೩೪ ವರ್ಷದ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ, ಕಡಿಮೆ ರಕ್ತದೊತ್ತಡದಿಂದಾಗಿ ನಿಧನರಾದರು. ಮದುವೆ ಸಮಾರಂಭದ ನಂತರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸಹ ಕಲಾವಿದರು, ನಟಿ ರಕ್ಷಿತಾ ಪ್ರೇಮ್ ಸೇರಿದಂತೆ ಅನೇಕರು ದುಃಖ ವ್ಯಕ್ತಪಡಿಸಿದ್ದಾರೆ. ರಾಕೇಶ್ 'ಕಾಂತಾರ' ಸಿನಿಮಾದಲ್ಲೂ ನಟಿಸಿದ್ದರು.

34 ವರ್ಷದ ರಾಕೇಶ್‌ ಪೂಜಾರಿ ಲೋ ಬಿಪಿ ಆಗಿ ನಿಧನರಾಗಿದ್ದಾರೆ ಎನ್ನಲಾಗಿದೆ. ಮೇ 12ರ ಬೆಳಗ್ಗೆ 1.30ಗೆ ರಾಕೇಶ್‌ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಒಂದು ಮದುವೆಯ ಆರತಕ್ಷತೆಯಲ್ಲಿ ಭಾಗಿಯಾದ ನಂತರದಲ್ಲಿ ರಾಕೇಶ್‌ ಅವರು, ಸುಸ್ತು ಎಂದು ಹೇಳಿದ್ದಾರೆ. ಆಸ್ಪತ್ರೆಗೆ ಸೇರಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ರಾಕೇಶ್‌ ಸಾವಿಗೆ ʼಕಾಮಿಡಿ ಕಿಲಾಡಿಗಳುʼ ಶೋ ಸ್ಪರ್ಧಿಗಳು, ನಟಿ ರಕ್ಷಿತಾ ಪ್ರೇಮ್‌ ಅವರು ಕಂಬನಿ ಮಿಡಿದಿದ್ದಾರೆ. 

ರಕ್ಷಿತಾ ಪ್ರೇಮ್‌ ಹೇಳಿದ್ದೇನು?
ನನ್ನ ಪ್ರೀತಿಯ ರಾಕೇಶ್. ಪ್ರೀತಿಯ, ತುಂಬ ಒಳ್ಳೆಯ ವ್ಯಕ್ತಿ. ನಮ್ಮ ರಾಕೇಶ್‌ ಮಿಸ್‌ ಯು ಮಗನೇ. ಹೃದಯವಂತ ರಾಕೇಶ್ ಜೊತೆ ಇನ್ನು ಮುಂದೆ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಕಾರ್ಯಕ್ರಮ, ರಾಕೇಶ್ ಯಾವಾಗಲೂ ಉಳಿದವರಿಗಿಂತ ಭಿನ್ನವಾಗಿ ನಿಲ್ಲುವ ಒಬ್ಬ ವ್ಯಕ್ತಿ.‌ ಅವನು ಅತ್ಯಂತ ಸುಂದರ ವ್ಯಕ್ತಿ , ಎಂತಹ ಪ್ರತಿಭೆ! ಕ್ಯಾಮೆರಾದ ಹೊರಗೆಯೂ ಸಹ ನನಗೆ ತಿಳಿದಿರುವ ಅತ್ಯಂತ ಪರಿಪೂರ್ಣ ವ್ಯಕ್ತಿ . ರಾಕೇಶ್ ನೀವು ಯಾವಾಗಲೂ ನಮ್ಮ ಹೃದಯದಲ್ಲಿ ವಾಸಿಸುತ್ತೀರಿ. ನಿಮ್ಮ ನಗು ನಿಮ್ಮ ತುಂಟತನ ಮತ್ತು ಮುಖ್ಯವಾಗಿ ನೀವು ನಮ್ಮೆಲ್ಲರ ಜೀವನದಲ್ಲಿ ತಂದ ಸಂತೋಷ ... ಧನ್ಯವಾದಗಳು. 

