Asianet Suvarna News Asianet Suvarna News

ಕನ್ನಡತಿ: ಬೆಂಗಳೂರಿಗೆ ಬಂದಿಳಿದ ಚೀತ್ಕಳಾ, ಅಮ್ಮಮ್ಮನ ಎಂಟ್ರಿ ಸೂಚನೆಯೂ ಸಿಕ್ತು!

ಕನ್ನಡತಿ ಸೀರಿಯಲ್‌ನ ರತ್ನಮಾಲಾ ಪಾತ್ರಧಾರಿ ಚಿತ್ಕಳಾ ಬಿರಾದಾರ್ ಅಮೇರಿಕಾದಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇತ್ತ ಕನ್ನಡತಿ ಸೀರಿಯಲ್‌ನಲ್ಲೂ ಅಮ್ಮಮ್ಮ ಚೇತರಿಸಿಕೊಳ್ತಿದ್ದಾರೆ ಅನ್ನೋ ಸುದ್ದಿ ಹರ್ಷನ ಕಿವಿಗೆ ಬಿದ್ದಿದೆ. ರತ್ನಮ್ಮ ಬೇಗ ವಾಪಾಸ್ ಬರಲಿ ಅನ್ನುತ್ತಿದ್ದ ಅಭಿಮಾನಿಗಳಿಗೆ ಇದರಿಂದ ಖುಷಿಯಾಗಿದೆ. 
 

kannadathi serial ammamma chitkala biradar comes again
Author
Bengaluru, First Published Jul 21, 2022, 5:11 PM IST

ಕನ್ನಡತಿಯಲ್ಲಿ ಬಹಳ ಸ್ಟ್ರಾಂಗ್ ಪಾತ್ರವಾಗಿ ಕಾಣಿಸುತ್ತಿದ್ದದ್ದು ರತ್ನಮಾಲಾ ಪಾತ್ರ. ಈಕೆ 'ಮಾಲಾ ಕೆಫೆ' ಒಡತಿ. ಒಂದಿಷ್ಟು ರೆಸ್ಟೊರೆಂಟ್‌ಗಳು, ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಗಟ್ಟಿಗಿಟ್ಟಿ ಹೆಣ್ಣುಮಗಳು. ಈ ಪಾತ್ರವನ್ನು ಕಿರುತೆರೆಯ ಮೇಲೆ ಜೀವಿಸಿದವರು ಚಿತ್ಕಳಾ ಬಿರಾದಾರ್ ಎಂಬ ಉತ್ತರ ಕರ್ನಾಟಕದ ಹೆಣ್ಣುಮಗಳು. ಕಿರುತೆರೆಗೆ ಬರುವವರೆಲ್ಲ ಚಿಕ್ಕ ವಯಸ್ಸಿನವರಾಗಬೇಕು ಅನ್ನೋದಕ್ಕೆ ಇವರು ಅಪವಾದ. ಗುಲ್ಬರ್ಗಾ ಯೂನಿವರ್ಸಿಟಿಯಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಪದವಿ ಪಡೆದ ಚೀತ್ಕಳಾ ಮುಂದೆ ಇಂಗ್ಲೀಷ್ ಟೀಚರ್ (English Teacher) ಆಗಿ ಒಂದಿಷ್ಟು ಕಡೆ ಕೆಲಸ ಮಾಡಿದ್ದಾರೆ. ಜರ್ಮನಿಯಲ್ಲೂ ಅಲ್ಲಿನ ಮಕ್ಕಳಿಗೆ ಇಂಗ್ಲಿಷ್ ್ ಕಲಿಸಿದ್ದು ಇವರ ಹೆಗ್ಗಳಿಕೆ. ಹತ್ತು ವರ್ಷಗಳ ಕೆಳಗೆ ಈ ಟಿವಿಯಲ್ಲಿ 'ಬಂದೇ ಬರತಾವ ಕಾಲ' ಅನ್ನೋ ಸೀರಿಯಲ್ ಮೂಲಕ ಕಿರುತೆರೆಗೆ ಅಡಿಯಿಟ್ಟವರು ಚೀತ್ಕಳಾ. ಅವರನ್ನು ಕಿರುತೆರೆಯಲ್ಲಿ ನಟಿಸೋ ಹಾಗೆ ಮಾಡಿದ್ದು ಹಿರಿಯ ನಟಿ ಸುಂದರಶ್ರೀ. ಅಲ್ಲಿಂದ ಒಂದಿಷ್ಟು ಸೀರಿಯಲ್ ಸಿನಿಮಾಗಳಲ್ಲಿ ನಟಿಸುತ್ತಾ ಬಂದರೂ ಅವರಿಗೆ ಹೆಸರು ತಂದುಕೊಟ್ಟದ್ದು, ಅಭಿಮಾನಿಗಳನ್ನು ಕೊಟ್ಟದ್ದು ಕನ್ನಡತಿ. ಈ ಸೀರಿಯಲ್‌ನಲ್ಲಿ ಇವರ ಪಾತ್ರಕ್ಕೆ ದೊಡ್ಡ ಫ್ಯಾನ್ ಫಾಲೊವಿಂಗ್‌ ಇದೆ. ಇತ್ತೀಚೆಗೆ ತಾನೇ ತಮ್ಮ ಫ್ಯಾನ್‌ ಫಾಲೋವಿಂಗ್ ೫೦ ಸಾವಿರ ತಲುಪಿದ್ದನ್ನು ಚೀತ್ಕಳಾ ಖುಷಿಯಿಂದ ಘೋಷಿಸಿಕೊಂಡರು. 

