ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಕಿಚ್ಚ ಸುದೀಪ್ ಅವರ ಪ್ರೊಮೋ ಬಿಡುಗಡೆಯಾಗಿದ್ದು, ಹೊಸ ಸೀಸನ್‌ಗಾಗಿ ಅಭಿಮಾನಿಗಳ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಕಿಚ್ಚ ಸುದೀಪ್ ಅವರ ಪ್ರೊಮೋ ಬಿಡುಗಡೆಯಾಗಿದ್ದು, ಹೊಸ ಸೀಸನ್‌ಗಾಗಿ ಅಭಿಮಾನಿಗಳ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಾರಿ ಸಾಮಾನ್ಯರಿಗೂ ಬಿಗ್ ಬಾಸ್ ಮನೆಯ ಬಾಗಿಲು ತೆರೆದಿರುವುದು ವಿಶೇಷ. ಇದೀಗ ಸೀಸನ್ 13ಕ್ಕೆ ಸಂಬಂಧಿಸಿದ ಮತ್ತೊಂದು ಇಂಟರೆಸ್ಟಿಂಗ್ ಅಪ್ಡೇಟ್ ಹೊರಬಿದ್ದಿದೆ. ಬಿಗ್ ಬಾಸ್ ಸ್ಪರ್ಧಿಗಳನ್ನು ಸುದೀಪ್ ಪರಿಚಯಿಸುವ ವೀಕೆಂಡ್ ಎಪಿಸೋಡ್ ಅನ್ನು ಲೈವ್ ಆಗಿ ಕಣ್ತುಂಬಿಕೊಳ್ಳುವ ಅವಕಾಶ ಪ್ರೇಕ್ಷಕರಿಗೂ ಸಿಗಲಿದೆ. ಆದರೆ ಅದಕ್ಕಾಗಿ ನೀವು ಒಂದು ಸಣ್ಣ ಕೆಲಸ ಮಾಡಬೇಕಿದೆ.
ಬಿಗ್ ಬಾಸ್ ಲೈವ್ ನೋಡಲು ಏನು ಮಾಡಬೇಕು?
ಈ ಅವಕಾಶಕ್ಕಾಗಿ ಬೆಂಗಳೂರಿನ ಲಾಲ್‌ಬಾಗ್ ಫ್ಲವರ್ ಶೋನಲ್ಲಿ ಭಾಗವಹಿಸಬೇಕು. ಆಗಸ್ಟ್ 6ರಿಂದ ಆರಂಭವಾಗಿರುವ ಫ್ಲವರ್ ಶೋನಲ್ಲಿ ಬಿಗ್ ಬಾಸ್ ತಂಡ ವಿಶೇಷವಾದ ‘ಬಿಗ್ ಬಾಸ್ ಅಗ್ನಿಪರೀಕ್ಷೆ ಎಕ್ಸ್‌ಪೀರಿಯನ್ಸ್ ಜೋನ್’ ಸಿದ್ಧಪಡಿಸಿದೆ. ಈ ಜೋನ್‌ನಲ್ಲಿ ಬಿಗ್ ಬಾಸ್‌ನ ಐಕಾನಿಕ್ ಚೇರ್ ಜೊತೆಗೆ ವಿಶೇಷ ಸೆಲ್ಫಿ ಜೋನ್ ಕೂಡ ಇರಲಿದೆ. ಇಲ್ಲಿಗೆ ಭೇಟಿ ನೀಡುವವರು ತಮ್ಮ ನೆಚ್ಚಿನ ಬಿಗ್ ಬಾಸ್ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಬಹುದು.
ಒಂದು ಸೆಲ್ಫಿ.. ಬಿಗ್ ಬಾಸ್ ವೀಕೆಂಡ್‌ಗೆ ಎಂಟ್ರಿ?
