ಬಿಗ್ಬಾಸ್ಗೆ ಪುನಃ ಹೋಗ್ತಾರಾ ಜಗದೀಶ್? ನೇರ ಪ್ರಸಾರದಲ್ಲಿ ದೊಡ್ಮನೆಯ ಗುಟ್ಟು ಬಿಚ್ಚಿಟ್ಟ ಲಾಯರ್ ಹೇಳಿದ್ದೇನು?
ಬಿಗ್ಬಾಸ್ಗೆ ಲಾಯರ್ ಜಗದೀಶ್ ಅವರು ವಾಪಸ್ ಹೋಗಬೇಕು ಎನ್ನುವುದು ಅವರ ಫ್ಯಾನ್ಸ್ ಒತ್ತಾಯ. ಅದಕ್ಕೆ ನೇರಪ್ರಸಾರದಲ್ಲಿ ಅವರೇ ಹೇಳಿದ್ದೇನು?
ಈ ಸಾರಿ ಬಿಗ್ ಬಾಸ್ನಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದು ಲಾಯರ್ ಜಗದೀಶ್. ಬಿಗ್ಬಾಸ್ಗೆ ಹೇಳಿ ಮಾಡಿಸಿದಂಥ ಕಿರುಚಾಟ, ಗಲಾಟೆ ಜೊತೆಗೆ ತಮಾಷೆ ಮಾಡುತ್ತ ಹಲವು ವೀಕ್ಷಕರಿಗೆ ಬೇಕಾಗಿದ್ದವರು ಜಗದೀಶ್. ಈ ಸೀಸನ್ನಲ್ಲಿ ಹೈಲೈಟ್ ಅಂತ ಇದ್ದಿದ್ದೇ ಜಗದೀಶ್. ಕಂಡಕಂಡವರ ಜೊತೆಗೆ ಕಾಲು ಕೆರೆದುಕೊಡು ಜಗಳ ಆಡ್ತಾ, ಲಾಯರ್ ಪಾಯಿಂಟ್ಗಳನ್ನ ಹಾಕ್ತಾ ಇದ್ದ ಜಗ್ಗಿ ಜನರಿಗೆ ಹೇರಳ ಮನರಂಜನೆ ಕೊಟ್ಟಿದ್ರು. ಬರೀ ಮನೆಮಂದಿಗೆ ಮಾತ್ರ ಅಲ್ಲ , ಸಾಕ್ಷಾತ್ ಬಿಗ್ ಬಾಸ್ಗೇನೇ ಚಾಲೆಂಜ್ ಹಾಕಿದ್ರು ಜಗದೀಶ್. ಬೇರೆ ಸ್ಪರ್ಧಿಗಳಿಗೆ ಮಾತ್ರ ಅಲ್ಲ ಖುದ್ದು ಬಿಗ್ ಬಾಸ್ಗೇನೇ ತಿರುಗೇಟು ಕೊಟ್ಟವರು. ಆದ್ರೆ ಈಗ ದೊಡ್ಮನೆಯಿಂದ ಜಗದೀಶ್ರನ್ನೇ ಹೊರಹಾಕಲಾಗಿದೆ. ಲಾಯರ್ ಜಗದೀಶ್ಗೆ ಗೇಟ್ ಪಾಸ್ ಕೊಟ್ಟಿದ್ದನ್ನ ನೋಡಿ ಈ ಸಾರಿಯ ಬಿಗ್ ಬಾಸ್ ಫಿನಿಶ್ ಅಂತಿದ್ದಾರೆ ಜನ. ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ನ ಆಚೆ ಹಾಕಲಾಗಿದೆ. ಮನೆಯ ಮೂಲಭೂತ ನಿಯಮ ಉಲ್ಲಂಘಿಸಿರೋದು, ಮತ್ತೊಂದು ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಕ್ಕೆ ಲಾಯರ್ ಜಗದೀಶ್ನ ಮನೆಯಿಂದ ಹೊರಹೋಗುವಂತೆ ಬಿಗ್ ಬಾಸ್ ಆದೇಶ ಬಂತು. ಆ ಆದೇಶಕ್ಕೆ ತಲೆಬಾಗಿದ ಜಗದೀಶ್ ದೊಡ್ಮನೆಯ ಮುಖ್ಯಬಾಗಿಲಿನಿಂದ ಹೊರಬಂದಿದ್ದಾರೆ.
