ಬಿಗ್ಬಾಸ್ ಖ್ಯಾತಿಯ ಮಲ್ಲಮ್ಮ ತಮಗೆ ಹಣದ ವಿಷಯದಲ್ಲಿ ಮತ್ತು ಇನ್ಸ್ಟಾಗ್ರಾಂ ಖಾತೆ ವಿಚಾರದಲ್ಲಿ ಮೋಸವಾಗಿದೆ ಎಂದು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ನಟ ಮನೋಜ್ ಕುಮಾರ್ ಅವರು ತಮಗೆ ಮಾಡಿದ ಸಹಾಯವನ್ನು ಮರೆತಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬಿಗ್ಬಾಸ್ ಖ್ಯಾತಿಯ ಮಲ್ಲಮ್ಮ ಅವರಿಗೆ ಹಣದ ವಿಷಯದಲ್ಲಿ ಮೋಸವಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. ಸಂದರ್ಶನವೊಂದರಲ್ಲಿ ತಮ್ಮ ಹೆಸರಿನಲ್ಲಿರೋ ಇನ್ಸ್ಟಾಗ್ರಾಂ ಖಾತೆ ನನ್ನ ಬಳಿಯಿಲ್ಲ ಹಾಗೂ ಆ ಖಾತೆಯಿಂದ ನನಗೆ ಯಾವುದೇ ಹಣ ಸಿಗಲ್ಲ ಎಂದು ಹೇಳಿದ್ದರು. ಈ ಸಂದರ್ಶನದಲ್ಲಿ ಮಲ್ಲಮ್ಮ ಅವರ ಹೊಸ ಇನ್ಸ್ಟಾ ಖಾತೆಯನ್ನು ಫಾಲೋ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದ್ರೆ ಸದ್ಯ ಈ ಹೊಸ ಖಾತೆ ಕಾಣಿಸುತ್ತಿಲ್ಲ. ಈ ವಿಡಿಯೋದಲ್ಲಿಯೇ ಬೆಂಗಳೂರಿನಲ್ಲಿ ಮಲ್ಲಮ್ಮ ಅವರ ಜೀವನ ಹೇಗಿದೆ ಎಂಬುದನ್ನು ತೋರಿಸಲಾಗಿದೆ.
ವಿಡಿಯೋದಲ್ಲಿ ಹೇಳಿರೋದೆಲ್ಲಾ ಸುಳ್ಳಾ?
ಈ ಸಂದರ್ಶನದ ಬೆನ್ನಲ್ಲೇ ಮನೋಜ್ ಕುಮಾರ್ ಅವರು mallamma_talks ಖಾತೆಯಿಂದ ಪಲ್ಲವಿ ಜೊತೆಗೆ ಮಲ್ಲಮ್ಮ ನೀಡಿದ ಸಂದರ್ಶನದ ವಿಡಿಯೋ ಕ್ಲಿಪ್ ಮತ್ತು ಸುದೀರ್ಘವಾಗಿ ಬರೆದೆಕೊಳ್ಳುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈ ಸಂದರ್ಶನದಲ್ಲಿ ಪಲ್ಲವಿ ತಮಗೆ ಹೇಗೆ ಸಹಾಯ ಮಾಡಿದ್ರು ಎಂಬುದನ್ನು ವಿವರಿಸಿದ್ದಾರೆ. ಹಾಗಾದ್ರೆ ಈ ವಿಡಿಯೋದಲ್ಲಿ ಹೇಳಿರೋದೆಲ್ಲಾ ಸುಳ್ಳಾ ಎಂದು mallamma_talks ಖಾತೆಯಿಂದ ಪ್ರಶ್ನೆ ಮಾಡಲಾಗಿದೆ.
ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಏನಿದೆ?
ಹಾಗಾದರೆ ಇದೆಲ್ಲ ಸುಳ್ಳಾ ಮಲ್ಲಮ್ಮ ಅವರೇ ಇಂಟರ್ವ್ಯೂಗಳಲ್ಲಿ ಅವರಿಗೆ ಮಾಡಿದ ಸಹಾಯಗಳ ಬಗ್ಗೆ ಹೇಳಿದ್ದಾರೆ. ಆದ್ರೆ ಈಗ ಎಲ್ಲವನ್ನೂ ಮರೆತುಬಿಟ್ರಾ? ವಾವ್, ಜನಗಳು ಇಷ್ಟೇ! ಅವರು ಸಹಾಯ ಮಾಡಿಲ್ಲ ಅಂದಿದ್ರೆ, ಅವರು ಎಲ್ಲೋ ಒಂದು ಕಡೆ ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡ್ತಾ ಇರುತ್ತಿದ್ದರು. ಅವರಿಗೆ ಫೋನ್ ಕೊಟ್ಟಿದ್ದರು, ಅವರಿಗೆ ಮನೆ ಕಟ್ಟಕ್ಕೆ ಕಲ್ಲು ಹಾಕಿಸಿಕೊಟ್ಟಿದ್ದರು. ಆದ್ರೆ ಅವರು ಏನೂ ಮಾಡಿಲ್ಲ. ಎಲ್ಲವನ್ನೂ ಇವರೇ ಮಾಡಬೇಕು ಅಂದ್ರೆ ಅವರ ಮಕ್ಕಳು ಯಾಕೆ ಇರೋದು?
