ಕೆಲ್ಸ ಕೇಳ್ಕೊಂಡು ಹೋದ ಭಾಗ್ಯಂಗೆ ನಿರಾಸೆ: ಡೈರೆಕ್ಟರ್ಗೂ ಮೊದಲೇ ನೆಟ್ಟಿಗರೇ ನೀಡ್ತಿದ್ದಾರೆ ಭರ್ಜರಿ ಸಲಹೆ!
ಮನೆ ಸರಿದೂಗಿಸಲು ಭಾಗ್ಯ ಕೆಲಸ ಕೇಳಿಕೊಂಡು ಹೋದರೆ ಕೆಲಸ ಸಿಗುತ್ತಿಲ್ಲ. ಅವಳು ಮುಂದೇನು ಮಾಡಬೇಕು ಎಂದು ಭಾಗ್ಯಲಕ್ಷ್ಮಿ ಫ್ಯಾನ್ಸ್ ಹೇಳಿದ್ದಾರೆ, ನೋಡಿ...
ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಮಗಳು ತನ್ವಿ ನಿನ್ನ ಅಡುಗೆ ಸಕತ್ ರುಚಿಯಾಗಿರುತ್ತದೆ ಎಂದಿದ್ದಾಳೆ. ಹಾಗಿದ್ದರೆ ನಾನು ಯಾವುದಾದರೂ ಹೋಟೆಲ್ನಲ್ಲಿ ಅಡುಗೆಗೆ ಸೇರಿಕೊಳ್ಳಬೇಕು ಎಂದು ಭಾಗ್ಯ ಮನಸ್ಸು ಮಾಡುತ್ತಾಳೆ. ಧೈರ್ಯ ಮಾಡಿ ಒಂದು ಹೋಟೆಲ್ಗೆ ಹೋದಾಗ ಅವಳನ್ನು ಹೋಟೆಲ್ ಮಾಲೀಕ ಕೆಲಸ ಇಲ್ಲ ಎಂದು ಹೇಳಿ ಕಳುಹಿಸುತ್ತಾನೆ. ಸಾಲದು ಎನ್ನುವುದಕ್ಕೆ ಆಕೆಗೆ ಅಲ್ಲಿ ಒಂದಿಷ್ಟು ಅವಮರ್ಯಾದೆಯೂ ಆಗುತ್ತದೆ. ಅಷ್ಟಕ್ಕೂ ಸದ್ಯ ಭಾಗ್ಯಳ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಹೇಗಾದರೂ ಮಾಡಿ ಭಾಗ್ಯಳನ್ನು ಮನೆಯಿಂದ ಓಡಿಸಲು ತಾಂಡವ್ ಪ್ರಯತ್ನಿಸುತ್ತಿದ್ದಾನೆ. ಅವನಿಗೆ ಏನಿದ್ದರೂ ಬೇಕಿರುವುದು ಶ್ರೇಷ್ಠಾ ಮಾತ್ರ. ಆದರೆ ಭಾಗ್ಯ ಈಗ ಸುಲಭದಲ್ಲಿ ಜಗ್ಗುತ್ತಿಲ್ಲ. ಇದೇ ಕಾರಣಕ್ಕೆ ತಾಂಡವ್ ಕನಸಿನಲ್ಲಿಯೂ ಭಾಗ್ಯ ಕಾಡುತ್ತಿದ್ದಾಳೆ. ತಾಂಡವ್ಗೆ ಪತ್ನಿ ಎದುರು ಸೋಲನ್ನು ಅನುಭವಿಸಿದ ಹಾಗಾಗುತ್ತಿದೆ. ಗಂಡಸಾಗಿ ತಾನು ಸೋತೆ ಎನ್ನುವ ಅಹಂ ಅಡ್ಡ ಬರುತ್ತಿದೆ. ಏನೂ ಅರಿಯದ ಪೆದ್ದು ಪತ್ನಿಯನ್ನು ಸುಲಭದಲ್ಲಿ ಮನೆಯಿಂದ ಹೊರಕ್ಕೆ ಹಾಕಬಹುದು ಎಂದುಕೊಂಡಿದ್ದ ತಾಂಡವ್ಗೆ ಅದು ಸಾಧ್ಯವೇ ಆಗದ ಸ್ಥಿತಿ. ಪತ್ನಿಗೆ ಎಷ್ಟು ಟಾರ್ಚರ್ ಕೊಡಬೇಕೋ ಅಷ್ಟನ್ನೆಲ್ಲಾ ಕೊಟ್ಟಾಯ್ತು. ಈತನ ಟಾರ್ಚರ್ ತಾಳದೇ ಖುದ್ದು ಭಾಗ್ಯಳ ಮಾವನೇ ತನ್ನ ಮಗನಿಗೆ ಡಿವೋರ್ಸ್ ಕೊಟ್ಟುಬಿಡಮ್ಮಾ, ನಿನ್ನ ಈ ಕಷ್ಟ ನೋಡಲು ಆಗ್ತಿಲ್ಲ ಎಂದೂ ಹೇಳಿ ಆಯ್ತು. ಆದರೆ ಈಕೆ ಭಾಗ್ಯ. ಪತ್ನಿಗಿಂತ ಹೆಚ್ಚಾಗಿ ಇಬ್ಬರು ಮಕ್ಕಳ ಅಮ್ಮ ಈಕೆ. ಸುಲಭದಲ್ಲಿ ಸೋಲನ್ನು ಒಪ್ಪಿಕೊಳ್ತಾಳಾ? ಸಾಧ್ಯವೇ ಇಲ್ಲ.
