ಬಿಗ್ ಬಾಸ್ ಸೀಸನ್ 12ರ ಫಿನಾಲೆ ಹಂತದಲ್ಲಿ, ಗಿಲ್ಲಿ ನಟ ಗೆಲ್ಲುವ ಹಾಟ್ ಫೇವರೀಟ್ ಆಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಅವರ ಅಭಿಮಾನ ಮುಗಿಲು ಮುಟ್ಟಿದ್ದು, ಒಂದು ವೇಳೆ ಗಿಲ್ಲಿ ಟ್ರೋಫಿ ಗೆಲ್ಲದಿದ್ದರೆ, ನಿರೂಪಕ ಕಿಚ್ಚ ಸುದೀಪ್ ಮಂಡ್ಯಕ್ಕೆ ಕಾಲಿಡಬಾರದು ಎಂದು ಸ್ಥಳೀಯ ಯುವಕರು ಎಚ್ಚರಿಕೆ ನೀಡಿದ್ದಾರೆ.
ಬಿಗ್ ಬಾಸ್ ಸೀಸನ್ 12 ಫಿನಾಲೆ ಕಾರ್ಯಕ್ರಮ ಈಗಾಗಲೇ ಆರಂಭವಾಗಿದ್ದು, ಯಾರು ವಿಜೇತರಾಗಲಿದ್ದಾರೆ ಎಂಬ ಕುತೂಹಲ ರಾಜ್ಯದ ಜನತೆಯಲ್ಲಿ ಮನೆಮಾಡಿದೆ. ಅದರಲ್ಲಿಯೂ ಭಾರೀ ಮತಗಳನ್ನು ಗಳಿಸಿದ ಗಿಲ್ಲಿ ನಟ ಗೆಲ್ಲುವ ಹಾಟ್ ಫೇವರೀಟ್ ಆಗಿದ್ದಾರೆ. ಆದರೆ, ಇದೀಗ ಮಂಡ್ಯ ಜಿಲ್ಲೆಯಲ್ಲಿ ಗಿಲ್ಲಿ ನಟನ ಕುರಿತಾಗಿ ಎಷ್ಟು ಅಭಿಮಾನ ಮುಗಿಲು ಮುಟ್ಟಿದೆ ಎಂದರೆ, ಒಂದು ವೇಳೆ ಬಿಗ್ ಬಾಸ್ ಟ್ರೋಫಿಯನ್ನು ಗಿಲ್ಲಿ ನಟ ಗೆಲ್ಲದಿದ್ದರೆ ಕಾರ್ಯಕ್ರಮದ ನಿರೂಪಕ ಹಾಗೂ ನಟ ಕಿಚ್ಚ ಸುದೀಪ್ ಅವರು ಮಂಡ್ಯ ಜಿಲ್ಲೆಗೆ ಕಾಲಿಡುವಂತಿಲ್ಲ ಎಂದು ಸ್ಥಳೀಯ ಯುವಕರು ಎಚ್ಚರಿಕೆ ನೀಡಿದ್ದಾರೆ.
ಅಂಬರೀಶ್ ಬಿಟ್ಟರೆ, ಗಿಲ್ಲಿಗೆ ದೊಡ್ಡ ಮಟ್ಟದ ಅಭಿಮಾನ
ಮಂಡ್ಯ ಜಿಲ್ಲೆಯಲ್ಲಿ ನಟ ಅಂಬರೀಶ್ ಅವರನ್ನು ಬಿಟ್ಟರೆ ಬೇರೆ ಯಾವ ನಟ ಅಥವಾ ನಟಿಯರಿಗೂ ಇಷ್ಟೊಂದು ದೊಡ್ಡ ಮಟ್ಟದ ಅಭಿಮಾನವನ್ನು ಪ್ರದರ್ಶನ ಮಾಡಿದ್ದು ನೋಡಿಲ್ಲ. ದರ್ಶನ್ ತೂಗುದೀಪ ಹಾಗೂ ಯಶ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪರವಾಗಿ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ಇದಕ್ಕೂ ಮುನ್ನ ಅಂಬರೀಶ್ ಅವರು ಮೃತಪಟ್ಟಾಗ ಮಂಡ್ಯದಲ್ಲಿಯೇ ಇಬ್ಬರೂ ಸ್ಟಾರ್ ನಟರು ಠಿಕಾಣಿ ಹೂಡಿ, ಅಂತ್ಯಕ್ರಿಯೆಗೆ ಹೆಗಲು ಕೊಟ್ಟಿದ್ದರು. ಆಗಲೂ ಇಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನ ವ್ಯಕ್ತವಾಗಿರಲಿಲ್ಲ.
