"ಲಕ್ಷ್ಮೀ ನಿವಾಸ" ಧಾರಾವಾಹಿಯಲ್ಲಿ "ಆಚಾರಿ" ಪದ ಬಳಕೆಯಿಂದ ವಿಶ್ವಕರ್ಮ ಸಮಾಜದ ಭಾವನೆಗೆ ಧಕ್ಕೆಯಾಗಿದೆ. ನಿರ್ಮಾಪಕರು ವಿಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾರೆ. ಆದರೆ, ಜೀ ಕನ್ನಡ ವಾಹಿನಿಯಲ್ಲೂ ಕ್ಷಮೆ ಕೋರಬೇಕೆಂದು ಸಮಾಜ ಒತ್ತಾಯಿಸಿದೆ. ಇಲ್ಲದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದೆ. ಧಾರಾವಾಹಿಗಳಿಗೆ ಸೆನ್ಸಾರ್ ಮಂಡಳಿ ರಚಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದೂ ತಿಳಿಸಿದೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಏಪ್ರಿಲ್ 15ರಂದು ಪ್ರಸಾರವಾದ ಎಪಿಸೋಡ್‌ನಲ್ಲಿ ಬಳಕೆಯಾದ ಒಂದು ಪದ ಈಗ ಕಾಂಟ್ರವರ್ಸಿ ಸೃಷ್ಟಿ ಮಾಡಿದೆ. ವಿಶ್ವಕರ್ಮ ಸಮಾಜದವರ ಭಾವನೆಗೆ ಧಕ್ಕೆ ಆಗಿದ್ದು, ಕ್ಷಮೆ ಕೇಳಿವಂತೆ ಒತ್ತಾಯಿಸಲಾಗಿತ್ತು. ಈಗ ಈ ಧಾರಾವಾಹಿ ನಿರ್ಮಾಪಕ ಸತ್ಯ-ನಿರ್ಮಲ ಅವರು ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ.
ಧಾರಾವಾಹಿಯಲ್ಲಿ ಏನಿದೆ?
ಈ ಧಾರಾವಾಹಿಯಲ್ಲಿ ವೀಣಾ-ಸಂತೋಷ್ ಅವರು ಚೈನ್ ಬಗ್ಗೆ ಮಾತನಾಡುತ್ತಾರೆ. ನನ್ನ ಮಾಂಗಲ್ಯ ಸರ ಹಾಳಾಗಿದೆ. ಆಚಾರಿ ಅಂಗಡಿಗೆ ಹೋಗಿ ಸರಿಮಾಡಿಸಿಕೊಂಡು ಬನ್ನಿ ಅಂತ ವೀಣಾ ತನ್ನ ಗಂಡನಿಗೆ ಹೇಳುತ್ತಾಳೆ. ಇನ್ನೊಂದು ಕಡೆ ಸಂತೋಷ್, ಚೈನ್ ಪಾಲಿಶ್ ಮಾಡಿಸಿದ್ರೆ ಬಂಗಾರ ವೇಸ್ಟ್ ಆಗತ್ತೆ ಅಂತ ಹೇಳುತ್ತಾನೆ. ಆಚಾರಿ ಪದ ಬಳಕೆ ಮಾಡಿರೋದು ಬೇಸರ ತಂದಿದೆ ಎಂದು ಕಾಣುತ್ತದೆ.
ಕ್ಷಮೆ ಕೇಳಿದ ನಿರ್ಮಲಾ
ಬಂಗಾರದ ಕೆಲಸ ಮಾಡುವವರಿಗೆ ಆಚಾರಿ ಎಂಬ ಪದ ಬಳಕೆ ಮಾಡಿದ್ದು ಬೇಸರ ಆಗಿರಬಹುದು ಎಂದು ಭಾವಿಸಲಾಗಿದೆ. ಈ ಬಗ್ಗೆ ನಿರ್ಮಾಪಕಿ ನಿರ್ಮಲ ಮಾತನಾಡಿ, “ವಿಶ್ವಕರ್ಮ ಸಮಾಜದ ಬಗ್ಗೆ ಒಂದು ಪದ ಬಳಕೆ ಮಾಡಲಾಗಿದೆ. ಕೆಲಸ ಮಾಡುತ್ತಿರುವ ಒಂದು ಫ್ಲೋದಲ್ಲಿ ಈ ರೀತಿ ಪದ ಬಳಸಲಾಗಿದೆ. ಯಾರ ಮನಸ್ಸಿಗೂ ನೋವು ಉಂಟುಮಾಡುವುದು ನಮ್ಮ ಉದ್ದೇಶವಲ್ಲ. ಇದು ಕಾಲ್ಪನಿಕ ಕಥೆ. ಯಾರಿಗಾದರೂ ಬೇಸರ ಆಗಿದ್ದರೆ ಇಡೀ ತಂಡದ ಪರವಾಗಿ ಕ್ಷಮೆ ಕೇಳ್ತೀನಿ” ಎಂದು ಹೇಳಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಕ್ಷಮೆ ಕೇಳಬೇಕು!
