Asianet Suvarna News Asianet Suvarna News

ಕನ್ನಡತಿಯ ಕೊನೆಯ ಸಂಚಿಕೆ ಯಾವಾಗ ಪ್ರಸಾರ? ಭುವಿ ಗುಡ್‌ ನ್ಯೂಸ್‌ ಕೊಡ್ತಾಳಾ?

ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್ ಕನ್ನಡತಿ. ಈ ಸೀರಿಯಲ್‌ ಮುಕ್ತಾಯವಾಗುತ್ತೆ ಅಂತ ಈ ಹಿಂದೆಯೇ ತಿಳಿಸಿದ್ದೆವು. ಆದರೆ ಈ ಸೀರಿಯಲ್‌ನ ಕೊನೆಯ ಸಂಚಿಕೆ ಯಾವಾಗ ಪ್ರಸಾರವಾಗುತ್ತೆ ಅನ್ನೋ ಕುತೂಹಲ ಎಲ್ಲರಲ್ಲಿದೆ. ಕನ್ನಡತಿ ಲಾಸ್ಟ್ ಎಪಿಸೋಡ್‌ ಎಂದು? ಅಷ್ಟೊತ್ತಿಗೆ ಭುವಿ ಗುಡ್‌ನ್ಯೂಸ್ ಕೊಡ್ತಾಳ?

Kannadathi serial wind up shortly
Author
First Published Jan 13, 2023, 12:13 PM IST

ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಮುಕ್ತಾಯದತ್ತ ಸಾಗ್ತಿರೋ ಸೀರಿಯಲ್‌ ಕನ್ನಡತಿ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಈ ಸೀರಿಯಲ್‌ ಆರಂಭದಿಂದಲೇ ಒಳ್ಳೆಯ ರೆಸ್ಪಾನ್ಸ್ ಪಡೆಯುತ್ತಾ ಬಂದಿದೆ. ಅಪಾರ ಫ್ಯಾನ್ಸ್ ಬಳಗ ಹೊಂದಿರುವ ಈ ಸೀರಿಯಲ್‌ ಮುಕ್ತಾಯದತ್ತ ಸಾಗುತ್ತಿದೆ ಅನ್ನುವುದು ಈ ಸೀರಿಯಲ್‌ ಫ್ಯಾನ್ಸ್‌ಗೆ ಅಪಾರ ಬೇಸರ ತಂದಿರುವ ಸಂಗತಿ. ಸೀರಿಯಲ್‌ಗಳು ಅರ್ಧಕ್ಕೇ ನಿಲ್ಲೋದು ಕಾಮನ್‌. ಇದಕ್ಕೆ ಮುಖ್ಯ ಕಾರಣ ಟಿಆರ್‌ಪಿ ರೇಟಿಂಗ್‌. ಟಿಆರ್‌ಪಿ ರೇಟಿಂಗ್‌ ಮೇಲೆ ಸೀರಿಯಲ್‌ ಮುಂದುವರಿಸಬೇಕಾ ಬೇಡವಾ ಅನ್ನೋದು ಅಡಗಿದೆ. ಟಿಆರ್‌ಪಿ ಕಡಿಮೆ ಆದ ತಕ್ಷಣ ಸೀರಿಯಲ್‌ ಟೀಮ್‌ ಮೇಲೆ ಒತ್ತಡ ಹೆಚ್ಚಾಗುತ್ತೆ. ಹೇಗಾದರೂ ಮಾಡಿ ಸೀರಿಯಲ್‌ ಉಳಿಸಿಕೊಳ್ಳಲು ಟೀಮ್‌ ಹರಸಾಹಸ ಮಾಡುತ್ತೆ. ಆದರೆ ದುರದೃಷ್ಟವಶಾತ್ ಇಂಥಾ ಯಾವ ಸರ್ಕಸ್‌ಗಳೂ ಫಲ ನೀಡದೇ ಸೀರಿಯಲ್‌ ನಿಲ್ಲಿಸೋದು ಅನಿವಾರ್ಯವಾಗುತ್ತೆ.

