ಖ್ಯಾತ ನಿರೂಪಕಿ ಜಾಹ್ನವಿ ಅವರು ಇತ್ತೀಚೆಗೆ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ ಒಂದು ಮಣ್ಣಿನ ಪಕ್ಷವಾಗಿದ್ದು, ದೇವೇಗೌಡರ ಸಾಧನೆ ಮತ್ತು ಕುಮಾರಸ್ವಾಮಿಯವರ ರೈತ ಹಾಗೂ ಮಹಿಳಾ ಪರ ಕಾಳಜಿಯಿಂದ ಪ್ರೇರಿತರಾಗಿ ಈ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.

ಬೆಂಗಳೂರು (ಜೂ.2): ನ್ಯೂಸ್‌ ಚಾನೆಲ್‌ಗಳಲ್ಲಿ ನಿರೂಪಕಿಯಾಗಿ ಪ್ರಸಿದ್ಧರಾದ ಬಳಿಕ, ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ಜನಪ್ರಿಯತೆ ಗಳಿಸಿದ್ದ ನಿರೂಪಕಿ ಜಾಹ್ನವಿ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ್ದರು. ಇದರ ನಡುವೆ ಹೆಚ್ಚಿನವರಿಗೆ ಅವರು ಜೆಡಿಎಸ್‌ಅನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದರು. ಮೂಲತಃ ಹಾಸನ ಮೂಲದವರಾಗಿದ್ದರೂ, ರಾಜಕೀಯ ಇನ್ನಿಂಗ್ಸ್‌ ಪಾದಾರ್ಪಣೆಗೆ ಜೆಡಿಎಸ್‌ಅನ್ನು ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಖಾಸಗಿ ಟಿವಿಗೆ ಮಾತನಾಡಿರುವ ಜಾಹ್ನವಿ, ಎಲ್ಲರೂ ಇದೇ ಪ್ರಶ್ನೆಯನ್ನು ಯಾಕೆ. ಇಲ್ಲಿ ಯಾಕೆ ಅನ್ನೋದಕ್ಕಿಂತ ಯಾಕಾಗಬಾರದು ಅನ್ನೋದು ನನ್ನ ಪ್ರಶ್ನೆ. ಏಕೆಂದರೆ, ಜನರ ಆಶೋತ್ತರಗಳನ್ನ ಪ್ರಬಲವಾಗಿ ಪ್ರತಿಪಾದಿಸುವಂತ ಪಕ್ಷ ಯಾವುದಾದ್ರೂ ಇದ್ರೆ ಅದು ನಮ್ಮ ಮಣ್ಣಿನ ಪಕ್ಷ ನಮ್ಮ ಪ್ರಾದೇಶಿಕ ಪಕ್ಷ ಜೆಡಿಎಸ್. ಯಾಕಂದ್ರೆ ಜೆಡಿಎಸ್ ಅಂತ ಬಂದಾಗ ಅಪ್ಪಾಜಿ. ಅಪ್ಪಾಜಿ ಅವರ ಸಾಧನೆಗಳನ್ನ ಇವತ್ತು ಯಾರಿಗೂ ಕೂಡ ಮರೆತಿಲ್ಲ. ನಮ್ಮ ನಾಡಿನಿಂದ ನಾವು ಏಕೈಕ ಪ್ರಧಾನ ಮಂತ್ರಿಗಳನ್ನ ಕೊಟ್ಟಿದ್ದೀವಿ ಅಂತ ಅಂದ್ರೆ ಅದು ಅಪ್ಪಾಜಿ ಮಾತ್ರ' ಎಂದು ಹೇಳಿದ್ದಾರೆ.

