"ಲಕ್ಷ್ಮೀ ನಿವಾಸ" ಧಾರಾವಾಹಿಯಲ್ಲಿ ಹಣದಾಸೆಯ ಹಿರಿಯ ಮಗ ಸಂತೋಷ್‌, ತಂದೆ-ತಾಯಿಯನ್ನು ಬೇರ್ಪಡಿಸುತ್ತಾನೆ. ಕಿರಿಯ ಮಗ ಹರೀಶ್‌ ನಿರುದ್ಯೋಗಿ, ಹೆಂಡತಿಯ ಒತ್ತಡದಲ್ಲಿದ್ದಾನೆ. "ಈ ಬಂಧನ" ಚಿತ್ರದಂತೆ, ಮಕ್ಕಳಿಂದ ದೂರವಾದ ತಂದೆ-ತಾಯಿ ಕಷ್ಟ ಅನುಭವಿಸುತ್ತಾರೆ. ಸಾಕು ಮಗ ವೆಂಕಿ ಜೈಲಿನಲ್ಲಿದ್ದು, ಮುಂದಿನ ಘಟನೆಗಳು ಕುತೂಹಲ ಮೂಡಿಸಿವೆ.

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ವಿಷ್ಣುವರ್ಧನ್‌, ಜಯಮಾಲಾ ಅಭಿನಯದ ‘ಈ ಬಂಧನ’ ಸಿನಿಮಾದ ಛಾಯೆ ಎದ್ದು ಕಾಣ್ತಿದೆ. ಇಷ್ಟು ವರ್ಷ ಹೆತ್ತು ಹೊತ್ತು ಸಾಕಿದ ಮಕ್ಕಳು, ತಾವು ದುಡಿಯುವ ಟೈಮ್‌ನಲ್ಲಿ ತಂದೆ-ತಾಯಿಯನ್ನು ಹಂಚಿಕೊಳ್ತಾರೆ. ಅದೇ ರೀತಿ ಇಲ್ಲಿಯೂ ಕೂಡ ಓರ್ವ ಮಗನ ಮನೆಯಲ್ಲಿ ತಂದೆ, ಇನ್ನೋರ್ವ ಮಗನ ಮನೆಯಲ್ಲಿ ತಾಯಿ ಇರುವ ಪರಿಸ್ಥಿತಿ ಬಂದಿದೆ.

ಪತ್ನಿ ಬುದ್ಧಿ ಹೇಳಿದ್ರೂ ಮಾತು ಕೇಳದ ಸಂತೋಷ್!‌ 
ಹಿರಿಯ ಮಗ ಸಂತೋಷ್‌ಗೆ ದುಡ್ಡಿನ ವ್ಯಾಮೋಹ. ಅದಕ್ಕಾಗಿ ಅವನು ಏನು ಬೇಕಿದ್ರೂ ಮಾಡ್ತಾನೆ. ನನ್ನ ತಂದೆ ಇಳಿ ವಯಸ್ಸಿನಲ್ಲಿ ಕಷ್ಟಪಟ್ಟರೂ ಅವನಿಗೆ ಏನೂ ಸಮಸ್ಯೆ ಇಲ್ಲ. ನಾನು, ನನ್ನ ಹೆಂಡ್ತಿ, ನನ್ನ ಮಕ್ಕಳು ಮಾತ್ರ ಚೆನ್ನಾಗಿರಬೇಕು ಎಂದು ಅವನು ಅಂದುಕೊಳ್ತಾನೆ. ಕೂಡಿಟ್ಟ ಹಣವನ್ನು ಯಾರಿಗೂ ಗೊತ್ತಿಲ್ಲದೆ ಮನೆಯನ್ನು ಕಟ್ಟಿಸಿದ್ದಾನೆ. ಆ ಮನೆಗೆ ಶ್ರೀನಿವಾಸ್‌ ಸೆಕ್ಯುರಿಟಿ ಗಾರ್ಡ್‌ ಕೂಡ ಆಗಿದ್ದ. ತನ್ನ ಮಗ ಕಟ್ಟಿಸಿದ ಮನೆಗೆ ತಾನು ಸೆಕ್ಯುರಿಟಿ ಗಾರ್ಡ್‌ ಎನ್ನೋ ವಿಷಯ ಶ್ರೀನಿವಾಸ್‌ಗೂ ಗೊತ್ತೇ ಇರಲಿಲ್ಲ. ಮನೆಗೆ ಬಂದ ಸೊಸೆ ತಂದೆ-ಮಕ್ಕಳನ್ನು ದೂರ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಆದರೆ ಇಲ್ಲಿ ಹಾಗಲ್ಲ. ಸಂತೋಷ್‌ ಪತ್ನಿ ವೀಣಾ ತುಂಬ ಒಳ್ಳೆಯವಳು. ಅವಳು ಗಂಡನಿಗೆ “ಈ ರೀತಿ ಮಾಡಬೇಡಿ, ಹೆತ್ತ ಅಪ್ಪ-ಅಮ್ಮನ ಮನಸ್ಸು ನೋಯಿಸಬೇಡಿ. ಅತ್ತೆ-ಮಾವನನ್ನು ದೂರ ಮಾಡಬೇಡಿ” ಎಂದು ಹೇಳುತ್ತಾಳೆ. ಇವಳು ಎಷ್ಟೇ ಹೇಳಿದರೂ ಕೂಡ ಜಿಪುಣ ಸಂತೋಷ್‌ ಮಾತ್ರ ಅವನ ಬುದ್ಧಿ ಬಿಡೋದಿಲ್ಲ. 

