ಮಂಡ್ಯದ ಹಳ್ಳಿ ಹೈದ ಗಿಲ್ಲಿ ನಟರಾಜ್, ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬಡತನದಿಂದ ಬಂದು, ತಮ್ಮ ಮುಗ್ಧತೆ ಮತ್ತು ಹಾಸ್ಯದಿಂದ ಜನರ ಮನಗೆದ್ದ ಇವರು, 50 ಲಕ್ಷ ನಗದು, ಕಾರು ಹಾಗೂ ಕಿಚ್ಚ ಸುದೀಪ್ ಅವರಿಂದ 10 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 12 ವಿನ್ನರ್ ಆದ ಗಿಲ್ಲಿ ನಟನಿಗೆ ರಾಜ್ಯಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಬರಿಗೈನಲ್ಲಿ ಬೆಂಗಳೂರಿಗೆ ಬಂದಿದ್ದ ಗಿಲ್ಲಿಗೆ ಇಂದು ರಾಜ್ಯದ ಗಲ್ಲಿ ಗಲ್ಲಿಯಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಬಿಗ್‌ಬಾಸ್ ಗೆದ್ದ ಬಳಿಕವೂ ಗಿಲ್ಲಿ ಆಡಿರುವ ಮಾತುಗಳು ಅವರ ವಿನಯತೆಗೆ ಸಾಕ್ಷಿಯಾಗಿ ನಿಂತಿದೆ.
"ಕೈಯಲ್ಲಿ ಕಾಸಿಲ್ಲ, ಕೆಲಸವೂ ಇಲ್ಲ" ಎಂದು ಭಾವುಕರಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದ ಹಳ್ಳಿ ಹೈದ ಗಿಲ್ಲಿ ನಟರಾಜ್, ಇಂದು ಇಡೀ ಕರ್ನಾಟಕವೇ ಹೆಮ್ಮೆ ಪಡುವಂತೆ ಸೀಸನ್ 12ರ ವಿನ್ನರ್ ಟ್ರೋಫಿ ಗೆದ್ದಿದ್ದಾರೆ. 23 ಸ್ಪರ್ಧಿಗಳನ್ನು ಹಿಂದಿಕ್ಕಿ ಅತ್ಯಧಿಕ ಮತಗಳೊಂದಿಗೆ ಜಯಭೇರಿ ಬಾರಿಸಿದ ಗಿಲ್ಲಿ, ಮಂಡ್ಯದ ಪುಟ್ಟ ಹಳ್ಳಿಯಿಂದ ಬಂದು ಇಂದು ಇತಿಹಾಸ ನಿರ್ಮಿಸಿದ್ದಾರೆ.
ಗಿಲ್ಲಿಯ ಅಸಲಿ ಹೆಸರು ನಟರಾಜ್. ಇವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದವರು. ತಂದೆ-ತಾಯಿ ಕಷ್ಟಪಟ್ಟು ದುಡಿಯುವ ರೈತ ಕುಟುಂಬದ ಹಿನ್ನೆಲೆ ಹೊಂದಿರುವ ನಟರಾಜ್, ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಐಟಿಐ ಕೋರ್ಸ್ ಮಾಡಿದ್ದರು. ಆದರೆ ಬಾಲ್ಯದಿಂದಲೂ ಇದ್ದ ನಟನೆಯ ಗೀತು ಅವರನ್ನು ಬಣ್ಣದ ಲೋಕಕ್ಕೆ ಎಳೆತಂದಿತ್ತು. ಕೆಲಸ ಹುಡುಕುತ್ತಾ ಬರಿಗೈಲಿ ಬೆಂಗಳೂರಿಗೆ ಬಂದ ಇವರು ಹಲವು ರಿಯಾಲಿಟಿ ಶೋಗಳಲ್ಲಿ ಸಣ್ಣಪುಟ್ಟ ಅವಕಾಶಗಳ ಮೂಲಕ ಗುರುತಿಸಿಕೊಂಡಿದ್ದರು.
ಗೆಲುವಿನ ಜೊತೆಗೆ ಸಿಕ್ಕ ಭರ್ಜರಿ ಬಹುಮಾನಗಳೇನು?