ಶಿವರಾಜ್‌ ಕೆ ಆರ್‌ಪೇಟೆ
ಶಿವರಾಜ್‌ ಕೆ ಆರ್‌ ಪೇಟೆ ಅವರು,”ನಿಜಕ್ಕೂ ನಮಗೆ ನಂಬಲಾಗುತ್ತಿಲ್ಲ. ಒಳ್ಳೆಯ ಮನುಷ್ಯನಿಗೆ ಏನಾಯ್ತು ಅಂತ ಶಾಕ್‌ ಆಗಿದೆ. ಯಾಕೆ? ಏನಾಗ್ತಿದೆ ಅಂತ ಅರ್ಥ ಆಗ್ತಿಲ್ಲ. ಚಿಕ್ಕ ವಯಸ್ಸು, ಇನ್ನೂ ಸಾಧನೆ ಮಾಡೋದಿತ್ತು. ರಂಗಭೂಮಿಯಲ್ಲಿಯೂ ಕೆಲಸ ಮಾಡಿದ್ದಾರೆ, ರಾಕೇಶ್‌ ಇಲ್ಲ ಅಂತ ಹೇಳೋಕೆ ಮನಸ್ಸು ಬರೋದಿಲ್ಲ. ಅಂಥ ವ್ಯಕ್ತಿತ್ವ ಇದು. ಎಲ್ಲರನ್ನು ಪ್ರೀತಿಸುತ್ತಿದ್ದ ರಾಕೇಶ್‌ ಕಂಡರೆ ಎಲ್ಲರಿಗೂ ಇಷ್ಟ. ನಮ್ಮ ತಂಡದಲ್ಲಿ ರಾಕೇಶ್‌ ಚಿಕ್ಕವರು. ಇಷ್ಟು ಬೇಗ ಕರೆಸಿಕೊಳ್ಳಬೇಕು ಅಂತಿದ್ರೆ ಇಷ್ಟು ಯಶಸ್ಸು ಯಾಕೆ ಕೊಡ್ತೀಯಾ ಎಂದು ದೇವರ ಬಳಿ ಕೇಳಬೇಕು ಅನಿಸ್ತಿದೆ” ಎಂದು ಮಾಧ್ಯಮವೊಂದರ ಜೊತೆ ಹೇಳಿದ್ದಾರೆ.


ಗೋವಿಂದೇ ಗೌಡ
“ರಾಕೇಶ್‌ ಒಳ್ಳೆಯ ನಟ ಎನ್ನೋದರ ಜೊತೆಗೆ ಒಳ್ಳೆಯ ಮಾನವೀಯ ವ್ಯಕ್ತಿ. ಸ್ವಲ್ಪ ದಿನಗಳ ಹಿಂದೆ ರಾಕೇಶ್‌ಗೆ ಅಪಘಾತ ಆಗಿತ್ತು. ಆಗ ನಾನು ಆಸ್ಪತ್ರೆಗೆ ಹೋಗಿ ಹುಷಾರ್‌ ಆಗಿರು ಅಂತ ಹೇಳಿ ಬಂದಿದ್ದೆ. ನನ್ನ ಮಗು ಯಾರ ಬಳಿಯೂ ಹೋಗುತ್ತಿರಲಿಲ್ಲ, ಆದರೆ ರಾಕೇಶ್‌ ಬಳಿ ತುಂಬ ಹೊತ್ತು ಆಟ ಆಡಿತ್ತು. ರಾಕೇಶ್‌ ತಾಯಿಗೆ ಇನ್ನೂ ವಿಷಯ ಹೇಳಿಲ್ಲ ಅಂತ ಹೇಳಿದ್ರು. ಈ ವಿಷಯವನ್ನು ಅವರು ಹೇಗೆ ಹೇಳ್ತಾರೋ ಏನೋ! ಈ ನೋವನ್ನು ಅವರಿಗೆ ತಡೆದುಕೊಳ್ಳೋಕೆ ಆಗತ್ತೋ ಇಲ್ವೋ ಗೊತ್ತಿಲ್ಲ. ತಂಗಿ ಮದುವೆಯಾದ್ಮೇಲೆ ನಾನು ಮದುವೆ ಆಗ್ತೀನಿ ಅಂತ ಹೇಳಿದ್ದ. ನಾನು ಇನ್ನೂ ಅವರ ಕುಟುಂಬದ ಜೊತೆ ಮಾತನಾಡಿಲ್ಲ. ಅವನಿಗೆ ಯಾವುದೇ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ಎಲ್ಲರಿಗೂ ಬೇಕಾದಂತಹ ವ್ಯಕ್ತಿ. ಮೂರು ವರ್ಷದ ಹಿಂದೆ ರಾಕೇಶ್‌ ತಂದೆ ಕೂಡ ಹೃದಯಾಘಾತದಿಂದ ನಿಧನರಾದರು. ಈ ಕುಟುಂಬಕ್ಕೆ ಮಗನೇ ಆಧಾರ ಆಗಿದ್ದನು” ಎಂದು ಗೋವಿಂದೇ ಗೌಡ ಅವರು ರಾಕೇಶ್‌ ಬಗ್ಗೆ ಮಾತನಾಡಿದ್ದರು. 

ಕಾಮಿಡಿ ಕಿಲಾಡಿಗಳು ನಯನಾ ಕೂಡ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದು, “ಇಷ್ಟು ಅವಸರ ಯಾಕೆ?” ಎಂದು ಪ್ರಶ್ನೆ ಮಾಡಿದ್ದಾರೆ.

ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ರಾಕೇಶ್‌ ಅವರು ರಿಷಬ್‌ ಶೆಟ್ಟಿಯ ʼಕಾಂತಾರ 1’ ಸಿನಿಮಾದಲ್ಲಿ ಕೂಡ ನಟಿಸಿದ್ದರು.