ಇಕ್ಕಟ್ಟಿನ ಸ್ಥಿತಿಯಲ್ಲಿ ಹರೀಶ್!
ಇನ್ನೋರ್ವ ಮಗ ಹರೀಶ್‌ಗೆ ಸರಿಯಾದ ಉದ್ಯೋಗವೇ ಇಲ್ಲ. ಅವನ ಹೆಂಡ್ತಿ ಸಿಂಚನಾಗೆ ಎಲ್ಲರ ಜೊತೆ ಬದುಕೋಕೆ ಇಷ್ಟ ಇಲ್ಲ. ಸಿಂಚನಾ ತಂದೆ ಈಗ ಅವಳಿಗೆ ಹೊಸ ಮನೆ ಕೊಡಿಸಿದ್ದಾರೆ. ಈ ಮನೆಯಲ್ಲಿ ವಾಸ ಮಾಡೋಕೆ ಹರೀಶ್‌ಗೆ ಇಷ್ಟ ಇಲ್ಲ, ಹೆಂಡ್ತಿಗೆ ಬೇಸರ ಮಾಡೋಕೆ ಆಗ್ತಾ ಇಲ್ಲ. ಒಟ್ಟಿನಲ್ಲಿ ಹರೀಶ್‌ ಅತಂತ್ರ ಸ್ಥಿತಿಯಲ್ಲಿದ್ದಾನೆ. 

‘ಈ ಬಂಧನ’ ಸಿನಿಮಾದಲ್ಲಿ ಏನಿದೆ?
ಕಷ್ಟ-ಸುಖಗಳಲ್ಲಿ ಒಟ್ಟಿಗಿದ್ದ ಲಕ್ಷ್ಮೀ-ಶ್ರೀನಿವಾಸ್‌ ಈಗ ದೂರ ಆಗ್ತಾರಾ? ಇನ್ನು ಆ ಬೇರೆ ಬೇರೆ ಮನೆಯಲ್ಲಿ ಏನೆಲ್ಲ ಕಷ್ಟ ಅನುಭವಿಸ್ತಾರೆ ಎಂದು ಕಾದು ನೋಡಬೇಕಿದೆ. ದೊಡ್ಡ ಮನೆ ಕಟ್ಟಿಸಬೇಕು, ಆ ಮನೆಯಲ್ಲಿ ನಾನು, ನನ್ನ ಹೆಂಡ್ತಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳ ಜೊತೆ ಚೆನ್ನಾಗಿ ಬದುಕಬೇಕು ಅಂತ ಶ್ರೀನಿವಾಸ್‌ ಕನಸು ಕಂಡಿದ್ದನು. ಆದರೆ ಈ ಆಶಯವನ್ನು ಈ ಮಕ್ಕಳು ಹಾಳು ಮಾಡಿದ್ದಾರೆ. 

