ಬಿಗ್‌ಬಾಸ್ ಮನೆಯಲ್ಲಿ ಅತಿಯಾದ ಕಿರುಚಾಟ ಮತ್ತು ಅಶ್ಲೀಲ ಪದಬಳಕೆಯಿಂದಾಗಿ ಸ್ಪರ್ಧಿ ಮಂಜ ಅವರನ್ನು ಹೊರಹಾಕಲಾಗಿದೆ. ಮನೆಯಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಈ ಬಾರಿಯ ಬಿಗ್‌ಬಾಸ್ ವಿನ್ನರ್ ಯಾರು ಎಂಬ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಬಿಗ್​ಬಾಸ್​ (Bigg Boss) ಅಗ್ನಿ ಪರೀಕ್ಷೆ ಮೂಲಕ ಕಾಮನ್​ ಮ್ಯಾನ್​ ಆಗಿ ಹೋದವರಲ್ಲಿ ಒಬ್ಬರು ಮಾಡರ್ನ್​ ಮಹಾಕವಿ ಎಂದು ಹೇಳಿಕೊಳ್ಳುತ್ತಿದ್ದ ಮಂಜ ಅವರು. ಮಂಜ ಅವರ ನಡೆ-ನುಡಿ ಹಾಗೂ ಕಿರುಚಾಟ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಅವರು ಬಳಸುತ್ತಿರುವ ಭಾಷೆ, ಇತರ ಸ್ಪರ್ಧಿಗಳ ಮೇಲಿನ ಆಕ್ರೋಶ ಹಾಗೂ ರೂಲ್ಸ್‌ ಬ್ರೇಕ್ ವೀಕ್ಷಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದ ಬೆನ್ನಲ್ಲೇ ಅವರನ್ನು ಬಿಗ್​ಬಾಸ್​ ಹೊರಕ್ಕೆ ಕಳುಹಿಸಿದೆ. ಕಿರುಚಾಟ, ಕೂಗಾಟ ಮಾಡಿದರೆ ಬಿಗ್​ಬಾಸ್​ನಲ್ಲಿ ಹೆಚ್ಚು ದಿನ ಇರಬಹುದು ಎಂದುಕೊಂಡು ಹಿಂದಿನ ಕೆಲವು ಸೀಸನ್​ಗಳನ್ನು ನೋಡಿ ಅಂದುಕೊಂಡಿದ್ದ ಮಂಜ ಅವರ ಅತಿಯಾದ ವರ್ತನೆ ವೀಕ್ಷಕರಿಂದಲೂ ಭಾರಿ ಟ್ರೋಲ್​​ ಆಗುತ್ತಿದ್ದ ನಡುವೆಯೇ, ಅವರಿಗೆ ಮನೆಯಿಂದ ಹೊರಕ್ಕೆ ಕಳುಹಿಸಲಾಗಿದೆ. ಅವರು ಅಶ್ಲೀಲವಾಗಿ ಮಾತನಾಡಿದ್ದು ಅವರಿಗೆ ಮುಳುವಾಯಿತು ಎಂದೇ ಹೇಳಲಾಗುತ್ತಿದೆ.

ಎಚ್ಚರಿಕೆ ಕೊಟ್ಟರೂ ಡೋಂಟ್​ ಕೇರ್​

ಹಲವು ಸಲ ಅವರಿಗೆ ಈ ಬಗ್ಗೆ ಎಚ್ಚರಿಕೆನೂ ಕೊಡಲಾಗಿದೆ. ಆದರೂ ತಿದ್ದಿಕೊಳ್ಳದ ಮಂಜು, ಕೊನೆಗೆ ಮನೆಗೆ ಹೋದರು. ಕೊನೆಗೆ ಹೊರಬಂದ ಮಂಜ, ತಾನು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ರೆ ಅಲ್ಲಿಯೇ ಮುಂದುವರೆಯುತ್ತಿದ್ದೆ. ತಪ್ಪು ಮಾಡಿದೆ ಎಂದಿದ್ದಾರೆ. ಆದರೆ ಎಲ್ಲವೂ ಮುಗಿದು ಹೋಗಿದೆ. ಈಗ ತಿದ್ದಿಕೊಳ್ಳುವ ಸಮಯವೂ ಮುಗಿದಿದೆ ಎಂದು ಖುದ್ದು ಸುದೀಪ್​ ಅವರೇ ವೇದಿಕೆಯ ಮೇಲೆ ಮಂಜ ಅವರಿಗೆ ಹೇಳಿದ್ದುಂಟು.

