ಧಾರಾವಾಹಿಗಳಲ್ಲಿ ನಟಿಯರು ಗರ್ಭಿಣಿಯರಾಗಿ ನಟಿಸಿದರೂ ಹೊಟ್ಟೆ ಕಾಣಿಸುವುದಿಲ್ಲ. ಒಮ್ಮೆಲೇ ಸೀಮಂತದಲ್ಲಿ ಅಥವಾ ನೇರವಾಗಿ ಮಗುವಿನ ಜನನದಲ್ಲಿ ಮಾತ್ರ ಗರ್ಭಧಾರಣೆಯ ಲಕ್ಷಣಗಳು ಗೋಚರಿಸುತ್ತವೆ. ನೆಟ್ಟಿಗರು ಇದನ್ನು ಟ್ರೋಲ್ ಮಾಡಿದರೂ, ನಟಿಯರು ಮತ್ತು ನಿರ್ದೇಶಕರು ತಲೆಕೆಡಿಸಿಕೊಳ್ಳುವುದಿಲ್ಲ. ನಕಲಿ ಹೊಟ್ಟೆ ಬಳಸಲು ಹಲವು ನಟಿಯರು ಇಷ್ಟಪಡುವುದಿಲ್ಲ ಎಂಬುದು ಇದಕ್ಕೆ ಕಾರಣ.
ಗರ್ಭ ಧರಿಸಿದ್ರೂ ಅದು ತಿಳಿಯದೇ ಮಗು ಹುಟ್ಟಿದ ಮೇಲೆ ತಾನು ಗರ್ಭಿಣಿಯಾಗಿದ್ದೆ ಎನ್ನುವುದು ತಿಳಿದಿದೆ ಎನ್ನುವಂಥ ಸುದ್ದಿಗಳು ಆಗಾಗ್ಗೆ ಬರುವುದನ್ನು ನೀವು ಕೇಳಿರಬಹುದು, ಇನ್ನು 8-9 ತಿಂಗಳಾದ ಮೇಲಷ್ಟೇ ತಾನು ಗರ್ಭಿಣಿಯಾಗಿದ್ದೆ ಎನ್ನುವ ವಿಷಯ ತಿಳಿದಿತ್ತು ಎಂದು ಬಾಲಕಿಯರು/ ಯುವತಿಯರು (ಅದರಲ್ಲಿಯೂ ಹೆಚ್ಚಾಗಿ ರೇ* ಗೆ ಒಳಗಾದವರು) ಹೇಳುವುದು ಇದೆ. ಆದರೆ ಇಂಥ ಪ್ರಕರಣಗಳು ತೀರಾ ಅಪರೂಪ ಬಿಡಿ. ಆದರೆ ಇಲ್ಲಿ ಹೇಳ್ತಿರೋದು ಆ ಬಗ್ಗೆ ಅಲ್ಲ. ಉದ್ದೇಶಪೂರ್ವಕವಾಗಿ ಅರ್ಥಾತ್ ಗರ್ಭಿಣಿ ಎಂದು ತಿಳಿದಿದ್ದರೂ ಹೊಟ್ಟೆ ಬರಿಸಿಕೊಳ್ಳದೇ ನೇರವಾಗಿ ಮಗು ಹುಟ್ಟಿಸಿಕೊಳ್ಳಲು ಸಾಧ್ಯ ಎನ್ನುವ ಮಹಿಳೆಯರ ಬಗ್ಗೆ ಇಲ್ಲಿ ಹೇಳಲಾಗಿದೆ. ಇದು ವಿಚಿತ್ರ ಎನ್ನಿಸಿದ್ರೂ ಸತ್ಯ ಕಣ್ರೀ...
ಇದು ಸಾಧ್ಯವಾಗ್ತಿರೋದು ನಟಿಯರಿಗೆ ಮಾತ್ರ. ನೀವು ಸೀರಿಯಲ್ ಪ್ರಿಯರಾಗಿದ್ರೆ ನಿಮಗೂ ಈ ಬಗ್ಗೆ ತಿಳಿದೇ ಇರುತ್ತದೆ. ನಿಜ. ಇಲ್ಲಿ ಹೇಳ್ತಿರೋದು ಸೀರಿಯಲ್ ನಟಿಯರ ಬಗ್ಗೆ. ಬಹುತೇಕ ಸೀರಿಯಲ್ಗಳಲ್ಲಿ, ನಟಿಯರು ಗರ್ಭಿಣಿ ವರ್ಷವಾದರೂ ಹೊಟ್ಟೆ ಬರೋದೇ ಇಲ್ಲ. ಅಪರೂಪಕ್ಕೆ ಕೆಲವರಿಗೆ 9ನೇ ತಿಂಗಳಿಗೆ ಡೈರೆಕ್ಟ್ ಆಗಿ ಹೊಟ್ಟೆ ಬಂದರೆ, ಮತ್ತೆ ಕೆಲವರಿಗೆ ನೇರವಾಗಿ ಮಗುನೇ ಹುಟ್ಟಿಬಿಡುತ್ತೆ! ಈ ಬಗ್ಗೆ ನೆಟ್ಟಿಗರಿಗೂ ಸದಾ ಯಕ್ಷಪ್ರಶ್ನೆ ಕಾಡುತ್ತಲೇ ಇರುತ್ತದೆ. ಸೀರಿಯಲ್ ಪ್ರೊಮೋ ಬಿಡುಗಡೆಯಾದಾಗಲೆಲ್ಲವೂ ನೆಟ್ಟಿಗರು ಇದೇ ಪ್ರಶ್ನೆಗಳನ್ನು ಪದೇ ಪದೇ ಕೇಳುವುದು ಇದೆ.
