ಬಿಗ್‌ಬಾಸ್ ಖ್ಯಾತಿಯ ರಜತ್, ಮೈಸೂರಿನ ಪಾರಂಪರಿಕ ಕಟ್ಟಡದ ಮುಂದೆ ಸಿಗರೇಟ್ ಸೇದುತ್ತಾ ಫೋಟೋಶೂಟ್ ಮಾಡಿಸಿಕೊಂಡು ಹೊಸ ವಿವಾದ ಸೃಷ್ಟಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಕನ್ನಡಪರ ಸಂಘಟನೆಯೊಂದು ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಮೈಸೂರು (ಫೆ.05): ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್‌ಬಾಸ್' ಮೂಲಕ ಖ್ಯಾತಿ ಗಳಿಸಿದ್ದ ರಜತ್, ಇದೀಗ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈ ಹಿಂದೆ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿದ್ದ ರಜತ್, ಜೈಲಿನಿಂದ ಹೊರಬಂದರೂ ಬುದ್ಧಿ ಕಲಿತಂತಿಲ್ಲ. ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನ ಪಾರಂಪರಿಕ ಕಟ್ಟಡದ ಎದುರು ಸಿಗರೇಟ್ ಸೇದುತ್ತಾ ಫೋಟೋಶೂಟ್ ಮಾಡಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಕನ್ನಡಪರ ಸಂಘಟನೆಗಳು ಪೋಲಿಸ್ ಠಾಣೆಯ ಮೆಟ್ಟಿಲೇರಿವೆ.
ಏನಿದು ಹೊಸ ವಿವಾದ?
ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ (Old DC Office) ಒಂದು ಪಾರಂಪರಿಕ ಕಟ್ಟಡವಾಗಿದೆ. ಇಂತಹ ಐತಿಹಾಸಿಕ ಮಹತ್ವವುಳ್ಳ ಕಟ್ಟಡದ ಆವರಣದಲ್ಲಿ ರಜತ್ ಅವರು ಕಾರಿನಿಂದ ಇಳಿಯುತ್ತಾ, ಕೈಯಲ್ಲಿ ಸಿಗರೇಟ್ ಹಿಡಿದು ಹೊಗೆ ಬಿಡುತ್ತಾ 'ವಿಲನ್ ಲುಕ್'ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ವಿಡಿಯೋ ಮತ್ತು ಫೋಟೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದರೂ, ನಿಯಮಗಳನ್ನು ಗಾಳಿಗೆ ತೂರಿ ರಜತ್ ಅವರು ಶೋಕಿಗಾಗಿ ಈ ರೀತಿ ವರ್ತಿಸಿರುವುದು ನೆಟ್ಟಿಗರ ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸ್ ಠಾಣೆಗೆ ದೂರು
ರಜತ್ ಅವರ ಈ ಉದ್ಧಟತನದ ವಿರುದ್ಧ ಕರ್ನಾಟಕ ಸೇನಾಪಡೆ ಸಿಡಿದೆದ್ದಿದೆ. ಸಂಘಟನೆಯ ಮುಖ್ಯಸ್ಥ ತೇಜಸ್ ಲೋಕೇಶ್ ಗೌಡ ನೇತೃತ್ವದಲ್ಲಿ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. 'ಯುವಕರಿಗೆ ಮಾದರಿಯಾಗಬೇಕಾದವರು ಸಾರ್ವಜನಿಕ ಸ್ಥಳದಲ್ಲಿ, ಅದೂ ಪಾರಂಪರಿಕ ಕಟ್ಟಡದ ಮುಂದೆ ಸಿಗರೇಟ್ ಸೇದುತ್ತಾ ಪೋಸ್ ಕೊಡುವುದು ತಪ್ಪು. ಇವರನ್ನು ನೋಡಿ ಎಷ್ಟೋ ಯುವಕರು ದಾರಿ ತಪ್ಪುತ್ತಾರೆ ಮತ್ತು ಇವರನ್ನೇ ಅನುಕರಣೆ ಮಾಡುತ್ತಾರೆ. ಆದ್ದರಿಂದ ಕೂಡಲೇ ರಜತ್ ಅವರನ್ನು ಠಾಣೆಗೆ ಕರೆಸಿ, ಅವರಿಗೆ ಬುದ್ಧಿ ಹೇಳಬೇಕು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯಲಿಲ್ವಾ?
ರಜತ್ ಅವರಿಗೆ ವಿವಾದಗಳೇನು ಹೊಸದಲ್ಲ. ಈ ಹಿಂದೆ ಶೂಟಿಂಗ್ ಸೆಟ್ ಒಂದರಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಆ ಪ್ರಕರಣದಲ್ಲಿ ಪೊಲೀಸರು ರಜತ್ ಅವರನ್ನು ಬಂಧಿಸಿದ್ದರು. ಜೈಲು ಶಿಕ್ಷೆ ಅನುಭವಿಸಿ, ಜಾಮೀನಿನ ಮೇಲೆ ಹೊರಬಂದಿರುವ ರಜತ್, ಇದೀಗ ಮತ್ತೆ ಕಾನೂನು ಉಲ್ಲಂಘನೆ ಮಾಡುವ ಮೂಲಕ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.
ನೆಟ್ಟಿಗರ ಆಕ್ರೋಶ
ಸಾಮಾಜಿಕ ಜಾಲತಾಣದಲ್ಲಿ ರಜತ್ ಹಂಚಿಕೊಂಡಿರುವ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಹುತೇಕರು ಛೀಮಾರಿ ಹಾಕಿದ್ದಾರೆ. 'ಒಮ್ಮೆ ಜೈಲಿಗೆ ಹೋಗಿ ಬಂದ ಮೇಲಾದರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಪಬ್ಲಿಕ್ ಪ್ಲೇಸ್‌ನಲ್ಲಿ ಸ್ಮೋಕ್ ಮಾಡುವುದು ಹೀರೋಯಿಸಂ ಅಲ್ಲ' ಎಂದು ಕಮೆಂಟ್ ಮಾಡುವ ಮೂಲಕ ರಜತ್ ವರ್ತನೆಯನ್ನು ಖಂಡಿಸಿದ್ದಾರೆ. ಒಟ್ಟಿನಲ್ಲಿ, ಬಿಗ್‌ಬಾಸ್ ಖ್ಯಾತಿಯ ರಜತ್ ಮತ್ತೆ ಪೊಲೀಸ್ ಠಾಣೆಯ ಕದ ತಟ್ಟುವ ಪರಿಸ್ಥಿತಿ ತಂದುಕೊಂಡಿದ್ದಾರೆ.