ಆದರೆ ಕನ್ನಡತಿ ಹಾಗಲ್ಲ. ಇದಕ್ಕೆ ಆರಂಭದಿಂದಲೇ ಜನಪ್ರಿಯತೆ ಇತ್ತು. ಒಂದು ಹಂತದಲ್ಲಂತೂ ಈ ಸೀರಿಯಲ್‌ ಕನ್ನಡಿಗರ ಮನೆಮಾತಾಗುವಷ್ಟು ಪಾಪ್ಯುಲರ್‌ ಆಯ್ತು. ಈ ಸೀರಿಯಲ್‌ ಅನ್ನು ಟಿವಿಯಲ್ಲಿ ನೋಡೋರಿಗಿಂತ ವೂಟ್‌ ಆಪ್‌ನಲ್ಲಿ ನೋಡೋರ ಸಂಖ್ಯೆಯೇ ಹೆಚ್ಚು. ಹೀಗಾಗಿ ಟಿವಿ ಟಿಆರ್‌ಪಿಯಲ್ಲಿ ಟಾಪ್‌ ಐದರಲ್ಲಿ ಬರಲು ಕಷ್ಟಪಟ್ಟರೂ ಓಟಿಟಿಯಲ್ಲಿ ಸದಾ ಮುಂಚೂಣಿಯಲ್ಲೇ ಇರ್ತಿತ್ತು. ಅದರಲ್ಲೂ ಭುವಿ ಹರ್ಷ ಮದುವೆ ಸನ್ನಿವೇಶದಲ್ಲಂತೂ ಜನ ಈ ಸೀರಿಯಲ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದದ್ದೇ ಬರೆದದ್ದು. ಸಿಕ್ಕಾಪಟ್ಟೆ ಎಮೋಶನಲ್‌, ಆಕ್ರೋಶಭರಿತ ಪೋಸ್ಟ್‌ ನೋಡಿ ಕೊನೆ ಕೊನೆಗೆ ಈ ಸೀರಿಯಲ್‌ ನಟ ನಟಿಯರೇ ಲೈವ್‌ನಲ್ಲಿ ಬಂದು ತಮ್ಮ ವೀಕ್ಷಕರಿಗೆ ಸಮಾಧಾನ ಮಾಡಬೇಕಾಯ್ತು. ಬಹುಶಃ ಸೀರಿಯಲ್‌ಗೆ ಈ ಥರದ ಪ್ರತಿಕ್ರಿಯೆ ಹರಿದುಬಂದಿದ್ದು ಇದೇ ಮೊದಲ ಸಲ ಇರ್ಬೇಕು. ಇದರ ಜೊತೆಗೆ ಅಮ್ಮಮ್ಮನ ಪಾತ್ರ ಕೊನೆಯಾಗುತ್ತೆ ಅನ್ನೋದಕ್ಕೂ ವೀಕ್ಷಕರು ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದರು.

ಕಿರುತೆರೆ ಅಭಿಮಾನಿಗಳಿಗೆ ಬೇಸರದ ಸುದ್ದಿ; ಮುಕ್ತಾಯವಾಗುತ್ತಿದೆ 'ಕನ್ನಡತಿ' ಧಾರಾವಾಹಿ

ಆದರೆ ಅದ್ಯಾಕೋ ಗೊತ್ತಿಲ್ಲ. ಹರ್ಷ ಭುವಿ ಮದುವೆ ಬಳಿಕ ಸೀರಿಯಲ್‌ ನಿರೀಕ್ಷಿದಷ್ಟು ಟಿಆರ್‌ಪಿ ಪಡೆಯಲಿಲ್ಲ. ಜನ ಕೊಂಚ ಆಸಕ್ತಿ ಕಳೆದುಕೊಂಡರು. ಈ ಸೀರಿಯಲ್‌ನ ಕೊಂಚ ಭಿನ್ನವಾಗಿ ಮಾರ್ಪಡಿಸುವ ಹೊತ್ತಿಗೇ ಮತ್ತೊಂದು ಶಾಕಿಂಗ್‌ ನ್ಯೂಸ್‌ ಬಂತು. ಅದು ಕನ್ನಡತಿ ನಿಂತು ಹೋಗುತ್ತೆ ಅನ್ನೋ ಸುದ್ದಿ. ಆರಂಭದಲ್ಲಿ ಇದು ನಿಜನಾ ಸುಳ್ಳಾ ಅಂತೆಲ್ಲ ಸುದ್ದಿ ಹರಿದಾಡಿತು. ಆಮೇಲಾಮೇಲೆ ಸೀರಿಯಲ್‌ ನಟ ನಟಿಯರೇ ಹೌದು ಸೀರಿಯಲ್‌ ಮುಗೀತಿದೆ ಅಂತ ಹಿಂಟ್‌ ಕೊಟ್ಟರು. ಹರ್ಷ ಭುವಿ ಮದುವೆ, ಅಮ್ಮಮ್ಮನ ಅಂತ್ಯದ ಬಳಿಕ ಟಿಆರ್‌ಪಿಯಲ್ಲಿ ಸೀರಿಯಲ್ ಕೊಂಚ ಹಿಂದುಳಿದರೂ ತೀರಾ ನಿಲ್ಲಿಸುವ ಲೆವೆಲ್‌ಗೇನೂ ಇಳಿದಿರಲಿಲ್ಲ. ಆದರೆ ಸಡನ್ನಾಗಿ ಕಥೆಯನ್ನು ಯಾಕೆ ಹೀಗೆ ನಿಲ್ಲಿಸುತ್ತಿದ್ದಾರೆ ಅನ್ನೋ ಅನುಮಾನ ಈ ಸೀರಿಯಲ್‌ ಫ್ಯಾನ್ಸ್‌ಗಿದೆ.

