ಬಿಗ್‌ಬಾಸ್‌ ಸೀಸನ್‌ 12ರ ವಿನ್ನರ್‌ ಗಿಲ್ಲಿ ನಟ, 'ಡೆವಿಲ್‌' ಸಿನಿಮಾ ಚಿತ್ರೀಕರಣದ ವೇಳೆ ನಟ ದರ್ಶನ್‌ ಜೊತೆಗಿನ ಅನುಭವ ಹಂಚಿಕೊಂಡಿದ್ದಾರೆ. ದರ್ಶನ್‌ ಅವರು ತಮ್ಮ ಕಾಮಿಡಿಯನ್ನು ಮೆಚ್ಚಿದ್ದನ್ನು ನೆನೆದ ಅವರು, ಬಿಗ್‌ಬಾಸ್‌ ಮನೆಯಲ್ಲಿ ತಮಗೆ ಬೆಂಬಲ ನೀಡಿದ ಸಹ ಸ್ಪರ್ಧಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಬಿಗ್‌ಬಾಸ್‌ ಸೀಸನ್‌ 12 ವಿನ್ನರ್‌ ಆಗಿರುವ ಗಿಲ್ಲಿ ನಟ, ಸದ್ಯ ತಮ್ಮ ಗೆಲುವಿನ ಬಗ್ಗೆ ವಿವಿಧ ಕಡೆ ಮಾತನಾಡುವುದರಲ್ಲೇ ಬ್ಯುಸಿ ಆಗಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಕಳೆದ ದಿನಗಳು, ವಿನ್ನರ್‌ ಆಗಿ ಬಂದ ಬಳಿಕ ಜನರ ಕ್ರೇಜ್‌ ಕಂಡು ಅವರು ಮೂಕವಿಸ್ಮಿತರಾಗಿದ್ದಾರೆ. ಇನ್ನು ಗಿಲ್ಲಿ ಬಿಗ್‌ಬಾಸ್‌ ಮನೆಯಲ್ಲಿದ್ದಾಗಲೇ ದರ್ಶನ್‌ ಜೊತೆ ಅವರು ನಟಿಸಿದ್ದ ಡೆವಿಲ್‌ ಸಿನಿಮಾ ರಿಲೀಸ್‌ ಆಗಿತ್ತು. ಬಿಗ್‌ಬಾಸ್‌ ಮನೆಯಲ್ಲೂ ಡೆವಿಲ್‌ ಸಿನಿಮಾದ ಬಗ್ಗೆ ಗಿಲ್ಲಿ ಒಮ್ಮೆ ಮಾತನಾಡಿದ್ದರು. ಇಂಟರ್ವಲ್‌ ಟೈಮ್‌ನಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದರು.

ಈಗ ಡೆವಿಲ್‌ ಸಿನಿಮಾ ಹಾಗೂ ದರ್ಶನ್‌ ಅವರ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ. ದರ್ಶನ್‌ ಅವರದ್ದು ತುಂಬಾನೆ ಸರಳ ಸ್ವಭಾವ ಎಂದು ಹೇಳಿದ್ದಾರೆ. 'ದರ್ಶನ್‌ ಅಣ್ಣನ ನಮ್ಮ ಡಿಬಾಸ್‌ನ ತುಂಬಾ ಹತ್ತಿರದಿಂದ ನೋಡಿದ್ದೆ. ಸಿನಿಮಾ ಸೆಟ್‌ನಲ್ಲಿದ್ದಾಗ ಅವರು ನನ್ನನ್ನು ಕರೆದು ಮಾತನಾಡಿಸಿದ್ದು ಇನ್ನೂ ನೆನಪಿದೆ. 'ಏಯ್‌ ಬರ್ರಿ ಇಲ್ಲಿ..' ಎಂದು ನನ್ನ ಕರೆದಿದ್ದರು. ಅವರು ಕರೆದಿದ್ದು ನನಗೇನಾ ಎಂದು ಶಾಕ್‌ ಕೂಡ ಆಗಿತ್ತು. ಪ್ರಾಪರ್ಟಿ ಕಾಮಿಡಿ ಸಖತ್‌ ಆಗಿ ಮಾಡ್ತೀರಿ. 'ಬನ್‌ ಮೇಲೆ ನೂರು ರೂಪಾಯಿ ಇಟ್ರೆ ಬನ್ನೂರು..' ಅಂತಾ ನಾನು ಮಾಡಿರೋ ಪ್ರಾಪರ್ಟಿ ಕಾಮಿಡಿಯನ್ನ ಅವರು ಮಾಡಿದ್ದರು. ಇನ್ನು ಕೇಳಿ ನನಗೆ ತಲೆಯೆಲ್ಲಾ ಕೆಟ್ಟುಹೋಗಿತ್ತು' ಎಂದು ಹೇಳಿದ್ದಾರೆ.

