‘ಸೀತಾ ರಾಮ’ ಧಾರಾವಾಹಿಯ ರಾಮ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿರುವ ನಟ ಗಗನ್ ಚಿನ್ನಪ್ಪ ‘ಬಿಗ್ ಬಾಸ್ ಕನ್ನಡ ಸೀಸನ್ 13’ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕೊಡಗಿನಿಂದ ನಟನೆಯತ್ತ ಬಂದ ಗಗನ್, ಜರ್ಮನಿ ಮತ್ತು ಓಮನ್‌ನಲ್ಲಿ ಕೆಲಸ ಮಾಡಿದ ಬಳಿಕ ಕಿರುತೆರೆಗೆ ಕಾಲಿಟ್ಟಿದ್ದರು.
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಗ್ರ್ಯಾಂಡ್ ಓಪನಿಂಗ್ ಒಂದರ ಹಿಂದೆ ಒಂದರಂತೆ ಕುತೂಹಲಕಾರಿ ಎಂಟ್ರಿಗಳಿಗೆ ಸಾಕ್ಷಿಯಾಗುತ್ತಿದೆ. ಇದೀಗ ಕಿರುತೆರೆಯ ಜನಪ್ರಿಯ ನಟ ಗಗನ್ ಚಿನ್ನಪ್ಪ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ‘ಸೀತಾ ರಾಮ’ ಧಾರಾವಾಹಿಯ ರಾಮ್ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಗಗನ್, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಮನರಂಜನೆ ನೀಡುವ ಭರವಸೆಯೊಂದಿಗೆ ಎಂಟ್ರಿ ಕೊಟ್ಟಿದ್ದಾರೆ.
ವೇದಿಕೆಗೆ ಬಂದ ಗಗನ್, ಮನೆ ಕಟ್ಟುವ ಜವಾಬ್ದಾರಿ ತಮ್ಮ ಮೇಲಿದೆ ಎಂಬ ರೀತಿಯಲ್ಲಿ ಮಾತನಾಡಿದ್ದು, ಬಿಗ್ ಬಾಸ್ ಮನೆಯಲ್ಲಿ ಮನರಂಜನೆಗೆ ಯಾವುದೇ ಕೊರತೆ ಇರಲ್ಲ ಎಂಬ ಸೂಚನೆಯನ್ನೂ ನೀಡಿದ್ದಾರೆ. ಗಗನ್ ಅವರ ಎಂಟ್ರಿಗೆ ಅವರ ಅಭಿಮಾನಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕೊಡಗಿನ ಹುಡುಗನಿಂದ ಕಿರುತೆರೆಯ ರಾಮ್‌ವರೆಗೆ!
ಮೂಲತಃ ಕೊಡಗಿನವರಾದ ಗಗನ್ ಚಿನ್ನಪ್ಪ, ನೇರವಾಗಿ ನಟನೆಯ ಕ್ಷೇತ್ರಕ್ಕೆ ಬಂದವರಲ್ಲ. ಮೂರು ವರ್ಷಗಳ ಕಾಲ ಜರ್ಮನಿ ಹಾಗೂ ಓಮನ್‌ನಲ್ಲಿ ಕೆಲಸ ಮಾಡಿದ್ದ ಅವರು, ಬಳಿಕ ಭಾರತಕ್ಕೆ ಮರಳಿ ಐಟಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ ನಟನೆಯ ಮೇಲಿನ ಆಸಕ್ತಿ ಅವರನ್ನು ಮತ್ತೊಂದು ದಿಕ್ಕಿನತ್ತ ಕರೆದೊಯ್ದಿತು. ‘ಮಂಗಳಗೌರಿ ಮದುವೆ’ ಧಾರಾವಾಹಿಯ ಆಡಿಷನ್‌ಗೆ ತೆರಳಿದ್ದ ಗಗನ್ ಆಯ್ಕೆಯಾದರು. ಈ ಧಾರಾವಾಹಿಯಲ್ಲಿ ರಾಜೀವ್ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದರು.
‘ಸೀತಾ ರಾಮ’ ಕೊಟ್ಟ ದೊಡ್ಡ ಗುರುತು
ಗಗನ್ ಅವರ ವೃತ್ತಿಜೀವನದಲ್ಲಿ ‘ಸೀತಾ ರಾಮ’ ಧಾರಾವಾಹಿ ಪ್ರಮುಖ ತಿರುವು ನೀಡಿತು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಈ ಧಾರಾವಾಹಿಯಲ್ಲಿ ರಾಮ್ ಪಾತ್ರದಲ್ಲಿ ಕಾಣಿಸಿಕೊಂಡ ಅವರು, ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಕನ್ನಡದ ಜೊತೆಗೆ ತೆಲುಗು ಧಾರಾವಾಹಿಗಳಲ್ಲೂ ನಟಿಸಿರುವ ಗಗನ್‌ಗೆ ಸಿನಿಮಾದ ಮೇಲೂ ವಿಶೇಷ ಆಸಕ್ತಿ ಇದೆ. ಇದೇ ಕಾರಣಕ್ಕೆ ‘ಅಲೆಗ್ಸಾಂಡರ್’ ಸಿನಿಮಾದಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ಅನುಭವ ಹೊಸದಲ್ಲ!
