Bigg Boss Kannada: ತಾಂಡವ್ ಎಲಿಮಿನೇಷನ್ ಹೊತ್ತಲ್ಲೇ ಬಿಗ್ ಬಾಸ್ ಶೋ ಬಗ್ಗೆ ಜನರಲ್ಲಿ ನೂರೆಂಟು ಅನುಮಾನಗಳು ಶುರುವಾಗಿವೆ. ಇದರ ನಡುವೆಯೇ, 116 ದಿನ ಬಿಗ್ ಬಾಸ್ ಮನೆಯಲ್ಲಿದ್ದ ಕಿರಿಕ್ ಕೀರ್ತಿ ಬಿಗ್ ಬಾಸ್ ಸ್ಕ್ರಿಪ್ಟೆಡ್ ಹೌದೋ ಅಲ್ವೋ ಅನ್ನೋದರ ಬಗ್ಗೆ ಮಾತನಾಡಿದ್ದಾರೆ. ಪ್ರಥಮ್ ಕಿತ್ತಾಟದಿಂದ ಹಿಡಿದು ಎಡಿಟಿಂಗ್ ಸೀಕ್ರೆಟ್ಸ್‌ವರೆಗೆ ಕೀರ್ತಿ ಬಿಚ್ಚಿಟ್ಟ ಆ ರಹಸ್ಯಗಳು ಇಲ್ಲಿವೆ ನೋಡಿ.
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ ಬಗ್ಗೆ ಸಾರ್ವಜನಿಕರಲ್ಲಿ ಸದಾ ಕಾಡುವ ಅತಿ ದೊಡ್ಡ ಪ್ರಶ್ನೆ.. "ಇದು ಸ್ಕ್ರಿಪ್ಟೆಡ್ ಶೋನಾ? ಮನೆಯೊಳಗೆ ಏನೇನು ನಡೆಯುತ್ತದೆ?". ಈ ಎಲ್ಲಾ ಪ್ರಶ್ನೆಗಳಿಗೆ ಬಿಗ್ ಬಾಸ್ ಸೀಸನ್ 4ರ ರನ್ನರ್ ಅಪ್ ಹಾಗೂ ಜನಪ್ರಿಯ ನಿರೂಪಕ ಕಿರಿಕ್ ಕೀರ್ತಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮುಕ್ತವಾಗಿ ಮಾತನಾಡುವ ಮೂಲಕ ಬಿಗ್ ಬಾಸ್‌ನ ತೆರೆಮರೆಯ ಅಸಲಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಮನೆಯೊಳಗೆ 116 ದಿನಗಳ ಕಾಲ ಕಳೆದ ಅನುಭವದೊಂದಿಗೆ, ಶೋ ಹೇಗೆ ಕೆಲಸ ಮಾಡುತ್ತದೆ ಮತ್ತು ಎಡಿಟಿಂಗ್‌ನಲ್ಲಿ ಏನೆಲ್ಲಾ ಬದಲಾಗುತ್ತದೆ ಎಂಬುದನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. ಪ್ರಮುಖ ಹೈಲೈಟ್ಸ್ ಇಲ್ಲಿದೆ.
ಬಿಗ್ ಬಾಸ್ ಸ್ಕ್ರಿಪ್ಟೆಡ್ ಶೋನಾ?
