ನಟ ಹುಚ್ಚ ವೆಂಕಟ್ ತಮ್ಮ ಇತ್ತೀಚಿನ ಸಂದರ್ಶನದಲ್ಲಿ, ತಮಗೆ ಸ್ನೇಹಿತರಿಲ್ಲ, ಗೋಡೆಗಳ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ. ತಮ್ಮ ದುಡಿಮೆಯನ್ನೆಲ್ಲಾ ಜನರಿಗೆ ದಾನ ಮಾಡುವುದಾಗಿ ಹೇಳಿರುವ ಅವರು, ಹಣದ ಸಮಸ್ಯೆ ಇದ್ದರೂ ಸ್ವಾಭಿಮಾನ ಬಿಟ್ಟುಕೊಡದೆ ಬದುಕುತ್ತಿರುವುದಾಗಿ ತಿಳಿಸಿದ್ದಾರೆ.

ನಗೆ ನನ್ನ ಮುಂದಿನ ಜೀವನದ ಬಗ್ಗೆ ಚಿಂತೆಯಿಲ್ಲ. ಈಗ 35 ವರ್ಷ ನನಗೆ. ಮದುವೆ ಆಗೋದಿಲ್ಲ. ಸ್ನೇಹಿತರು ಅಂತಾ ಯಾರೂ ಇಲ್ಲ.ಕೆಲವೊಂದಿಷ್ಟು ಅವಕಾಶಗಳು ಬರುತ್ತಿವೆ. ಅವಕಾಶಗಳು ಇಲ್ಲದೇ ಇದ್ದಾಗ ಮನೆಯಲ್ಲಿ ಇರುತ್ತೇನೆ. ಜನರಿಗೆ ಹೆಲ್ಪ್‌ ಮಾಡ್ಬೇಕು. ದುಡಿದ ಹಣವನ್ನೆಲ್ಲಾ ಹಂಚ್ತಾ ಹೋಗ್ತೇನೆ ಎಂದು ಹುಚ್ಚ ವೆಂಕಟ್‌ ಹೇಳಿದ್ದಾರೆ. ಪತ್ರಕರ್ತ ಹರೀಶ್‌ ನಾಗರಾಜ್‌ ಅವರ ನ್ಯೂಸೋನ್ಯೂಸು ಯೂಟ್ಯೂಬ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಬಹುಕಾಲದ ಬಳಿಕ ಮಾತನಾಡಿರುವ ಹುಚ್ಚ ವೆಂಕಟ್‌ ತಮ್ಮ ಜೀವನದಲ್ಲಿ ದಿನನಿತ್ಯದ ಆಗುಹೋಗುಗಳ ಬಗ್ಗೆ ಮಾತನಾಡಿದ್ದಾರೆ.

ನಾನೀಗ ಸಿನಿಮಾಗಳನ್ನು ನೋಡೋದಿಲ್ಲ

ನಾನು ಸಿನಿಮಾದವನು. ಆದರೆ, ಈಗ ಸಿನಿಮಾಗಳನ್ನು ನೋಡೋದೇ ಇಲ್ಲ. ಸಿನಿಮಾಗಳನ್ನು ನೋಡಿದ್ರೆ ಮಾತ್ರ ಅಲ್ಲಿರೋ ಐಟಂ ಡಾನ್ಸ್‌ ಬಗ್ಗೆ ಮಾತನಾಡಬೇಕು ಅನ್ಸುತ್ತೆ. ಅದು ಇನ್ನೆಲ್ಲೆಲ್ಲಿಗೋ ಹೋಗುತ್ತೆ. ಆ ಸಹವಾಸವೇ ಬೇಡ ಅಂದ್ಕೊಂಡು ಸಿನಿಮಾಗಳನ್ನು ಥಿಯೇಟರ್‌ಗಳಲ್ಲೂ ಮೊಬೈಲ್‌ನಲ್ಲೂ ಎಲ್ಲೂ ನೋಡೋದಿಲ್ಲ. ಹಾಡುಗಳನ್ನು ಕೇಳೋ ಅಭ್ಯಾಸ ಇದೆ. ಆದರೆ ಹೊಸ ಸಿನಿಮಾದ ಹಾಡುಗಳನ್ನು ಕೇಳೋದಿಲ್ಲ. ಹಳೇ ಸಿನಿಮಾಗಳ ಹಾಡು ಅದರಲ್ಲೂ, 'ಅನಾಥ ಮಗುವಾದೆ ನಾನು.. ಅಪ್ಪನೂ.. ಅಮ್ಮನೂ ಇಲ್ಲ..' ಗೀತೆ ನನಗಿಷ್ಟ ಎಂದು ಹುಚ್ಚ ವೆಂಕಟ್‌ ಹೇಳಿದ್ದಾರೆ.

