ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಾದ ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್ ಅವರು ಇದೀಗ ಹೆಣ್ಣು ಮಗುವಿಗೆ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಆಂಜನೇಯದ ಅನುಗ್ರಹದಿಂದ ಯುವರಾಣಿ ನಮ್ಮ ಮನೆಗೆ ಆಗಮಿಸಿದ್ದಾಳೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೆಣ್ಣುಮಗುವಿಗೆ ತಾಯಿಯಾದ ನಟಿ ತೇಜಸ್ವಿನಿ ಆಚಾರ್
ರಾಧಿಕಾ, ಸಂಘರ್ಷ ಮೊದಲಾದ ಜನಪ್ರಿಯ ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದ ನಟಿ ತೇಜಸ್ವಿನಿ ಆಚಾರ್ ಹಾಗೂ ನಟ ವಿರಾಟ್ ವತ್ಸಲ್ ಇದೀಗ ಹೆಣ್ಣು ಮಗುವಿಗೆ ಪೋಷಕರಾದ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ವಿಚಾರವನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಭಗವಾನ್ ಹನುಮಂತನ ದಿವ್ಯ ಆಶೀರ್ವಾದದೊಂದಿಗೆ, ನಮ್ಮ ರಾಜಕುಮಾರಿಯನ್ನು ಮನೆಗೆ ಸ್ವಾಗತಿಸುತ್ತೇವೆ. (With The Divine Blessings Of Lord Hanuman We Welcome Home Our Princess ) ಎಂದು ನಟಿ ಸುಂದರವಾದ ಫೋಟೊ ಹಂಚಿಕೊಂಡಿದ್ದಾರೆ. ಕಿರುತೆರೆಯ ನಟ-ನಟಿಯರು ಪೋಷಕರಾಗಿ ಭಡ್ತಿ ಪಡೆದಿರುವ ಜೋಡಿಗೆ ಶುಭ ಹಾರೈಸಿದ್ದಾರೆ.
ಇತ್ತೀಚೆಗೆ ನಡೆದಿತ್ತು ಅದ್ದೂರಿ ಸೀಮಂತ
ಕೆಲವು ತಿಂಗಳ ಹಿಂದೆ ನಟಿ ತಾವು ಗರ್ಭಿಣಿ ಎನ್ನುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಇತ್ತೀಚೆಗೆ ನಟಿಯ ಸೀಮಂತ ಸಮಾರಂಭ ಕೂಡ ಅದ್ದೂರಿಯಾಗಿ ನಡೆದಿತ್ತು. ತೇಜಸ್ವಿನಿ ಹಸಿರು ಮತ್ತು ಪಿಂಕ್ ಬಣ್ಣದ ಸೀರೆಯಲ್ಲಿ ಮಿಂಚಿದರೆ, ವಿರಾಟ್ ಆಫ್ ವೈಟ್ ಕುರ್ತಾ ಪೈಜಾಮ ಧರಿಸಿ ಮಿಂಚುತ್ತಿದ್ದರು. ಇದೀಗ ಎರಡು ದಿನದ ಹಿಂದೆ ಅಂದರೆ ನವಂಬರ್ 19ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮದುವೆಯಾದ ಬಳಿಕ ನಟನೆಯಿಂದ ದೂರ ಉಳಿದಿರುವ ನಟಿ, ಇದೀಗ ತಾಯ್ತನದ ಸಂಭ್ರಮವನ್ನು ಅನುಭವಿಸುತ್ತಿದ್ದಾರೆ.
ತೇಜಸ್ವಿನಿ ಆಚಾರ್ ನಟಿಸಿದ ಧಾರಾವಾಹಿಗಳು
ಮೂಲತಃ ಮೈಸೂರಿನವರಾದ ನಟಿ ತೇಜಸ್ವಿನಿ ಆಚಾರ್ ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು ಭಾಷೆಗಳ ಧಾರಾವಾಹಿಗಳಲ್ಲೂ ಸಹ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಕನ್ನಡದಲ್ಲಿ ‘ಸಂಘರ್ಷ’, ‘ರಾಧಿಕಾ’ ‘ಮಹಾನದಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಹಲವಾರು ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿರುವ ನಟ ವಿರಾಟ್ ವತ್ಸಲ್ ಜೊತೆ ತೇಜಸ್ವಿನಿ ಸಪ್ತಪದಿ ತುಳಿದಿದ್ದಾರೆ. ಇವರ ವಿವಾಹವು ಇದೇ ವರ್ಷ ಫೆಬ್ರವರಿಯಲ್ಲಿ ನಡೆದಿತ್ತು.
ಸ್ಟಾರ್ ಸುವರ್ಣ ವಾಹಿನಿಯ ‘ಸಂಘರ್ಷ’ ಧಾರಾವಾಹಿಯಲ್ಲಿ ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್ ಜೊತೆಯಾಗಿ ನಟಿಸಿದ್ದರು. ಈ ಸೀರಿಯಲ್ ಶೂಟ್ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು, ನಂತರ ಇಬ್ಬರು ಪ್ರೀತಿಯಲ್ಲಿ ಬಿದ್ದರು. ಇದೀಗ ಮನೆಯವರ ಒಪ್ಪಿಗೆ ಪಡೆದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ. ಈ ಜೋಡಿ ಕಳೆದ ಫೆಬ್ರವರಿ 6 ರಂದು ವಿವಾಹವಾಗಿದ್ದರು. ಫೆಬ್ರವರಿ 8 ರಂದು ಆರತಕ್ಷತೆ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನಡೆದಿತ್ತು.
















