ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಗೋಪಾಲಯ್ಯ ತನ್ನ ತಪ್ಪು ಅರಿತು ಮೊದಲ ಪತ್ನಿ ಪುಟ್ಟಕ್ಕ ಮತ್ತು ಮಕ್ಕಳ ಬಳಿ ಮರಳಿದ್ದಾರೆ. ಭಾಗ್ಯಲಕ್ಷ್ಮಿ ಧಾರಾವಾಹಿಯ ಸುಂದ್ರಿ ಈಗ ಒಳ್ಳೆಯವಳ ಪಾತ್ರದಲ್ಲಿದ್ದಾರೆ. ನಿಜ ಜೀವನದಲ್ಲಿ ಗೋಪಾಲಯ್ಯ ಮತ್ತು ಸುಂದ್ರಿ ದಂಪತಿಗಳು. ಮೂವರ ತಮಾಷೆಯ ವಿಡಿಯೋ ವೈರಲ್ ಆಗಿದೆ. ಉಮಾಶ್ರೀ, ರಮೇಶ್ ಪಂಡಿತ್ ಮತ್ತು ಸುನೇತ್ರಾ ಪಂಡಿತ್ ಕಲಾವಿದರಾಗಿದ್ದಾರೆ.

ಗೋಪಾಲಯ್ಯ ಎಂದಾಕ್ಷಣ ಸೀರಿಯಲ್​ ಪ್ರೇಮಿಗಳ ಗಮನ ಹರಿಯುವುದು ಪುಟ್ಟಕ್ಕನ ಮಕ್ಕಳು ಇಬ್ಬರು ಹೆಂಡಿರ ಮುದ್ದಿನ ಗಂಡನ ಮೇಲೆ. ಮೂವರು ಹೆಣ್ಣುಮಕ್ಕಳು ಹುಟ್ಟಿದ ಕಾರಣಕ್ಕೆ ಪತ್ನಿ ಪುಟ್ಟಕ್ಕನನ್ನು ದೂರ ಮಾಡಿ ರಾಜಿ ಎಂಬಾಕೆ ಜೊತೆ ಮದುವೆಯಾಗಿರೋ ಗೋಪಾಲಯ್ಯನಿಗೆ ಈಗ ತಾನು ಮಾಡಿರುವ ಅರಿವಾಗಿದೆ. ಎರಡನೆಯ ಪತ್ನಿ ರಾಜಿ ವಿಲನ್​ ಎನ್ನುವ ಸತ್ಯ ಗೊತ್ತಾಗಿ ಹಾಗೂ ಹೀಗೂ ಮಾಡಿ ಮೊದಲ ಪತ್ನಿ ಮತ್ತು ಮಕ್ಕಳನ್ನು ಸೇರಿಕೊಂಡಿದ್ದಾನೆ. ಮೂರು ಮಕ್ಕಳ ಸಂಸಾರದ ನೊಗ ಹೊತ್ತು ಮೆಸ್​ನಿಂದಲೇ ಜೀವನ ಸಾಗಿಸಿ ಬದುಕು ಕಟ್ಟಿಕೊಂಡ ಪುಟ್ಟಕ್ಕ ಕ್ಷಮಯಾಧರಿತ್ರಿಯೂ ಆಗಿರುವ ಕಾರಣದಿಂದ ಗಂಡನ ತಪ್ಪುಗಳನ್ನು ಕ್ಷಮಿಸಿದ್ದಾಳೆ. ಮನೆ ಬಿಟ್ಟು ಹೋದ ಅಪ್ಪನನ್ನು ಕಂಡರೆ ಕಿಡಿ ಕಾರುತ್ತಿದ್ದ ಮಕ್ಕಳು ಕೂಡ ಈಗ ಅಪ್ಪನನ್ನು ಒಪ್ಪಿಕೊಂಡಿದ್ದಾರೆ. ಇದು ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಗೋಪಾಲಯ್ಯನ ಕಥೆ.