ಜಯಂತೂ ಅಲ್ಲ, ವಿಶ್ವನೂ ಅಲ್ಲ... ರುದ್ರನ ಜೊತೆ ಲಕ್ಷ್ಮೀ ನಿವಾಸ ಚಿನ್ನುಮರಿ ರೊಮಾನ್ಸ್!
ಉದಾಹರಣೆಗೆ ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ತುಳಸಿ ಗರ್ಭಿಣಿ ಎಂದು ತೋರಿಸಿದ್ದರೂ ಆಕೆಗೆ ಒಂದೇ ಬಾರಿಗೆ ದೊಡ್ಡ ಹೊಟ್ಟೆ ಬಂದದ್ದು ಸೀಮಂತದ ಸಮಯದಲ್ಲಿ. ಇದೇ ಸೀರಿಯಲ್ನಲ್ಲಿ ತುಳಸಿ ಮಗಳು ಸಂಧ್ಯಾ ತಾನು ಗರ್ಭಿಣಿ ಎಂದು ಸುಳ್ಳು ಹೇಳುತ್ತಿರುತ್ತಾಳೆ. ಆಕೆ ಸುಳ್ಳು ಹೇಳಿದರೂ ಅವಳಿಗೆ 9 ತಿಂಗಳಾದರೂ ಹೊಟ್ಟೆ ಬರದೇ ಇರುವುದಕ್ಕೆ ಯಾರಿಗೂ ಸಂದೇಹವೇ ಬರಲ್ಲ, ಏಕೆಂದ್ರೆ ನಟಿಯರಿಗೆ ಹೊಟ್ಟೆ ಬರಲೇಬೇಕೆಂದು ಇಲ್ಲವೆಂಬ ಕಾರಣದಿಂದ! ಇದು ಒಂದೆಡೆಯಾದ್ರೆ ಈಗ ಅಮೃತಧಾರೆ ಸೀರಿಯಲ್ನಲ್ಲಿ ಭೂಮಿಕಾ ಗರ್ಭಿಣಿ. ಆದ್ರೆ ಸದ್ಯ ಅಂತೂ ಆಕೆಗೆ ಹೊಟ್ಟೆ ಕಾಣಿಸುತ್ತಿಲ್ಲ. ನೇರವಾಗಿ 9 ತಿಂಗಳಿಗೆ ಕಾಣಿಸಿಕೊಳ್ಳಬಹುದು ಎನ್ನುವ ಸಂದೇಹವಿದೆ. ಇದೇ ಸೀರಿಯಲ್ನಲ್ಲಿ, ಮಲ್ಲಿ ಗರ್ಭಿಣಿಯಾದಾಗ್ಲೂ ಸೀಮಂತದ ಸಮಯದಲ್ಲಿ ಹೊಟ್ಟೆ ತೋರಿಸಲಾಗಿತ್ತು!
ಅಷ್ಟಕ್ಕೂ ಧಾರಾವಾಹಿಗಳು ಎಂದರೆ ಅಲ್ಲಿ ಏನು ಬೇಕಾದರೂ ಆಗತ್ತೆ ಎನ್ನುವುದು ನಿಜವಾದರೂ ಇಂಥ ವಿಷಯಗಳಲ್ಲಿ ಮಾತ್ರ ಈಗ ನೆಟ್ಟಿಗರ ಕಣ್ಣು ಕಮೆಂಟ್ಗಳ ಮೇಲೆ ನೆಟ್ಟಿರುವ ಕಾರಣದಿಂದ, ಸುಲಭದಲ್ಲಿ ಟ್ರೋಲ್ಗೆ ಒಳಗಾಗುತ್ತದೆ. ಆದರೆ ಇದರ ಬಗ್ಗೆ ನಟಿಯರು ಅಥವಾ ನಿರ್ದೇಶಕರು ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನಿ. ಕೆಲವು ನಟ-ನಟಿಯರು ಕಮೆಂಟ್ಸ್ ಓದುತ್ತಾರೆ. ಈ ಬಗ್ಗೆ ಸಂದರ್ಶನಗಳಲ್ಲಿ ಅವರೇ ಹೇಳಿದ್ದು ಉಂಟು. ಕೆಲವೊಮ್ಮೆ ಕಮೆಂಟ್ಸ್ಗಳ ಆಧಾರದ ಮೇಲೆ ಸೀರಿಯಲ್ ಕಥೆಗಳನ್ನೂ ಬದಲಿಸುವುದು ಇದೆ. ಆದರೆ ಇಂಥ ವಿಷಯಗಳು ಬಂದಾಗ ಅಷ್ಟೊಂದು ಸೀರಿಯಲ್ ಆಗಿ ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಕಾರಣವೂ ಇದೆ. ಹಲವು ನಟಿಯರು ವರ್ಷಗಟ್ಟಲೆ ನಕಲಿ ಹೊಟ್ಟೆ ಬರಿಸಿಕೊಂಡು ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಇಚ್ಛಿಸುವುದಿಲ್ಲ ಎನ್ನುವ ಮಾಹಿತಿಯೂ ಇದೆ. ಅದೇನೇ ಇರಲಿ, ಒಟ್ಟಿನಲ್ಲಿ ಹೊಟ್ಟೆ ಬರದೇ ಗರ್ಭಿಣಿಯಾಗುವ ಪ್ರಕ್ರಿಯೆ ಮಾತ್ರ ಹಾಸ್ಯಾಸ್ಪದವಾಗಿದೆ!
ಇದೇನಿದು ಸೀರಿಯಲ್ ಟ್ವಿಸ್ಟು? ಗೆಟಪ್ಪೇ ಚೇಂಜಾಯ್ತು! ತುಳಸಿ ಬಿಟ್ಟು ಶಾರ್ವರಿ ಹಿಂದೆ ಹೋದ ಮಾಧವ್