ಹೌದು, ಈ ಅವಕಾಶ ಪಡೆಯಲು ನೀವು ಎಕ್ಸ್‌ಪೀರಿಯನ್ಸ್ ಜೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಬೇಕು. ನಂತರ ಅದನ್ನು ನಿಮ್ಮ Instagram ಖಾತೆಯಲ್ಲಿ ಪೋಸ್ಟ್ ಮಾಡಬೇಕು. ಪೋಸ್ಟ್ ಮಾಡುವಾಗ Colors Kannada ಅನ್ನು ಟ್ಯಾಗ್ ಮಾಡುವುದು ಕಡ್ಡಾಯ. ಇದರ ಜೊತೆಗೆ #BBKAGNIPARIKSHE ಹ್ಯಾಷ್‌ಟ್ಯಾಗ್ ಬಳಸಬೇಕು. ಮತ್ತೊಂದು ಪ್ರಮುಖ ನಿಯಮವೆಂದರೆ, ನಿಮ್ಮ Instagram ಪೋಸ್ಟ್ Public ಆಗಿರಬೇಕು.
ಈ ರೀತಿ ನಿಯಮಗಳನ್ನು ಪಾಲಿಸುವವರ ಪೈಕಿ ಕೆಲ ಅದೃಷ್ಟಶಾಲಿಗಳನ್ನು ಬಿಗ್ ಬಾಸ್ ತಂಡ ಆಯ್ಕೆ ಮಾಡಲಿದೆ. ಆಯ್ಕೆಯಾದವರಿಗೆ ಸುದೀಪ್ ಅವರು ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸುವ ವೀಕೆಂಡ್ ಎಪಿಸೋಡ್ ಅನ್ನು ನೇರವಾಗಿ ನೋಡುವ ಅವಕಾಶ ಸಿಗಲಿದೆ. ಅಷ್ಟೇ ಅಲ್ಲ, ಬಿಗ್ ಬಾಸ್‌ಗೆ ಸಂಬಂಧಿಸಿದ ವಿಶೇಷ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇರಲಿದೆ.
ಯಾವಾಗ ನಡೆಯಲಿದೆ ಲಾಲ್‌ಬಾಗ್ ಫ್ಲವರ್ ಶೋ?
ಈ ವರ್ಷದ ಲಾಲ್‌ಬಾಗ್ ಫ್ಲವರ್ ಶೋ ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ನಡೆಯಲಿದೆ. ಇದೇ ಅವಧಿಯಲ್ಲಿ ಬಿಗ್ ಬಾಸ್ ಅಗ್ನಿಪರೀಕ್ಷೆ ಎಕ್ಸ್‌ಪೀರಿಯನ್ಸ್ ಜೋನ್ ಕೂಡ ಸಾರ್ವಜನಿಕರಿಗೆ ಲಭ್ಯವಿರಲಿದೆ. ಹೀಗಾಗಿ ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನವೇ ಅಭಿಮಾನಿಗಳಿಗೆ ವಿಶೇಷ ಅನುಭವ ಪಡೆಯುವ ಅವಕಾಶ ಸಿಕ್ಕಿದೆ. ಒಂದು ಸೆಲ್ಫಿ ಕ್ಲಿಕ್ಕಿಸಿ, Instagramನಲ್ಲಿ ಹಂಚಿಕೊಂಡರೆ ಸಾಕು-ನಿಮ್ಮ ಬಿಗ್ ಬಾಸ್ ವೀಕೆಂಡ್ ಲೈವ್ ವೀಕ್ಷಣೆಯ ಕನಸು ನನಸಾಗುವ ಸಾಧ್ಯತೆಯಿದೆ.
ಇನ್ನು ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ಯಾವ ದಿನ ನಡೆಯಲಿದೆ ಎಂಬ ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾದಿದ್ದಾರೆ. ಈ ಬಾರಿ ಸಾಮಾನ್ಯರಿಗೂ ಸ್ಪರ್ಧಿಯಾಗುವ ಅವಕಾಶ ಸಿಕ್ಕಿರುವುದರಿಂದ ಹೊಸ ಸೀಸನ್ ಆರಂಭಕ್ಕೂ ಮುನ್ನವೇ ಬಿಗ್ ಬಾಸ್ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ.


