ಝಾನ್ಸಿಗೆ ರಾಘು ಮೇಲೆ ಪ್ರೀತಿಯಾಗಿದೆ. ಆದರೆ ರಾಘು ಅನಿತಾಳನ್ನು ಮದುವೆಯಾಗಲು ನಿರ್ಧರಿಸಿದ್ದಾನೆ. ಒಪ್ಪಂದದ ಮದುವೆಯ ನಂತರ ರಾಘುವಿನಿಂದ ದೂರವಾದ ಝಾನ್ಸಿ, ಈಗ ಅವನಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ರಾಘುವಿನ ಮನೆಗೆ ಬಂದು ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ರಾಘು ಈಗ ತ್ರಿಶಂಕು ಸ್ಥಿತಿಯಲ್ಲಿದ್ದಾನೆ.

ಪುರುಷ ದ್ವೇಷಿ ಝಾನ್ಸಿಗೆ ಪ್ರೀತಿ ಹುಟ್ಟಿದೆ. ಎಲ್ಲ ಬಿಟ್ಟು ನೆಮ್ಮದಿ ಜೀವನ ನಡೆಸೋಕೆ ಮುಂದಾಗಿದ್ದ ರಾಘುಗೆ ಶಾಕ್ ಆಗಿದೆ. ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರವಾಗ್ತಿರುವ ಯಜಮಾನ ಸೀರಿಯಲ್ (Yajamaana serial) ಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಎಂದೂ ಪುರುಷರನ್ನು ಪ್ರೀತಿಸಲು ಸಾಧ್ಯವೇ ಇಲ್ಲ ಅಂದ್ಕೊಂಡಿದ್ದ ಝಾನ್ಸಿಗೆ ಈಗ ರಾಘುವೇ ಎಲ್ಲ ಆಗಿದ್ದಾನೆ. ರಾಘು ಇಲ್ಲದೆ ಜೀವನ ಇಲ್ಲ ಎನ್ನುವ ಸತ್ಯ ಆಕೆಗೆ ಅರಿವಾಗಿದೆ. ಆದ್ರೆ ಝಾನ್ಸಿಯಿಂದ ಬಿಡುಗಡೆ ಪಡೆದು ಕುಟುಂಬಕ್ಕಾಗಿ ಅನಿತಾ ಮದುವೆಯಾಗಲು ಮುಂದಾಗಿರುವ ರಾಘುಗೆ ಮಾತ್ರ ಇದನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ರಾಘು ಮುಂದೇನು ಮಾಡ್ತಾನೆ ಅನ್ನೋದೇ ಈಗಿರೋ ಪ್ರಶ್ನೆ.

ರಾಘು ಹಾಗೂ ಝಾನ್ಸಿಯದ್ದು ಕಾಂಟ್ರ್ಯಾಕ್ಟ್ ಮದುವೆ. ತಾತನ ಆಸ್ತಿಗಾಗಿ ಇಷ್ಟವಿಲ್ಲದೆ ಹೋದ್ರೂ ಮದುವೆಗೆ ಒಪ್ಪಿಕೊಂಡವಳು ಝಾನ್ಸಿ. ಸ್ವಾಭಿಮಾನಿ ರಾಘುವನ್ನು ಬೆದರಿಸಿ, ಆತನ ಬಡತನವನ್ನು ತನ್ನ ಬಂಡವಾಳ ಮಾಡ್ಕೊಂಡು, ಕೋಟಿ ನೀಡುವ ಆಸೆ ತೋರಿಸಿ ಮದುವೆ ಆಗಿದ್ಲು. ತಂಗಿ ಪಲ್ಲವಿ ಮದುವೆ ಮಾಡೋಕೆ ಹಣ ಹೊಂದಿಸಲಾಗದೆ ಪರದಾಡ್ತಿದ್ದ ರಾಘು, ಅನಿತಾ ಜೊತೆ ಮದುವೆ ಫಿಕ್ಸ್ ಆಗಿದ್ರೂ ಝಾನ್ಸಿ ಜೊತೆ ಕಾಂಟ್ರಾಕ್ಟ್ ಮದುವೆ ಆಗಿದ್ದ. ಒಂದು ತಿಂಗಳು ಇಬ್ಬರು ಮಧ್ಯೆ ಹೆಣಗಾಡೋದು ರಾಘುಗೆ ಕಷ್ಟವಾಗಿತ್ತು. ಉಸಿರು ಕಟ್ಟಿಕೊಂಡೇ ಒಂದು ತಿಂಗಳು ಪೂರೈಸಿದ್ದ ರಾಘು, ಬಿಡುಗಡೆಯಾಗಿ ಮನೆಗೆ ಬಂದಿದ್ದಾನೆ.

