ಬಹುಕಾಲದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಹುಚ್ಚ ವೆಂಕಟ್ ತಮ್ಮ ಈಗಿನ ಕಷ್ಟದ ಜೀವನದ ಬಗ್ಗೆ ಮಾತನಾಡಿದ್ದಾರೆ. ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿದ್ದು, ಆಪರೇಷನ್‌ಗೆ ಹಣವಿಲ್ಲದಿದ್ದರೂ ಜನರ ಬಳಿ ಸಹಾಯ ಕೇಳುವುದಿಲ್ಲ ಎಂದಿದ್ದಾರೆ.
ಬೆಂಗಳೂರು (ಡಿ.3): ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಹುಚ್ಚ ವೆಂಕಟ್ (Controversial Kannada actor Huccha Venkat) ಬಹುದಿನಗಳ ಬಳಿಕ ಈಗ ಜನರ ಮುಂದೆ ಬಂದಿದ್ದಾರೆ. ಒಂದು ಕಾಲದಲ್ಲಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಸಿನಿಮಾ ಮಾಡಿದ್ದ ಹುಚ್ಚ ವೆಂಕಟ್ ಇಂದು ಅಕ್ಷರಶಃ ಬೀದಿಯಲ್ಲಿ ನಿಂತಿದ್ದಾರೆ. ಆದರೆ, ಅಕ್ಕ-ಭಾವನ ನೆರವಿನಿಂದ ತಲೆಯ ಮೇಲೆ ಒಂದು ಸೂರು ಪಡೆದುಕೊಂಡಿರುವ ಹುಚ್ಚ ವೆಂಕಟ್ ಜೀವನದಲ್ಲಿ ಈಗ ಆಗಬಾರದ್ದೆಲ್ಲಾ ಆಗಿ ಹೋಗಿದೆ. ಕೆಲ ವರ್ಷಗಳ ಹಿಂದೆ ಅವರು ಆಡುತ್ತಿದ್ದ ಮಾತಿನ ಗಡಸುತನ ಈಗಿಲ್ಲ. ಆದರೆ, ಅವರ ವಿಚಾರಗಳು ಮಾತ್ರ ಅವರಿಂದ ಮರೆಯಾಗಿಲ್ಲ. ಆದರೆ, ತಣ್ಣಗಾಗಿದ್ದಾರೆ. ಅದಕ್ಕೆ ಕಾರಣವೂ ಇದೆ. ಅವರ ಒಂದು ಕಣ್ಣಿಗೆ ಪೊರೆ ಬಂದಿದೆ. ದೃಷ್ಟಿ ಮಂಜಾಗಿದೆ.
ಪತ್ರಕರ್ತ ಹರೀಶ್ ನಾಗರಾಜ್ ಅವರ ನ್ಯೂಸೋನ್ಯೂಸು ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಹುಚ್ಚ ವೆಂಕಟ್‌ಗೆ ಕಣ್ಣಿನ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದರು.
ಕಣ್ಣಿಗೆ ಆಗಿದ್ದೇನು ಅನ್ನೋ ಪ್ರಶ್ನೆಗೆ, 'ಕಣ್ಣಿಗೆ ಪೊರೆ ಬಂದಿದೆ. ಅದಕ್ಕೆ ಆಪರೇಷನ್ ಮಾಡಿಸಬೇಕು ಅಂತಾ ಹೇಳಿದ್ದಾರೆ. ಚಿಕಿತ್ಸೆ ಮಾಡುತ್ತಾ ಇದ್ದೇನೆ. ಮುಂದಿನ ತಿಂಗಳ ಹಾಗೆ ಆಪರೇಷನ್ ಮಾಡಿಸಬೇಕು. 57 ಸಾವಿರ ಖರ್ಚಾಗಲಿದೆ ಅಂತಾ ಹೇಳಿದ್ದಾರೆ' ಎಂದರು. ನಿಮ್ಮಲ್ಲಿ ಹಣ ಇದ್ಯಾ ಎನ್ನುವ ಪ್ರಶ್ನೆಗೆ, 'ಇಲ್ಲ ಹಣ.ಆದ್ರೆ ಅಡ್ಜಸ್ಟ್ ಮಾಡುತ್ತಾ ಇದ್ದೇನೆ. ಆದರೆ ಜನರ ಹತ್ತಿರ ಮಾತ್ರ ಹಣ ಕೇಳೋದಿಲ್ಲ. ಜನ ನನಗೆ ಪ್ರೀತಿ, ಕಣ್ಣೀರು ಕೊಡ್ತಾ ಇದ್ದಾರೆ. ಅಷ್ಟೇ ಸಾಕು. ನಿಮ್ಮ ಹುಚ್ಚ ವೆಂಕಟ್ ನಿಮ್ಮಿಂದ ಬಯಸೋದು ಅಷ್ಟೇ. ಸಾಧ್ಯವಾದರೆ ಬೇರೆಯವರಿಗೆ ಸಹಾಯ ಮಾಡಿ. ನನಗೆ ಸಹಾಯ ಬೇಡ. ನಾನಿ ತಿನ್ನೋದು ಒಂದು ಹೊತ್ತಿನ ಊಟ ಮಾತ್ರ. ಬೆಳಗ್ಗೆ ತಿಂಡಿ ತಿನ್ನಲ್ಲ, ಮಧ್ಯಾಹ್ನ ಊಟ ಮಾಡೋದಿಲ್ಲ. ಇದು ನನಗೆ ಮೊದಲಿನಿಂದಲೂ ಇರುವ ಅಭ್ಯಾಸ' ಎಂದು ಹೇಳಿದ್ದಾರೆ.
