Kichcha Sudeep: ಇಂದು ಕನ್ನಡ ಚಿತ್ರರಂಗದಲ್ಲಿ ‘ಅಭಿನಯ ಚಕ್ರವರ್ತಿ’ ಎಂದೇ ಖ್ಯಾತರಾಗಿರುವ ಕಿಚ್ಚ ಸುದೀಪ್, ಈ ಸ್ಥಾನವನ್ನು ಸುಲಭವಾಗಿ ಪಡೆದುಕೊಂಡವರಲ್ಲ. ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರೂ ಅಲ್ಲ.
ಇಂದು ಕನ್ನಡ ಚಿತ್ರರಂಗದಲ್ಲಿ ‘ಅಭಿನಯ ಚಕ್ರವರ್ತಿ’ ಎಂದೇ ಖ್ಯಾತರಾಗಿರುವ ಕಿಚ್ಚ ಸುದೀಪ್, ಈ ಸ್ಥಾನವನ್ನು ಸುಲಭವಾಗಿ ಪಡೆದುಕೊಂಡವರಲ್ಲ. ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರೂ ಅಲ್ಲ. ಸಣ್ಣ-ಪುಟ್ಟ ಪಾತ್ರಗಳಿಂದ ತಮ್ಮ ನಟನಾ ಪಯಣ ಆರಂಭಿಸಿ, ಹಂತ ಹಂತವಾಗಿ ಬೆಳೆದು ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಸುದೀಪ್. ನಟನೆ ಬಗ್ಗೆ ತರಬೇತಿ ಪಡೆಯಲು ಮುಂಬೈಗೆ ತೆರಳಿದ್ದ ಸುದೀಪ್, ಅಲ್ಲಿಂದ ಮರಳಿದ ಬಳಿಕ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ನಾಯಕನಾಗಿ ಮಿಂಚಿ, ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು.
‘ತಾಯವ್ವ’ಗೂ ಮುನ್ನ ಸುದೀಪ್ ಧಾರಾವಾಹಿಯಲ್ಲಿ ನಟಿಸಿದ್ದರು!
ಸುದೀಪ್ ಅವರ ಮೊದಲ ಸಿನಿಮಾ ‘ತಾಯವ್ವ’ ಎಂಬುದು ಬಹುತೇಕರಿಗೆ ತಿಳಿದಿರುವ ವಿಚಾರ. ಆದರೆ, ಬೆಳ್ಳಿತೆರೆಗೆ ನಾಯಕನಾಗಿ ಬರುವುದಕ್ಕೂ ಮುನ್ನವೇ ಅವರು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಸುಮಾರು ಮೂರು ದಶಕಗಳ ಹಿಂದೆ ಸುದೀಪ್ ಅವರು ಧಾರಾವಾಹಿಯೊಂದರಲ್ಲಿ ನಟಿಸಿದ್ದರು. ಇದೀಗ ಆ ಧಾರಾವಾಹಿಯಲ್ಲಿನ ಸುದೀಪ್ ಅವರ ಅಪರೂಪದ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
1996ರ ಧಾರಾವಾಹಿಯಲ್ಲಿದ್ದ ‘ಚಾಕಲೇಟ್ ಬಾಯ್’ ಸುದೀಪ್!
1996ರಲ್ಲಿ ಪ್ರಸಾರವಾಗುತ್ತಿದ್ದ ‘ಪ್ರೇಮದ ಕಾದಂಬರಿ’ ಧಾರಾವಾಹಿಯಲ್ಲಿ ಸುದೀಪ್ ನಟಿಸಿದ್ದರು. ಆ ಕಾಲದಲ್ಲಿ ಸುದೀಪ್ ಇಂದಿನಷ್ಟು ಜನಪ್ರಿಯರಾಗಿರಲಿಲ್ಲ. ಹೀಗಾಗಿ ಧಾರಾವಾಹಿಯಲ್ಲಿ ಅವರ ಪಾತ್ರವೂ ಅಷ್ಟೇನು ದೊಡ್ಡದಾಗಿರಲಿಲ್ಲ. ಈ ಧಾರಾವಾಹಿಯಲ್ಲಿ ಸುದೀಪ್ ಅವರೊಂದಿಗೆ ನಟಿಸಿದ್ದ ಸಂಗೀತ ಅನಿಲ್ ಇದೀಗ ತಮ್ಮ ಹಳೆಯ ಫೋಟೋ ಆಲ್ಬಮ್‌ನಿಂದ ಸುದೀಪ್ ಅವರ ಅಪರೂಪದ ಚಿತ್ರವೊಂದನ್ನು ಹೊರತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸುದೀಪ್ ಯಾವುದೇ ಗಡ್ಡ-ಮೀಸೆ ಇಲ್ಲದೆ, ಸಖತ್ ಯಂಗ್ ಆಗಿ, ಚಾಕಲೇಟ್ ಬಾಯ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿನ ಬಾದ್‌ಶಾ ಸುದೀಪ್ ಅವರ ಈ ಹಳೆಯ ಅವತಾರ ಕಂಡು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
‘ಈಗ ಕನ್ನಡ ಇಂಡಸ್ಟ್ರಿಯ ಅಭಿನಯ ಚಕ್ರವರ್ತಿ’ ಎಂದ ಸಹನಟಿ!