ನನಗೆ ಕೆಲವು ಸ್ನೇಹಿತರಿದ್ದರು. ಅವರು ಯಾರೂ ಈಗಿಲ್ಲ. ಮನೆಯಲ್ಲಿನ ಗೋಡೆಗಳ ಜೊತೆಯೇ ನಾನು ಮಾತನಾಡೋದು. ಮೊದಲಿನಿಂದಲೂ ನನಗೆ ಇದೇ ಅಭ್ಯಾಸ. ಗೋಡೆಗಳು ನನನಗೆ ಮರು ಉತ್ತರ ನೀಡೋದಿಲ್ಲ ಎಂದು ಹುಚ್ಚ ವೆಂಕಟ್‌ ಹೇಳಿದ್ದಾರೆ.

ಮುಂದಿನ ಜೀವನ ಹೇಗೆ ಅನ್ನೋ ಪ್ರಶ್ನೆಗೆ, ಜನರಿಗೆ ಸಹಾಯ ಮಾಡಬೇಕು ಅಷ್ಟೇ. ದುಡಿದ ಹಣವನ್ನು ಹಂಚುತ್ತಾ ಹೋಗುತ್ತೇನೆ ಎಂದಿರುವ ಹುಚ್ಚ ವೆಂಕಟ್‌ ಇತ್ತೀಚೆಗೆ ಆಶ್ರಮವೊಂದಕ್ಕೆ ತೆರಳಿ ತಮ್ಮ ಜೇಬಿನಲ್ಲಿದ್ದ ಎಲ್ಲಾ 2 ಸಾವಿರ ರೂಪಾಯಿ ಹಣವನ್ನು ಅಲ್ಲಿರುವವರಿಗೆ ದಾನ ಮಾಡಿದ್ದಾರೆ. ನನಗೆ ಅಂತಾ ಯಾವ ಆಸ್ತಿಯೂ ಇಲ್ಲ. ನನಗೆ ಆ ಆಸೆಯೂ ಇಲ್ಲ. ಅದನ್ನೆಲ್ಲಾ ಇಟ್ಕೊಂಡು ಏನು ಮಾಡೋದು? ಎಂದು ಹೇಳಿದ್ದಾರೆ.

ಸ್ವಾಭಿಮಾನ ಬಿಡದ ಹುಚ್ಚ ವೆಂಕಟ್‌

ಅಂದಾಜು ಒಂದು ಗಂಟೆಯ ಸಂದರ್ಶನದಲ್ಲಿ ಸಂದರ್ಶಕ ಹರೀಶ್‌ ನಾಗರಾಜ್‌ ಅವರು ಹಲವು ಬಾರಿ ನಿಮಗೆ ಹಣದ ಅಗತ್ಯ ಇದ್ಯಾ? ಎಂದು ಪ್ರಶ್ನೆ ಮಾಡುತ್ತಾರೆ.ಹಣದ ಸಮಸ್ಯೆ ಇರೋದು ನೇರವಾಗಿ ಕಾಣುತ್ತಿದ್ದರೂ, ಹುಚ್ಚ ವೆಂಕಟ್‌ ಎಲ್ಲೂ ಕೂಡ ತಮ್ಮ ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ. ನನಗೆ ಹಣ ಬೇಡ. ಜನರು ಕೊಟ್ಟಿರುವ ಪ್ರೀತಿ, ಕಣ್ಣೀರೇ ಸಾಕು. ಅದರಲ್ಲೇ ಬದುಕಿದ್ದೇನೆ ಎಂದು ಹೇಳಿದ್ದಾರೆ. ಮದ್ಯಪಾನವನ್ನೂ ಕೂಡ ಬಿಟ್ಟಿದ್ದೇನೆ. ಮೊದಲೆಲ್ಲಾ ಸಿಕ್ಕಾಪಟ್ಟೆ ಮದ್ಯ ಸೇವಿಸುತ್ತಿದ್ದೆ. ಈಗ ಇಲ್ಲ. ಸಿಗರೇಟ್‌ ಕೂಡ ಸೇದುತ್ತಿಲ್ಲ. ಡ್ರಿಂಕ್ಸ್‌ ಜೊತೆ ಸಿಗರೇಟ್‌ ಸೇಡಬೇಡಿ. ಆರೋಗ್ಯ ಹಾಳಾಗುತ್ತೆ.

ನಟಿ ಶಶಿಕಲಾ ಅವರ ಆಶ್ರಮಕ್ಕೆ ಭೇಟಿ ನೀಡಿದ್ದ ಹುಚ್ಚ ವೆಂಕಟ್‌

ಇತ್ತೀಚೆಗೆ ನಟಿ ಶಶಿಕಲಾ ಅವರ ಆಶ್ರಮಕ್ಕೆ ಭೇಟಿ ನೀಡಿದ್ದ ಹುಚ್ಚ ವೆಂಕಟ್‌ ಅಲ್ಲಿ 2 ಸಾವಿರ ದಾನ ಮಾಡಿದ್ದರು. ಈ ವೇಳೆ ಕೇವಲ 2 ಸಾವಿರ ಹಣ ನೀಡಿದ್ದಕ್ಕೆ ಬೇಸರವಾಗಿ ಕಣ್ಣೀರಿಟ್ಟಿದ್ದರು.