‘ನಾ ನಿನ್ನ ಬಿಡಲಾರೆ’ ಸೀರಿಯಲ್ ಮೂಲಕ ಮನೆಮಾತಾದ ಬಾಲನಟಿ ಮಹಿತಾ, ತನ್ನ ಅದ್ಭುತ ನಟನೆಯಿಂದ ವೀಕ್ಷಕರನ್ನು ಅಳಿಸುತ್ತಿದ್ದಾಳೆ. ಇತ್ತೀಚೆಗೆ ಸಿಂಗಪುರ ಪ್ರವಾಸದಲ್ಲಿದ್ದಾಗ, ಹೆಬ್ಬಾವನ್ನು ಹೆಗಲ ಮೇಲೆ ಹಾಕಿಕೊಂಡು ಎಲ್ಲರನ್ನೂ ಬೆರಗುಗೊಳಿಸಿದ್ದಾಳೆ. ಈ ಪುಟಾಣಿಯ ಧೈರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಬಾಲಕಿ ಎಂದರೆ ಹಿತಾ. ತನ್ನ ಅದ್ಭುತ ನಟನೆಯಿಂದ ಭೇಷ್ ಎನ್ನಿಸಿಕೊಂಡಿದ್ದಾಳೆ ಈ ಪುಟಾಣಿ. ಅಷ್ಟಕ್ಕೂ, ಕೆಲವರಿಗೆ ಹಾಗೆನೇ. ಟ್ಯಾಲೆಂಟ್ ಎನ್ನುವುದು ಹುಟ್ಟುತ್ತಲೇ ಬಂದು ಬಿಡುತ್ತದೆ. ಹಿಂದಿನ ಜನ್ಮದಿಂದ ಬಂದ ಕಲೆ ಅದು ಎಂದು ಹೇಳುವವರೇ ಹೆಚ್ಚು ಮಂದಿ. ನಟನೆ, ಸಂಗೀತ, ಚಿತ್ರಕಲೆ, ಅಭಿನಯ, ನೃತ್ಯ... ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಚಿಕ್ಕಪುಟಾಣಿ ಇರುವಾಗಲೇ ಇವರು ಮಾಡುವ ಸಾಧನೆ ನೋಡಿದರೆ ನಿಜಕ್ಕೂ ಅದು ಈ ಜನ್ಮದಂತೂ ಇದ್ದಿರಲಿಕ್ಕೆ ಸಾಧ್ಯವೇ ಇಲ್ಲವೇನೋ ಅನ್ನಿಸಿಬಿಡುವುದು ಉಂಟು. ಕಲೆ ಎನ್ನುವುದು ರಕ್ತಗತವಾಗಿ ಬರುವುದು ನಿಜವಾದರೂ, ಕೆಲವೊಮ್ಮೆ ಯಾವ ಹಿನ್ನೆಲೆಯೂ ಇಲ್ಲದ ಪುಟಾಣಿ ಮಕ್ಕಳು ನಡೆದುಕೊಳ್ಳುವ ರೀತಿ ಅಚ್ಚರಿ ಎನ್ನಿಸುವುದು ಉಂಟು. ಅಂಥವಳಲ್ಲಿ ಒಬ್ಬಳು ಈ ಪುಟಾಣಿ ಹಿತಾ. ಅಂದಹಾಗೆ ಈಕೆಯ ರಿಯಲ್ ಹೆಸರು ಮಹಿತಾ.
ನಟನೆಯಿಂದ ಕಣ್ಣೀರು ತರಿಸುವ ಪುಟಾಣಿ
ನಾನಿನ್ನ ಬಿಡಲಾರೆ ಸೀರಿಯಲ್ ಸೀರಿಯಲ್ನಲ್ಲಿ ಈಕೆಯ ಒಂದೊಂದು ಅಭಿನಯಕ್ಕೂ ವೀಕ್ಷಕರು ಮನಸೋತಿದ್ದಾರೆ. ನಗು, ಅಳು, ತಮಾಷೆ ಏನೇ ಇರಲಿ. ಯಾವುದೇ ಭಾವ ಇರಲಿ ಅದಕ್ಕೆ ತಕ್ಕಂತೆ ನಟಿಸುತ್ತಾಳೆ. ದುಃಖದ ಸನ್ನಿವೇಶದಲ್ಲಿ ವೀಕ್ಷಕರನ್ನು ಅಳಿಸುತ್ತಾಳೆ. ಇದರಲ್ಲಿ ಆಕೆ ತಾಯಿಯನ್ನು ಕಳೆದುಕೊಂಡಿರುವ ತಬ್ಬಲಿ ಮಗು. ತಾಯಿಯ ಪ್ರೀತಿಗಾಗಿ ಹಂಬಲಿಸುವ, ತನ್ನ ತಾಯಿಯ ಸಾವಿಗೆ ಅಪ್ಪನೇ ಕಾರಣ ಎಂದು ತಪ್ಪು ತಿಳಿದು ಆತನನ್ನು ದ್ವೇಷಿಸುವ ಕ್ಯಾರೆಕ್ಟರ್ ಈಕೆಯದ್ದು. ನಟನೆಯಲ್ಲಿ ಮಾತ್ರ ಮಹಿತಾ ಒಂದು ಹೆಜ್ಜೆ ಮುಂದು. ಅಬ್ಬಾ ಎನ್ನುವಂಥ ನಟನೆ ಈಕೆಯದ್ದು. ಇದೀಗ ಅಮ್ಮನ ನೆನಪಿನಲ್ಲಿ, ಅಮ್ಮನಿಗಾಗಿ ಹಂಬಲಿಸುತ್ತಾ, ಒಮ್ಮೆ ಬಂದು ನನ್ನನ್ನು ಹಗ್ ಮಾಡು, ಪ್ಲೀಸ್ ಬಾ ಅಮ್ಮಾ... ನನ್ನನ್ನು ಯಾಕೆ ಬಿಟ್ಟುಹೋದೆ... ಎಂದು ಕೇಳುವ ಪರಿ ಮಾತ್ರ ಬಹುತೇಕ ವೀಕ್ಷಕರು , ನೆಟ್ಟಿಗರ ಕಣ್ಣಲ್ಲಿ ನೀರನ್ನು ತರಿಸಿರುವುದು ಕಮೆಂಟ್ನಲ್ಲಿ ಹಾಕಿರುವ ಸಂದೇಶಗಳಿಂದಲೇ ನೋಡಬಹುದು.