ಇದೀಗ ಅವರು ಕಲರ್ಸ್ ಕನ್ನಡದಲ್ಲಿ ನೇರ ಪ್ರಸಾರದಲ್ಲಿ ಬಂದು ಅಭಿಮಾನಿಗಳ ಕೆಲವೊಂದು ಸಂದೇಹಗಳನ್ನು ಬಗೆಹರಿಸಿದ್ದಾರೆ. ಜೊತೆಗೆ ಬಿಗ್ಬಾಸ್ಗೆ ಪುನಃ ಹೋಗುವಂತೆ ಸಾಕಷ್ಟು ಒತ್ತಡವನ್ನು ಫ್ಯಾನ್ಸ್ ತಂದಿರುವ ಹಿನ್ನೆಲೆಯಲ್ಲಿ, ತಾವು ವಾಪಸ್ ಹೋಗ್ತೇವೋ ಇಲ್ಲವೋ ಎಂಬ ಬಗ್ಗೆಯೂ ಜಗದೀಶ್ ಮಾತನಾಡಿದ್ದಾರೆ. ತಾವು ಬಿಗ್ಬಾಸ್ಗೆ ಹೋಗುವುದಕ್ಕೆ ಅಜೆಯ್ ಎನ್ನುವ ಸ್ನೇಹಿತ ಕಾರಣ ಎಂದಿರುವ ಜಗದೀಶ್ ಅವರು, ಬಿಗ್ಬಾಸ್ಗೆ ಹೋಗಲು ಅರ್ಹತೆ ಪಡೆದಾಗ ಒಂದಿಷ್ಟು ವರ್ಕ್ಔಟ್ ಮಾಡಿದೆ. ಬಿಗ್ಬಾಸ್ಗೆ ಎಂಟ್ರಿ ಕೊಡುವ ಮುಂಚೆ ಸುದೀಪ್ ಜೊತೆ ಮಾತನಾಡಿದ್ದೆ. ಇದು ತುಂಬಾ ಖುಷಿ ಕೊಟ್ಟ ವಿಚಾರ ಎಂದಿದ್ದಾರೆ. ಇದ್ದ 15-16 ದಿನ ಪ್ರಾಮಾಣಿಕವಾಗಿ ಆಟ ಆಡಿದ್ದೇನೆ. ಅದು ನನಗೆ ಖುಷಿ ಕೊಟ್ಟಿದೆ. ರೊಮ್ಯಾಂಟಿಕ್ ಸೀನ್ ಮಾಡುವುದಾಗಿ, ಲವರ್ ಬಾಯ್ ಆಗುವುದಾಗಲೀ ಎಲ್ಲವನ್ನೂ ಪ್ರಾಮಾಣಿಕವಾಗಿ ಮಾಡಿದ್ದೇನೆ. ಕೈಲಾದ ಕೆಲಸ ಮಾಡಿದ್ದೇನೆ. ನಿಮಗೂ ಅವೆಲ್ಲಾ ಇಷ್ಟವಾಯಿತು ಎಂದುಕೊಂಡಿದ್ದೇನೆ ಎಂದಿದ್ದಾರೆ.
ಬಿಗ್ಬಾಸ್ ಕರೆಸಿಕೊಳ್ಳಲ್ಲ ಅಂತ ಗೊತ್ತಾದ್ಮೇಲೆ ಲಾಯರ್ ಜಗದೀಶ್ಗೆ ಮನೆಯಲ್ಲಿ ಈ ಸ್ಥಿತಿನಾ? ಅಯ್ಯೋ ಎಂದ ಫ್ಯಾನ್ಸ್
ಇದೇ ವೇಳೆ ತಾವು ಮಾತನಾಡಿದ ಒಂದು ಚಿಕ್ಕ ಪದದಿಂದ ಬಿಗ್ಬಾಸ್ನಿಂದ ಹೊರಕ್ಕೆ ಕಳುಹಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದ ಜಗದೀಶ್ ಅವರು, ಇನ್ನೂ ನನಗೆ ಅರ್ಥವಾಗದ ವಿಷಯ ಏನೆಂದರೆ, ಚೈತ್ರಾ ಕುಂದಾಪುರ, ತುಕಾಲಿ ಮಾನಸ, ಮಂಜಣ್ಣ ಇವರೆಲ್ಲರೂ ನನ್ನ ಹಾಗೆಯೇ ಕೆಲವು ಸಲ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ. ಆದರೆ ನನ್ನೊಬ್ಬನನ್ನೇ ಯಾಕೆ ಹೊರಗೆ ಕಳುಹಿಸಿದ್ದೋ ಗೊತ್ತಾಗುತ್ತಿಲ್ಲ ಎಂದು ಬೇಸರಿಸಿದ್ದಾರೆ. ಇದೇ ವೇಳೆ ನೀವು ಮತ್ತೆ ಹೋಗ್ತೀರಾ ಎಂದು ಹಲವರು ಪ್ರಶ್ನಿಸುತ್ತಾರೆ. ಆದರೆ ಇದು ಸಾಧ್ಯವಿಲ್ಲ. ಏಕೆಂದ್ರೆ ಇದಾಗಲೇ ಸುದೀಪ್ ಅವರು, ಬಿಗ್ಬಾಸ್ಗೆ ಜಗದೀಶ್ ಮುಗಿದು ಹೋಗಿರೋ ಅಧ್ಯಾಯ ಎಂದಿದ್ದಾರೆ. ಆದ್ದರಿಂದ ಮತ್ತೆ ವಾಪಸ್ ಹೋಗುವ ಯಾವುದೇ ಚಾನ್ಸ್ ಇಲ್ಲ ಎನ್ನುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದಾರೆ.
