ಧಾರಾವಾಹಿಗಳು ಸಮಾಜದ ಮೇಲೆ ಬೀರುವ ಪ್ರಭಾವದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, 'ಬ್ರಹ್ಮಗಂಟು' ಸೀರಿಯಲ್‌ನ ದೃಶ್ಯವೊಂದು ತೀವ್ರ ಟೀಕೆಗೆ ಗುರಿಯಾಗಿದೆ. ಮಗನಿಗೆ ಉದ್ಯೋಗ ಕೊಡಿಸಲು ತಂದೆಯೊಬ್ಬ ತನ್ನ ಸಾವಿಗೆ ತಾನೇ ಸಂಚು ರೂಪಿಸುವ ದೃಶ್ಯ ಭಾರಿ ಟೀಕೆಗೆ ಗುರಿಯಾಗುತ್ತಿದೆ.
ಇಂದು ಸೀರಿಯಲ್ಗಳು ಕೇವಲ ಸೀರಿಯಲ್ ಆಗಿ ಉಳಿದಿಲ್ಲ. ಇದನ್ನು ತಮ್ಮ ಜೀವನದ ಭಾಗವೆಂದೇ ಬಹುದೊಡ್ಡ ವರ್ಗ ಅದರಲ್ಲಿಯೂ ಪೂರ್ತಿ ದಿನ ಸೀರಿಯಲ್ನಲ್ಲಿಯೇ ಮುಳುಗಿರುವ ಮಹಿಳೆಯರು ಅಂದುಕೊಳ್ಳುವುದು ಇದೆ. ಅದೆಷ್ಟೋ ಬಾರಿ ಧಾರಾವಾಹಿಗಳಲ್ಲಿನ ಪಾತ್ರಗಳನ್ನು ತಮ್ಮ ಮೈಮೇಲೆ ಆಹ್ವಾನಿಸಿಕೊಂಡವರಂತೆ ಅದನ್ನು ನೋಡುವುದೂ ಇದೆ. ಮನೆಹಾಳು ಧಾರಾವಾಹಿಗಳು ಎಂದು ಬೈದುಕೊಳ್ಳುತ್ತಲೇ ಒಂದೂ ದಿನವೂ ಬಿಡದೇ ಸೀರಿಯಲ್ಗಳನ್ನು ನೋಡುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ, ಬೆಳಿಗ್ಗೆಯಿಂದ ಸಂಜೆಯವರೆಗೂ ಸೀರಿಯಲ್ಗಳು ನಡೆಯುತ್ತಲೇ ಇರುತ್ತವೆ.
ಮೈಮೇಲೆ ಆಹ್ವಾನಿಸಿಕೊಳ್ಳುವ ವೀಕ್ಷಕರು
ಅತ್ತೆ-ಸೊಸೆ ಜಗಳ, ಮದುವೆಯಾದರೂ ಸಂಸಾರ ನಡೆಸದ ಜೋಡಿ, ಅದೇ ಎಣ್ಣೆ ಹಾಕಿ ಜಾರಿಸುವುದು, ಅಪಘಾತ ಮಾಡಿಸಿ ಸಾಯಿಸುವುದು, ಗರ್ಭಿಣಿಯಾಗಿದ್ದರೆ ಹಾಲು, ಜ್ಯೂಸಿನಲ್ಲಿ ಏನೋ ಬೆರೆಸಿ ಕೊಡುವುದು... ಇದೇ ರೀತಿ ಅಂದಿನಿಂದ ಇಂದಿನವರೆಗೂ ಒಂದೇ ಸಿದ್ಧಾಂತವನ್ನು ಹಲವು ಸೀರಿಯಲ್ಗಳಲ್ಲಿ ತೋರಿಸಿದರೂ, ಅದನ್ನು ಬೈದುಕೊಳ್ಳುತ್ತಲೇ ಎಂಜಾಯ್ ಮಾಡುವವರು ಎಷ್ಟು ಮಂದಿ ಇದ್ದಾರೆ ಎನ್ನುವುದು ಸೀರಿಯಲ್ಗಳ ಟಿಆರ್ಪಿ ನೋಡಿದರೆ ತಿಳಿಯುತ್ತದೆ. ಇದೇ ಕಾರಣಕ್ಕೆ ಧಾರಾವಾಹಿಗಳೂ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದರೂ, ವೀಕ್ಷಕರ ಮೇಲೆ ಕೆಟ್ಟ ಪ್ರಭಾವ ಬೀರುವ ದೃಶ್ಯಗಳು ಕಾಣಿಸುವುದು ಮಾತ್ರ ನಿಂತಿಲ್ಲ!