ಚೀತ್ಕಳಾ ಅವರ ಮಕ್ಕಳಿರೋದು ಅಮೇರಿಕಾದಲ್ಲಿ. ಕೋವಿಡ್‌ನ ಎರಡು ವರ್ಷ ಅವರ ಮಕ್ಕಳ ಭೇಟಿ ಆಗಿರಲಿಲ್ಲ. ಕೆಲವು ದಿನಗಳ ಹಿಂದೆ ವೀಸಾ ಸಿಕ್ಕಿ ಅವರು ಅಮೆರಿಕಾಗೆ ಹೊರಟರು. ಅಷ್ಟೊತ್ತಿಗೆ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದ 'ಕನ್ನಡತಿ' ಸೀರಿಯಲ್‌ ಒಂದು ಹಂತಕ್ಕೆ ಬಂದು ನಿಂತಿತ್ತು. ಹರ್ಷ ಭುವಿ ಮದುವೆಯ ಶಾಸ್ತ್ರ ಕೊನೆ ಆಗುವ ತನಕ ಅವರಿರೋದು ಸಾಧ್ಯವಾಗದಿದ್ದರೂ ಒಂದು ಹಂತದವರೆಗೆ ಅವರು ಈ ಮದುವೆಗೆ ಜೊತೆಯಾಗಿದ್ದರು. ಆಮೇಲೆ ಈ ಪಾತ್ರದ ಕೊನೆಯಾಯ್ತು ಅಂತಲೇ ಎಲ್ಲರೂ ಭಾವಿಸಿದ್ದರು. ಆಗ ಚೀತ್ಕಳಾ ಅವರೇ ತನ್ನ ಪಾತ್ರ ನಿಂತಿಲ್ಲ. ಅಮೆರಿಕಾದಿಂದ ಬಂದಮೇಲೆ ಮತ್ತೆ ಅಮ್ಮಮ್ಮನಾಗಿ ನಿಮ್ಮೆದುರು ಬರ್ತೀನಿ ಅಂತ ಸ್ಪಷ್ಟನೆ ಕೊಡಬೇಕಾಯ್ತು.ಇದಾದ ಮೇಲೂ 'ಅಮ್ಮಮ್ಮನ ಕರೆಸಿ, ಅವರಿಲ್ಲ ಅಂದ್ರೆ ಸೀರಿಯಲ್‌ಗೆ ಕಳೆ ಇರಲ್ಲ' ಅಂತ ಸಾಕಷ್ಟು ವೀಕ್ಷಕರು ಕಮೆಂಟ್ ಮಾಡುತ್ತಲೇ ಇದ್ದಾರೆ. ಈ ಕಾರಣಕ್ಕೋ ಏನೋ, ಆರಂಭದಲ್ಲಿ ಮೂರು ತಿಂಗಳು ಕಳೆದು ಬರ್ತಾರೆ ಅಂದಕೊಂಡಿದ್ದ ಚೀತ್ಕಳಾ ಅದಕ್ಕೂ ಮೊದಲೇ ಬೆಂಗಳೂರಿಗೆ ಬಂದಿಳಿದಿದ್ದಾರೆ. 

ಕನ್ನಡತಿ: ಹರ್ಷ ಭುವಿ ಡಿವೋರ್ಸಾ? ಏನಪ್ಪಾ ಈ ಡೈರೆಕ್ಟರ್ ಕಥೆ?