ಸುದೀಪ್ ಅವರ ಹಳೆಯ ಫೋಟೋವನ್ನು ಹಂಚಿಕೊಂಡಿರುವ ಸಂಗೀತ ಅನಿಲ್, ತಮ್ಮ ಹಳೆಯ ಆಲ್ಬಮ್‌ನಲ್ಲಿ ಈ ಚಿತ್ರ ಸಿಕ್ಕಿದ್ದಾಗಿ ಹೇಳಿದ್ದಾರೆ. ‘ನನ್ನ ಒಂದು ಸೀರಿಯಲ್‌ನಲ್ಲಿ ನನ್ನ ನಾಯಕನಾಗಿದ್ದವರು. ಈಗ ಕನ್ನಡ ಇಂಡಸ್ಟ್ರಿಯ ಬಾದ್‌ಶಾ’ ಎಂದು ಸುದೀಪ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ, ಇದು ಹಲವು ವರ್ಷಗಳ ಹಿಂದಿನ ಫೋಟೋವಾಗಿದ್ದು, ಚಿತ್ರ ಅಷ್ಟೊಂದು ಸ್ಪಷ್ಟವಾಗಿಲ್ಲ. ಅದಕ್ಕಾಗಿ ಅಭಿಮಾನಿಗಳು ಸಹಿಸಿಕೊಳ್ಳಬೇಕು ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಜೊತೆಗೆ, ‘ಇವರು ಯಾರೆಂದು ಊಹಿಸಿ’ ಎಂದು ಅಭಿಮಾನಿಗಳಿಗೆ ಸವಾಲನ್ನೂ ಹಾಕಿದ್ದಾರೆ. ಆದರೆ, ಸುದೀಪ್ ಅವರ ಮುಖದಲ್ಲಿ ಈಗಿರುವ ಗಡ್ಡ-ಮೀಸೆ ಇಲ್ಲದ ಕಾರಣ ಕೆಲವರಿಗೆ ಫೋಟೋದಲ್ಲಿರುವುದು ಕಿಚ್ಚ ಸುದೀಪ್ ಎಂಬುದನ್ನು ತಕ್ಷಣ ಗುರುತಿಸಲು ಸಾಧ್ಯವಾಗಿಲ್ಲ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಿಚ್ಚ!
ಸುದೀಪ್ ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಬಿಲ್ಲ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಇದರ ಬಳಿಕ ತಮಿಳಿನ ನಿರ್ದೇಶಕರೊಬ್ಬರು ಸುದೀಪ್ ಅವರಿಗಾಗಿ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ. ಇದರ ಜೊತೆಗೆ ಕೆಆರ್‌ಜಿ ಸ್ಟುಡಿಯೋಸ್ ನಿರ್ಮಾಣದ ಹೊಸ ಸಿನಿಮಾದಲ್ಲೂ ಸುದೀಪ್ ನಟಿಸಲಿದ್ದಾರೆ. ಮತ್ತೊಂದೆಡೆ, ಸುದೀಪ್ ಅವರೇ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದ ಬಗ್ಗೆಯೂ ನಿರೀಕ್ಷೆ ಹೆಚ್ಚಾಗಿದೆ. ಒಟ್ಟಿನಲ್ಲಿ, ಸುಮಾರು 30 ವರ್ಷಗಳ ಹಿಂದಿನ ಕಿರುತೆರೆಯ ‘ಚಾಕಲೇಟ್ ಬಾಯ್’ನಿಂದ ಇಂದಿನ ಪ್ಯಾನ್ ಇಂಡಿಯಾ ಸ್ಟಾರ್‌ವರೆಗಿನ ಸುದೀಪ್ ಅವರ ಪಯಣ ನಿಜಕ್ಕೂ ಹಲವರಿಗೆ ಸ್ಫೂರ್ತಿದಾಯಕ.


