‘ಬಿಗ್‌ ಬಾಸ್ ಕನ್ನಡ ಸೀಸನ್ 13’ರ ಮೂರನೇ ಸ್ಪರ್ಧಿಯಾಗಿ ರಂಗಭೂಮಿ ಕಲಾವಿದ ಹಾಗೂ ನಟ ಅವಿನಾಶ್ ಷಠಮರ್ಶನ್ ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬಿಗ್‌ ಬಾಸ್ ವೇದಿಕೆಯಲ್ಲಿ ‘ನನಗೆ ಜನರ ಸಿಂಪತಿ ಬೇಡ’ ಎಂದು ಖಡಕ್ ಹೇಳಿಕೆ ನೀಡಿದ್ದಾರೆ.

‘ಬಿಗ್‌ ಬಾಸ್ ಕನ್ನಡ ಸೀಸನ್ 13’ರ ಗ್ರ್ಯಾಂಡ್ ಓಪನಿಂಗ್‌ಗೆ ಒಂದೊಂದೇ ಸ್ಪರ್ಧಿಗಳ ಎಂಟ್ರಿ ಕಳೆ ಹೆಚ್ಚಿಸುತ್ತಿದೆ. ಜಗ್ಗು ಮಮ್ಮಿ ಹಾಗೂ ಸೌಂದರ್ಯ ಶೆಟ್ಟಿ ಬಳಿಕ ಇದೀಗ ಮೂರನೇ ಸ್ಪರ್ಧಿಯಾಗಿ ರಂಗಭೂಮಿ ಕಲಾವಿದ ಹಾಗೂ ನಟ ಅವಿನಾಶ್ ಷಠಮರ್ಶನ್ ಬಿಗ್‌ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ವೇದಿಕೆಯ ಮೇಲೆ ಹಾಡಿನ ಮೂಲಕವೇ ತಮ್ಮ ಎಂಟ್ರಿ ಕೊಟ್ಟ ಅವಿನಾಶ್, ಮೊದಲ ಪರಿಚಯದಲ್ಲೇ ತಮ್ಮ ಖಡಕ್ ಮಾತುಗಳಿಂದ ಗಮನ ಸೆಳೆದಿದ್ದಾರೆ.

ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ತಮ್ಮದೇ ಗುರುತು ಮೂಡಿಸಿಕೊಂಡಿರುವ ಅವಿನಾಶ್, ಬಿಗ್‌ ಬಾಸ್ ವೇದಿಕೆಯಲ್ಲಿ ತಮ್ಮ ಬಗ್ಗೆ ಪರಿಚಯಿಸಿಕೊಳ್ಳುವ ರೀತಿಯೇ ವಿಭಿನ್ನವಾಗಿತ್ತು. ರಾಷ್ಟ್ರೀಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದಿರುವ ಅವರು, ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ.

‘ದಯವಿಟ್ಟು ಗಮನಿಸಿ’, ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರಗಳಲ್ಲಿ ನಟನೆ

ರಂಗಭೂಮಿಯಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿರುವ ಅವಿನಾಶ್ ಷಠಮರ್ಶನ್, ಸಿನಿಮಾಗಳಲ್ಲೂ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ‘ದಯವಿಟ್ಟು ಗಮನಿಸಿ’ ಹಾಗೂ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಸಿನಿಮಾಗಳಲ್ಲಿ ನಟಿಸಿರುವ ಅವರು, ಇದೀಗ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಮೂಲಕ ದೊಡ್ಡ ಪ್ರೇಕ್ಷಕ ವರ್ಗವನ್ನು ತಲುಪಲು ಸಜ್ಜಾಗಿದ್ದಾರೆ. ಮುಂಬೈನಲ್ಲಿ ನಡೆದ ಪ್ರತಿಷ್ಠಿತ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದಿರುವುದು ಅವರ ರಂಗಭೂಮಿ ಪಯಣದ ಪ್ರಮುಖ ಸಾಧನೆಗಳಲ್ಲೊಂದು.

ಅವಿನಾಶ್ ಪತ್ನಿ ಪ್ರಿಯಾ ಕೂಡ ನಟಿಯೇ!

