ಸೀರಿಯಲ್ ವೀಕ್ಷಕರಿಗೆ ಸಿಹಿ ಸುದ್ದಿ ಇದೆ. ಕೌಟುಂಬಿಕ ಹಾಗೂ ಭಾವನಾತ್ಮಕ ಸಂಬಂಧಗಳ ಅದ್ಭುತ ಧಾರಾವಾಗಿ ಗೌರಿಪುತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ರಾಮಾಚಾರಿ' ಖ್ಯಾತಿಯ ರಿತ್ವಿಕ್ ಕೃಪಾಕರ್, ಸ್ಯಾಂಡಲ್‌ವುಡ್ ಹಿರಿಯ ನಟಿ ಅನು ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರು (ನ.13) : ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಸದಾ ವಿಭಿನ್ನ ಹಾಗೂ ಭಾವನಾತ್ಮಕ ಕಥೆಗಳನ್ನು ಪರಿಚಯಿಸುತ್ತಾ ಬಂದಿರುವ ಜೀ ಕನ್ನಡ ವಾಹಿನಿ, ಇದೀಗ ಹೊಸ ಕೌಟುಂಬಿಕ ಧಾರಾವಾಹಿ ಗೌರಿಪುತ್ರ (Gowriputhra) ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಸ್ಯಾಂಡಲ್‌ವುಡ್ ಹಿರಿಯ ನಟಿ ಅನು ಪ್ರಭಾಕರ್ (Anu Prabhakar) ಬರೋಬ್ಬರಿ 10 ವರ್ಷಗಳ ಸುದೀರ್ಘ ವಿರಾಮದ ಬಳಿಕ ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಭರ್ಜರಿ ಕಂಬ್ಯಾಕ್ ಮಾಡುತ್ತಿದ್ದಾರೆ. ಇವರೊಂದಿಗೆ 'ರಾಮಾಚಾರಿ' ಖ್ಯಾತಿಯ ರಿತ್ವಿಕ್ ಕೃಪಾಕರ್ (Rithvik Krupakar) ಹಾಗೂ 'ಗಟ್ಟಿಮೇಳ' ಖ್ಯಾತಿಯ ಮಹತಿ ಭಟ್ (Mahathi Bhat) ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಇದೇ ನವೆಂಬರ್ 16ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ.

ತಾಯಿಗೆ ತವರು ಕೊಡಿಸುವ ಸಂಕಲ್ಪ ಹೊತ್ತ ಮಗನ ಕತೆ:

ತಮ್ಮ ತಾಯಿಗೆ ತಪ್ಪಿ ಹೋದ ತವರು ಮನೆಯನ್ನು ಮರಳಿ ಕೊಡಿಸಲು ಹೋರಾಡುವ ಮಗನ ಭಾವನಾತ್ಮಕ ಪಯಣವೇ ‘ಗೌರಿಪುತ್ರ’ ಧಾರಾವಾಹಿಯ ಮೂಲ ಕಥಾವಸ್ತು. ತಾಯಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಕಾರ್ತಿಕ್‌ಗೆ (ರಿತ್ವಿಕ್ ಕೃಪಾಕರ್) ತನ್ನ ಅಮ್ಮ ಗೌರಿಯೇ (ಅನು ಪ್ರಭಾಕರ್) ಪ್ರಪಂಚ. ಅಪ್ಪ, ಅಮ್ಮ, ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ ಹೀಗೆ ತುಂಬು ಕುಟುಂಬದ ಪ್ರೀತಿಯಲ್ಲಿ ಬೆಳೆದಿರುವ ಕಾರ್ತಿಕ್‌ಗೆ ತಾಯಿಯ ಸಂತೋಷವೇ ಮುಖ್ಯ.

ಗಟ್ಟಿಗಿತ್ತಿ ಗೌರಿಗೆ ತವರು ಮನೆ ನೋವು

ಗೌರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಸಕಲ ಐಶ್ವರ್ಯ, ಆಸ್ತಿ, ಅಂತಸ್ತು, ದೊಡ್ಡ ಕುಟುಂಬ ಹಾಗೂ ಹಲವು ಕಂಪನಿಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಗಟ್ಟಿಗಿತ್ತಿ ಆಕೆ. ಆದರೆ, ಪ್ರೀತಿಸಿ ಮದುವೆಯಾದ ಕಾರಣಕ್ಕೆ ತವರು ಮನೆಯವರಿಂದ ದೂರವಾಗಿರುವ ನೋವು ಆಕೆಯ ಮನಸ್ಸನ್ನು ಸದಾ ಕಾಡುತ್ತಿರುತ್ತದೆ. ಮದುವೆಯಾಗಿ ವರ್ಷಗಳೇ ಕಳೆದರೂ ತವರು ಮನೆ, ಅಣ್ಣನ ಪ್ರೀತಿ ಮತ್ತು ಒಡನಾಟವಿಲ್ಲದ ಕೊರಗು ಆಕೆಯನ್ನು ಒಳಗೊಳಗೇ ಕೊರೆಯುತ್ತಿರುತ್ತದೆ. ಹೆಣ್ಣೊಬ್ಬಳಿಗೆ ಜೀವನದಲ್ಲಿ ಎಲ್ಲವೂ ಇದ್ದರೂ, ತವರಿನ ಪ್ರೀತಿ ಇಲ್ಲದಿದ್ದಾಗ ಆಗುವ ಭಾವನಾತ್ಮಕ ತೊಳಲಾಟವನ್ನು ಈ ಧಾರಾವಾಹಿ ಮನಮುಟ್ಟುವಂತೆ ತೆರೆದಿಡಲಿದೆ.