ಭಾಗ್ಯಳನ್ನು ಸೋಲಿಸಲೇಬೇಕು ಎನ್ನುವ ಕಾರಣಕ್ಕೆ ಮನೆ ಹೇಗೋ ಎರಡು ಭಾಗವಾಗಿದೆಯಲ್ಲ, ಇಎಂಐ ನಾನೊಬ್ಬನೇ ಹೇಗೆ ಕಟ್ಟುವುದು ಎಂದು ಕೇಳುತ್ತಿದ್ದಾನೆ ತಾಂಡವ್. ಅದಕ್ಕೆ ಭಾಗ್ಯ ಹೆದರಬೇಡಿ. ಅರ್ಧ ಇಎಂಐ ನಾನು ಕಟ್ಟುತ್ತೇನೆ ಎನ್ನುವ ಮೂಲಕ ತಾಂಡವ್ಗೆ ಶಾಕ್ ಕೊಟ್ಟಿದ್ದಾಳೆ. ಈಗ ಕಚೇರಿಯಲ್ಲಿ ಅವಾರ್ಡ್ ಫಂಕ್ಷನ್ ಇರುವಾಗಲೂ ಭಾಗ್ಯಳೇ ಕಾಡುತ್ತಿದ್ದಾಳೆ. ಎಲ್ಲರನ್ನೂ ಸಾಕಲು ಏನಿಲ್ಲವೆಂದರೂ ಅವಳಿಗೆ ಕನಿಷ್ಠ 35 ಸಾವಿರ ರೂಪಾಯಿಯಾದ್ರೂ ಬೇಕು. ಹೇಗೆ ತರ್ತಾಳೆ. ಅದು ಸಾಧ್ಯವೇ ಇಲ್ಲ ಎಂದುಕೊಂಡರೂ ಏನಾದರೂ ಮಾಡಿ ಅವಳು ತಂದುಬಿಟ್ಟರೆ ಎನ್ನುವ ಭಯವೂ ಕಾಡುತ್ತಿದೆ.
ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆ ಪೆಟ್ಟು... ಅಂತ ಸುಮ್ನೆ ಹೇಳೋದಾ ಹಿರಿಯರು?