ಅವಿನಾಶ್ ಅವರ ಬಿಗ್‌ ಬಾಸ್ ಎಂಟ್ರಿಗೆ ಮತ್ತೊಂದು ವಿಶೇಷತೆಯೂ ಇದೆ. ಅವರ ಪತ್ನಿ ಪ್ರಿಯಾ ಕೂಡ ಕನ್ನಡದ ಪರಿಚಿತ ನಟಿಯಾಗಿದ್ದಾರೆ. ಇತ್ತೀಚೆಗೆ ತೆರೆಕಂಡ ದುನಿಯಾ ವಿಜಯ್ ಅಭಿನಯದ ‘ಭೀಮ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಗಿರಿಜಾ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ಪತಿಯನ್ನು ಬಿಗ್‌ ಬಾಸ್ ಮನೆಗೆ ಬೀಳ್ಕೊಡುವ ಸಂದರ್ಭದಲ್ಲಿ ಪ್ರಿಯಾ ಭಾವುಕರಾದರು. ಮದುವೆಯಾಗಿ 12 ವರ್ಷ ಆಗಿದೆ. ಕಳೆದ ಒಂದು ವರ್ಷದಲ್ಲಿ ಪತಿಯಿಂದ ಒಂದು ದಿನವೂ ದೂರ ಉಳಿದಿರಲಿಲ್ಲ. ಈಗ ಅವರನ್ನು ಬಿಟ್ಟಿರಬೇಕಾಗಿದೆ ಎಂದು ವೇದಿಕೆಯಲ್ಲಿ ಹೇಳಿಕೊಂಡರು.

‘ನನಗೆ ಜನರ ಸಿಂಪತಿ ಬೇಡ!’

ಬಿಗ್‌ ಬಾಸ್ ಮನೆಯೊಳಗಿನ ತಮ್ಮ ಆಟದ ಬಗ್ಗೆ ಅವಿನಾಶ್ ಯಾವುದೇ ಮುಚ್ಚುಮರೆ ಇಲ್ಲದೆ ಮಾತನಾಡಿದ್ದಾರೆ. ನನಗೆ ಯಾವುದೇ ದುರಹಂಕಾರ, ಸೊಕ್ಕು, ಗಾಂಚಾಲಿ ಅಥವಾ ಜನರ ಸಿಂಪತಿ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಆಟದ ವಿಚಾರದಲ್ಲಿ ಮಾತ್ರ ರಾಜಿಯಾಗುವುದಿಲ್ಲ ಎನ್ನುವ ಸೂಚನೆಯನ್ನೂ ನೀಡಿದ್ದಾರೆ. ಆಟಕ್ಕಾಗಿ ಸ್ವಲ್ಪ ಕಿತಾಪತಿ, ಹಠ, ತಲೆಹರಟೆ ಮತ್ತು ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಊಸರವಳ್ಳಿ ಗುಣವನ್ನು ಜೊತೆಯಲ್ಲೇ ಕೊಂಡೊಯ್ಯುತ್ತಿದ್ದೇನೆ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ.

ರಂಗಭೂಮಿಯ ಕಲಾವಿದನ ಆಟ ಹೇಗಿರಲಿದೆ?

ಬಿಗ್‌ ಬಾಸ್ ವೇದಿಕೆಯಲ್ಲಿ ಅವಿನಾಶ್ ಅವರ ಮಾತುಗಳು ಹಾಗೂ ಆತ್ಮವಿಶ್ವಾಸ ಈಗಾಗಲೇ ಕುತೂಹಲ ಮೂಡಿಸಿವೆ. ರಂಗಭೂಮಿಯ ಅನುಭವ, ನಟನೆಯ ಕೌಶಲ್ಯ ಮತ್ತು ನೇರವಾಗಿ ಮಾತನಾಡುವ ಸ್ವಭಾವವನ್ನು ಅವರು ಬಿಗ್‌ ಬಾಸ್ ಮನೆಯ ಆಟದಲ್ಲಿ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದೇ ಈಗ ಪ್ರೇಕ್ಷಕರ ಪ್ರಶ್ನೆ. ಸಿಂಪತಿ ಬೇಡ, ಅನುಕಂಪ ಬೇಡ ಎಂದು ಆರಂಭದಲ್ಲೇ ಖಡಕ್ ಆಗಿ ಘೋಷಿಸಿರುವ ಅವಿನಾಶ್, ಬಿಗ್‌ ಬಾಸ್ ಮನೆಯಲ್ಲಿ ಆಟ, ಹಠ, ಕಿತಾಪತಿ ಹಾಗೂ ತಂತ್ರಗಾರಿಕೆಯಿಂದ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.