ರಾಘು ಜೊತೆಯಲ್ಲಿದ್ದಾಗ ಆತನ ಮೇಲೆ ಕೆಂಡ ಕಾರ್ತಿದ್ದ ಝಾನ್ಸಿಗೆ, ರಾಘು ಮೇಲೆ ಪ್ರೀತಿ ಚಿಗುರಿದೆ. ರಾಘು ಮನೆಯಿಂದ ಹೊರಗೆ ಹೋಗುವಾಗ ಕೆಲಸದವರೆಲ್ಲ ಕಣ್ಣೀರು ಹಾಕಿದ್ರು. ಝಾನ್ಸಿ ಮಾತ್ರ ಆಸ್ತಿಯೇ ಮುಖ್ಯ ಎನ್ನುವ ದರ್ಪವನ್ನು ತೋರಿಸಿದ್ಲು. ಝಾನ್ಸಿಗೆ ಭಾವನೇಗಳೇ ಇಲ್ಲ ಅಂದ್ಕೊಂಡಿದ್ದ ರಾಘು, ಮನೆಗೆ ವಾಪಸ್ ಆಗಿ ಅನಿತಾ ಜೊತೆ ಮದುವೆಯಾಗುವ ತಯಾರಿಯಲ್ಲಿದ್ದ. ಆದ್ರೀಗ ದೊಡ್ಡ ಯಡವಟ್ಟು ಆಗಿದೆ.

ಝಾನ್ಸಿ ಮನೆಗೆ ಬಂದಿದ್ದ ಭೂಮಿಕಾ ಹಾಗೂ ಅರ್ಜುನ್ ಸ್ಟೋರಿಗೆ ಹೊಸ ಟ್ವಿಸ್ಟ್ ನೀಡಿದ್ದಾರೆ. ಝಾನ್ಸಿಗೆ ಕುಡಿಸಿ ಆಕೆ ಮನಸ್ಸಿನಲ್ಲಿದ್ದ ಭಾವನೆ ಹೊರ ಹಾಕಿದ್ದಾರೆ. ಕುಡಿದ ಮತ್ತಿನಲ್ಲಿ ಝಾನ್ಸಿ, ರಾಘುವಿನ ಮೇಲಿದ್ದ ಪ್ರೀತಿಯನ್ನು ಹೊರ ಹಾಕಿದ್ದಾಳೆ. ಐ ಲವ್ ಯು ರಾಘು ಎಂದ ಝಾನ್ಸಿ, ಅವನಿಲ್ಲದೆ ನಾನಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾಳೆ. ಇಂದಿನ ಪ್ರೋಮೋದಲ್ಲಿ ಝಾನ್ಸಿ , ರಾಘು ಮನೆಗೆ ಬಂದಿದ್ದಾಳೆ. ನೀನು ನನಗಾಗಿ ಹುಟ್ಟಿದ್ದು. ನಾನು ನಿನಗಾಗಿ. ನಮ್ಮಿಬ್ಬರ ಮದುವೆಯನ್ನು ಶಾಶ್ವತಗೊಳಿಸೋಣ. ನೀ ಇಲ್ಲದೆ ನಾನಿಲ್ಲ ಎಂದು ಝಾನ್ಸಿ, ರಾಘುವಿನ ಮುಂದೆ ಪ್ರೇಮ ಭಿಕ್ಷೆ ಬೇಡಿದ್ದಾಳೆ. 

ಸದಾ ಹಣದ ಅಹಂಕಾರದಲ್ಲಿ ಮೆರೆಯುತ್ತಿದ್ದ ಝಾನ್ಸಿ ಮಾತು ಕೇಳಿ ರಾಘು ದಂಗಾಗಿದ್ದಾನೆ. ಝಾನ್ಸಿ ಜೊತೆ ಶಾಶ್ವತ ಮದುವೆ ಸಾಧ್ಯವಿಲ್ಲದ ಮಾತು. ರಾಘು ಇಂಥ ನಿರ್ಧಾರಕ್ಕೆ ಬಂದ್ರೆ ಅಲ್ಲಿ ಪಲ್ಲವಿ ಬಾಳು ನುಚ್ಚುನೂರಾಗುತ್ತೆ. ರಾಘು ಕನಸಿನಲ್ಲಿಯೇ ಕಾಲ ಕಳೆಯುತ್ತಿರುವ ಅನಿತಾ ಹೃದಯ ಒಡೆದು ಹೋಗುತ್ತೆ. ಅನಿತಾ ಮದುವೆ ಆಗೇ ಆಗ್ತೇನೆ ಎಂದು ಪ್ರಮಾಣ ಮಾಡಿದ್ದ ರಾಘು ಈಗ ಇಕ್ಕಟ್ಟಿನಲ್ಲಿದ್ದಾನೆ. ಪ್ರೋಮೋ ನೋಡಿದ ವೀಕ್ಷಕರು, ಈಗ ಸೀರಿಯಲ್ ಚೆನ್ನಾಗಿ ಬರ್ತಿದೆ. ಇದೇ ಸೂಪರ್ ಆಗಿರೋದು ಅಂದಿದ್ದಾರೆ. ಮತ್ತೆ ಕೆಲವರಿಗೆ ಇದು ಝಾನ್ಸಿ ನಾಟಕ ಅನ್ನಿಸಿದೆ. ಇನ್ನು ಕೆಲವರು ಇದು ಕನಸು ಎನ್ನುತ್ತಿದ್ದಾರೆ. ಆದ್ರೆ ಸತ್ಯವಾ, ಕನಸಾ ಅನ್ನೋದು ಎಪಿಸೋಡ್ ಬಿಡುಗಡೆಯಾದ್ಮೇಲೆ ಗೊತ್ತಾಗ್ಬೇಕಿದೆ. 

View post on Instagram