ಹೆಬ್ಬಾವಿನ ಜೊತೆ ಸರಸ
ಇಂತಿಪ್ಪ ಮಹಿತಾ ಇದೀಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾಳೆ. ಹಾವು ಎಂದರೆ ಭಯ ಪಡುವ ಅದೆಷ್ಟೋ ಮಂದಿ ಇದ್ದಾರೆ. ಹಲ್ಲು ಕಿತ್ತ ಹಾವು, ಸಾಕಿದ ಹಾವು... ಎಂದೆಲ್ಲಾ ಹೇಳಿ ನಿಮಗೆ ಇದು ಏನೂ ಮಾಡಲ್ಲ ಭಯಪಡಬೇಡಿ ಎಂದು ಹೇಳಿದರೂ ಎಷ್ಟು ಮಂದಿ ಅದನ್ನು ಮುಟ್ಟುವ ಧೈರ್ಯ ಮಾಡಿಯಾರು ಹೇಳಿ? ಮೃಗಾಲಯದಲ್ಲಿ ಅದನ್ನು ಪಳಗಿಸಿದವರು ಕೊಟ್ಟರೂ ಅದನ್ನು ಮುಟ್ಟಲು ಹಿಂಜರಿಯುವವರೇ ಹೆಚ್ಚು. ಅಂಥದ್ದರಲ್ಲಿ ಮಹಿತಾ ಹೆಬ್ಬಾವನ್ನು ಸಲೀಸಾಗಿ ಯಾವುದೇ ಅಳುಕು ಇಲ್ಲದೆಯೇ ಹೆಬ್ಬಾವನ್ನು ತನ್ನ ಹೆಗಲ ಮೇಲೆ ಹಾಕಿಕೊಂಡಿದ್ದಾಳೆ. ಇದೇನು ಬಿಡು, ಏನೂ ಮಾಡಲ್ಲ ಎನ್ನುವವರು ಯಾರಾದರೂ ಇದ್ದರೆ, ಅವರು ಈ ಧೈರ್ಯ ಮಾಡುವ ಸಾಹಸ ಮಾಡಬಹುದು. ಆದರೆ ಇದು ಸುಲಭದ ಮಾತಂತೂ ಅಲ್ಲವೇ ಅಲ್ಲ.
ಸಿಂಗಪುರದ ಟೂರ್ನಲ್ಲಿ ಬಾಲಕಿ
ಸಿಂಗಪುರದ ಟೂರ್ಗೆ ಹೋಗಿರುವ ಮಹಿತಾ ಅಲ್ಲಿಯ ಜೂನಲ್ಲಿ ಈ ಸಾಹಸ ಮಾಡಿದ್ದು, ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾಳೆ. ಇದನ್ನು ನೋಡಿ ಬಾಲಕಿಯ ಧೈರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಇನ್ನು ಯಾವ ಟ್ಯಾಲೆಂಟ್ ಬಾಕಿ ಇದೆ ಹೇಳಮ್ಮಾ ನಿನ್ನಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ. ಇರೋ ಒಂದು ಹೃದಯನ ಎಷ್ಟೂ ಅಂತ ಕದೀತಿಯಾ ಎಂದೂ ಕೇಳುತ್ತಿದ್ದಾರೆ. ಹಾಡು, ನಟನೆ, ಡಾನ್ಸ್ ಎಲ್ಲದರಲ್ಲಿಯೂ ಟಾಪ್ 1ನಲ್ಲಿಯೇ ಮಹಿತಾಳ ಈ ಧೈರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಇದನ್ನೂ ಓದಿ: Naa Ninna Bidalaare ಅಮ್ಮ-ಮಗಳ ಭಾವುಕ ನೃತ್ಯ: ಅವಾರ್ಡ್ ಫಂಕ್ಷನ್ನಲ್ಲಿ ಕಣ್ಣೀರಿಟ್ಟ ನಟಿಯರು
