ಬಿಗ್ ಬಾಸ್ ಕನ್ನಡ ಶೋನಲ್ಲಿ ರಣಹದ್ದಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನಟ ಕಿಚ್ಚ ಸುದೀಪ್ ಮತ್ತು ಕಾರ್ಯಕ್ರಮದ ವಿರುದ್ಧ ದೂರು ದಾಖಲಾಗಿದೆ. ರಣಹದ್ದುಗಳು ಬೇಟೆಯಾಡುವುದಿಲ್ಲ, ಸತ್ತ ಪ್ರಾಣಿಗಳನ್ನು ತಿನ್ನುತ್ತವೆ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ವಾದಿಸಿದೆ.

ಬೆಂಗಳೂರು: ಈ ಸಾರಿಯ ಬಿಗ್​ ಬಾಸ್​ ಅನೇಕ ವಿವಾದಗಳಿಗೆ ಸಿಲುಕಿತ್ತು. ಒಂದು ಹಂತದಲ್ಲಿ ಬಿಗ್ ಬಾಸ್​​ ಮನೆಯನ್ನೇ ಲಾಕ್ ಮಾಡಲಾಗಿತ್ತು. ಈಗ ನೋಡಿದ್ರೆ ಬಿಗ್ ಬಾಸ್ ಫಿನಾಲೆ ಹತ್ತಿರ ಬಂದಿರೋ ಹೊತ್ತಲ್ಲೇ ಕಿಚ್ಚನಿಗೆ ರಣಹದ್ದಿನ ಕಾಟ ಶುರುವಾಗಿದೆ.

ಕಿಚ್ಚ ಸುದೀಪ್​ಗೆ ಶುರುವಾಯ್ತು ರಣಹದ್ದಿನ ಕಾಟ!

ಯೆಸ್ ಬಿಗ್ ಬಾಸ್ ಕನ್ನಡ ಸೀಸನ್ 12 ಶುರು ಆದಾಗಿನಿಂದಲೂ ಅನೇಕ ವಿವಾದಗಳು ನಡೆದಿವೆ. ಒಂದು ಹಂತದಲ್ಲಿ ಪರಿಸರ ಮಾಲಿನ್ಯ ಮಂಡಳಿ ಬಿಗ್ ಬಾಸ್ ಮನೆಗೇನೇ ಬೀಗ ಹಾಕಿ ಬಿಗ್ ಬಾಸ್ ಆಟವನ್ನೇ ನಿಲ್ಲಿಸಿಬಿಟ್ಟಿದ್ರು. ಈ ನಡುವೆ ಅನೇಕ ಸ್ಪರ್ಧಿಗಳ ವಿರುದ್ದ ದೂರುಗಳು ಬಂದಿದ್ವು. ಈಗ ನೋಡಿದ್ರೆ ಕಿಚ್ಚ ಸುದೀಪ್ ವಿರುದ್ದವೇ ದೂರು ಬಂದಿದೆ. ರಣಹದ್ದಿನ ಬಗ್ಗೆ ಮಾತನಾಡಿದ್ದಕ್ಕೆ ಕಿಚ್ಚನ ಮೇಲೆ ದೂರು ನೀಡಲಾಗಿದೆ.

ಗಿಲ್ಲಿ ಕೊರಳಿಗೆ ಬಿದ್ದಿತ್ತು ರಣಹದ್ದಿನ ಚಿತ್ರ..!

ಕೆಲ ವಾರಗಳ ಹಿಂದೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಒಬ್ಬೊಬ್ಬ ಸ್ಪರ್ಧಿ ಕೊರಳಿಗೆ ಒಂದೊಂದು ಪ್ರಾಣಿ, ಪಕ್ಷಿಯ ಚಿತ್ರ ಹಾಕುವ ಟಾಸ್ಕ್ ಕೊಟ್ಟಿದ್ರು ಸುದೀಪ್. ಆಗ ಧ್ರುವಂತ್ , ಗಿಲ್ಲಿ ಕೊರಳಿಗೆ ರಣಹದ್ದಿನ ಫೋಟೋ ಹಾಕಿದ್ರು. ʻಹೊಂಚುಹಾಕಿ ಸಂಚು ಮಾಡಿ ಕರೆಕ್ಟ್ ಟೈಂಗೆ ಲಬಕ್ ಅಂತ ಹಿಡಿಯುತ್ತೆ ರಣಹದ್ದು ಅಂದಿದ್ರು ಕಿಚ್ಚ ಸುದೀಪ್.

ಆದ್ರೆ ರಣಹದ್ದು ರಣಹದ್ದು ಯಾವುದೇ ಜೀವಿಗೆ ಹಾನಿ‌ ಮಾಡುವ ಪಕ್ಷಿ ಅಲ್ಲ. ಅದು ಬೇಟೆ ಆಡಲ್ಲ. ಸತ್ತ ಪ್ರಾಣಿಗಳನ್ನ ಮಾತ್ರ ತಿಂದು ಪರಿಸರದ ಸಮತೋಲನ ಕಾಪಾಡುವ ಪಕ್ಷಿ. ಇಂತಹ ಪಕ್ಷಿ ಬಗ್ಗೆ ಜನಪ್ರಿಯ ನಟ ಸುದೀಪ್ ಅವರು ತಪ್ಪು ಮಾಹಿತಿ ನೀಡೋದು ಸರಿಯಲ್ಲ ಅಂತ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿದೆ

ಅಳಿವಿನಂಚಿನಲ್ಲಿರೋ ರಣಹದ್ದು ಬಗ್ಗೆ ತಪ್ಪಾದ ಮಾಹಿತಿ ಹರಡಿರುವ ಬಿಗ್ ಬಾಸ್ ಸಂಸ್ಥೆ ಹಾಗೂ ನಟ ಸುದೀಪ್ ಅವರಿಗೆ ರಣಹದ್ದು ಬಗ್ಗೆ ಸೂಕ್ತ ರೀತಿಯಲ್ಲಿ ತಿಳುವಳಿಕೆ ನೀಡುವಂತೆ ರಾಮನಗರ ಡಿಸಿಎಫ್ ಹಾಗೂ ಆರ್‌ಎಫ್‌ಓ ಮನ್ಸೂರ್‌ ಅವರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಕ್ರಮಕೈಗೊಳ್ತಿವಿ ಅಂತ ಅರಣ್ಯ ಇಲಾಖೆ ಕೂಡ ಹೇಳಿದೆ.

ಕೋಟ್ಯಂತರ ಜನರು ನೋಡುವ ಶೋನಲ್ಲಿ ಇಂಥಾ ತಪ್ಪು ನಡೀಬಾರದು ಅನ್ನೋದು ರಣಹದ್ದು ಸಂರಕ್ಷಣಾ ಟ್ರಸ್ಟ್ ನವರ ವಾದ. ಸದ್ಯಕ್ಕಂತೂ ಇದು ಬಿಗ್ ಬಾಸ್ ಆಯೋಜಕರ ತನಕ ಬಂದಿದೆ. ಈ ಬಗ್ಗೆ ಫಿನಾಲೆನಲ್ಲಿ ಕಿಚ್ಚ ಸ್ಪಷ್ಟನೆ ಕೊಡ್ತಾರಾ? ಕೊಟ್ಟು ರಣಹದ್ದುಗಳಿಗೆ ನ್ಯಾಯ ಸಲ್ಲಿಸ್ತಾರಾ ಕಾದುನೋಡಬೇಕು.

- ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.