ಬಿಗ್ ಬಾಸ್ ವಿಜೇತರಾದ ಗಿಲ್ಲಿ ನಟರಾಜ್ ಅವರಿಗೆ ಕೇವಲ ಟ್ರೋಫಿ ಮಾತ್ರವಲ್ಲದೆ, ಬಹುಮಾನ ಕೂಡ ಲಭಿಸಿದೆ. ಬಿಗ್‌ಬಾಸ್ ವಿಜೇತರಾಗಿದ್ದಕ್ಕೆ 50 ಲಕ್ಷ ರೂಪಾಯಿ ಬಹುಮಾನ ದಕ್ಕಿದ್ದರೆ, ನಟ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಹಣವನ್ನು ಘೋಷಿಸಿದ್ದಾರೆ.ಅದರೊಂದಿಗೆ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರು ಕೂಡ ಸಿಕ್ಕಿದೆ.
ಟ್ಯಾಕ್ಸ್ ಕಡಿತದ ನಂತರ ಸಿಗುವ ಹಣವೆಷ್ಟು?
ಗಿಲ್ಲಿ ಗೆದ್ದ 50 ಲಕ್ಷ ರೂಪಾಯಿ ಬಹುಮಾನ ಮೊತ್ತಕ್ಕೆ ಭಾರತದಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 115BB ಅನ್ವಯಿಸುತ್ತದೆ. ಇದರ ಅನ್ವಯ ಯಾವುದೇ ರೀರಿಯ ಪ್ರಶಸ್ತಿ ಹಣಕ್ಕೆ ಶೇ. 30ರಷ್ಟು ತೆರಿಗೆ ವಿಧಿಸಲಾಗುತ್ತದೆ. ಅದರೊಂದಿಗೆ ಈ ಹಣಕ್ಕೆ 4% ಆರೋಗ್ಯ ಮತ್ತು ಶಿಕ್ಷಣ ಸೆಸ್ ಕೂಡ ಸೇರಿಸಲಾಗುತ್ತದೆ. ಇದೆಲ್ಲವನ್ನೂ ಕಳೆದು ಗಿಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣದಲ್ಲಿ 15 ಲಕ್ಷ ತೆರಿಗೆ ಹಾಗೂ 60 ಸಾವಿರ ಸೆಸ್ ಹಣ ಸೇರಿ 15.6 ಲಕ್ಷ ರೂಪಾಯಿ ಕಟ್ ಆಗುತ್ತದೆ. ಇದರ ಬಳಿಕ ಅವರಿಗೆ 34.4 ಲಕ್ಷ ರೂಪಾಯಿ ಹಣ ಸೇರಲಿದೆ. ಸುದೀಪ್ ಅವರು ಘೋಷಿಸಿದ 10 ಲಕ್ಷ ರೂಪಾಯಿಗೂ ಇದೇ ತೆರಿಗೆ ನಿಯಮಗಳು ಅನ್ವಯವಾಗಲಿವೆ.
ಬಿಗ್ ಬಾಸ್ ಆರಂಭದ ದಿನಗಳಲ್ಲಿ "ನನಗೆ ಬದುಕಲು ಬೇರೆ ದಾರಿಯಿಲ್ಲದೆ ಇಲ್ಲಿಗೆ ಬಂದೆ" ಎಂದು ನೇರವಾಗಿ ಹೇಳಿಕೊಂಡಿದ್ದ ಗಿಲ್ಲಿ, ನಂತರ ತಮ್ಮ ಕಾಮಿಡಿ ಹಾಗೂ ಮುಗ್ಧ ವರ್ತನೆಯಿಂದ ಜನರ ಪ್ರೀತಿ ಗಳಿಸಿದರು. ಮಂಡ್ಯ ಸೊಗಡಿನ ಅವರ ಮಾತುಗಳು ಕನ್ನಡಿಗರ ಮನಕ್ಕೆ ಹತ್ತಿರವಾದವು. ಕೊನೆಗೂ ಕರ್ನಾಟಕದ ಜನತೆ ತಮ್ಮ ವೋಟಿನ ಮೂಲಕ ಹಳ್ಳಿ ಹೈದನಿಗೆ ಬಿಗ್ ಬಾಸ್ ಪಟ್ಟ ಕಟ್ಟಿದ್ದಾರೆ.