ಇನ್ನು ಕಲರ್ಸ್​ ಕನ್ನಡಕ್ಕೆ ಬರುವುದಾದರೆ ಟಿಆರ್​ಪಿಯಲ್ಲಿ ಸದಾ ಮುಂದೆ ಇರುವ ಸೀರಿಯಲ್​ಗಳಲ್ಲಿ ಒಂದು ಭಾಗ್ಯಲಕ್ಷ್ಮಿ. ಇಲ್ಲಿಯ ಸುಂದ್ರಿ ರೋಲ್​ ಅನ್ನು ಯಾರೂ ಮರೆಯುವುದಿಲ್ಲ. ಮೊದಲಿಗೆ ವಿಲನ್​ ಎನಿಸಿ, ಈಗ ಒಳ್ಳೆಯವಳಾಗಿದ್ದಾಳೆ ಸುಂದ್ರಿ. ದುಡ್ಡಿನ ಆಸೆಗೆ ವಿಲನ್​ ಶ್ರೇಷ್ಠಾಳ ಸಾಥ್​ ಕೊಟ್ಟಿದ್ದಾಕೆಗೆ ಈಗ ತಪ್ಪಿನ ಅರಿವಾಗಿ ನಾಯಕಿ ಭಾಗ್ಯಳ ಪರವಾಗಿ ನಿಂತಿದ್ದಾಳೆ. ಅಂದಹಾಗೆ ಪುಟ್ಟಕ್ಕನ ಮಕ್ಕಳು ಗೋಪಾಲಯ್ಯ ಮತ್ತು ಭಾಗ್ಯಲಕ್ಷ್ಮಿಯ ಸುಂದ್ರಿ ಇಬ್ಬರೂ ನಿಜ ಜೀವನದ ದಂಪತಿ. ಪುಟ್ಟಕ್ಕ ಮತ್ತು ಸುಂದ್ರಿಯರ ನಡುವೆ ಗೋಪಾಲಯ್ಯ ಸುಸ್ತೋ ಸುಸ್ತಾಗಿರುವ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ ವಿಡಿಯೋ ಅನ್ನು ಸುಂದ್ರಿ ಅರ್ಥಾತ್​ ಸುನೇತ್ರಾ ಪಂಡಿತ್​ ಶೇರ್​ ಮಾಡಿಕೊಂಡಿದ್ದಾರೆ. ಅಂದಹಾಗೆ ಪುಟ್ಟಕ್ಕನ ಪಾತ್ರಧಾರಿ ಉಮಾಶ್ರೀಯಾದರೆ, ಗೋಪಾಲಯ್ಯ ಪಾತ್ರಧಾರಿಯ ಹೆಸರು, ರಮೇಶ್​ ಪಂಡಿತ್​. ಉಮಾಶ್ರೀಯವರ ಬಣ್ಣದ ಲೋಕದ ಪಯಣ ಅಂತೂ ಎಲ್ಲಾ ಸಿನಿ ಪ್ರಿಯರಿಗೆ ತಿಳಿದದ್ದೇ. ಕಣ್ಣಿನಲ್ಲಿಯೇ ಮೋಡಿ ಮಾಡುವ ಅಭಿನಯದಿಂದ ಎಂಥ ಪಾತ್ರಗಳನ್ನು ಕೊಟ್ಟರೂ ಭೇಷ್​ ಎನ್ನಿಸುವಂತೆ ಮಾಡುವಲ್ಲಿ ಅವರು ಪಳಗಿದ್ದಾರೆ. ಹಾಸ್ಯದಿಂದ ಹಿಡಿದು ಸೀರಿಯಲ್​ ಪಾತ್ರದವರೆಗೆ, ತಮ್ಮ ಪಾತ್ರದಲ್ಲಿಯೇ ಪರಕಾಯ ಪ್ರವೇಶ ಮಾಡಿ ಅಭಿನಯ ಮಾಡುತ್ತಾರೆ. ಇದೀಗ ಯಕ್ಷಗಾನದಲ್ಲಿಯೂ ಮಿಂಚಿದ್ದು ಮಂಥರೆಯಾಗಿ ಬಣ್ಣ ಹಚ್ಚಿದ್ದಾರೆ. ಇನ್ನು ರಮೇಶ್​ ಪಂಡಿತ್​ ಅವರ ಬಗ್ಗೆ ಹೇಳುವುದಾದರೆ, ಮೂಲತಃ ಇವರು ತಬಲಾ ಆರ್ಟಿಸ್ಟ್​.