ಅಕೌಂಟ್ ಅನ್ನು ತುಂಬಾ ಕಷ್ಟಪಟ್ಟು ಮಾಡಿ ಬೆಳೆಸಿರೋದು. ಅದನ್ನ ಯಾಕೆ ಯಾರಿಗೋ ಕೊಡಬೇಕು? ಮನೋಜ್ ಅಷ್ಟು ಸಮಯ ಕೊಟ್ಟು ಕಷ್ಟಪಟ್ಟು ಮಾಡಿದ ಅಕೌಂಟ್ ಅದು. ನಿಮಗೆ ಹೇಗೆ ವಿಡಿಯೋ ಮಾಡಿ ಅಂತ ಅವರ ಮಗ ಹೇಳಿದ್ರೋ, ಅದೇ ರೀತಿ ಅವಾಗಲೇ ನೀವೇ ಮಾಡಿ, ನೀವೇ ನೋಡಿಕೊಳ್ಳಿ ಅಂತ ಹೇಳಬೇಕಿತ್ತು. ಈಗ ಬೆಳೆಸಿದ ಮೇಲೆ ಎಲ್ಲವನ್ನೂ ಮರೆತುಬಿಟ್ರು
ಈ ಥರ ತುಂಬಾ ವಿಷಯಗಳು ನಿಮಗೆ ಯಾರಿಗೂ ಗೊತ್ತಿಲ್ಲ. ನಮಗೆ, ಅದನ್ನೆಲ್ಲ ಕಣ್ಣಾರೆ ನೋಡಿದವರಿಗೆ ಗೊತ್ತು. ಆದ್ರೆ ನಿಮ್ಮ ಥರ ಸೋಷಿಯಲ್ ಮೀಡಿಯಾದಲ್ಲಿ ಬಂದು ಅದನ್ನೆಲ್ಲ ತೋರಿಸಿಕೊಳ್ಳೋಕೆ ನಮಗಿಷ್ಟ ಇಲ್ಲ. ಅದಕ್ಕೆ ?
ವಿಡಿಯೋ ಆರಂಭಿಸಿದ್ದು ನಟ ಮನೋಜ್ ಕುಮಾರ್!
ಯಾದಗಿರಿ ಜಿಲ್ಲೆಯ ಮಲ್ಲಮ್ಮ ಅಂದ್ರೆ ಎಲ್ಲರಿಗೂ ಚಿರಪರಿಚಿತ. ಬಿಗ್ಬಾಸ್ ಸೀಸನ್ 12ರ ಸ್ಪರ್ಧಿಯಾದ ಬಳಿಕವಂತೂ ಮಲ್ಲಮ್ಮ ಇಡೀ ಕರುನಾಡಿಗೆ ಫೇಮಸ್ ಆದವರು. ಮಲ್ಲಮ್ಮ ಅವರಲ್ಲಿನ ಮುಗ್ದತೆಯನ್ನು ಕಂಡ ಕಿರುತರೆ ನಟ ಮನೋಜ್ ಕುಮಾರ್, ಅವರ ಜೊತೆಗಿನ ಸಂಭಾಷಣೆಯ ವಿಡಿಯೋ ಕ್ಲಿಪ್ ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾರಂಭಿಸಿದ್ದರು. ಇದಕ್ಕಾಗಿ ಮಲ್ಲಮ್ಮ ಟಾಕ್ಸ್ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆಗಳನ್ನು ಆರಂಭಿಸಿದ್ದರು.
ಇತ್ತೀಚೆಗಷ್ಟೇ ಮಲ್ಲಮ್ಮ ಅವರ ಬೆನ್ನಲಬು ಆಗಿದ್ದ ಫ್ಯಾಶನ್ ಡಿಸೈನರ್ ಹಾಗೂ 'ರಿಷಿ ಡಿಸೈನ್' ಸಂಸ್ಥಾಪಕಿ ಪಲ್ಲವಿ ಲಕ್ಷ್ಮಿಕಾಂತ್ ಅವರು ಸೆಪ್ಟೆಂಬರ್ 2026ರಲ್ಲಿ ನಿಧನರಾಗಿದ್ದರು. ಪಲ್ಲವಿ ಅವರ ನಿಧನದ ಬಳಿಕ ಮಲ್ಲಮ್ಮ ಅವರು ಅಲ್ಲಿಯೇ ಕೆಲಸ ಮಾಡಿಕೊಂಡಿದ್ದಾರೆ. ಈಗ ವೈರಲ್ ಆಗುತ್ತಿರುವ ವಿಡಿಯೋ, ಹೊಸ ಖಾತೆ ಆರಂಭ ಮತ್ತು ಮನೋಜ್ ಕುಮಾರ್ ಅಸಮಾಧಾನದ ಬಗ್ಗೆ ಮಲ್ಲಮ್ಮ ಅವರು ಸ್ಪಷ್ಟನೆ ನೀಡಬೇಕಿದೆ.
