ಯಾರು, ಹೇಗೆಯೇ ವರ್ತಿಸಲಿ, ಹೇಗೆಯೇ ನಡೆದುಕೊಳ್ಳಲಿ. ಒಮ್ಮೆ ಬಿಗ್​ಬಾಸ್​ಗೆ ಹೋಗಿ ಹೊರಕ್ಕೆ ಬಂದ ಮೇಲೆ ಅವರು ಒಂದಿಷ್ಟು ದಿನ ಸೆಲೆಬ್ರಿಟಿ ಆಗಿರುತ್ತಾರೆ. ಆಮೇಲೆ ಜನರು ಅವರನ್ನು ಮರೆತರೂ, ಒಂದಷ್ಟು ದಿನವಾದರೂ ಅವರಿಗೆ ಸಕತ್​ ಡಿಮಾಂಡ್​ ಇರುತ್ತದೆ. ಅದೇ ರೀತಿ ಮಂಜ ಕೂಡ ಮಾಧ್ಯಮಗಳ ಕೇಂದ್ರಬಿಂದುವಾಗಿದ್ದು, ಅವರು ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಆಗಿರುವ ಘಟನೆಗಳು, ತಾವು ಮಾಡಿರುವ ತಪ್ಪು ಒಪ್ಪುಗಳ ನಡುವೆಯೇ, ಜನರು ತಮಗೆ ಪ್ರೀತಿ ಕೊಟ್ಟಿದ್ದು, ನಾನು ತಪ್ಪುಗಳನ್ನು ತಿದ್ದಿಕೊಂಡು ನಡೆಯುತ್ತೇನೆ ಎಂದಿದ್ದಾರೆ.

ಈ ಬಾರಿಗೆ ವಿನ್ನರ್​ ಘೋಷಣೆ ಆಗಿದೆ!

ಇದೇ ವೇಳೆ ಮಾಧ್ಯಮವೊಂದಕ್ಕೆ ಅವರು ನೀಡಿರುವ ವಿನ್ನರ್​ ವಿಷ್ಯ ಮಾತ್ರ ಸಿಕ್ಕಾಪಟ್ಟೆ ಕುತೂಹಲವಾಗಿದೆ. ಸಾಮಾನ್ಯವಾಗಿ ಹೊರಕ್ಕೆ ಬರುವ ಸ್ಪರ್ಧಿಗಳಿಗೆ ಎದುರಾಗುವ ಒಂದು ಪ್ರಶ್ನೆ ಈ ಬಾರಿ ವಿನ್ನರ್​ ಯಾರು ಆಗಬಹುದು ಎನ್ನುವುದು. ಅದನ್ನೇ ಮಂಜ ಅವರಿಗೂ ಕೇಳಲಾಗಿದೆ. ಅದಕ್ಕೆ ಅವರು ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಅವರು ಹೇಳಿದ್ದು ಏನೆಂದರೆ, ಇದಾಗಲೇ ವಿನ್ನರ್​ ಘೋಷಣೆಯಾಗಿದೆ. ವಿನ್ನರ್​ ಯಾರು ಎಂದು ತಿಳಿದಿದೆ, ಅವರಿಗೆ ಟ್ರೋಫಿ ಮಾತ್ರ ಕೊಡಲಿಲ್ಲವಷ್ಟೇ ಎಂದಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದು ಯಾರ ಹೆಸರು ಗೊತ್ತಾ? ತಮ್ಮದೇ ಹೆಸರು. ನಾನು ಇದಾಗಲೇ ಬಿಗ್​ಬಾಸ್​ 13ನೇ ಸೀಸನ್​ ವಿನ್​ ಆಗಿದ್ದೇನೆ. ನನಗೆ ಟ್ರೋಫಿ ಸಿಗಲಿಲ್ಲ ಅಷ್ಟೇ. ನಾನು ಜನರ ಪ್ರೀತಿ ಗಳಿಸಿದ್ದೇನೆ. ಜನರು ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಕೆಲವೊಂದು ತಪ್ಪು ಮಾಡಿದ್ದು, ಅದನ್ನು ತಿದ್ದಿಕೊಂಡು ಮುಂದಕ್ಕೆ ಹೋಗುತ್ತೇನೆ ಎಂದರು.