ಶಾಸಕರಿಂದಲೇ ವೋಟು ಹಾಕಲು ಮನವಿ
ಇದೀಗ ಗಿಲ್ಲಿ ನಟ ಬಿಗ್ ಬಾಸ್ ಮನೆಯೊಳಗೆ ಹೋದಾಗಿನಿಂದ ಅವನ ಗೆಲುವಿಗಾಗಿ ಜಿಲ್ಲೆಯ ಜನರು ಭಾರೀ ಅಭಿಮಾನ ಪ್ರದರ್ಶನ ಮಾಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಫಿನಾಲೆ ವಾರ ಆರಂಭವಾಗುತ್ತಿದ್ದಂತೆ ಗಿಲ್ಲಿ ಪರವಾಗಿ ಜಿಯೋ ಹಾಟ್ ಸ್ಟಾರ್ ಆಪ್ ಮೂಲಕ ವೋಟ್ ಮಾಡುವುದಕ್ಕೆ ಭಾರೀ ದೊಡ್ಡ ಮಟ್ಟದ ಅಭಿಯಾನವನ್ನೇ ಆರಂಭಿಸಿದ್ದಾರೆ. ಸ್ವತಃ ಗಿಲ್ಲಿ ನಟ ಅವರ ಗ್ರಾಮ ದಡದನಪುರ ಬರುವ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಕೂಡ ಗಿಲ್ಲಿ ನಟ ಅವರಿಗೆ ಮತ ಹಾಕುವಂತೆ ಮನವಿ ಮಾಡಿದ್ದರು.
ಸರ್ಕಲ್‌ನಲ್ಲಿ ಟೆಂಟ್ ಹಾಕಿಕೊಂಡು ಗಿಲ್ಲಿಗೆ ವೋಟು ಹಾಕಿಸಿದ ಯುವಕರು
ಇದಾದ ನಂತರ ಎಲ್ಲೆಡೆ ಯಾವುದೇ ಪಕ್ಷ ಬೇಧವನ್ನು ಮರೆತು ಜನ ಹಳ್ಳಿ ಹಳ್ಳಿಗಳಲ್ಲಿ ಡಂಗೂರ ಸಾರುತ್ತಾ ಗಿಲ್ಲಿ ನಟನಿಗೆ ವೋಟು ಹಾಕುವಂತೆ ಮನವಿ ಮಾಡಲಾಗಿದೆ. ಇನ್ನು ಕೆಲವರು ದೇವಸ್ಥಾನ, ಶಾಲೆಗಳು ಹಾಗೂ ಗ್ರಾಮಗಳ ಪ್ರಮುಖ ಸರ್ಕಲ್‌ಗಳಲ್ಲಿ ಒಂದು ಟೆಂಟ್ ನಿರ್ಮಿಸಿಕೊಂಡು ಎಲ್ಲ ಗ್ರಾಮಸ್ಥರನ್ನು ಕರೆದು ಅವರ ಫೋನಿನಲ್ಲಿ ಜಿಯೋ ಹಾಟ್ ಸ್ಟಾರ್ ಆಪ್ ಡೌನ್‌ಲೋಡ್ ಮಾಡಿಕೊಂಡು ಗಿಲ್ಲಿ ನಟನಿಗೆ ವೋಟು ಹಾಕುವಂತೆ ಅಭಿಯಾನ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯ ಪ್ರತಿಯೊಬ್ಬ ಜನರೂ ಕೂಡ ಗಿಲ್ಲಿ ನಟನನ್ನು ಅತಿಹೆಚ್ಚು ವೋಟುಗಳಿಂದ ಗೆಲ್ಲಿಸಬೇಕು ಎಂದು ಟೊಂಕಕಟ್ಟಿ ನಿಂತುಕೊಂಡಿದ್ದಾರೆ.
ಗಿಲ್ಲಿ ಟ್ರೋಫಿ ಗೆಲ್ಲದಿದ್ದರೆ ಸುದೀಪ್ ಮಂಡ್ಯಕ್ಕೆ ಕಾಲಿಡುವಂತಿಲ್ಲ
ಮಂಡ್ಯದಲ್ಲಿ ಮೈಕ್ ಹಿಡಿದು ಗಿಲ್ಲಿ ಗೆಲುವಿನ ಬಗ್ಗೆ ಮಾತನಾಡಿಸಿದ ಖಾಸಗಿ ವಾಹಿನಿಯೊಂದರ ಮುಂದೆ, 'ಗಿಲ್ಲಿ ನಟ ಅವರು ಬಿಗ್ ಬಾಸ್ ಟ್ರೋಫಿಯನ್ನು ಗೆಲ್ಲಲಿಲ್ಲವೆಂದರೆ ಸುದೀಪ್ ಅವರು ಮಂಡ್ಯ ಜಿಲ್ಲೆಗೆ ಬರುವಂತಿಲ್ಲ. ಇದಂತೂ ಸತ್ಯ, ನನ್ನ ಅಭಿಪ್ರಾಯ ಸುದೀಪ್ ಮಂಡ್ಯಕ್ಕೆ ಕಾಲಿಡುವಂತಿಲ್ಲ' ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಇದು ಗಿಲ್ಲಿ ನಟನ ಮೇಲಿನ ಕುರುಡು ಅಭಿಮಾನ ಎಂದು ಕೆಲವರು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