ಗಗನ್ ಚಿನ್ನಪ್ಪ ಅವರಿಗೆ ಬಿಗ್ ಬಾಸ್ ವೇದಿಕೆ ಸಂಪೂರ್ಣ ಹೊಸದೇನಲ್ಲ. ಈ ಹಿಂದೆ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಮಿನಿ ಸೀಸನ್ನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈಗ ಮತ್ತೊಮ್ಮೆ ಸುದೀಪ್ ಅವರ ನಿರೂಪಣೆಯಲ್ಲೇ ‘ಬಿಗ್ ಬಾಸ್ ಕನ್ನಡ ಸೀಸನ್ 13’ಕ್ಕೆ ಎಂಟ್ರಿ ಕೊಟ್ಟಿರುವುದು ವಿಶೇಷ. ಹೀಗಾಗಿ ಬಿಗ್ ಬಾಸ್ ಮನೆಯ ವಾತಾವರಣ ಹಾಗೂ ಆಟದ ಸ್ವರೂಪದ ಬಗ್ಗೆ ಅವರಿಗೆ ಈಗಾಗಲೇ ಒಂದು ರೀತಿಯ ಅನುಭವವೂ ಇದೆ.
‘ಮನೆ ಕಟ್ಟಬೇಕು’ ಎಂದ ಗಗನ್!
ಬಿಗ್ ಬಾಸ್ ವೇದಿಕೆಯಲ್ಲಿ ಗಗನ್ ತಮ್ಮ ಜೀವನದ ಪಯಣದ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ತಾವು ನಡೆದು ಬಂದ ದಾರಿ, ಎದುರಿಸಿದ ಕಷ್ಟಗಳು ಹಾಗೂ ಮನೆ ಕಟ್ಟಿಕೊಳ್ಳಲು ಹಣ ಹೊಂದಿಸುತ್ತಿರುವ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಗಗನ್ ಅವರ ಮಾತುಗಳನ್ನು ಆಲಿಸಿದ ಕಿಚ್ಚ ಸುದೀಪ್, ನಟನಿಗೆ ಶುಭ ಹಾರೈಸಿದ್ದಾರೆ. ಕಿರುತೆರೆಯಲ್ಲಿ ಈಗಾಗಲೇ ಅಪಾರ ಅಭಿಮಾನಿ ಬಳಗ ಹೊಂದಿರುವ ಗಗನ್‌ಗೆ ಬಿಗ್ ಬಾಸ್ ಮೂಲಕ ಮತ್ತಷ್ಟು ಜನರನ್ನು ತಲುಪುವ ಅವಕಾಶ ಸಿಕ್ಕಿದೆ.
ಬಿಗ್ ಬಾಸ್ ಮನೆಯಲ್ಲಿ ಗಗನ್ ಗೇಮ್ ಹೇಗಿರಲಿದೆ?
‘ಸೀತಾ ರಾಮ’ದ ರಾಮ್ ಪಾತ್ರದಲ್ಲಿ ಸೌಮ್ಯ ಹಾಗೂ ಪ್ರೇಕ್ಷಕರಿಗೆ ಇಷ್ಟವಾಗುವ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿರುವ ಗಗನ್, ಬಿಗ್ ಬಾಸ್ ಮನೆಯೊಳಗೆ ಹೇಗೆ ಬದಲಾಗುತ್ತಾರೆ ಎಂಬುದೇ ಈಗ ಕುತೂಹಲ. ಈಗಾಗಲೇ ಬಿಗ್ ಬಾಸ್ ಅನುಭವ ಹೊಂದಿರುವ ಅವರು ಈ ಬಾರಿ ತಮ್ಮ ಗೇಮ್ ಪ್ಲ್ಯಾನ್ ಹೇಗೆ ರೂಪಿಸಿಕೊಳ್ಳುತ್ತಾರೆ? ಸ್ಪರ್ಧಿಗಳೊಂದಿಗೆ ಹೇಗೆ ಬೆರೆಯುತ್ತಾರೆ? ಮನೆ ಕಟ್ಟುವ ಜವಾಬ್ದಾರಿಯ ಜೊತೆಗೆ ಮನರಂಜನೆಯಲ್ಲೂ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತಾರೆ? ಎಂಬುದನ್ನು ಕಾದು ನೋಡಬೇಕಿದೆ. ‘ಸೀತಾ ರಾಮ’ದ ರಾಮ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವುದಕ್ಕೆ ಫ್ಯಾನ್ಸ್ ಖುಷಿಯಾಗಿದ್ದು, ಗಗನ್ ಅವರ ಈ ಹೊಸ ಇನ್ನಿಂಗ್ಸ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.