‘ಈ ಬಂಧನ’ ಧಾರಾವಾಹಿಯಲ್ಲಿ ನಿವೃತ್ತಿ ಜೀವನ ಹೊಂದಿದ ನಂತರದಲ್ಲಿ ವಿಷ್ಣುವರ್ಧನ್‌, ಜಯಮಾಲಾ ಬೇರೆ ಬೇರೆ ಮನೆ ಮಾಡಿರುವ ಮಕ್ಕಳ ಮನೆಯಲ್ಲಿ ವಾಸ ಮಾಡುತ್ತಾರೆ. ಅಲ್ಲಿ ಅವರಿಗೆ ಯಾವುದೇ ಗೌರವವೂ ಇರೋದಿಲ್ಲ. ಮಗ-ಸೊಸೆ ಅವಮಾನ ಕೂಡ ಮಾಡುತ್ತಾರೆ, ಆದರೆ ಮೊಮ್ಮಕ್ಕಳು ಪ್ರೀತಿಯಿಂದ ನೋಡಿಕೊಳ್ತಾರೆ. ವಿಷ್ಣುವರ್ಧನ್‌ ಸಾಕಿದ ಓರ್ವ ಮಗ ಅಂದರೆ ದರ್ಶನ್‌ ಅವರು ಬಂದು ಇವರಿಬ್ಬರನ್ನು ಚೆನ್ನಾಗಿ ನೋಡಿಕೊಳ್ತಾರೆ. ಈ ಧಾರಾವಾಹಿಯಲ್ಲಿಯೂ ಕೂಡ ಶ್ರೀನಿವಾಸ್‌ಗೆ ವೆಂಕಿ ಎಂಬ ಸಾಕು ಮಗನಿದ್ದಾನೆ. ವೆಂಕಿಗೆ ತನ್ನ ಕುಟುಂಬ ಅಂದ್ರೆ ತುಂಬ ಇಷ್ಟ. ಈಗ ಅವನು ಜೈಲಿನಲ್ಲಿದ್ದಾನೆ. ಈ ವಿಷಯ ಯಾರಿಗೂ ಗೊತ್ತಿಲ್ಲ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಮುಂದೆ ಏನಾಗುವುದು?
ತಾನು ಮದುವೆ ಆಗಬೇಕಿದ್ದ ಶ್ರೀಕಾಂತ್‌ನಿಗೆ ಆಕ್ಸಿಡೆಂಟ್‌ ಮಾಡಿಸಿದ್ದು ತನ್ನ ಗಂಡ ಸಿದ್ದೇಗೌಡ ಎನ್ನೋದು ಇನ್ನೂ ಭಾವನಾಗೆ ಗೊತ್ತಾಗಿಲ್ಲ. ಇವರಿಬ್ಬರು ಒಂದಾಗುವ ಮುಂಚೆಯೇ ಮನಸ್ತಾಪ ಬಂದು ಇನ್ನಷ್ಟು ದೂರ ಆಗ್ತಾರಾ ಕಾದು ನೋಡಬೇಕಿದೆ. ಅತಿಯಾಗಿ ಪ್ರೀತಿಸುವ ಗಂಡನಿಂದ ದೂರ ಆಗಿರೋ ಜಾನು ಮತ್ತೆ ಅವನ ಮನೆ ಸೇರ್ತಾಳಾ? ಅಥವಾ ವಿಶ್ವನನ್ನು ಮದುವೆ ಆಗ್ತಾಳಾ? ಹರೀಶ್-ಸಂತೋಷ್‌ ತಮ್ಮ ತಪ್ಪನ್ನು ತಿದ್ದಿಕೊಂಡು ಅಪ್ಪ-ಅಮ್ಮನ ಜೊತೆ ಖುಷಿಯಿಂದ ವಾಸ ಮಾಡ್ತಾರಾ? ವೆಂಕಿ ಜೈಲಿನಿಂದ ಹೊರಗಡೆ ಬರ್ತಾನಾ?

ಪಾತ್ರಧಾರಿಗಳು
ಲಕ್ಷ್ಮೀ- ಶ್ವೇತಾ
ಶ್ರೀನಿವಾಸ್‌-ಶ್ರೀನಿವಾಸ್‌ ಜಂಬೆ
ಸಂತೋಷ್-‌ ಮಧು ಹೆಗಡೆ
ಸಿದ್ದೇಗೌಡ- ಧನಂಜಯ
ಭಾವನಾ- ದಿಶಾ ಮದನ್‌
ಜಾಹ್ನವಿ- ಚಂದನಾ ಅನಂತಕೃಷ್ಣ