ನಾನು ಡೆವಿಲ್‌ ಸಿನಿಮಾಗೆ 5-6 ದಿನ ಕೆಲಸ ಮಾಡಿದ್ದೆ. ದರ್ಶನ್‌ ಅಣ್ಣ ನಾನು ಮಾಡಿರೋ ಕಾಮಿಡಿಯನ್ನು ನೋಡಿದ್ದಾರೆ ಅನ್ನೋದೇ ನನಗೆ ಖುಷಿಯಾಗಿತ್ತು. ಡೆವಿಲ್‌ ರಿಲೀಸ್‌ ಆದ ಟೈಮ್‌ನಲ್ಲಿ ನಾನೇನಾದರೂ ಹೊರಗಡೆ ಇದ್ದಿದ್ದರೆ ಖಂಡಿತಾ ಥಿಯೇಟರ್‌ನಲ್ಲಿ ನೋಡುತ್ತಿದ್ದೆ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಎಲ್ಲರಿಗೂ ಧನ್ಯವಾದ ಹೇಳಿದ ಗಿಲ್ಲಿ ನಟ

ಇನ್ನು ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಕೆಲವರು ಜೊತೆ ಬಹಳ ಕ್ಲೋಸ್‌ ಆಗಿದ್ದರು. ರಕ್ಷಿತಾ ಶೆಟ್ಟಿ, ರಜತ್‌, ರಘು ಹಾಗೂ ಕಾವ್ಯಾ. ಇವರೆಲ್ಲರಿಗೂ ವೇದಿಕೆ ಮೇಲೆಯೇ ಗಿಲ್ಲಿ ಧನ್ಯವಾದ ಹೇಳಿದ್ದಾರೆ. ‘ನನ್ನ ಜರ್ನಿಯಲ್ಲಿ ಹೊರಗೆ ಅಭಿಮಾನಿಗಳು ಹೇಗೆ ಬೆಂಬಲವಾಗಿ ನಿಂತರೋ ಮನೆ ಒಳಗೆ ರಘು ಅಣ್ಣ, ರಕ್ಷಿತಾ, ರಜತ್ ಹಾಗೂ ಕಾವ್ಯಾ ಬೆಂಬಲವಾಗಿ ನಿಂತರು. ಅವರಿಗೂ ಧನ್ಯವಾದ’ ಎಂದಿದ್ದಾರೆ.

ಗೆದ್ದ ಬಳಿಕ ವೇದಿಕೆಯಲ್ಲಿ ಗಿಲ್ಲಿ ನಟ, 'ಬಿಗ್‌ ಬಾಸ್‌ ಹೋಗಬೇಕಾದರೆ, ಕೆಲವು ಜನರ ಪ್ರೀತಿ ಸಂಪಾದಿಸಿದ್ದೆ, ಅವರಿಗೆ ಮೋಸ ಮಾಡಬಾರದು ಅಂದುಕೊಂಡಿದ್ದೆ. ಒಳಗಡೆ ವಿಡಿಯೊ ತೋರಿಸ್ತಾ ಇದ್ದರು. ಕಟೌಟ್‌ ಎಲ್ಲಾ ಹಾಕಿದ್ದರು. ಅದೆಲ್ಲ ನೋಡಿ ನನಗೆ ತುಂಬಾ ಸಂತೋಷವಾಯ್ತು. ನನಗೆ ನಂಬಲೂ ಆಗ್ತಾ ಇರಲಿಲ್ಲ. ಹಾಳಾದ್ದು ಅಳೋಣ ಅಂದ್ರೆ ನಂಗೆ ಅಳುನೂ ಬರಲ್ಲ.ಅದೆಲ್ಲ ನೋಡಿ ಕೈ ಹಿಂಡಿಕೊಂಡು ನೋಡ್ತಾ ಇದ್ದೆ, ನಂಬಲೇ ಆಗ್ತಾ ಇರಲಿಲ್ಲ. ದೇವರ ಆಶೀರ್ವಾದ ತುಂಬಾ ಜಾಸ್ತಿ ಸಿಕ್ಕಿದೆ. ಇಷ್ಟು ಜನ ಪ್ರೀತಿ ತೋರಿಸ್ತಾ ಇದ್ದಾರೆ, ಆ ಯೋಗ್ಯತೆ, ಅರ್ಹತೆ ನನಗೆ ಇದ್ಯಾ ಅನ್ನೋದು ಅನ್ನಿಸುತ್ತೆ..' ಎಂದು ಹೇಳಿದ್ದಾರೆ.

Scroll to load tweet…