Pavitra Bandhana: ಕಲರ್ಸ್ ಕನ್ನಡದ ಹಿಟ್ ಧಾರಾವಾಹಿ ‘ಪವಿತ್ರ ಬಂಧನ’ದಲ್ಲಿ ಬಿಗ್ ಟ್ವಿಸ್ಟ್! ಪ್ರೇಕ್ಷಕರ ಅಚ್ಚುಮೆಚ್ಚಿನ 'ನಮ್ರತಾ' ಪಾತ್ರಕ್ಕೆ ನಟಿ ರುಹಾನಿ ಶೆಟ್ಟಿ ದಿಢೀರ್ ಗುಡ್ ಬೈ ಹೇಳಿದ್ದಾರೆ. ರುಹಾನಿ ಅವರ ಈ ನಿರ್ಧಾರ ಅಭಿಮಾನಿಗಳಿಗೆ ಶಾಕ್ ನೀಡಿದ್ದು, ಅವರ ಜಾಗಕ್ಕೆ ಬರುತ್ತಿರುವ ಹೊಸ ನಟಿ ಯಾರು ಎಂಬ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಆ ಹೊಸ ನಟಿ ಯಾರು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಪವಿತ್ರ ಬಂಧನ’ದಲ್ಲಿ ಪ್ರಮುಖ ಪಾತ್ರಧಾರಿಯ ಬದಲಾವಣೆಯಾಗಿದೆ. ಹೌದು. ಧಾರಾವಾಹಿಯಲ್ಲಿ ನಮ್ರತಾ ಪಾತ್ರಕ್ಕೆ ಜೀವ ತುಂಬುತ್ತಿದ್ದ ನಟಿ ರುಹಾನಿ ಶೆಟ್ಟಿ ಇದೀಗ ಈ ಪಾತ್ರಕ್ಕೆ ಗುಡ್‌ ಬೈ ಹೇಳಿದ್ದು, ಅವರ ಜಾಗಕ್ಕೆ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿ ಖ್ಯಾತಿಯ ನಟಿ ಲಿಖಿತಾ ಆಗಮಿಸಿದ್ದಾರೆ. ಇನ್ಮುಂದೆ ನಮ್ರತಾ ಪಾತ್ರವನ್ನು ಲಿಖಿತಾ ಮುಂದುವರಿಸಲಿದ್ದಾರೆ. ಆದರೆ ವೀಕ್ಷಕರು ಎಂದಿನಂತೆ ರುಹಾನಿ ಶೆಟ್ಟಿ ಅವರೇ ಈ ಪಾತ್ರದಲ್ಲಿ ಮುಂದುವರಿಯಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಐಟಿ ಕೆಲಸ ಬಿಟ್ಟು ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಲಿಖಿತಾ

ಮೂಲತಃ ಕೊಡಗಿನ ವಿರಾಜಪೇಟೆಯವರಾದ ನಟಿ ಲಿಖಿತಾ, ಕಿರುತೆರೆಗೆ ಕಾಲಿಡುವ ಮುನ್ನ ಐಟಿ ಉದ್ಯೋಗಿಯಾಗಿದ್ದರು. ಶಿಕ್ಷಣ ಮುಗಿಸಿದ ಬಳಿಕ ಆಕ್ಸೆಂಚರ್ (Accenture) ನಂತಹ ದೈತ್ಯ ಐಟಿ ಕಂಪನಿಯಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆದರೆ, ನಟನೆಯ ಮೇಲಿನ ಸೆಳೆತ ಅವರನ್ನು ಬಣ್ಣದ ಲೋಕದತ್ತ ಕರೆತಂದಿತು. ಹೀಗಾಗಿ, ಕೈಯಲ್ಲಿದ್ದ ಉತ್ತಮ ಕೆಲಸವನ್ನು ತೊರೆದು ಕಿರುತೆರೆಗೆ ಎಂಟ್ರಿ ಕೊಟ್ಟರು.

