ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಶಿಶುಗಳು ಯಾರು ಎಂಬ ಕುತೂಹಲ ಅನೇಕರಿಗಿದೆ. ನಿರ್ದೇಶಕರು ಸಿಲಿಕಾನ್‌ನಿಂದ ಮಾಡಿದ ಕೃತಕ ಮಕ್ಕಳನ್ನು ಬಳಸುತ್ತಾರೆ. ಈ ಕೃತಕ ಶಿಶುಗಳು ಎಷ್ಟು ನೈಜವಾಗಿರುತ್ತವೆ ಎಂದರೆ, ಅವುಗಳನ್ನು ನಿಜವಾದ ಮಕ್ಕಳಿಂದ ಪ್ರತ್ಯೇಕಿಸುವುದು ಕಷ್ಟ.
ಸೀರಿಯಲ್ಗಳಲ್ಲಿ ಸಾಧಾರಣವಾಗಿ ಸ್ವಲ್ಪ ದೊಡ್ಡ ಮಗುವನ್ನು ತೋರಿಸುವಾಗ ಒಂದೊಂದು ದಿನ ಒಂದೊಂದು ಮಗು ಕಾಣಿಸುವುದನ್ನು ನೋಡಿರಬಹುದು. ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಕೂಡ ಆಗಿರುತ್ತಿತ್ತು. ಬಣ್ಣಗಳಲ್ಲಿ ವ್ಯತ್ಯಾಸ, ಕಿವಿ ಚುಚ್ಚುವಿಕೆಯಲ್ಲಿ ವ್ಯತ್ಯಾಸ... ಹೀಗೆ ಒಂದೊಂದು ದಿನ ಒಂದೊಂದು ಮಗುವನ್ನು ತರಲಾಗುತ್ತಿತ್ತು. ಆದರೆ, ಇದೇನು ಟ್ರೋಲ್ ಮಾಡುವ ವಿಷಯವಲ್ಲ. ಏಕೆಂದರೆ ಅಷ್ಟೊಂದು ಪ್ರಖರವಾಗಿರುವ ಕ್ಯಾಮೆರಾಗಳ ಲೈಟ್ಗೆ ಚಿಕ್ಕ ಮಕ್ಕಳ ಮುಖವನ್ನು ಒಡ್ಡಲು ಬಹುತೇಕ ಅಮ್ಮಂದಿರು ಒಪ್ಪುವುದಿಲ್ಲ. ತಮ್ಮ ಮಕ್ಕಳು ಹೇಗಾದ್ರೂ ಸೈ ಒಂದು ಸಲವಾದ್ರೂ ಟಿವಿಯಲ್ಲಿ ಕಾಣಿಸಿಕೊಂಡರೆ ಸಾಕು, ಮುಂದೆ ಆಗೋದನ್ನು ಆಮೇಲೆ ನೋಡಿಕೊಂಡರಾಯಿತು ಎಂದು ಕೆಲವರು ಮಾತ್ರ ತಮ್ಮ ಶಿಶುಗಳನ್ನು ಒಂದೆರಡು ಸೀನ್ಗಳಿಗೆ ಕೊಡುತ್ತಾರೆ ಬಿಟ್ಟರೆ, ಮಕ್ಕಳನ್ನು ಕೊಡುವ ಅಪ್ಪ-ಅಮ್ಮಂದಿರು ತುಂಬಾ ವಿರಳ.