ಹೆಚ್ಚಿಗೆ ಕಲಿತಿಲ್ಲದ ಹೆಣ್ಣು ನಾನು, ಸಂಸಾರ ಒಂದನ್ನು ಬಿಟ್ಟು ಏನೂ ಗೊತ್ತಿಲ್ಲ ಎಂಬ ಚಿಂತೆ ಭಾಗ್ಯಳನ್ನು ಕಾಡುತ್ತಿದೆ. ಆಗ ಎದುರಾಗುವ ಬಾಬಾ ಹೆಣ್ಣಿನ ಶಕ್ತಿಯನ್ನು ಹೇಳಿದ್ದಾರೆ. ಪ್ರತಿ ಹೆಣ್ಣಿಗೂ ಇರುವ ವಿಶೇಷ ಗುಣಗಳ ಬಗ್ಗೆ ಮಾತನಾಡಿದ್ದಾರೆ. ನಿನ್ನಂಥ ಹೆಣ್ಣಿನಿಂದಲೇ ಪ್ರಪಂಚ ನಡೆಯುತ್ತಿರುವುದು ಎಂದಿದ್ದಾರೆ. ಇದನ್ನು ಕೇಳಿ ಭಾಗ್ಯಳಿಗೆ ತಾನು ಹೇಗೆ ಸಂಪಾದನೆ ಮಾಡಬಹುದು, ನನ್ನ ಕೈಯಲ್ಲಿ ಏನಿದೆ ಎಂಬ ಚಿಂತೆ ಕಾಡಿದೆ. ಅಷ್ಟರಲ್ಲಿಯೇ ಮಗಳು ಬಂದು ನನಗೆ ಮನೆಗೆ ಹೋಗಿ ಬಾದಾಮಿ ಹಲ್ವಾ ಮಾಡಿಕೊಡು, ನಿನ್ನ ಕೈರುಚಿ ಸಕತ್ ಎನ್ನುತ್ತಾಳೆ. ಆಗಲೇ ಭಾಗ್ಯಳಿಗೆ ನಾನು ಅಡುಗೆ ಮಾಡಿ ಅದನ್ನು ಮಾರಿ ಜೀವನ ಸಾಗಿಸಬಹುದು ಎಂದು ಯೋಚನೆ ಮಾಡುತ್ತಾಳೆ. ಅದಕ್ಕಾಗಿಯೇ ಹೋಟೆಲ್ಗೆ ಕೆಲಸ ಕೇಳಿಕೊಂಡು ಹೋದರೆ ನಿರಾಸೆ ಕಾದಿರುತ್ತದೆ.
ಈಗ ಭಾಗ್ಯ ಏನು ಮಾಡಬೇಕು? ಅದನ್ನು ಭಾಗ್ಯಲಕ್ಷ್ಮಿ ಸೀರಿಯಲ್ ನಿರ್ದೇಶಕರು ಹೇಳುವ ಮುನ್ನವೇ ನೆಟ್ಟಿಗರು ಭಾಗ್ಯಳಿಗೆ ಭರಪೂರ ಸಲಹೆ ನೀಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಭಾಗ್ಯಳಿಗೆ ಧೈರ್ಯ ತುಂಬುತ್ತಿದ್ದು, ಕೇಟರಿಂಗ್ ಸರ್ವಿಸ್ ಮಾಡು ಎನ್ನುತ್ತಿದ್ದಾರೆ. ನಿನ್ನ ಕೈ ಅಡುಗೆ ಚೆನ್ನಾಗಿದ್ದರೆ, ಹೋಟೆಲ್ನಲ್ಲಿಯೇ ಕೆಲಸ ಮಾಡಬೇಕೆಂದೇನೂ ಇಲ್ಲ, ಅದಕ್ಕಿಂತಲೂ ಹೆಚ್ಚಾಗಿ ಕೇಟರಿಂಗ್ ಸರ್ವಿಸ್ ಮಾಡಿ ಸಂಪಾದಿಸಬಹುದು ಎನ್ನುತ್ತಿದ್ದಾರೆ. ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ ಬಹುಶಃ ಭಾಗ್ಯ ಕೂಡ ಕೊನೆಗೆ ಇದನ್ನೇ ಮಾಡಲಿಕ್ಕೆ ಸಾಕು. ತಾಂಡವ್ ಕಚೇರಿಗೂ ಇವಳೇ ಅಡುಗೆ ಸಪ್ಲೈ ಮಾಡಿ ತಾಂಡವ್ಗೆ ಅರಿವಿಲ್ಲದೇ ಭೇಷ್ ಭೇಷ್ ಅನ್ನಿಸಿಕೊಳ್ಳಲೂ ಬಹುದು. ಆದರೆ ಸದ್ಯ ಸೀರಿಯಲ್ ಪ್ರಿಯರು ಈಕೆಗೆ ಸಲಹೆ ನೀಡುತ್ತಿದ್ದಾರೆ.
ಕೊನೆಗೂ ಬಯಲಾಯ್ತು ಖರ್ಜೂರ ರಹಸ್ಯ! ಸತ್ಯ ಬಾಯ್ಬಿಟ್ಟ ಶಾರ್ವರಿ- ಮನೆಯಾಗತ್ತಾ ಸ್ಮಶಾನ?