ಆಕ್ಸೆಂಚರ್‌ನಲ್ಲಿ ಮೂರು ವರ್ಷ ಉದ್ಯೋಗ ಮಾಡಿದ ನಂತರ, ಸ್ನೇಹಿತರ ರೆಫರೆನ್ಸ್ ಮೂಲಕ ಲಿಖಿತಾ ಅವರಿಗೆ ‘ಶ್ರೀದೇವಿ ಮಹಾತ್ಮೆ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದರಲ್ಲಿ ಅವರು ಪಾರ್ವತಿಯ ಗೆಳತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಶ್ರೀದೇವಿ ಮಹಾತ್ಮೆ’ ಪ್ರಸಾರವಾಗುತ್ತಿರುವಾಗಲೇ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯ ವಿಲನ್ ಪಾತ್ರಕ್ಕೆ ಆಡಿಷನ್ ನಡೆದಿತ್ತು. ಆಡಿಷನ್‌ನಲ್ಲಿ ಆಯ್ಕೆಯಾದ ಲಿಖಿತಾ, ಆ ಧಾರಾವಾಹಿಯಲ್ಲಿ ‘ಮನಸ್ವಿನಿ’ ಎಂಬ ಪಾತ್ರದಲ್ಲಿ ನಟಿಸಿದರು. ಹೀಗೆ ಲಿಖಿತಾ ಅವರ ಸೀರಿಯಲ್ ಪಯಣ ಆರಂಭವಾಯಿತು.

ರುಹಾನಿ ಶೆಟ್ಟಿ ಹೇಳಿದ್ದೇನು?

ನಟಿ ರುಹಾನಿ ಶೆಟ್ಟಿ ಈ ಹಿಂದೆ ‘ಜೀ ಕನ್ನಡ’ ವಾಹಿನಿಯ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ‘ಮಾಯಾ’ ಎಂಬ ಖಳನಾಯಕಿ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿ ವೀಕ್ಷಕರಿಗೆ ಹತ್ತಿರವಾಗಿದ್ದರು. ಆದರೆ, ಆ ಧಾರಾವಾಹಿಯಿಂದಲೂ ಅವರು ದಿಢೀರ್‌ ಹೊರಬಂದಾಗ ಅಭಿಮಾನಿಗಳಿಗೆ ಇದೇ ರೀತಿಯ ನಿರಾಸೆ ಉಂಟಾಗಿತ್ತು. ಸದ್ಯ ‘ಪವಿತ್ರ ಬಂಧನ’ದಿಂದ ಹೊರಬರಲು ನಿಖರ ಕಾರಣ ತಿಳಿದುಬಂದಿಲ್ಲ. ಈ ಹಿಂದೆ ತಮ್ಮ ಧಾರಾವಾಹಿ ಪಯಣದ ಬಗ್ಗೆ ಮಾತನಾಡಿದ್ದ ರುಹಾನಿ, “‘ನಾ ನಿನ್ನ ಬಿಡಲಾರೆ’ ನನ್ನ ಮೊದಲ ಪ್ರಾಜೆಕ್ಟ್‌ ಅಲ್ಲ, ಅದು ನನ್ನ ನಾಲ್ಕನೇ ಧಾರಾವಾಹಿ. ಜೊತೆಗೆ ಸಿನಿಮಾ ಕೂಡ ಮಾಡಿದ್ದೇನೆ. ಪಾತ್ರಕ್ಕೆ ಮಹತ್ವ ಇದ್ದರೆ ಮಾತ್ರ ಮಾಡುತ್ತೇನೆ ಎಂದು ಮೊದಲೇ ಹೇಳಿರುತ್ತೇನೆ. ಧಾರಾವಾಹಿಗಳಲ್ಲಿ ಇನ್ನೊಂದು ಪಾತ್ರವನ್ನು ಹೈಲೈಟ್ ಮಾಡಬೇಕು ಎಂದಿರಬಹುದು ಅಥವಾ ಬೇರೆ ಏನೋ ಕಾರಣವಿರಬಹುದು. ಆದರೆ ನಾನು 200 ಪರ್ಸೆಂಟ್ ಶ್ರಮ ಹಾಕಿ ಪಾತ್ರ ನಿಭಾಯಿಸಿದಾಗಲೂ, ಎಲ್ಲೋ ಆ ಪಾತ್ರದ ಮೌಲ್ಯ ಕಡಿಮೆಯಾಗುತ್ತಿದೆ ಎನಿಸಿದಾಗ ಮಾತ್ರ ಆಚೆ ಬರುತ್ತೇನೆ” ಎಂದಿದ್ದರು.