ಭಾರಿ ಟೀಕೆಗೆ ಸೀರಿಯಲ್
ಇದೀಗ ಬ್ರಹ್ಮಗಂಟು ಸೀರಿಯಲ್ (Brahmagantu Serial)ನಲ್ಲಿಯೂ ಇದೇ ರೀತಿ ಕೆಟ್ಟ ಪ್ರಭಾವ ಬೀರುವ ದೃಶ್ಯವೊಂದನ್ನು ತೋರಿಸಲಾಗಿದ್ದು, ಇದೀಗ ಭಾರಿ ಟೀಕೆಗೆ ಒಳಗಾಗುತ್ತಿದೆ. ಅಷ್ಟಕ್ಕೂ ಈ ಸೀರಿಯಲ್ನಲ್ಲಿ ಇದಾಗಲೇ ದೀಪಾ ಮತ್ತು ದಿಶಾ ಒಬ್ಬರೇ ಎನ್ನುವುದು ಗಂಡ ಸೇರಿದಂತೆ, ಅಪ್ಪ, ಅಣ್ಣ ಯಾರಿಗೂ ತಿಳಿಯದೇ ಇರುವುದು ಹಾಸ್ಯಾಸ್ಪದ ಎನ್ನಿಸಿದರೂ, ಇದು ಓಕೆ, ಏನೋ ಒಂಥರಾ ಮಜಾ ಕೊಡುತ್ತಿದೆ ಎಂದು ವೀಕ್ಷಕರು ನೋಡಿದ್ದರು. ಇದೇನೋ ಸರಿ. ಆದರೆ ಇದೀಗ ದೀಪಾಳ ಅಪ್ಪ, ನ್ಯಾಯಕ್ಕೆ ಇನ್ನೊಂದು ಹೆಸರು ಎಂದುಕೊಂಡಿರೋ ಪೊಲೀಸಪ್ಪ, ತನ್ನ ಮಗ ನರಸಿಂಹನಿಗಾಗಿ ತನ್ನ ಜೀವವನ್ನೇ ಬಲಿ ಕೊಡುವ ದೃಶ್ಯವೊಂದರ ಪ್ರೊಮೋ ರಿಲೀಸ್ ಆಗಿದೆ.
ಇದೆಂಥ ದೃಶ್ಯ?
ಮಗನಿಗೆ ಯಾವುದೇ ಕೆಲಸ ಸಿಗುತ್ತಿಲ್ಲ, ಆದ್ದರಿಂದ ತಾನು ಸತ್ತರೆ ತನ್ನ ಪೊಲೀಸ್ ಕೆಲಸ ಮಗನಿಗೆ ಕೊಡುತ್ತಾರೆ ಎಂದುಕೊಂಡ ತಾನೇ ಸಾಯಲು ಸಿದ್ಧನಾಗಿದ್ದಾನೆ ಪೊಲೀಸಪ್ಪ. ಹಾಗೆಯೇ ಸತ್ತರೆ ಕೆಲಸ ಸಿಗುವುದಿಲ್ಲ ಎಂದುಕೊಂಡು ಅಪಘಾತದಲ್ಲಿ ಸತ್ತಂತೆ ಬಿಂಬಿಸಲು, ತನ್ನ ಸಾವಿಗೆ ತಾನೇ ಸುಪಾರಿ ಕೊಟ್ಟುಕೊಂಡಿದ್ದಾನೆ! ನರಸಿಂಹನೇ ಓಡಿಸುತ್ತಿರುವ ಲಾರಿಗೆ ಅಡ್ಡಲಾಗಿ ಬಂದಿರೋ ಪೊಲೀಸಪ್ಪ ಲಾರಿಯ ಅಡಿಗೆ ಆಗಿದ್ದಾನೆ. ಅವನು ಸತ್ತನೋ, ಬದುಕಿದನೋ ಎನ್ನುವುದು ಮುಂದಿನ ಪ್ರಶ್ನೆ. ಆದರೆ, ಇಂಥ ದೃಶ್ಯಗಳು ಅದೆಷ್ಟು ಮಂದಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ತಾವೂ ಹೀಗೆಯೇ ಮಾಡಬಹುದಲ್ಲವಾ ಎನ್ನುವ ಯೋಚನೆ ಸೂಕ್ಷ್ಮ ಮನಸ್ಸಿನವರಿಗೆ ಬರಬಹುದು ಎನ್ನುವ ಕಲ್ಪನೆ ಇಟ್ಟುಕೊಂಡು ಇಂಥ ಅನಗತ್ಯ ದೃಶ್ಯಗಳನ್ನು ತೋರಿಸುವ ಮುನ್ನ ಯೋಚನೆ ಮಾಡಬೇಕು ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ!


