಗು ಮೂಲದ ರಾಮಮೂರ್ತಿ ಎಂಬವರ ಪುತ್ರ. ಉದ್ಯಮಿಯಾಗಿದ್ದು, ಪುನೀತ್‌ ರಾಜ್‌ಕುಮಾರ್‌ ಅವರ ಆಪ್ತರಾಗಿದ್ದಾರೆ.

ಇದನ್ನೂ ಓದಿ: ಅನುಶ್ರೀಗೆ ತವರಿನಲ್ಲಿ ಮಡಿಲು ತುಂಬುವ ಶಾಸ್ತ್ರ, ತಾಳಿ ಹಿಡಿದು ಆಂಕರ್ ಹೇಳಿದ್ದೇನು?

View post on Instagram

ಸೀರೆ ಬೆಲೆ 2.5 ಲಕ್ಷ ರು. ಅಲ್ಲ, 2700 ರೂಪಾಯಿ

ಅನುಶ್ರೀ ಅವರ ಮದುವೆ ಸೀರೆಯ ರೇಟೆಷ್ಟು ಎಂಬ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆದಿತ್ತು.ಹಲವು ಮಂದಿ ಧಾರೆಗೂ ಮುನ್ನ ಅನುಶ್ರೀ ಉಟ್ಟಿದ್ದ ಹಾಲು ಬಿಳುಪಿನ ಸೀರೆಯ ಬೆಲೆ ಎರಡೂವರೆಯಿಂದ ಮೂರು ಲಕ್ಷ ರು ಎಂದು ಹೇಳುತ್ತಿದ್ದರು. ಸಾಮಾನ್ಯ ಸಮಾರಂಭಕ್ಕೇ ಲಕ್ಷಗಟ್ಟಲೆ ಬೆಲೆಯ ಉಡುಗೆ ಧರಿಸುವ ಸೆಲೆಬ್ರಿಟಿಗಳು ಮದುವೆಯ ವೇಳೆ ಅತಿ ದುಬಾರಿ ಸೀರೆ ಉಡುವುದು ಸರ್ವೇ ಸಾಮಾನ್ಯ. ಸೋಷಲ್‌ ಮೀಡಿಯಾದಲ್ಲೂ ಈ ಮನಸ್ಥಿತಿಯಲ್ಲೇ ಜನ ಸೀರೆಯ ರೇಟು ಊಹಿಸಿದ್ದರು. ಇದಕ್ಕೆ ಅನುಶ್ರೀ ಅವರೇ ಸ್ಪಷ್ಟನೆ ಕೊಟ್ಟಿದ್ದು, ‘ನನ್ನ ಈ ಸೀರೆಯ ಬೆಲೆ 2.5 ಲಕ್ಷ ಅಂತ ತುಂಬಾ ಜನ ಹೇಳುತ್ತಿದ್ದಾರೆ. ಆದರೆ ಇದರ ಬೆಲೆ 2.5 ಲಕ್ಷ ರು. ಅಲ್ಲ, 2700 ರು.ಗಳಷ್ಟೇ. ಮೈಸೂರಿಂದ ಖರೀದಿಸಿದ ಸೀರೆ ಇದು’ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸ್ವಂತ ಅಣ್ಣನಂತೆ ನಿರೂಪಕಿ ಅನುಶ್ರೀ ಮದುವೆ ಮಾಡಿದ ಸೂಪರ್‌ ಹಿಟ್‌ ಸಿನಿಮಾ ನಿರ್ಮಾಪಕ ವರುಣ್‌ ಗೌಡ!

View post on Instagram