ಈ ನಡುವೆ ಅಮ್ಮಮ್ಮ ಬರುವ ಸೂಚನೆಯೂ ಸೀರಿಯಲ್‌ನಲ್ಲಿ ಸಿಕ್ಕಿದೆ. ಹರ್ಷ ಕೈಗೆ ಸಿಗದ ಭುವಿಯ ಚಡಪಡಿಕೆಯಲ್ಲಿ ಒದ್ದಾಡುವಾಗ ಆತನ ಚಿಕ್ಕಮ್ಮ 'ಅಮ್ಮಮ್ಮ ಚೇತರಿಸಿಕೊಳ್ತಿದ್ದಾರಂತೆ, ದೇವ್ ಹೇಳ್ದ' ಅನ್ನೋ ಮಾತನ್ನು ಹೇಳಿದ್ದಾರೆ. ಅಮ್ಮಮ್ಮ ಶೀಘ್ರ ಮರಳಿ ಬರ್ತಿದ್ದಾರೆ ಅನ್ನೋದಕ್ಕೆ ಇದು ಸೂಚನೆಯಂತೆ ಬಂದಿದೆ. 'ನಾನು ಅಮೆರಿಕಾದಿಂದ ಬೆಂಗಳೂರಿಗೆ ಬೇಗ ಬರ್ತೀನಿ. ಆದರೆ ಹಾಗೆ ಬಂದ ಕೂಡಲೇ ಶೂಟಿಂಗ್‌ಗೆ ಕರೀತಾರಾ ಇಲ್ವಾ ಅಂತ ಗೊತ್ತಿಲ್ಲ. ಅವರು ಕಥೆ ಹೇಗೆ ಮಾಡ್ತಾರೋ ಹಾಗೆ ನಾವು ಮೂವ್ ಆಗ್ಬೇಕು. ಕಥೆಯಲ್ಲಿ ನಾನಿದ್ರೆ ಖಂಡಿತಾ ಶೂಟಿಂಗ್‌ನಲ್ಲಿ ಪಾಲ್ಗೊಳ್ತೀನಿ' ಅಂದಿದ್ರು. ಇಷ್ಟೆಲ್ಲ ಅಭಿಮಾನಿಗಳು ಕಾಯ್ತಿದ್ದಾರೆ ಅಂತಾಗುವಾಗ ಅಮ್ಮಮ್ಮನನ್ನು ಬೇಗ ತೆರೆಯ ಮೇಲೆ ತಂದರೆ ಸೀರಿಯಲ್‌ ಟೀಮ್‌ಗೂ ಒಳ್ಳೆಯದೇ. ಆ ಹೈಪ್‌ಅನ್ನು ಅವರಿಗೀಗ ಬಳಸಿಕೊಳ್ಳೋ ಹಾಗಿದೆ. ಆ ನಿಟ್ಟಿನಲ್ಲಿ ಸೀರಿಯಲ್‌ನಲ್ಲೇ ಅಮ್ಮ ಬರ್ತಿರೋದರ ಸೂಚನೆ ಸಿಕ್ಕಿದೆ. 

ಆದಷ್ಟು ಬೇಗ ಅಮ್ಮಮ್ಮ ಸ್ಕ್ರೀನ್ ಮೇಲೆ ಬರಲಿ, ಹಾರಾಡ್ತಿರೋ ಸಾನಿಯಾಗೆ ಲಗಾಮ್‌ ಹಾಕಿ ಅವಳನ್ನು ಹದ್ದುಬಸ್ತಿನಲ್ಲಿಡಲಿ, ಅವರ ಒಳ್ಳೆಯ ಮಾತುಗಳು ಹರ್ಷ ಭುವಿ ಮಾತ್ರ ಅಲ್ಲ ನಮ್ಮನ್ನೂ ಸಮಾಧಾನ ಮಾಡ್ತಿರಲಿ ಅಂತ ವೀಕ್ಷಕರು ಹಾರೈಸುತ್ತಿದ್ದಾರೆ. ಕನ್ನಡತಿಯಲ್ಲಿ ರತ್ನಮಾಲಾ ಪಾತ್ರದಲ್ಲಿ ಚೀತ್ಕಳಾ ಕಾಣಿಸಿಕೊಂಡರೆ, ಹರ್ಷನಾಗಿ ಕಿರಣ್‌ರಾಜ್‌, ಭುವಿಯಾಗಿ ರಂಜನಿ ರಾಘವನ್, ಸಾನಿಯಾ ಪಾತ್ರದಲ್ಲಿ ಆರೋಹಿ ನೈನಾ, ವರೂಧಿನಿಯಾಗಿ ಸಾರಾ ಅಣ್ಣಯ್ಯ ನಟಿಸಿದ್ದಾರೆ.

ರಾಮಾಚಾರಿ: ಮದುಮಗನ ವೇಷದಲ್ಲಿ ರಾಮಾಚಾರಿ, ಇನ್ನು ಮದುಮಗಳು ಚಾರು ಬರೋದಷ್ಟೇ ಬಾಕಿ!
 

Follow Us:
Download App:
  • android
  • ios