ಬಿಗ್​ಬಾಸ್​ 12ನೇ ಸೀಸನ್ ಮುಕ್ತಾಯದ ಬೆನ್ನಲ್ಲೇ, ನಿರೂಪಕ ಕಿಚ್ಚ ಸುದೀಪ್ ಹೊಸ ದಾಖಲೆ ಬರೆದಿದ್ದಾರೆ.   ಏಕೈಕ ಭಾರತೀಯ ಬಿಗ್ ಬಾಸ್ ನಿರೂಪಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏನಿದು ದಾಖಲೆ?

ಬಿಗ್​ಬಾಸ್​ 12 (Bigg Boss Kannada 12) ಮುಗಿದಿದೆ. ಈ ಸೀಸನ್​ ಇದಾಗಲೇ ಕೆಲವು ದಾಖಲೆಗಳನ್ನು ಸೃಷ್ಟಿಸಿದೆ. ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದ ವೋಟಿಂಗ್​ ಪಡೆದಿರುವ ಸೀಸನ್​ ಇದು ಎನ್ನಿಸಿದೆ. ವಿನ್ನರ್​ಗೆ 40 ಕೋಟಿಗೂ ಅಧಿಕ ವೋಟಿಂಗ್​ ಬರುವ ಮೂಲಕ, ಹೊಸದೊಂದು ದಾಖಲೆಯೇ ಸೃಷ್ಟಿಯಾಗಿದೆ. ಅದನ್ನು ಹೊರತುಪಡಿಸಿದರೆ, ಈ ಬಾರಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರಿಗೆ ಇದ್ದ ಕ್ರೇಜ್​ ನೋಡಿದ್ದರೆ, ಬಿಗ್​ಬಾಸ್​ ಸಾರ್ವತ್ರಿಕ ಚುನಾವಣೆಯನ್ನು ಮೀರಿಸುವ ಹಂತಕ್ಕೆ ಹೋಗಿರುವುದನ್ನು ನೋಡಬಹುದು. ಸ್ಪರ್ಧಿಗಳ ಪರವಾಗಿ ಖುದ್ದು ರಾಜಕಾರಣಿಗಳೇ ಅಖಾಡಕ್ಕೆ ಇಳಿದಿದ್ದರು ಎಂದರೆ ಬಿಗ್​ಬಾಸ್​ ಯಾವ ಪರಿಯಲ್ಲಿ ಜನರನ್ನು ಮೋಡಿ ಮಾಡಿದೆ ಎನ್ನುವುದು ಕೂಡ ಸ್ಪಷ್ಟವಾಗುತ್ತದೆ.

ದಾಖಲೆ ಬರೆದ ಕಿಚ್ಚ

ಇದು ಬಿಗ್​ಬಾಸ್​ ದಾಖಲೆಯಾದರೆ, ಈ ಷೋ ನಡೆಸಿಕೊಡ್ತಿರೋ ಕಿಚ್ಚ ಸುದೀಪ್​ (Kichcha Sudeep) ಅವರು, 12ನೇ ಸೀಸನ್ ಮುಕ್ತಾಯದ ಬಳಿಕ ದಾಖಲೆ ಸೃಷ್ಟಿಸಿದ್ದಾರೆ. 2013ರಲ್ಲಿ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಮೊದಲ ಸೀಸನ್ ನಿಂದಲೇ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಫ್ರಾಂಚೈಸಿಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಂತಹ ಭಾರತದ ಬಿಗ್ ಬಾಸ್‌ನ ಇತರ ಭಾಷಾ ಆವೃತ್ತಿಗಳಿಗಿಂತ ಭಿನ್ನವಾಗಿ, ಸುದೀಪ್​ ಅವರೇ ಸುದೀರ್ಘ ಅವಧಿಯವರೆಗೆ ಈ ಷೋ ನಡೆಸಿಕೊಟ್ಟಿದ್ದಾರೆ. ಬಿಗ್ ಬಾಸ್ ಕನ್ನಡವು ತನ್ನ ಪ್ರತಿಯೊಂದು ಸೀಸನ್‌ನಲ್ಲೂ ಕಾರ್ಯಕ್ರಮವನ್ನು ಮುನ್ನಡೆಸಲು ಸುದೀಪ್ ಅವರನ್ನು ಮಾತ್ರ ಅವಲಂಬಿಸಿದೆ. ಈ ನಿರಂತರ ಸಹಯೋಗವು ಅವರನ್ನು ಸತತ ಒಂಬತ್ತು ಸೀಸನ್‌ಗಳಿಗೆ ಒಂದೇ ಪ್ರಾದೇಶಿಕ ಆವೃತ್ತಿಯನ್ನು ಮುನ್ನಡೆಸುವ ಏಕೈಕ ಭಾರತೀಯ ಬಿಗ್ ಬಾಸ್ ನಿರೂಪಕರ ಎಂದು ಗುರುತಿಸಿದೆ. ಈ ಮೂಲಕ ಅವರು ದಾಖಲೆ ಸೃಷ್ಟಿಸಿದ್ದಾರೆ.

ಶಾಕ್ ಕೊಟ್ಟಿದ್ದ ಸುದೀಪ್​

ಅಷ್ಟಕ್ಕೂ ಸುದೀಪ್ ಅವರು ಕಳೆದ ಸೀಸನ್​ ಬಳಿಕ ತಾವು ಮುಂದಿನ ಸೀಸನ್​ನಿಂದ ಬಿಗ್​ಬಾಸ್​ ನಡೆಸುವುದಿಲ್ಲ ಎಂದು ಹೇಳುವ ಮೂಲಕ ಶಾಕ್​ ಕೊಟ್ಟಿದ್ದರು. ಇದಕ್ಕೆ ತಮ್ಮದೇ ಆದ ಕಾರಣಗಳನ್ನೂ ನೀಡಿದ್ದರು. ಇದರಿಂದ ಅವರ ಅಭಿಮಾನಿಗಳು ಯಾವ ಪರಿಯಲ್ಲಿ ಶಾಕ್ ಆಗಿದ್ದರು ಎಂದರೆ, ಇದು ಸಾಧ್ಯನೇ ಇಲ್ಲ. ನಿಮ್ಮ ಸ್ಥಾನದಲ್ಲಿ ಬೇರೆ ಯಾರನ್ನೂ ನೋಡಲು ಸಾಧ್ಯವಿಲ್ಲ, ನೀವೇ ಬೇಕು ಎಂದರೂ ಸುದೀಪ್​ ಮಾತ್ರ ಅದು ಸಾಧ್ಯವೇ ಇಲ್ಲ ಎಂದಿದ್ದರು.

ಫ್ಯಾನ್ಸ್ ಖುಷ್​

ಅದಾದ ಬಳಿಕ ದಿಢೀರ್ ಎಂದು ತಾವೇ ಈ ಕಾರ್ಯಕ್ರಮ ನಡೆಸುವುದಾಗಿ ಘೋಷಿಸಿದ್ದೂ ಅಲ್ಲದೇ, ಮುಂದಿನ ನಾಲ್ಕು ಸೀಸನ್​ಗೆ ತಾವೇ ನಿರೂಪಕರು ಎಂದು ಹೇಳಿದರು. ಈ ಮೂಲಕ ಅಭಿಮಾನಿಗಳನ್ನು ಫುಲ್​ ಖುಷ್​ ಮಾಡಿದ್ದರು. ಇದೀಗ ದಾಖಲೆ ಸೃಷ್ಟಿಸಿದ್ದಾರೆ.