ಬಿಗ್ಬಾಸ್ 12ರ ಗ್ರ್ಯಾಂಡ್ ಫಿನಾಲೆ ಇದೇ 18ರಂದು ನಡೆಯಲಿದ್ದು, ಗಿಲ್ಲಿ ನಟ, ಅಶ್ವಿನಿ ಗೌಡ ಸೇರಿದಂತೆ ಆರು ಮಂದಿ ಸ್ಪರ್ಧಿಗಳಿದ್ದಾರೆ. ವೀಕ್ಷಕರ ಮತಗಳ ಆಧಾರದ ಮೇಲೆ ವಿನ್ನರ್ ನಿರ್ಧಾರವಾಗಲಿದ್ದು, ಜಿಯೋ ಹಾಟ್ಸ್ಟಾರ್ ಮೂಲಕ ಹೇಗೆ, ಯಾವಾಗ ವೋಟ್ ಹಾಕ್ಬೇಕು? ಇಲ್ಲಿದೆ ಡಿಟೇಲ್ಸ್
ಬಿಗ್ಬಾಸ್ 12 (Bigg Boss 12) ಗ್ರ್ಯಾಂಡ್ ಫಿನಾಲೆ ಇದೇ 18ರಂದು ನಡೆಯಲಿದೆ. ಯಾರು ವಿನ್ ಆಗುತ್ತಾರೆ ಎಂದು ತಿಳಿಯಲು ಇನ್ನೇನು ಕೆಲವೇ ಕೆಲವು ಗಂಟೆಗಳು ಬಾಕಿ ಇವೆ. ಇದಾಗಲೇ ತಮ್ಮ ನೆಚ್ಚಿನ ಸ್ಪರ್ಧಿ ವಿನ್ ಆಗಬೇಕೆಂದು, ಅವರ ಅಭಿಮಾನಿಗಳು ಸಾಕಷ್ಟು ರೀತಿಯಲ್ಲಿ ಕೊನೆಯ ಹಂತದ ಪ್ರಚಾರ ನಡೆಸುತ್ತಿದ್ದಾರೆ. ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರ ನಡುವೆ ಸಕತ್ ಪೈಪೋಟಿ ಕೂಡ ಇದೆ. ಈ ಬಾರಿ ಹೆಣ್ಣೊಬ್ಬಳು ಗೆಲ್ಲುವುದು ಎಂದು ಭವಿಷ್ಯ ನುಡಿಯಲಾಗಿದೆ. ಆದರೆ ಅಭಿಮಾನಿಗಳ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಗಿಲ್ಲಿ ನಟನೇ ವಿನ್ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯವಾಗಿದೆ.
ವೋಟ್ ಮೇಲೆ ಸ್ಪರ್ಧಿಗಳ ಹಣೆಬರಹ
ಕೊನೆಯ ಕ್ಷಣದವರೆಗೂ ಹೀಗೆಯೇ ಎಂದು ಹೇಳಲಾಗದು. ಬಿಗ್ಬಾಸ್ನ ಲೆಕ್ಕಾಚಾರವೂ ಬೇರೆಯದ್ದೇ ಇರಬಹುದು. ಅದೇನೇ ಇದ್ದರೂ ಸದ್ಯ ಬಿಗ್ಬಾಸ್ ಹೇಳಿರುವ ಪ್ರಕಾರ ಹೋಗುವುದಾದರೆ, ವೀಕ್ಷಕರ ಮತದ ಲೆಕ್ಕಚಾರಾದ ಆಧಾರದ ಮೇಲೆ ವಿನ್ನರ್ ಘೋಷಿಸಲಾಗುತ್ತದೆ ಎನ್ನುವುದು. ಆದ್ದರಿಂದ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಎನ್ನುವ ನಿಮ್ಮ ವೋಟಿಂಗ್ ಆಧಾರದ ಮೇಲೆ ಸ್ಪರ್ಧಿಗಳ ಹಣೆಬರಹ ನಿಗದಿಯಾಗುತ್ತದೆ ಎಂದು ಸದ್ಯ ಹೇಳಲಾಗುತ್ತಿದೆ. ಹಾಗಿದ್ದರೆ, ವೋಟಿಂಗ್ ಲೈನ್ ಎಲ್ಲಿಯವರೆಗೆ ಇರುತ್ತೆ? ನೀವು ಹೇಗೆ ವೋಟ್ ಮಾಡಬಹುದು ಎಂಬಿತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