ಸಿನಿಮಾ, ಸೀರಿಯಲ್ಗಳ ಕಂದಮ್ಮ
ಆದರೆ ಹುಟ್ಟಿದ ಮಗುವನ್ನು ಪದೇ ಪದೇ ತೋರಿಸುವ ಸಂದರ್ಭ ಕೆಲವು ಸಿನಿಮಾಗಳಲ್ಲಿಯೂ ಬರುತ್ತದೆ, ಹಲವು ಸೀರಿಯಲ್ಗಳಲ್ಲಿಯೂ ಬರುತ್ತದೆ. ಆ ಸಂದರ್ಭದಲ್ಲಂತೂ ತಮ್ಮ ಕಂದಮ್ಮಗಳನ್ನು ಯಾರೂ ಕೊಡಲಾರರು. ಆದರೆ ಶಿಶುಗಳು ಅನಿವಾರ್ಯವಾಗಿ ಇರುತ್ತವೆ. ಹಾಗೆಂದು ನಿರ್ದೇಶಕರು ಸುಮ್ಮನೇ ಇರಲು ಆಗುತ್ತದೆಯೆ? ಶಿಶುಗಳ ಬೇಕಾಗಿರೋ, ಅವೇ ಹೈಲೈಟ್ ಆಗಿರೋ ಸೀರಿಯಲ್, ಸಿನಿಮಾಗಳಲ್ಲಿ ಶಿಶುಗಳಂತೂ ಕಾಣಿಸುತ್ತವೆ. ಹಾಗಿದ್ರೆ ಅವು ಯಾರ ಮಕ್ಕಳು, ನಿರ್ದೇಶಕರು ಅದನ್ನು ಎಲ್ಲಿಂದ ತರ್ತಾರೆ ಎನ್ನುವುದು ಮಾತ್ರ ತುಂಬಾ ಇಂಟರೆಸ್ಟಿಂಗ್ ಆಗಿದೆ.
ಎಲ್ಲಿಂದ ಬರುತ್ತೇ ಮಗು?
ಇಲ್ಲಿ ಅದರ ವಿಡಿಯೋ ವೈರಲ್ ಆಗಿದೆ. ಅಂದಹಾಗೆ ಥೇಟ್ ಮನುಷ್ಯರಂತೆಯೇ ಕಾಣುವ ಈ ಕಂದಮ್ಮಗಳು ನಿಜವಾದ ಮನುಷ್ಯರು ಅಲ್ಲ, ಬದಲಿಗೆ ಸಿಲಿಕಾನ್‌ನಿಂದ ಮಾಡಲಾಗಿರುವ ಕೃತಕ ಶಿಶುಗಳು. ಇವುಗಳನ್ನು ನೈಜ ಶಿಶುವಿನಂತೆಯೇ ಸೃಷ್ಟಿ ಮಾಡಲಾಗುತ್ತದೆ. ಮೃದುವಾದ ಚರ್ಮ, ನಿಜವಾಗಿರುವ ಕೂದಲು ಕಾಣುವಂತೆಯೇ ಇವುಗಳನ್ನು ರಚಿಸಲಾಗುತ್ತದೆ. ನೀವು ಹತ್ತಿರದಿಂದ ನೋಡಿದರೂ ಅದು ಕೃತಕ ಮಗು ಎಂದು ಹೇಳುವುದು ಕಷ್ಟವೇ. ಆ ಮಗುವನ್ನು ತೋರಿಸಿದಾಗ ಅಳುವ ಬ್ಯಾಕ್ಗ್ರೌಂಡ್ ಸೌಂಡ್ ಕೊಟ್ಟರಂತೂ ಅದೇ ಮಗು ಅತ್ತಂತೆ ಕಾಣಿಸುತ್ತಿದೆ. ಕೃತಕ ಮಗುವಾಗಿರುವ ಕಾರಣ, ಅದರ ಮುಖವನ್ನು ಹೇಗೆ ಬೇಕಾದರೂ ಬದಲಿಸಿ ರೆಡಿ ಮಾಡಲಾಗುತ್ತದೆ.
ತಿಳಿಯೋದೇ ಕಷ್ಟ
ಅನಂತ್ಕುಮಾರ್ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಪ್ಲಾಸ್ಟಿಕ್ನಲ್ಲಿ ಸುತ್ತಿರೋ ಮಗುವಿನ ಮುಖ ತೋರಿಸಿದರಷ್ಟೇ ಇದು ಕೃತಕ ಮಗು ಎಂದುತಿಳಿಯುತ್ತದೆ. ಆದರೆ ಹಾಗೆಯೇ ಇದನ್ನು ನೋಡಿದರೆ, ಅದರಲ್ಲಿಯೂ ದೂರದಿಂದ ನೋಡಿದರಂತೂ ನೀವು ಹೇಳಲು ಸಾಧ್ಯವೇ ಇಲ್ಲ ಎನ್ನುವ ಹಾಗೆ ನಿಜವಾಗಿ ಇದು ಕಾಣಿಸುತ್ತದೆ. ಇಲ್ಲಿದೆ ನೋಡಿ ವಿಡಿಯೋ.