ಇದೇ ವೇಳೆ ಬಿಗ್ಬಾಸ್ ಮನೆಯ ಕೆಲವು ವಿಷಯಗಳನ್ನು ಹೇಳಿದ ಜಗದೀಶ್, ಬಿಗ್ಬಾಸ್ ಒಂದು ಕನ್ನಡಿ ಇದ್ದ ಹಾಗೆ. ನಮ್ಮ ಭಾವನೆಗಳನ್ನು ಅದು ತೋರಿಸುತ್ತದೆ. ನಾವು ಮುಖವಾಡ ಹಾಕಿಕೊಂಡಿದ್ದರೆ, ಅದನ್ನು ಕಳಚಿ ನಮ್ಮನ್ನು ಜನರ ಮುಂದೆ ಇಡುತ್ತದೆ. ಇಲ್ಲಿ ಎಲ್ಲವೂ ಸ್ಕ್ರಿಪ್ಟೆಡ್, ಮೊದಲೇ ಹೇಳಿಕೊಟ್ಟಿರುತ್ತಾರೆ ಎಂದು ಹಲವರು ಹೇಳುತ್ತಾರೆ. ನಾನೂ ಹಾಗೆಯೇ ಅಂದುಕೊಂಡಿದ್ದೆ. ಆದರೆ ಇದು ನಿಜವಲ್ಲ, ಅಲ್ಲಿ ನಡೆಯುವುದು ಎಲ್ಲವೂ ಸ್ವಾಭಾವಿಕವಾದದ್ದೇ ಎಂದಿದ್ದಾರೆ. ಈ ಮೂಲಕ ಹಿಂದೆ ಕೆಲವು ಭಾಷೆಗಳ ಬಿಗ್ಬಾಸ್ ಸ್ಪಧಿಗಳು ಹೊರಕ್ಕೆ ಬಂದು ಇಲ್ಲಿ ನಡೆಯುವುದು ಸ್ಕ್ರಿಪ್ಟೆಡ್, ಬಿಗ್ಬಾಸ್ ಹೇಳಿದಂತೆ ನಾವು ಎಲ್ಲಾ ಮಾಡಬೇಕು, ನಾವು ಕೈಗೊಂಬೆಗಳು ಅಷ್ಟೇ ಎಂದೆಲ್ಲಾ ಹೇಳಿದ್ದು ಸರಿಯಲ್ಲ ಎಂದು ಜಗದೀಶ್ ಅವರು ಪರೋಕ್ಷವಾಗಿ ನುಡಿದಿದ್ದಾರೆ. ಕೆಲವೇ ದಿನ ಬಿಗ್ಬಾಸ್ ಮನೆಯಲ್ಲಿ ಇದ್ದರೂ ಅದು ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದ ಲಾಯರ್ ಜಗದೀಶ್, ಮೊದಲು ನಾನು ಜೋರಾಗಿ ಮಾತಾಡ್ತಿದ್ದೆ. ಈಗ ಸಮಾಧಾನವಾಗಿ ಮಾತನಾಡುವುದನ್ನು ಕಲಿತಿದ್ದೇನೆ. ಅಕ್ಕಪಕ್ಕ ಕ್ಯಾಮೆರಾ ಇರುತ್ತೋ ಎನ್ನುವ ಭಯ ಕಾಡ್ತಿದೆ. ಸಮಾಜದ ಪ್ರತಿಬಿಂಬ ಬಿಗ್ಬಾಸ್ ಅನ್ನಿಸಿದ್ದು ನಿಜ ಎಂದು ಹೇಳಿದ್ದಾರೆ.
ಸಾಮಾನ್ಯ ಜನರಿಗೂ ಎಂಟ್ರಿ ಕೊಟ್ಟ ಬಿಗ್ಬಾಸ್! ಮಾನಸರನ್ನು ನೋಡಿ ಬಂದವರು ಹೀಗೆಲ್ಲಾ ಹೇಳೋದಾ?