ಮಹಿಳಾ ಸಬಲೀಕರಣದ ಪಕ್ಷ ಜೆಡಿಎಸ್‌

ಕುಮಾರಣ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ತೆಗೆದುಕೊಂಡಂತಹ ನಿರ್ಣಯಗಳು, ಮಹಿಳಾ ಸಬಲೀಕರಣಕ್ಕೋಸ್ಕರ ಅವರು ಪಕ್ಷದ ಚಿನ್ಹೆಯನ್ನೇ ತೆನೆ ಹೊತ್ತ ಮಹಿಳೆ ಅಂತ ರೈತ ಮಹಿಳೆ ಅಂತ ಇಟ್ಟಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದಾರೆ. 22 ಲಕ್ಷ ರೈತರ ಸಾಲ ಮನ್ನಾ ಮಾಡಿದ್ದನ್ನು ಯಾರಾದರೂ ಮರೆಯೋಕೆ ಸಾರ್ಧಯವೇ?. ಒಂದು ಪ್ರಬಲವಾದ ಪ್ರಾದೇಶಿಕ ಪಕ್ಷ ಸೇರಿಕೊಂಡು ಇನ್ನ ಇನ್ನಿಂಗ್ಸ್‌ ಆರಂಭಿಸಬೇಕು ಅಂತಾ ಅಂದುಕೊಂಡಿದ್ದೆ. ಒಂದು ಮಾರ್ಗದರ್ಶನ ಸಲಹೆ ಎಲ್ಲವೂ ಸಿಕ್ತು. ಸೇರ್ಪಡೆ ಆದಮೇಲೆ ನಾನು ನಿಜವಾಗಲೂ ಹೇಳಬೇಕು ಒಂದು ಕುಟುಂಬ ನನಗೆ ಸಿಕ್ಕಿದೆ. ಅಪ್ಪಾಜಿ ಅವರ ಆಶೀರ್ವಾದ ಇರಬಹುದು ಕುಮಾರಣ್ಣ ಅವರ ಒಂದು ಸಪೋರ್ಟ್‌ ಸಿಕ್ಕಿದೆ ಎಂದಿದ್ದಾರೆ.

ಹಗಲು-ರಾತ್ರಿ ಪಕ್ಷಕ್ಕೆ ದುಡುಯುತ್ತೇನೆ

ಪಕ್ಷದಲ್ಲಿರುವಂತ ಎಲ್ಲಾ ಅಧ್ಯಕ್ಷರು, ಪದಾಧಿಕಾರಿ, ಸೋಶಿಯಲ್ ಮೀಡಿಯಾ ವಿಂಗ್‌ ನೋಡಿಕೊಳ್ಳುವರು ಜಿಲ್ಲಾ ಅಧ್ಯಕ್ಷ, ಕಾರ್ಯಕರ್ತರು ಪ್ರತಿಯೊಬ್ಬರು ನನಗೆ ಕಾಲ್ ಮಾಡಿ ಅವರು ಕೊಡ್ತಾ ಇರೋ ಸಲಹೆ ಸೂಚನೆಗಳು ಅವರು ನನ್ನನ್ನ ವೆಲ್ಕಮ್ ಮಾಡ್ತಾ ಇರೋ ರೀತಿ ನಿಜವಾಗಲೂ ಒಂದು ಒಳ್ಳೆ ಕುಟುಂಬಕ್ಕೆ ನಾನು ಸೇರ್ಪಡೆಯಾಗಿದ್ದೀನಿ ಅನಿಸುತ್ತದೆ. ಎಲ್ಲರೂ ನನಗೆ ತುಂಬಾ ಸಹಕಾರವನ್ನ ಕೊಡ್ತಾ ಇದ್ದಾರೆ ಅಂದ್ರೆ ಇದು ನನಗೆ ಮೊದಲನೇ ಹೆಜ್ಜೆ ನಾನು ತಿಳ್ಕೊಳ್ಳೋದು ಕಲಿಯೋದು ಬಹಳಷ್ಟು ಇರುತ್ತೆ ಸೋ ನಾನು ಇಲ್ಲಿ ಕಲಿತುಕೊಂಡು ಪಕ್ಷಕ್ಕೋಸ್ಕರ ಸಕ್ರಿಯವಾಗಿದ್ದು ಹಗಲು ರಾತ್ರಿ ದುಡಿಬೇಕು. ಜನಸೇವೆ ಮಾಡೋದಕ್ಕೆ ನನಗೆ ಇದಕ್ಕಿಂತ ಉತ್ತಮವಾದಂತಹ ಇನ್ನೊಂದು ಪಕ್ಷ ಇಲ್ಲ ಅಂತ ನನಗೆ ಅನ್ಸುತ್ತೆ ಎಂದು ಹೇಳಿದ್ದಾರೆ.