ಬಿಗ್ ಬಾಸ್ ಸೀಸನ್ 12ರ ಫಿನಾಲೆ ಹಿನ್ನೆಲೆಯಲ್ಲಿ, ಮಂಡ್ಯದ ಸ್ಪರ್ಧಿ ಗಿಲ್ಲಿ ಗೆಲುವಿಗಾಗಿ ಜಿಲ್ಲೆಯಾದ್ಯಂತ ಪ್ರಾರ್ಥನೆ ಮತ್ತು ಸಂಭ್ರಮ ಮನೆಮಾಡಿದೆ. ಪರಿಸರ ಸಂಸ್ಥೆಯು ಅನ್ನದಾನ ಹಮ್ಮಿಕೊಂಡರೆ, ಗಿಲ್ಲಿಯ ಹುಟ್ಟೂರು ದಡದಪುರದಲ್ಲಿ ಗೆಲುವಿನ ನಂತರದ ಅದ್ದೂರಿ ಮೆರವಣಿಗೆಗೆ ಸಿದ್ಧತೆಗಳು ನಡೆದಿವೆ.
ಮಂಡ್ಯ (ಜ.18): ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಸೀಸನ್ 12ರ ಮಹಾ ಸಮರ ಇಂದು ಅಂತ್ಯಗೊಳ್ಳಲಿದ್ದು, ಇಡೀ ಕರ್ನಾಟಕದ ಕಣ್ಣು ಈಗ ಫಿನಾಲೆ ಮೇಲಿದೆ. ಅದರಲ್ಲೂ ಮಂಡ್ಯದ ಹೆಮ್ಮೆಯ ಹುಡುಗ, 'ಗಿಲ್ಲಿ' ನಟನ ಗೆಲುವಿಗಾಗಿ ಜಿಲ್ಲೆಯಾದ್ಯಂತ ಭರ್ಜರಿ ಪ್ರಾರ್ಥನೆ ಮತ್ತು ಸಂಭ್ರಮ ಮನೆಮಾಡಿದೆ. ಇದಲ್ಲೆದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟಿರುವ ಮಮತೆಯ ಮಡಲು ಸಂಸ್ಥೆಯು ಗಿಲ್ಲಿ ನಟನ ಗೆಲುವುದಾಗಿ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಅನ್ನದಾನ ಸೇವೆ ಮಾಡಿದೆ.
ಗೆಲುವಿಗಾಗಿ ಮಮತೆಯ ಮಡಿಲ ಅನ್ನದಾಸೋಹ
ಗಿಲ್ಲಿಯ ಆಟಕ್ಕೆ ಮಾರುಹೋಗಿರುವ 'ಮಮತೆಯ ಮಡಿಲು' ಸೇವಾ ಸಂಸ್ಥೆಯು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ವಿಶೇಷವಾಗಿ ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಬಗ್ಗೆ ಮಾತನಾಡಿದ ಸಂಸ್ಥೆಯ ಸಂಸ್ಥಾಪಕಿ ಅರುಣಾ ಯೋಗೀಶ್ ಅವರು, "ಬಡ ಕುಟುಂಬದಲ್ಲಿ ಹುಟ್ಟಿದ ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಮೋಸ ಮಾಡದೆ, ನ್ಯಾಯಬದ್ಧವಾಗಿ ಆಟವಾಡಿದ್ದಾನೆ. ಮಂಡ್ಯದ ಪ್ರತಿಭೆ ಗೆದ್ದು ಬರಲಿ ಎಂಬ ಹಾರೈಕೆಯೊಂದಿಗೆ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನ ಮಹಿಳೆಯರ ಸಂಬಂಧಿಕರಿಗೆ ಹಾಗೂ ರೋಗಿಗಳ ಜೊತೆ ಬಂದವರಿಗೆ ಉಚಿತವಾಗಿ ಅನ್ನದಾನ ಮಾಡುತ್ತಿದ್ದೇವೆ' ಎಂದು ಹಾರೈಸಿದರು.