"ಬಿಗ್ ಬಾಸ್ ಸ್ಕ್ರಿಪ್ಟೆಡ್ ಅಲ್ಲವೇ ಅಲ್ಲ. ಒಂದು ವೇಳೆ ಇದು ಮೊದಲೇ ಬರೆದ ಸ್ಕ್ರಿಪ್ಟ್ ಆಗಿದ್ದರೆ, ಕಳೆದ 12 ಸೀಸನ್‌ಗಳಲ್ಲಿ ಬಂದ ಎಷ್ಟೋ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ತಮ್ಮ ಹೆಸರನ್ನು ಹಾಳು ಮಾಡಿಕೊಂಡು, ಅವಮಾನ ಅನುಭವಿಸಿ ಹೊರಬರುತ್ತಿರಲಿಲ್ಲ. ಅವರಿಗೆ ತಮ್ಮ ಇಮೇಜ್ ಚೆನ್ನಾಗಿ ಕಾಣಿಸಬೇಕು ಎಂಬ ಆಸೆ ಇರುತ್ತಿರಲಿಲ್ಲವೇ?" ಎಂದು ಕೀರ್ತಿ ಪ್ರಶ್ನಿಸಿದ್ದಾರೆ.
"ಬಿಗ್ ಬಾಸ್‌ನಲ್ಲಿ ಸ್ಕ್ರಿಪ್ಟ್ ಇರುವುದು ಕೇವಲ ‘ಟಾಸ್ಕ್’ಗಳಿಗೆ ಮಾತ್ರ. ಅಂದರೆ, 'ಏನು ಮಾಡಬೇಕು' ಎಂದು ಬಿಗ್ ಬಾಸ್ ಹೇಳುತ್ತಾರೆ. ಆದರೆ, ಅದನ್ನು 'ಹೇಗೆ ಮಾಡಬೇಕು' ಮತ್ತು ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಆಯಾ ಸ್ಪರ್ಧಿಗಳ ಸ್ವಂತ ಬುದ್ಧಿ ಮತ್ತು ನಡವಳಿಕೆಗೆ ಬಿಟ್ಟಿದ್ದು" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
24 ಗಂಟೆಗಳ ಆಟ vs 67 ನಿಮಿಷಗಳ ಎಡಿಟಿಂಗ್ ರಹಸ್ಯ!
ಬಿಗ್ ಬಾಸ್ ವೀಕ್ಷಕರು ದಿನದ 24 ಗಂಟೆಗಳಲ್ಲಿ ಕೇವಲ 67 ರಿಂದ 70 ನಿಮಿಷಗಳ ಎಡಿಟೆಡ್ ಎಪಿಸೋಡ್ ಮಾತ್ರ ನೋಡುತ್ತಾರೆ. ಇಲ್ಲಿ ಎಡಿಟಿಂಗ್‌ನಿಂದ ಜನರ ಅಭಿಪ್ರಾಯ ಹೇಗೆ ಬದಲಾಗುತ್ತದೆ ಎಂಬುದಕ್ಕೆ ಕೀರ್ತಿ ಪ್ರಥಮ್ ಅವರೊಂದಿಗಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ..
ಪ್ರಥಮ್ ಕೆಣಕಿದ ಆ ಘಟನೆ
"ಒಮ್ಮೆ ಪ್ರಥಮ್ ಪದೇಪದೇ ನನ್ನ ಬಳಿ ಬಂದು 'ಕಣ್ಣು' ಎಂಬ ಪದವಿರುವ ಹಾಡುಗಳನ್ನು ಹೇಳಿ ಇಡೀ ದಿನ ಕೆಣಕುತ್ತಿದ್ದರು. ನಾಲ್ಕೈದು ಬಾರಿ ಸಮಾಧಾನದಿಂದ 'ಹಾಗೆ ಮಾಡಬೇಡ' ಎಂದರೂ ಕೇಳದೆ ಪದೇಪದೇ ಕೆಣಕಿದಾಗ ಕೊನೆಗೆ ನಾನು ರೊಚ್ಚಿಗೆದ್ದು ಕೂಗಾಡಿದೆ. ಆದರೆ, ಟಿವಿಯಲ್ಲಿ ಪ್ರಸಾರವಾಗಿದ್ದು ಕೇವಲ ನಾನು ಕೂಗಾಡಿದ ಕೊನೆಯ 1 ನಿಮಿಷ ಮಾತ್ರ! ಇದರಿಂದ ವೀಕ್ಷಕರಿಗೆ 'ಪ್ರಥಮ್ ಸುಮ್ಮನೆ ಹಾಡು ಹೇಳಿದ್ದಕ್ಕೆ ಕೀರ್ತಿ ಯಾಕಿಷ್ಟು ಕೋಪ ಮಾಡಿಕೊಂಡ?' ಎಂದೇ ಅನಿಸಿತು. 24 ಗಂಟೆಯನ್ನು 67 ನಿಮಿಷಕ್ಕೆ ಕತ್ತರಿಸುವಾಗ ಎಲ್ಲವನ್ನೂ ತೋರಿಸಲು ಸಾಧ್ಯವಿಲ್ಲ, ಹಾಗಾಗಿ ಜನರ ಒಪಿನಿಯನ್ ಬದಲಾಗುತ್ತದೆ" ಎಂದಿದ್ದಾರೆ.