‘ಪವಿತ್ರ ಬಂಧನ’

ಸಂಬಂಧಗಳ ಸೂಕ್ಷ್ಮತೆ, ಪ್ರೀತಿ, ತ್ಯಾಗ ಹಾಗೂ ಕೌಟುಂಬಿಕ ಭಾವನಾತ್ಮಕ ಸಂಘರ್ಷವನ್ನು ಕಟ್ಟಿಕೊಡುತ್ತಿರುವ ‘ಪವಿತ್ರ ಬಂಧನ’ದಲ್ಲಿ ಸೂರಜ್ ಸಿಂಗ್ ಮತ್ತು ‘ಬೃಂದಾವನ’ ಖ್ಯಾತಿಯ ಅಮೂಲ್ಯಾ ಭಾರದ್ವಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರತಿದಿನ ಸಂಜೆ 6.30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳು ಹಾಗೂ ಪರಿಸ್ಥಿತಿಯ ಒತ್ತಡದಿಂದಾಗಿ ಪವಿತ್ರಾ ಅನಿವಾರ್ಯವಾಗಿ ದೇವದತ್‌ ಅವರನ್ನು ಮದುವೆಯಾಗಬೇಕಾಗುತ್ತದೆ. ಪರಸ್ಪರ ಅರ್ಥಮಾಡಿಕೊಳ್ಳುವ ಮುನ್ನವೇ ದಾಂಪತ್ಯಕ್ಕೆ ಕಾಲಿಡುವ ಇವರ ಬದುಕು ಹೊಸ ಕನಸುಗಳನ್ನು ಹೊತ್ತಿದ್ದು, ಹಳೆಯ ಭಾವನೆಗಳು ಗೊಂದಲ ಸೃಷ್ಟಿಸಿದರೂ ಇಬ್ಬರ ನಡುವಿನ ಬಂಧ ನಿಧಾನವಾಗಿ ಗಟ್ಟಿ ಪ್ರೀತಿಯಾಗಿ ಬದಲಾಗುತ್ತಿದೆ.

ನಿರ್ಮಾಣ ಮತ್ತು ತಾರಾಬಳಗ

ಉತ್ತಮ್ ಮಧು ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪವಿತ್ರ ಬಂಧನ’ ಧಾರಾವಾಹಿಯನ್ನು ಮಹೇಶ್ ಅವರೊಂದಿಗೆ ಸೇರಿ ಉತ್ತಮ್ ಮಧು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ತಾರಾಬಳಗದಲ್ಲಿ ಸೂರಜ್ ಸಿಂಗ್ (ದೇವದತ್ ದೇಶ್‌ಮುಖ್), ಅಮೂಲ್ಯಾ ಭಾರದ್ವಾಜ್ (ಪವಿತ್ರಾ), ಅನುಷಾ ರಾವ್ (ರಾಧಿಕಾ), ವಿಜಯ್ ಕಾಶಿ (ಗೋವರ್ಧನ್) ಹಾಗೂ ಅಂಬರೀಶ್ ಸಾರಂಗಿ (ರಂಗ) ಸೇರಿದಂತೆ ದೊಡ್ಡ ತಾರಾಬಳಗವಿದ್ದು, ನಮ್ರತಾ ಪಾತ್ರದಲ್ಲಿ ಇನ್ಮುಂದೆ ಲಿಖಿತಾ ಕಾಣಿಸಿಕೊಳ್ಳಲಿದ್ದಾರೆ.