99 ಮತ ಹಾಕಲು ಅವಕಾಶ
ಸದ್ಯ ಬಿಗ್ಬಾಸ್ನ ಫಿನಾಲೆಯಲ್ಲಿ ಆರು ಮಂದಿ ಇದ್ದಾರೆ. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ರಘು ಮತ್ತು ಧನುಷ್ ಫಿನಾಲೆಯಲ್ಲಿ ಇದ್ದು, ಒಬ್ಬರು ವಿನ್ನರ್, ಇನ್ನಿಬ್ಬರು ರನ್ನರ್ಸ್ ಅಪ್ ಆಗಲಿದ್ದಾರೆ (Bigg Boss Kannada 12 winner), ವಿನ್ನರ್ಗೆ 50 ಲಕ್ಷ ರೂಪಾಯಿ ಬಹುಮಾನದ ಜೊತೆ, ಇನ್ನೂ ಹಲವು ಉಡುಗೊರೆಗಳು ಸಿಗಲಿವೆ. ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಲು ಜಿಯೋ ಹಾಟ್ಸ್ಟಾರ್ ಆ್ಯಪ್ ಬಳಸಬೇಕಿದೆ. ಇದರ ಮೂಲಕ ಮತ ಹಾಕಬಹುದು. ಇದಾಗಲೇ ವೋಟಿಂಗ್ ಲೈನ್ ಆರಂಭವಾಗಿದೆ. ಪ್ರತಿ ಖಾತೆಗೆ 99 ಮತ ಹಾಕುವ ಅವಕಾಶವನ್ನು ಬಿಗ್ಬಾಸ್ ನೀಡಿದೆ. ನೀವು ಒಬ್ಬರಿಗೇ 99 ವೋಟ್ ಹಾಕಬಹುದು, ಇಲ್ಲವೇ ಬೇರೆ ಬೇರೆಯವರಿಗೆ ಸೇರಿ 99 ಹಾಕಬಹುದು. ಒಮ್ಮೆ ಹಾಕಿದ ವೋಟ್ ಮತ್ತೆ ಅಯ್ಯೋ ಇವರಿಗೆ ಬೇಡವಾಗಿತ್ತು ಎಂದರೆ ಹಿಂದಕ್ಕೆ ಪಡೆಯುವ ಅವಕಾಶ ಇರುವುದಿಲ್ಲ.
ಎಲ್ಲಿಯವರೆಗೆ ವೋಟ್ ಹಾಕ್ಬೋದು?
ಇಲ್ಲಿ ಒಂದು ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು. ಏಕೆಂದರೆ ಈ ವೋಟಿಂಗ್ ಲೈನ್ ಆರಂಭವಾಗಿದ್ದು ಇದೇ 14ರಿಂದ. ಅದಕ್ಕೂ ಮುನ್ನ ನೀವೇನಾದರೂ ಮತ ಚಲಾಯಿಸಿದ್ದರೆ, ಅದು ಮಿಡ್ವೀಕ್ ಎಲಿಮಿನೇಷನ್ನಲ್ಲಿ ಮುಗಿದು ಹೋಗಿದೆ. ಆದ್ದರಿಂದ ಗ್ರ್ಯಾಂಡ್ ಫಿನಾಲೆಯಲ್ಲಿ ಯಾರು ವಿನ್ ಆಗಬೇಕು ಎಂದು ನೀವು ಬಯಸುತ್ತೀರೋ, ಅವರಿಗೆ ವೋಟ್ ಹಾಕಲು 14ರ ನಂತರದ ವೋಟ್ ಗಣನೆಗೆ ಬರಲಿದೆ. ಈ ವೋಟಿಂಗ್ ಲೈನ್ ಜನವರಿ 18ರ ಬೆಳಿಗ್ಗೆ 10 ಗಂಟೆಯವರೆಗೆ ತೆರೆದಿರುತ್ತದೆ. ಬಿಗ್ಬಾಸ್ ಹೇಳಿರುವ ಪ್ರಕಾರ, ನಿಮ್ಮ ಈ ವೋಟ್ ಮೇಲೆ ವಿನ್ನರ್ ನಿರ್ಧಾರವಾಗುತ್ತದೆ.