ಇದೀಗ ಸೀರಿಯಲ್‌ ನಿಲ್ಲುತ್ತಿರೋದೇನೋ ಹೌದು, ಆದರೆ ಯಾವಾಗ ಈ ಸೀರಿಯಲ್‌ ಮುಕ್ತಾಯವಾಗುತ್ತೆ, ಕೊನೆಯ ಸೀನ್‌(scene) ಯಾವಾಗ ಪ್ರಸಾರವಾಗುತ್ತೆ ಅನ್ನೋ ಕುತೂಹಲ ಜನರಲ್ಲಿದೆ. ಅದಕ್ಕೆ ತಕ್ಕಂತೆ ಈ ಸೀರಿಯಲ್‌ನ ಕೊನೆಯ ಶೂಟಿಂಗ್‌ ಅಂತ ವೀಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌(Viral) ಆಗಿದೆ. ಹಾಗಿದ್ರೆ ಈ ಸೀರಿಯಲ್‌ ಶೂಟಿಂಗ್‌ ಆಲ್‌ರೆಡಿ ಮುಕ್ತಾಯವಾಯ್ತಾ? ಹಾಗಿದ್ರೆ ಸೀರಿಯಲ್‌(Serial) ಯಾವಾಗ ಕೊನೆ ಅನ್ನೋ ಪ್ರಶ್ನೆ ಜನರ ಮುಂದಿದೆ.

ನಮಗೆ ಬಂದಿರೋ ಮಾಹಿತಿ ಪ್ರಕಾರ ಫೆಬ್ರವರಿ ಮೊದಲ ವಾರದಲ್ಲಿ ಕನ್ನಡತಿ ಮುಕ್ತಾಯವಾಗ್ತಿದೆ. ಫೆಬ್ರವರಿ ಮೊದಲ ವಾರದ ಕೊನೆಯ ದಿನ ಅಂದರೆ ಫೆ.3ಕ್ಕೆ ಈ ಸೀರಿಯಲ್‌ನ ಕೊನೆಯ ಸಂಚಿಕೆ(Last episode) ಪ್ರಸಾರವಾಗಲಿದೆ. ಸದ್ಯಕ್ಕೀಗ ಸೀರಿಯಲ್‌ನಲ್ಲಿ ಭುವಿ ಅಮ್ಮಮ್ಮನ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ಹರ್ಷ ಆಕೆಗೆ ಬೆನ್ನೆಲುಬಾಗಿ ನಿಂತಿದ್ದಾನೆ. ಕೊನೆಯಲ್ಲಿ ಎಲ್ಲವೂ ಶುಭವಾಗಲಿದೆ ಅನ್ನೋದರ ಸೂಚನೆಯೂ ಸಿಕ್ಕಿದೆ. ಈ ಹೊತ್ತಿಗೆ ಭುವಿ ಏನಾದ್ರೂ ಗುಡ್‌ ನ್ಯೂಸ್‌ ಕೊಡ್ತಾಳ ಅಂತ ಕಾಯ್ಬೇಕಿದೆ?

ಕನ್ನಡತಿ ಸೀರಿಯಲ್ ಜನವರಿ ಕೊನೆಯಲ್ಲಿ ವೈಂಡ್ ಅಪ್ ಆಗುತ್ತಾ?

Follow Us:
Download App:
  • android
  • ios