ಕಾರ್ತಿಕ್ ಹಾದಿಗೆ ಎದುರಾಗಲಿದೆ ಮದುವೆ ಟರ್ನ್

ತಾಯಿಯ ಈ ಅಂತರಾಳದ ನೋವನ್ನು ಅರಿಯುವ ಮಗ ಕಾರ್ತಿಕ್, ಆಕೆಗೆ ಮತ್ತೆ ತವರು ಮನೆಯ ಸಂಬಂಧಗಳನ್ನು ಬೆಸೆದು ಕೊಡಬೇಕೆಂಬ ದೃಢ ಸಂಕಲ್ಪದೊಂದಿಗೆ ಹೊರಡುತ್ತಾನೆ. ಅಣ್ಣನ ಮಗಳೊಂದಿಗೆ ಮಗನ ಮದುವೆ ಮಾಡಿಸಿ ತವರಿನೊಂದಿಗೆ ಒಂದಾಗಬೇಕೆಂಬ ಆಸೆ ಗೌರಿಯದ್ದಾದರೆ, ಕಾರ್ತಿಕ್ ಬದುಕಿನಲ್ಲಿ 'ಮದುವೆ' ಎಂಬ ಅನಿರೀಕ್ಷಿತ ಕವಲುದಾರಿ (ಮಹತಿ ಭಟ್ ಪಾತ್ರ) ದೊಡ್ಡ ಸವಾಲಾಗಿ ಎದುರಾಗುತ್ತದೆ. ಈ ಎಲ್ಲಾ ಅಡ್ಡಿ-ಆತಂಕಗಳನ್ನು ಕಾರ್ತಿಕ್ ಹೇಗೆ ಮೆಟ್ಟಿ ನಿಲ್ಲುತ್ತಾನೆ? ತಾಯಿಯ ಬಹುದಿನಗಳ ಕನಸನ್ನು ನನಸು ಮಾಡಲು ಆತನಿಗೆ ಸಾಧ್ಯವಾಗುತ್ತದೆಯೇ? ಎಂಬುದೇ ಕುತೂಹಲಕಾರಿ ಘಟ್ಟ.

ದೊಡ್ಡ ತಾರಾಗಣ ಹಾಗೂ ಕೆ.ಎಸ್. ರಾಮ್‌ಜಿ ನಿರ್ದೇಶನ:

ಕಿರುತೆರೆಯಲ್ಲಿ ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕೆ.ಎಸ್. ರಾಮ್‌ಜಿ (K.S. Ramji) ಅವರು 'ಗೌರಿಪುತ್ರ' ಧಾರಾವಾಹಿಯ ನಿರ್ಮಾಣ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಅನು ಪ್ರಭಾಕರ್, ರಿತ್ವಿಕ್ ಕೃಪಾಕರ್ ಹಾಗೂ ಮಹತಿ ಭಟ್ ಜೊತೆಗೆ ಹಿರಿಯ ನಟರಾದ ರಮೇಶ್ ಭಟ್, ರಾಜೇಂದ್ರ ಕಾರಂತ್ ಸೇರಿದಂತೆ ರಂಗಭೂಮಿ ಮತ್ತು ಚಿತ್ರರಂಗದ ಪ್ರತಿಭಾವಂತ ಕಲಾವಿದರು ಈ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. 2006ರಲ್ಲಿ ಜೀ ಕನ್ನಡದ 'ಬಾಳೆ ಬಂಗಾರ' ಶೋ ಮೂಲಕ ಕಿರುತೆರೆ ಪಯಣ ಆರಂಭಿಸಿದ್ದ ಅನು ಪ್ರಭಾಕರ್, ಇದೀಗ 10 ವರ್ಷಗಳ ಬಳಿಕ ಮತ್ತೆ ಅದೇ ವಾಹಿನಿಯ ಮೂಲಕ ಗೌರಿಯಾಗಿ ಮನೆಮನ ತಲುಪಲು ಸಜ್ಜಾಗಿದ್ದಾರೆ.

ದೀಪಕ್ ಶ್ರೀರಾಮುಲು ಮಾತು:

ಹೊಸ ಧಾರಾವಾಹಿಯ ಕುರಿತು ಮಾತನಾಡಿರುವ ಜೀ ಕನ್ನಡ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು, “ಕೌಟುಂಬಿಕ ಕಥೆಗಳು ಯಾವಾಗಲೂ ಕನ್ನಡ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿರುತ್ತವೆ. ಸಂಬಂಧಗಳ ಬೆಸುಗೆಯಲ್ಲಿ ಪ್ರೇಕ್ಷಕರು ತಮ್ಮದೇ ಬದುಕಿನ ಪ್ರತಿಬಿಂಬವನ್ನು ಕಾಣುತ್ತಾರೆ. ‘ಗೌರಿಪುತ್ರ’ ತಾಯಿ ಮತ್ತು ಮಗನ ನಡುವಿನ ಅಪರೂಪದ ಬಾಂಧವ್ಯ ಹಾಗೂ ತಾಯಿಯ ಆಸೆ ಈಡೇರಿಸಲು ಮಗ ಪಡುವ ಪ್ರಯತ್ನದ ಭಾವನಾತ್ಮಕ ಕಥೆಯಾಗಿದೆ. ಈ ಕಥೆ ಕನ್ನಡಿಗರ ಮನ ಗೆಲ್ಲಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ” ಎಂದಿದ್ದಾರೆ.