ನಾನು ಮನೆ ಬಿಟ್ಟು ಹೊರಹೋದ ಬಳಿಕ ಇದರ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇನೆ. ಪ್ರತಿ ದಿನ ರಾತ್ರಿ ಮಾತ್ರ ಊಟ ಮಾಡೋದು. ಆದ್ರೆ ದಿನಕ್ಕೆ 20-30 ಗ್ಲಾಸ್ ಟೀ ಕುಡೀತಿನಿ. ಇದು ಅಮ್ಮನಿಂದ ಬಂದ ಅಭ್ಯಾಸ. ನನ್ನ ತಾಯಿ ಕೂಡ ಟೀ ತುಂಬಾ ಕುಡಿಯೋರು ಎಂದು ಹೇಳಿದ್ದಾರೆ.
ಬ್ಯಾಂಕ್ ಅಕೌಂಟ್‌ನಲ್ಲಿರೋದು 6 ರೂಪಾಯಿ 56 ಪೈಸೆ!
35 ವರ್ಷದ ಹುಚ್ಚ ವೆಂಕಟ್ ಸದ್ಯ ಅಕ್ಕ-ಭಾವನ ಮನೆಯಲ್ಲಿದ್ದಾರೆ. ಎಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಹೀಗಿರುವ ಹುಚ್ಚ ವೆಂಕಟ್ ಇತ್ತೀಚಿಗೆ ಆಶ್ರಮವೊಂದಕ್ಕೆ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿ 2 ಸಾವಿರ ರೂಪಾಯಿ ದಾನ ಮಾಡಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದಾಗ, 'ನಾನು ಬರೀ 2 ಸಾವಿರ ಕೊಟ್ಟೆ ಅಂತಾ ಯಾರೂ ಕೂಡ ಅಂದುಕೊಳ್ಳಬಾರದು. ನನ್ನ ಬಳಿ ಹಣವಿಲ್ಲ' ಎಂದು ಹೇಳಿದ್ದಲ್ಲದೆ, ತಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಇರೋ ಹಣವನ್ನೂ ಓದು ಹೇಳಿ ಅಂತಾ ಮೊಬೈಲ್ ನೀಡಿದರು. ಅವರ ಬ್ಯಾಂಕ್ ಅಕೌಂಟ್‌ನಲ್ಲಿ 6 ರೂಪಾಯಿ 56 ಪೈಸೆ ಹಣವಿತ್ತು.
ಕೆಲವೊಂದು ಶಾರ್ಟ್ ಮೂವಿಗಳನ್ನು ಮಾಡುತ್ತಿದ್ದೇನೆ. ಕಾಲೇಜು ಸ್ಟೂಡೆಂಟ್‌ಗಳ ಶಾರ್ಟ್ ಮೂವಿಗಳಲ್ಲಿ ಮಾಡುತ್ತಿದ್ದೇನೆ. ಅವರು 100 ರೂಪಾಯಿ ಕೊಟ್ರೂ ನಾನು ತೆಗೆದುಕೊಳ್ಳುತ್ತೇನೆ. ಆದರೆ, ನೀವು ಮಾಡುವ ಸಿನಿಮಾದಲ್ಲಿ ಒಂದು ಸಂದೇಶ ಇರಬೇಕು. ನಾನು ನಟಿಸೋಕೆ ತಯಾರು ಎಂದು ಹೇಳಿದ್ದಾರೆ.


