Kwatle Kitchen Show: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಕ್ವಾಟ್ಲೆ ಕಿಚನ್’ ರಿಯಾಲಿಟಿ ಶೋನಿಂದ ಕೆಂಪಮ್ಮ ಎನ್ನುವವರು ಹೊರಗಡೆ ಬಂದಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಕ್ವಾಟ್ಲೆ ಕಿಚನ್’ ( Kwatle Kitchen Show ) ರಿಯಾಲಿಟಿ ಶೋನಿಂದ ಕೆಂಪಮ್ಮ ಹೊರಗಡೆ ಬಂದಿದ್ದಾರೆ. ಅಡುಗೆ ಜೊತೆಗೆ ನಗೆಯ ಹಬ್ಬವನ್ನೂ ಬಡಿಸುವ ವಿಶೇಷ ಕಾರ್ಯಕ್ರಮ ಇದಾಗಿತ್ತು. ಈ ಕಾರ್ಯಕ್ರಮದಲ್ಲಿ ತಮ್ಮದೇ ವಿಭಿನ್ನ ರೀತಿಯಲ್ಲಿ ಜನಮನ ಗೆದ್ದಿರುವ ಕೆಂಪಮ್ಮ ಕಳೆದ ಭಾನುವಾರ ನಡೆಯುತ್ತಿದ್ದ ಶೂಟ್‌ನಿಂದ ದಿಢೀರ್ ಆಚೆ ನಡೆದಿದ್ದಾರೆ.
ಕೆಂಪಮ್ಮ ಯಾರು?
ವಿಧಾನಸೌಧದ ಸಮೀಪವೇ ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ಶುಚಿ-ರುಚಿಯ ಊಟವನ್ನ ಉಣಬಡಿಸಿ ಖ್ಯಾತರಾಗಿದ್ದ ಕೆಂಪಮ್ಮ ಇತ್ತೀಚಿಗೆ ಕಲರ್ಸ್ ಕನ್ನಡದ ವೀಕೆಂಡ್ ರಿಯಾಲಿಟಿ ಶೋ, ಕ್ವಾಟ್ಲೆ ಕಿಚನ್‌ನಲ್ಲಿ ಕುಕ್ ಆಗಿ ಕರ್ನಾಟಕದಾದ್ಯಂತ ಮನೆಮಾತಾಗಿದ್ದರು. ಪ್ರತಿದಿನವೂ ಎರಡು ಸಾವಿರಕ್ಕೂ ಹೆಚ್ಚು ಜನಕ್ಕೆ ಇವರ ಕೈರುಚಿ ತಲುಪುತ್ತದೆ. ಮುದ್ದೆ, ಅನ್ನ, ಸಾರು ಸೇರಿದಂತೆ ನಾಟಿ ಶೈಲಿಯ ಊಟ ಕೊಡುವ ಕೆಂಪಮ್ಮ ಯಾವತ್ತೂ ಶಾಲೆಗೆ ಹೋದವರಲ್ಲ, ಅಕ್ಷರ ಕಲಿತವರಲ್ಲ. ಆದರೆ ಕುಟುಂಬದಲ್ಲಿ ಯಾರ ಸಹಾಯವೂ ಇಲ್ಲದೇ, ತುಂಬಾ ಎಳೆಯ ವಯಸ್ಸಿನಲ್ಲೇ ಪತಿಯನ್ನ ಕಳೆದುಕೊಂಡರೂ, ಒಬ್ಬರೇ ಮೆಸ್ ನಡೆಸಿಕೊಂಡು ಬಂದಿರುವುದು ಇವರ ಹಿರಿಮೆ.
ಶೋನಲ್ಲಿ ಸಖತ್ ಆಕ್ಟಿವ್ ಆಗಿದ್ದ ಕೆಂಪಮ್ಮ!