ಹುಟ್ಟೂರು ದಡದಪುರದಲ್ಲಿ ಹಬ್ಬದ ಸಂಭ್ರಮ
ಇತ್ತ ಗಿಲ್ಲಿಯ ಹುಟ್ಟೂರಾದ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಗ್ರಾಮದ ತುಂಬಾ ಗಿಲ್ಲಿಯ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಗಿಲ್ಲಿಯ ಫೇಮಸ್ ಡೈಲಾಗ್‌ಗಳನ್ನೇ ಬ್ಯಾನರ್‌ನಲ್ಲಿ ಬರೆಸಿರುವ ಗೆಳೆಯರು 'ಗೆದ್ದು ಬಾ ಗೆಳೆಯ' ಎಂದು ಶುಭ ಹಾರೈಸುತ್ತಿದ್ದಾರೆ. ಅಕ್ಕಪಕ್ಕದ ಊರಿನ ಜನರು ದಡದಪುರಕ್ಕೆ ತಂಡೋಪತಂಡವಾಗಿ ಬರುತ್ತಿದ್ದು, ಬಂದವರಿಗೆ ಗಿಲ್ಲಿ ಹಿತೈಷಿಗಳು ಬಾಳೆಹಣ್ಣು ನೀಡಿ ಸ್ವಾಗತಿಸುತ್ತಿದ್ದಾರೆ.
ಎತ್ತಿನಗಾಡಿ ಮೆರವಣಿಗೆಯ ಸಿದ್ಧತೆ
ಗ್ರಾಮಸ್ಥರ ಪ್ರಕಾರ, ಗಿಲ್ಲಿ ಈಗಾಗಲೇ ಜನರ ಮನಸ್ಸನ್ನು ಗೆದ್ದಾಗಿದೆ, ಅಧಿಕೃತ ಘೋಷಣೆಯೊಂದೇ ಬಾಕಿ. ಗಿಲ್ಲಿ ಗೆದ್ದು ಬಂದ ನಂತರ ಮದ್ದೂರಿನಿಂದ ದಡದಪುರದವರೆಗೆ ಅದ್ದೂರಿ ಎತ್ತಿನಗಾಡಿ ಮೆರವಣಿಗೆ ಮಾಡಲು ತಯಾರಿ ನಡೆದಿದೆ. 'ನಮ್ಮ ಊರಿನ ಬಡವರ ಮಗ ಇಷ್ಟು ಎತ್ತರಕ್ಕೆ ಬೆಳೆದಿರುವುದು ಹೆಮ್ಮೆ ತಂದಿದೆ. ಮುಂದಿನ ವಾರ ನಡೆಯಬೇಕಿದ್ದ ಸಿಡಿ ಹಬ್ಬವು ಗಿಲ್ಲಿ ಗೆದ್ದರೆ ನಾಳೆಯೇ ನಡೆಯಲಿದೆ' ಎಂದು ಗ್ರಾಮಸ್ಥರು ಘೋಷಣೆ ಕೂಗುತ್ತಿದ್ದಾರೆ.
ಸಿನಿಮಾ ರಂಗದಲ್ಲೂ ಗಿಲ್ಲಿ ಕ್ರೇಜ್
ಬಿಗ್ ಬಾಸ್ ಇತಿಹಾಸದಲ್ಲೇ ಗಿಲ್ಲಿಗೆ ಸಿಕ್ಕಿರುವ ಕ್ರೇಜ್ ಅಭೂತಪೂರ್ವ. ಆತ ಕೇವಲ ಟಿಆರ್‌ಪಿ ಕಿಂಗ್ ಮಾತ್ರವಲ್ಲ, ಈಗಾಗಲೇ ಹಲವು ನಿರ್ಮಾಪಕರು ಗಿಲ್ಲಿ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದಾರೆ. ಅದರಲ್ಲೂ ಗಿಲ್ಲಿ ಮತ್ತು ಕಾವ್ಯ ಜೋಡಿಯಾಗಿ ಒಂದು ಸಿನಿಮಾದಲ್ಲಿ ನಟಿಸಲಿ ಎನ್ನುವುದು ಅವರ ಅಭಿಮಾನಿಗಳ ಬಹುದೊಡ್ಡ ಆಸೆಯಾಗಿದೆ.