ಇನ್ನು ರಿಷಿ ವಿಶ್ವಕರ್ಮ ಪೇಜ್‌ನಲ್ಲಿ “ಈ ರೀತಿಯಾಗಿ ಲಕ್ಷ್ಮೀ ನಿವಾಸ ಧಾರಾವಾಹಿಯ ನಿರ್ಮಾಪಕರು ಕ್ಷಮಾಪಣೆ ಕೇಳಿದ್ದಾರೆ. ಆದರೆ ZEE ಕನ್ನಡ ವಾಹಿನಿಯಲ್ಲಿ ಈ ಕ್ಷಮಾಪಣೆಯನ್ನು ಹಾಕಬೇಕೆಂದು ತಿಳಿಸಲಾಗಿದೆ. ಒಂದು ವೇಳೆ ಕ್ಷಮಾಪಣೆಯನ್ನು ZEE ಟಿವಿ ಮೂಲಕ ಕೇಳದೆ ಹೋದರೆ ಕಾನೂನು ಹೋರಾಟ ಮಾಡುವುದಾಗಿ ತಿಳಿಸಲಾಗಿದೆ. ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕ ಸಂಘದಲ್ಲಿ ಒಂದು ಮನವಿ.... ಚಲನಚಿತ್ರಗಳಿಗೆ ಇರುವ ಹಾಗೆ ಧಾರಾವಾಹಿಗಳ ನಿಯಂತ್ರಣಕ್ಕಾಗಿ ಸೆನ್ಸಾರ್ ಮಂಡಳಿಯಲ್ಲಿ ಅನುಮತಿ ಪಡೆಯುವಂತೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದು ಬರೆದುಕೊಳ್ಳಲಾಗಿದೆ.
ಇನ್ನು ನೆಟ್ಟಿಗರು ಏನು ಹೇಳಿದ್ರು?
- ಆಚಾರಿ ಎಂದು ಹೇಳಲು ಯೋಚಿಸಬೇಕು , ವಿಶ್ವ ಕರ್ಮ ಸಮಾಜದ ಬಗ್ಗೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಗೌರವದ ಮಾತುಗಳನ್ನಾಡಿದ್ದಾರೆ. ಇನ್ನು ಮುಂದೆ ಯಾವ ಜನಾಂಗದ ಬಗ್ಗೆಯೂ ಕೂಡ ಈ ರೀತಿ ನಡೆದುಕೊಳ್ಳಬೇಡಿ
- ದುಡ್ಡಿದೆ ಅಂತ ಧಾರಾವಾಹಿ ನಿರ್ಮಾಣ ಮಾಡೋದಲ್ಲ. ಸಾಮಾಜಿಕ ಜವಾಬ್ದಾರಿ ಇರಬೇಕು. ಆಚಾರಿಯ ಇತಿಹಾಸ ತಿಳಿದುಕೊಳ್ಳಿ. ಸಮಾಜದ ಏಳಿಗೆಗಾಗಿಯೇ ದುಡಿಯುತ್ತಿರುವ ಸಮಾಜ ಅದು.
- ವಿಶ್ವಕರ್ಮ ಈ ಬ್ರಹ್ಮಾಂಡದ ವಾಸ್ತುಶಿಲ್ಪಿ.
- ತಪ್ಪು ಮಾಡಿ ಕ್ಷಮೆ ಕೇಳುವುದಿಲ್ಲ. ಬರೆಯಬೇಕಾದರೆ ಇದರ ಬಗ್ಗೆ ಗಮನ ಹರಿಸಬೇಕಾಗಿತ್ತು. ನಮ್ಮ ವಿಶ್ವಕರ್ಮ ಸಮಾಜಕ್ಕೆ ಇತಿಹಾಸ ಇದೆ. ಯಾವುದೇ ಸಮಾಜದ ಬಗ್ಗೆ ಬರೆಯಬೇಕಾದರೆ ನೋಡಿ ಬರೆಯಿರಿ. ದುಡ್ಡು. ಟಿಆರ್‌ಪಿ ಗೋಸ್ಕರ ಮಾಡಬಾರದು.
ಧಾರಾವಾಹಿ ಕಥೆ ಏನು?
ಇದೊಂದು ಕೂಡು ಕುಟುಂಬದ ಕಥೆ. ಇಬ್ಬರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳಿರುವ ಶ್ರೀನಿವಾಸ್-ಲಕ್ಷ್ಮೀ ಸ್ವಂತ ಮನೆ ಮಾಡುವ ಕನಸು ಹೊಂದಿದ್ದನು. ಎಲ್ಲರಿಗೂ ಮದುವೆ ಆಗಿದೆ. ಆದರೆ ಇಬ್ಬರು ಗಂಡು ಮಕ್ಕಳು ಮಾತ್ರ ಹಣದ ಆಸೆ ಇಟ್ಟುಕೊಂಡು, ಈಗ ಬೇರೆ ಬೇರೆ ಮನೆಗೆ ಶಿಫ್ಟ್ ಆಗುತ್ತಿದ್ದಾರೆ, ಅಪ್ಪ-ಅಮ್ಮನನ್ನು ಹಂಚಿಕೊಳ್ಳುತ್ತಿದ್ದಾರೆ.
ಪಾತ್ರಧಾರಿಗಳು
ಲಕ್ಷ್ಮೀ- ಶ್ವೇತಾ
ಶ್ರೀನಿವಾಸ್- ಶ್ರೀನಿವಾಸ್ ಜಂಭೆ
ಸಂತೋಷ್- ಮಧು ಹೆಗಡೆ
ವೀಣಾ- ಲಕ್ಷ್ಮೀ ಹೆಗಡೆ