ರೀಲ್ಸ್​ ಮಾಡುತ್ತಲೇ ಕಿತ್ತಾಡಿಕೊಂಡ ಅಮೃತಧಾರೆ ನಟಿಯರು: ಒಂದಾದ ಸವತಿಯರು- ವಿಡಿಯೋ ವೈರಲ್​

ಇವರ ಮೂಲವೂ ರಂಗಭೂಮಿಯೇ. ಹಲವಾರು ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ಅರುಂಧತಿ, ನಂದಿನಿ, ಜ್ಯೋತಿ, ವಾರಸುದಾರ ಸೇರಿದಂತೆ ಹಲವು ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿಯೂ ಇವರು ಮಿಂಚಿದ್ದಾರೆ. ಕಿಲಾಡಿ ಪೊಲೀಸ್, ಸಿಲಿಕಾನ್ ಸಿಟಿ, ಜೂಗಾರಿ, ಲವ ಕುಶ, ಕವಲುದಾರಿ, ಬದ್ಮಾಶ್, ಶರಣ ಶಕ್ತಿ, ಕಾಕ್ಟೇಲ್, ಪರಿಶುದ್ಧ, ಸಾರ್ವಜನಿಕರಲ್ಲಿ ವಿನಂತಿ, ಕಲಿವೀರ ಮೂಖಜೀವ, ಕಾಲೇಜು ಕುಮಾರ್, ಸರ್ಕಾರ, ಗರುಡ, ರಾಮಧಾನ್ಯ, ಬಾನಾಡಿ, ಗಿರಿಗಿಟ್ಲೆ, ಶಿವಗಾಮಿ, ಅಲೆಮಾರಿ, ಕಲಾಸಿಪಾಳ್ಯ, ಸುಂಟರಗಾಳಿ, ನಮ್ಮ ಪ್ರೀತಿಯ ರಾಮು, ನಾನಿ, ಡಿಟೇಕ್ಟಿವ್ ಶಿವಾಜಿ, ತಲೆದಂಡ, ಭಾವಪೂರ್ಣ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

 ಇನ್ನು ಸುನೇತ್ರಾ ಅವರ ಸಿಲ್ಲಿ ಲಲ್ಲಿ ಸೀರಿಯಲ್​ ನೋಡಿದವರಿಗೆ ಅವರ ಪರಿಚಯದ ಅಗತ್ಯವೇ ಇಲ್ಲ. ನಾಯಕಿಯ ಪರ್ಸನಲ್ ಅಸಿಸ್ಟೆಂಟ್ ವಿಶಾಲೂ ಆಗಿ ಸಕತ್​ ಫೇಮಸ್​ ಆದವರು ಇವರು. ಚಿತ್ರಗಳಲ್ಲಿಯೂ ನಟಿಸಿದ್ದಾರೆ ನಟಿ. ಯಾರೇ ನೀನು ಚೆಲುವೆ, ನಿನಗೋಸ್ಕರ, ಉಲ್ಟಾಪಲ್ಟಾ ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸುನೇತ್ರಾ ಅವರು ಕಂಠದಾನ ಕಲಾವಿದೆ ಕೂಡ ಹೌದು. ಪ್ರೇಮಾ, ಶ್ವೇತಾ, ರಮ್ಯಾ ಕೃಷ್ಣ ರಂಭಾ, ಚಾರುಲತಾ ಮುಂತಾದ ಖ್ಯಾತನಾಮ ನಟಿಯರಿಗೆ ಕಂಠದಾನ ಮಾಡಿದ್ದಾರೆ. ಲೈಮ್ ಲೈಟ್ ಅಕಾಡೆಮಿ ಎಂಬ ನಾಟಕ ಅಕಾಡೆಮಿಯನ್ನು ಕೂಡ ಇವರು ನಡೆಸುತ್ತಿದ್ದಾರೆ. ಇದೀಗ ಈ ಮೂವರು ಪಂಟರ ಜೋಡಿ ತಮಾಷೆಯ ರೀಲ್ಸ್​ ಮಾಡಿದ್ದು, ಅದೀಗ ವೈರಲ್​ ಆಗಿದೆ.

ಹೊಸ ಅವತಾರದಲ್ಲಿ ಭೂಮಿಕಾ: ಸುಂಟರಗಾಳಿ ಸುಂಟರಗಾಳಿ ಹಾಡಿಗೆ ಸೊಂಟ ಬಳುಕಿಸಿದ ಅಮೃತಧಾರೆ ಚೆಲುವೆ

ಲಿಂಕ್​ ಈ ಕೆಳಗೆ ಇದೆ...

https://www.facebook.com/reel/1124309975466212