3 ನಿಮಿಷದ ಟಾಸ್ಕ್
ಇನ್ನೊಂದು ಟಾಸ್ಕ್‌ನಲ್ಲಿ ಪ್ರತಿಯೊಬ್ಬರಿಗೂ ಕಷ್ಟದ ದಿನಗಳ ಬಗ್ಗೆ ಮಾತನಾಡಲು 3 ನಿಮಿಷ ನೀಡಲಾಗಿತ್ತು. ಆದರೆ ಪ್ರಥಮ್ ಒಬ್ಬರೇ ಸುಮಾರು 30 ನಿಮಿಷ ಮಾತನಾಡಿದ್ದರು. 23 ನಿಮಿಷಗಳ ನಂತರ ಸುಸ್ತಾಗಿ ನಾವು ರಿಯಾಕ್ಟ್ ಮಾಡಿದ್ದನ್ನು, ಟಿವಿಯಲ್ಲಿ ಕೇವಲ 3 ನಿಮಿಷದ ಕ್ಲಿಪ್ ಜತೆಗೆ ತೋರಿಸಿದಾಗ 'ಮನೆಯವರೆಲ್ಲ ಪ್ರಥಮ್‌ಗೆ ಅನ್ಯಾಯ ಮಾಡುತ್ತಿದ್ದಾರೆ' ಎಂಬಂತೆ ಬಿಂಬಿತವಾಯಿತು ಎಂದು ವಿವರಿಸಿದ್ದಾರೆ.
ಸ್ಪರ್ಧಿಗಳ ಮನಸ್ಸು ಕೆಡಿಸುವ ಬಿಗ್ ಬಾಸ್ ಮನೆಯ ವಿನ್ಯಾಸ!
"ನಾವು ಸ್ವಂತ ಮನೆ ಕಟ್ಟುವಾಗ ಮನಸ್ಸಿಗೆ ನೆಮ್ಮದಿ ನೀಡುವ (ಕಾಮ್) ಬಣ್ಣಗಳನ್ನು ಬಳಸುತ್ತೇವೆ. ಆದರೆ ಬಿಗ್ ಬಾಸ್ ಮನೆಯನ್ನು ಬೇಕೆಂದೇ ಕ್ಲಮ್ಸಿಯಾಗಿ, ಅತ್ಯಂತ ಗಾಢವಾದ (ರೆಡ್, ಬ್ಲೂ, ಗ್ರೀನ್, ಪಿಂಕ್) ಅಬ್‌ಸ್ಟ್ರ್ಯಾಕ್ಟ್ ಬಣ್ಣಗಳಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಇದು ಸ್ಪರ್ಧಿಗಳ ಮನಸ್ಸನ್ನು ಸೈಕಲಾಜಿಕಲ್ ಆಗಿ ಡಿಸ್ಟ್ರ್ಯಾಕ್ಟ್ ಮಾಡಿ, ಬೇಗನೆ ರೇಗುವಂತೆ ಅಥವಾ ಅಸಹಜವಾಗಿ ವರ್ತಿಸುವಂತೆ ಪ್ರಚೋದಿಸುತ್ತದೆ" ಎಂದು ಕೀರ್ತಿ ಹೇಳಿದ್ದಾರೆ.
