ಲಕ್ಷ್ಮೀ ನಿವಾಸ ಧಾರಾವಾಹಿಯ ನಟಿ ತಮ್ಮ ಮನೆಯ ಮೇಲೆ ಐಟಿ ರೈಡ್ ಆಗಲಿ ಎಂದು ಹೇಳಿದ್ದಾರೆ. ಈ ಕುರಿತು ನೀಡಿದ ಹೇಳಿಕೆ ಸೋಶಿಯಲ್ ಮೀಡಿಯಾಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರು: ನನ್ನ ಮನೆ ಮೇಲೆ ಐಟಿ ರೈಡ್ ಆಗಲಿ ಎಂದು ಲಕ್ಷ್ಮೀ ನಿವಾಸ ಸೀರಿಯಲ್ ನಟಿ ಚಂದನಾ ಅನಂತಕೃಷ್ಣ ಬಯಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕಿರುತೆರೆ ನಟಿ, ಗಾಯಕಿಯೂ ಆಗಿರುವ ನಟಿ ಚಂದನಾ ಅನಂತಕೃಷ್ಣ, ಎಲ್ಲರ ಆಶೀರ್ವಾದದಿಂದ ಎಲ್ಲಾ ವಾಹಿನಿಗಳಲ್ಲಿಯೂ ಕೆಲಸ ಮಾಡಿದ್ದೇನೆ ಎಂದು ಹೇಳುತ್ತಾರೆ. ನಿರೂಪಕ, ಚೆನ್ನಾಗಿ ದುಡಿ. ಎಷ್ಟು ಅಂದ್ರೆ ಇನ್‌ಕಮ್ ಟ್ಯಾಕ್ಸ್‌ನವರು ರೈಡ್ ಮಾಡುವಷ್ಟು ದುಡಿ ಎಂದು ಹೇಳುತ್ತಾರೆ. ಈ ಮಾತಿಗೆ ಪ್ರತಿಕ್ರಿಯಿಸಿರುವ ಚಂದನಾ, ರಿಯಲೀ.. ಹಾಗೆಯೇ ಆಗಲಿ ಎಂದು ಹೇಳಿ ನಗುತ್ತಾರೆ.

ಕೆಲ ತಿಂಗಳ ಹಿಂದೆಯಷ್ಟೇ ಉದ್ಯಮಿ ಪ್ರತ್ಯಕ್ಷ್ ಜೊತೆ ಚಂದನಾ ಅನಂತಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಮೆಹಂದಿ ಅಳಿಸುವ ಮುನ್ನವೇ ಚಂದನಾ ಶೂಟಿಂಗ್‌ಗೆ ಮರಳಿದ್ದರು. ಮದುವೆಯಾದ ನಂತರ ಚಂದನಾ ಮತ್ತು ಪ್ರತ್ಯಕ್ಷ ಜೊತೆಯಾಗಿ ಯುಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದ ವಿಡಿಯೋ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಚಂದನಾ ಪತಿ ಪ್ರತ್ಯಕ್ಷ್ ಹಿನ್ನೆಲೆ ಏನು?

ಇದೇ ಸಂದರ್ಶನದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸುವಷ್ಟು ಹಣ ಬರಲಿ ಎಂದು ಹೇಳಿ ಚಂದನಾ ಅನಂತಕೃಷ್ಣ ಹೇಳಿ ನಕ್ಕಿದ್ದರು. ಚಂದನಾ ಪತಿ ಪ್ರತ್ಯಕ್ಷ, ಕಲಾವಿದರ ಕುಟುಂಬದವರಾಗಿದ್ದಾರೆ. ಹಿರಿಯ ನಟಿ ಕಾವ್ಯಾಂಜಲಿ ಮತ್ತು ದಿವಂಗತ ನಟ ಉದಯ್ ಕುಮಾರ್ ಮಗನೇ ಪ್ರತ್ಯಕ್ಷ್. ನವೆಂಬರ್ 28ರಂದು ಚಂದನಾ ಮತ್ತು ಪ್ರತ್ಯಕ್ಷ್ ಹಸೆಮಣೆ ಏರಿದ್ದರು. 29ರಂದು ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ಶುಭ ಸಮಾರಂಭಕ್ಕೆ ಚಂದನವನದ ಹಿರಿತೆರೆ ಮತ್ತು ಕಿರುತೆರೆಯ ಕಲಾವಿದರು ಭಾಗಿಯಾಗಿ ಜೋಡಿಗೆ ಶುಭ ಹಾರೈಸಿದ್ದರು.

ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟಿ ಚಂದನಾ ಅನಂತಕೃಷ್ಣ

ಚಂದನಾ ಅನಂತಕೃಷ್ಣ ಗಾಯಕಿಯೂ ಆಗಿದ್ದು, ಬಿಗ್‌ಬಾಸ್ ಮನೆಗೂ ಎಂಟ್ರಿ ಕೊಟ್ಟಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ ಸೀರಿಯಲ್‌ನಲ್ಲಿ ಎಡವಟ್ಟು ರಾಣಿ ಚುಕ್ಕಿಯಾಗಿ ಕಾಣಿಸಿಕೊಂಡಿದ್ದರು. ಈ ಸೀರಿಯಲ್ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಈ ಸೀರಿಯಲ್‌ನಲ್ಲಿ ತಮ್ಮ ಮುದ್ದು ಮುದ್ದು, ಪೆದ್ದು ಪೆದ್ದು ಪಾತ್ರದ ಮೂಲಕ ಜನಮನ ಗೆದ್ದಿದ್ದರು. ಇದಾದ ಬಳಿಕ ಬಿಗ್‌ಬಾಸ್ ಸೀಸನ್ 7ನಲ್ಲಿ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ನೀಡಿದ್ದರು.

ಇದನ್ನೂ ಓದಿ: Lakshmi Nivasa Serial: ಗೂಬೆ ವಿಶ್ವನಿಗೆ ಮುಹೂರ್ತ ಇಟ್ಟ ಜಯಂತ್;‌ ಹುಟ್ಟು ಚಾಳಿ ಘಟ್ಟ ಹತ್ತಿದ್ರೂ ಹೋಗಲ್ಲ ಬಿಡಿ...!

ಬಿಗ್‌ಬಾಸ್‌ನಿಂದ ಹೊರ ಬಂದ ಬಳಿಕ ಸಿಂಗಿಂಗ್ ಶೋಗೆ ನಿರೂಪಕಿಯಾಗಿಯೂ ಕೆಲಸ ಮಾಡಿದ್ದರು. ನಂತರ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಕಾಣಿಸಿಕೊಂಡಿದ್ದರು. ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಬಂದು ಚಿನ್ನುಮರಿಯಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಚಂದನ ಅನಂತಕೃಷ್ಣ ಕ್ಲಾಸಿಕಲ್ ಡ್ಯಾನ್ಸರ್. ಭರತನಾಟ್ಯದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.

ಲಕ್ಷ್ಮೀ ನಿವಾಸ ಸೀರಿಯಲ್‌ ನಲ್ಲಿ ಏನಾಗ್ತಿದೆ?

ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಚಿನ್ನುಮರಿ ಮತ್ತು ಸೈಕೋ ಜಯಂತ್ ಮುಖಾಮುಖಿಯಾಗೋದನ್ನು ವೀಕ್ಷಕರು ಕಾಯ್ತಿದ್ದಾರೆ. ಜಾಹ್ನವಿ ಗೆಳೆಯ ವಿಶ್ವನೇ ಆ ಗೂಬೆ ಎಂಬ ವಿಷಯ ಜಯಂತ್‌ಗೆ ಗೊತ್ತಾಗಿದೆ. ಲಕ್ಷ್ಮೀ ಮತ್ತು ಶ್ರೀನಿವಾಸ್ ಮನೆಯ ಗೃಹಪ್ರವೇಶಕ್ಕೆ ಹೋದಾಗ ಜಯಂತ್ ಸಹ ಅಲ್ಲಿಗೆ ಬಂದಿದ್ದನು. ಜಯಂತ್‌ನನ್ನು ನೋಡುತ್ತಿದ್ದಂತೆ ಜಾನು ಮತ್ತು ವಿಶ್ವ ಅಲ್ಲಿಂದ ಕಾಲ್ಕಿತ್ತಿದ್ದರು. ಇತ್ತ ಜಾನು ಮತ್ತು ವಿಶ್ವನ ಮೇಲೆ ತನುಗೆ ಸಣ್ಣದಾದ ಅನುಮಾನವೊಂದು ಮೂಡಿದೆ. ಈ ಸೀರಿಯಲ್ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30 ಗಂಟೆಗೆ ಪ್ರಸಾರವಾಗುತ್ತದೆ.

ಇದನ್ನೂ ಓದಿ:Lakshmi Nivasa Serial: 'ಲಕ್ಷ್ಮೀ ನಿವಾಸ' ಧಾರಾವಾಹಿಯಿಂದ ಮುಖ್ಯ ಪಾತ್ರಧಾರಿ ಹೊರಬೀಳ್ತಿದ್ದಾರಾ? ಸುಳಿವು ಸಿಗ್ತು!