ಕ್ವಾಟ್ಲೆ ಕಿಚನ್‌ನಲ್ಲಿ ಕುಕ್ ಆಗಿ ತಮ್ಮ ಕೈಚಳಕ ತೋರಿಸುವುದರ ಜೊತೆಗೆ, ತಮ್ಮ ಮುಗ್ಧತೆಯಿಂದ ಎಲ್ಲರ ಮನ ಸೆಳೆದವರು. ಶೆಫ್ ಕೌಷಿಕ್, ಜಡ್ಜ್ ಶೃತಿ ಸೇರಿದಂತೆ ಕಿಚನ್‌ನಲ್ಲಿ ಎಲ್ಲರಿಗೂ ಇವರೆಂದರೆ ಅಚ್ಚುಮೆಚ್ಚು ಜೊತೆಗೆ ಒಮ್ಮೆ ‘ಕುಕ್ ಆಫ್ ದ ವೀಕ್’ ಎಂದು ಗುರುತಿಸಿಕೊಂಡಿದ್ದಾರೆ. ಕ್ವಾಟ್ಲೆ ಕಿಚನ್ ವೇದಿಕೆಯಲ್ಲಿ ಅವರ ಗಟ್ಟಿತನವನ್ನ ನೋಡಿದ್ದಲ್ಲದೇ, ಅವರು ನಡೆದು ಬಂದಿರುವ ಕಷ್ಟದ ಹಾದಿಯ ಕತೆ ಕೇಳಿದ್ದೇವೆ, ಕೆಂಪಮ್ಮನ ಸ್ನೇಹಿತೆಯೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನ ನೋಡಿದ್ದೇವೆ. ಪಕ್ಕಾ ನಾಟಿ ಶೈಲಿಯ ಅಡುಗೆ ಮಾಡುತ್ತಿದ್ದ ಕೆಂಪಮ್ಮ ಕ್ವಾಟ್ಲೆ ಕಿಚನ್‌ನಲ್ಲಿ ನೂಡಲ್ಸ್, ಬರ್ಗರ್ ಸೇರಿದಂತೆ ಹಲವು ರೀತಿಯ ಕಾಂಟಿನೆಂಟಲ್ ಅಡುಗೆಯನ್ನೂ ಮಾಡಿ ಸೈ ಎನಿಸಿಕೊಂಡವರು. ಅವರ ನಾಟಿ ಶೈಲಿಯ ದೇಸಿ ಅಡುಗೆಗೂ ಅಪಾರ ಪ್ರಮಾಣದ ಮೆಚ್ಚುಗೆ ಪಡೆದವರು. ಇವರು ಕಳೆದ ಭಾನುವಾರ ನಡೆಯುತ್ತಿದ್ದ ಎಲಿಮಿನೇಷನ್ ರೌಂಡಲ್ಲಿ ಡೇಂಜರ್ ಜೋನ್‌ಗೆ ಬಂದಿದ್ದರು. ಅದರಿಂದ ಹತಾಶರಾಗಿ ಅಚಾನಕ್ಕಾಗಿ ಸ್ಪರ್ಧೆಯಿಂದ ಹೊರನಡೆದಿದ್ದಾರೆ. ಈಗಾಗಲೇ ಸೋನಿಯಾ ಪೊನ್ನಮ್ಮ ಮತ್ತು ಪ್ರೇರಣಾ ಕಂಬಂ ಎಲಿಮಿನೇಟ್ ಆಗಿದ್ದು, ಇದೀಗ ಕೆಂಪಮ್ಮ ಸ್ಪರ್ಧೆಯಿಂದ ಆಚೆ ಬಂದಿದ್ದಾರೆ.
ಮುಂದೆ ಏನಾಗಲಿದೆ?
ಈ ಹಂತದಲ್ಲಿ ಸ್ಪರ್ಧೆ ವಾರದಿಂದ ವಾರಕ್ಕೆ ಕುತೂಹಲಗೊಳ್ಳುತ್ತ ಸಾಗುತ್ತಿದೆ. ಇನ್ನು ಏಳು ಜನ ಕುಕ್‌ಗಳು, ಕ್ವಾಟ್ಲೆಗಳ ಕಿರಿಕ್ಕನ್ನ ಸಹಿಸಿಕೊಂಡು ತಮ್ಮ ಕಿಚನ್‌ನಲ್ಲಿ ಮಾಡಿರೋ ಅಡುಗೆಗೆ ಜಡ್ಜ್‌ಗಳ ಮೆಚ್ಚುಗೆ ಪಡೆಯಬೇಕು. ಸ್ಪರ್ಧೆಯ ಕಾವೇರುತ್ತಿದೆ, ಸೋಲು-ಗೆಲುವಿನ ತಕ್ಕಡಿ ತೂಗುತ್ತಿದೆ. ಇನ್ನು ಮುಂದಿನ ಎಪಿಸೋಡ್‌ಗಳಲ್ಲಿ ಹೆಚ್ಚಿನ ವಿಶೇಷತೆಗಳಿಂದ ಕೂಡಿದ ಸಂಗತಿಗಳು ನಡೆಯಲಿದ್ದು, ವೀಕ್ಷಕರ ಪಾಲಿಗೆ ಮನರಂಜನೆಯ ಹಬ್ಬದೂಟವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.