ಬಿಗ್ ಬಾಸ್ ಗೆಲ್ಲುವ ಅಸಲಿ ಸೀಕ್ರೆಟ್ ಏನು?
ಮನೆಯೊಳಗಿರುವವರಿಗೋಸ್ಕರ ಆಡಬೇಡಿ
"ಸಾಕಷ್ಟು ಸ್ಪರ್ಧಿಗಳು ಮಾಡುವ ದೊಡ್ಡ ತಪ್ಪು ಎಂದರೆ, ಮನೆಯೊಳಗಿರುವ ಇತರರು ನಮ್ಮನ್ನು ನಾಮಿನೇಟ್ ಮಾಡಬಾರದು ಎಂದು ಅವರ ಜೊತೆ ಒಳ್ಳೆಯವರಾಗಿರಲು ಪ್ರಯತ್ನಿಸುತ್ತಾರೆ. ಹಾಗೆ ಮಾಡಿದರೆ ಆಟ ಸೋಲುತ್ತೀರಿ. ನಾಮಿನೇಟ್ ಆದರೂ ಪರವಾಗಿಲ್ಲ, ಹೊರಗಿರುವ ಪ್ರೇಕ್ಷಕರನ್ನು ರಂಜಿಸಬೇಕು ಎಂದು ಆಡುವವರೇ (ಉದಾಹರಣೆಗೆ ಪ್ರಥಮ್) ಟ್ರೋಫಿ ಗೆಲ್ಲುತ್ತಾರೆ. ನಿಮ್ಮನ್ನು ಉಳಿಸುವುದು ಹೊರಗಿರುವ ಆಡಿಯನ್ಸ್ ವೋಟ್, ಮನೆಯೊಳಗಿನವರಲ್ಲ!"
ಸ್ಕ್ರೀನ್ ಸ್ಪೇಸ್ ಮತ್ತು ಕಂಟೆಂಟ್ ಮುಖ್ಯ
"ಶೋನಲ್ಲಿ ನೀವು ಎಷ್ಟು ಹೊತ್ತು ಕಾಣಿಸಿಕೊಳ್ಳುತ್ತೀರಿ ಎಂಬುದು ಮುಖ್ಯ. ಉದಾಹರಣೆಗೆ, ಮಂಜು ಒಂದು ಎಪಿಸೋಡ್‌ನಲ್ಲಿ 40-45 ನಿಮಿಷಗಳ ಕಾಲ ಕಂಟೆಂಟ್ ಕೊಟ್ಟರೆ, ಜನರಿಗೆ ಅವರೇ ಕಾಣಿಸುತ್ತಾರೆ ಮತ್ತು ವೋಟ್ ಬರುತ್ತದೆ. ಸೈಲೆಂಟ್ ಆಗಿ ಕುಳಿತರೆ ಯಾರೂ ಉಳಿಸುವುದಿಲ್ಲ."
ಕೊನೆಯ ಮಾತು
"ಬಿಗ್ ಬಾಸ್ ಎನ್ನುವುದು ವಿಭಿನ್ನ ವ್ಯಕ್ತಿತ್ವಗಳ ಸೈಕಲಾಜಿಕಲ್ ಆಟ. ಇದನ್ನು ಕೇವಲ ಒಂದು ಮನರಂಜನಾ ಶೋ ಆಗಿ ನೋಡಿ ಎಂಜಾಯ್ ಮಾಡಿ, ಅತಿಯಾಗಿ ತಲೆಕೆಡಿಸಿಕೊಳ್ಳಬೇಡಿ" ಎಂದು ಕಿರಿಕ್ ಕೀರ್ತಿ ವೀಕ್ಷಕರಿಗೆ ಕಿವಿಮಾತು ಹೇಳಿದ್ದಾರೆ.