'ಬಿಗ್ ಬಾಸ್ ಕನ್ನಡ ಸೀಸನ್ 12' ಕಾರ್ಯಕ್ರಮದಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ನಿರೂಪಕ ಕಿಚ್ಚ ಸುದೀಪ್ ಅವರ ಹೇಳಿಕೆಯನ್ನು ವಿರೋಧಿಸಿ, ರಣಹದ್ದುಗಳ ನೈಜ ಸ್ವಭಾವದ ಬಗ್ಗೆ ವಾಹಿನಿಯಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ.

ಬೆಂಗಳೂರು (ಜ.16): ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 12' (Bigg Boss Kannada Season 12) ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಕಾರ್ಯಕ್ರಮದ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದುಗಳ (Vultures) ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಅರಣ್ಯ ಇಲಾಖೆಯಿಂದ ಬಿಗ್ ಬಾಸ್ ಕಾರ್ಯಕ್ರಮದ ಮುಖ್ಯಸ್ಥರಿಗೆ (Program Head) ನೋಟೀಸ್ ಜಾರಿ ಮಾಡಲಾಗಿದೆ.

ನೊಟೀಸ್ ಜಾರಿಯ ಹಿನ್ನೆಲೆಯೇನು?

ಇತ್ತೀಚೆಗೆ ನಡೆದ ಬಿಗ್ ಬಾಸ್ ಕಿಚ್ಚನ ಪಂಚಾತಿ ವಾರಾಂತ್ಯದ ಸಂಚಿಕೆಯೊಂದರಲ್ಲಿ ರಣಹದ್ದುಗಳು 'ಹೊಂಚುಹಾಕಿ ಸಂಚುಮಾಡಿ ಲಬಕ್ ಅಂತ ಹಿಡಿಯುತ್ತವೆ' ಎಂಬರ್ಥದ ಹೇಳಿಕೆಯನ್ನು ಸ್ವತಃ ಅಭಿನಯ ಚಕ್ರವರ್ತಿ ಬಿರುದಾಂಕಿತ ನಟ ಹಾಗೂ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ (Kiccha Sudeep) ಅವರು ನೀಡಿದ್ದರು. ಆದರೆ, ರಾಮನಗರದಲ್ಲಿರುವ ರಣಹದ್ದು ಸಂರಕ್ಷಣಾ ಟ್ರಸ್ಟ್ ಈ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದೆ. ರಣಹದ್ದುಗಳು ಸ್ವಭಾವತಃ ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುವ 'ಸ್ಕ್ಯಾವೆಂಜರ್'ಗಳೇ ಹೊರತು, ಅವು ಇತರೆ ಹದ್ದುಗಳಂತೆ (Eagles) ಯಾವುದೇ ಜೀವಂತ ಪ್ರಾಣಿಗಳನ್ನು ಬೇಟೆಯಾಡುವುದಿಲ್ಲ. ಹದ್ದು ಮತ್ತು ರಣಹದ್ದುಗಳ ನಡುವೆ ಬಹಳಷ್ಟು ವ್ಯತ್ಯಾಸವಿದೆ ಎಂಬುದು ಪಕ್ಷಿ ಪ್ರೇಮಿಗಳು ವಾದ ಮಂಡಿಸಿದ್ದರು.

ಪಕ್ಷಿ ಪ್ರೇಮಿಗಳ ಆಕ್ರೋಶ

ಈ ಪ್ರಕರಣವನ್ನು ಇಷ್ಟಕ್ಕೆ ಬಿಡದೇ 'ನಮ್ಮ ರಾಜ್ಯ ಹಾಗೂ ದೇಶದಲ್ಲಿ ರಣಹದ್ದುಗಳು ಅಳಿವಿನಂಚಿನಲ್ಲಿರುವ ಪ್ರಭೇದವಾಗಿದ್ದು, ಅವುಗಳ ಬಗ್ಗೆ ಇಂತಹ ತಪ್ಪು ಕಲ್ಪನೆಗಳನ್ನು ಹರಡುವುದರಿಂದ ಅವುಗಳ ಸಂರಕ್ಷಣಾ ಕಾರ್ಯಕ್ಕೆ ಹಿನ್ನಡೆಯಾಗುತ್ತದೆ ಎಂದು ರಣಹದ್ದುಗಳ ಸಂರಕ್ಷಣಾ ಟ್ರಸ್ಟ್ ಬಿಗ್ ಬಾಸ್ ಆಯೋಜಕರ ವಿರುದ್ಧ ಅರಣ್ಯ ಇಲಾಖೆಗೆ (Karnataka Forest Department) ದೂರು ನೀಡಿದೆ. ಈ ದೂರಿನನ್ವಯ ಡಿಆರ್ ಎಫ್ಓ (DRFO) ಸುಷ್ಮಾ ಅವರು ಬಿಗ್ ಬಾಸ್ ಪ್ರೋಗ್ರಾಂ ಹೆಡ್‌ಗೆ ತಿಳುವಳಿಕೆ ನೋಟೀಸ್ ನೀಡಿದ್ದಾರೆ.

ವಾಹಿನಿ ಮೂಲಕ ಸ್ಪಷ್ಟೀಕರಣಕ್ಕೆ ಸೂಚನೆ

ಬಿಗ್ ಬಾಸ್ ಕಾರ್ಯಕ್ರಮ ಜನರಿಗೆ ಮನರಂಜನೆ ನೀಡುವ ಕಾರ್ಯಕ್ರಮವಾಗಿದೆ. ಕೋಟ್ಯಾಂತರ ಜನರು ವೀಕ್ಷಣೆ ಮಾಡುವ ಈ ರಿಯಾಲಿಟಿ ಶೋ ಮೂಲಕ ಪ್ರಾಣಿ-ಪಕ್ಷಿಗಳ ಬಗ್ಗೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗದಂತೆ ಎಚ್ಚರಿಕೆ ವಹಿಸಬೇಕು. ಆದ್ದರಿಂದ ಹದ್ದು ಮತ್ತು ರಣಹದ್ದುಗಳ ನಡುವಿನ ವ್ಯತ್ಯಾಸದ ಬಗ್ಗೆ ಹಾಗೂ ರಣಹದ್ದುಗಳ ನೈಜ ಸ್ವಭಾವದ ಬಗ್ಗೆ ಕಾರ್ಯಕ್ರಮದಲ್ಲಿ ಸ್ಪಷ್ಟೀಕರಣ ನೀಡುವಂತೆ ಅರಣ್ಯ ಇಲಾಖೆ ಸೂಚಿಸಿದೆ. ಅಳಿವಿನಂಚಿನಲ್ಲಿರುವ ಜೀವವೈವಿಧ್ಯದ ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.